ADVERTISEMENT

Explainer | ಲಖನೌದಲ್ಲಿ ಡಿಫೆನ್ಸ್ ಎಕ್ಸ್‌ಪೊ: ಭಾರತದ ಗುರಿ ಬಿಚ್ಚಿಟ್ಟ ಮೋದಿ

ದೇಶೀಯ ರಕ್ಷಣಾ ತಯಾರಿಕೆಗೆ ವೇಗ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ರಕ್ಷಣಾ ಸಾಮಗ್ರಿಗಳ ಪ್ರದರ್ಶನ ಉದ್ಘಾಟಿಸಿದ ನಂತರ ರೈಫಲ್‌ ಹಿಡಿದು ಗುರಿ ಪರೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ರಕ್ಷಣಾ ಸಾಮಗ್ರಿಗಳ ಪ್ರದರ್ಶನ ಉದ್ಘಾಟಿಸಿದ ನಂತರ ರೈಫಲ್‌ ಹಿಡಿದು ಗುರಿ ಪರೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ   
""
""

ಲಖನೌದಲ್ಲಿ ಏರ್ಪಡಿಸಿರುವ ‘ಡಿಫೆನ್ಸ್‌ ಎಕ್ಸ್‌ಪೊ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ, 2025ರ ವೇಳೆಗೆ ದೇಶದಲ್ಲಿ ಉತ್ಪಾದಿಸಿದ ₹ 35 ಸಾವಿರ ಕೋಟಿಯಷ್ಟು ಮೌಲ್ಯದ ರಕ್ಷಣಾ ಸಾಮಗ್ರಿಯನ್ನು ರಫ್ತು ಮಾಡುವ ಕನಸು ತೇಲಿಬಿಟ್ಟಿದ್ದಾರೆ. ರಕ್ಷಣಾ ಸಾಮಗ್ರಿಗಳ ರಫ್ತು ಕ್ಷೇತ್ರದಲ್ಲಿ ಸದ್ಯ ಅಂಬೆಗಾಲಿಡುತ್ತಾ 24ನೇ ಸ್ಥಾನದಲ್ಲಿರುವ ಭಾರತದ ಈ ಕನಸುನನಸಾಗುವ ದಾರಿ ಹೀಗಿದೆ...

ರಕ್ಷಣಾ ಸಲಕರಣೆ ರಫ್ತು ಮೌಲ್ಯವನ್ನು ಮುಂದಿನ ಐದು ವರ್ಷಗಳಲ್ಲಿ ₹35 ಸಾವಿರ ಕೋಟಿಗೆ ಏರಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ.ಈ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಹಲವು ಉದ್ಯಮಸ್ನೇಹಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

11ನೇ ರಕ್ಷಣಾ ಸಾಮಗ್ರಿಗಳ ಪ್ರದರ್ಶನಉದ್ಘಾಟಿಸಿ ಮಾತನಾಡಿದ ಅವರು,ದೇಶದಲ್ಲಿ ರಕ್ಷಣಾ ಸಾಮಗ್ರಿ ಉತ್ಪಾದನೆ ಘಟಕಗಳನ್ನು ತೆರೆದು, ಹೂಡಿಕೆ ಮಾಡುವಂತೆ ವಿದೇಶಿ ರಕ್ಷಣಾ ಉತ್ಪನ್ನ ತಯಾರಕರಿಗೆ ಆಹ್ವಾನ ನೀಡಿದರು. ‘ದೇಶವು ರಕ್ಷಣಾ ಸಾಮಗ್ರಿ ಆಮದಿನ ಮೇಲೆ ಸಂಪೂರ್ಣವಾಗಿ ಅಲಂಬಿತವಾಗಿಲ್ಲ. ಬಂದೂಕು, ಸಮರ ನೌಕೆ, ಜಲಾಂತರ್ಗಾಮಿ, ಹಗುರ ಯುದ್ಧವಿಮಾನ, ಯುದ್ಧ ಹೆಲಿಕಾಪ್ಟರ್‌ಗಳ ನಿರ್ಮಾಣದಲ್ಲಿ ಭಾರತ ತೊಡಗಿಸಿಕೊಂಡಿದೆ’ ಎಂದು ತಿಳಿಸಿದರು.

ADVERTISEMENT

ಸೇನಾ ಸಾಮಗ್ರಿಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡಿಕೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಅವರು ಉಲ್ಲೇಖಿಸಿದರು.ಉತ್ತರ ಪ್ರದೇಶವು ರಕ್ಷಣಾ ಉಪಕರಣ ಉತ್ಪಾದನೆಯ ಅತಿದೊಡ್ಡ ಕೇಂದ್ರವಾಗಿ ಅಭಿವೃದ್ಧಿಯಾಗಲಿದೆ. ‘ಸರ್ಕಾರ‌ವು ಸೂಕ್ತ ನೀತಿಗಳನ್ನು ರೂಪಿಸದ ಕಾರಣ ದೇಶವುಕಳೆದ ಹಲವು ದಶಕಗಳಿಂದ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು.

ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತಿದೆ. ಚೀಫ್‌ ಆಫ್ ಡಿಫೆನ್ಸ್ (ಸಿಡಿಎಸ್‌) ಹುದ್ದೆ ಸೃಷ್ಟಿಯಿಂದ ಒಟ್ಟಾರೆ ರಕ್ಷಣಾ ಉತ್ಪಾದನೆಗೆ ವೇಗ ಸಿಗಲಿದೆ ಎಂದು ಪ್ರಧಾನಿ ಸಮರ್ಥಿಸಿಕೊಂಡರು.

ಇಸ್ರೊದ ಉಪಗ್ರಹಗಳಿಗೆ ಡಿಆರ್‌ಡಿಒ ಪರಿಣಾಮಕಾರಿ ರಕ್ಷಣೆ ಒದಗಿಸುತ್ತಿದ್ದು, ಬಾಹ್ಯಾಕಾಶದಲ್ಲಿ ದೇಶದ ಸಾಮರ್ಥ್ಯವನ್ನು ಇನ್ನಷ್ಟು ವರ್ಧಿಸಲು ಉತ್ತೇಜನ ನೀಡಲಾಗುವುದು ಎಂಬ ಭರವಸೆಯನ್ನು ನೀಡಿದರು.

ರಕ್ಷಣಾ ಸಾಮಗ್ರಿ ಉತ್ಪಾದಿಸುವ ಸರ್ಕಾರಿ ಸಂಸ್ಥೆಗಳು

ಬಿಇಎಂಎಲ್‌

ಭಾರತ್‌ ಎಲೆಕ್ಟ್ರಾನಿಕ್ಸ್‌

ಭಾರತ್‌ ಅರ್ಥ್‌ ಮೂವರ್ಸ್‌;ಸಾರಿಗೆ ಸಾಧನಗಳು

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)

ಮಜಗನ್‌ ಡಾಕ್‌ ಲಿಮಿಟೆಡ್‌

ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌

ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಅಂಡ್‌ ಎಂಜಿನಿಯರ್ಸ್‌

ಹಿಂದೂಸ್ತಾನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌

ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌

ಮಿಶ್ರ ಧಾತು ನಿಗಮ್‌

ರಕ್ಷಣಾ ಸಾಮಗ್ರಿ ಉತ್ಪಾದಿಸುವ ಖಾಸಗಿ ಸಂಸ್ಥೆಗಳು

ಎಂಕೆಯು

ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌

ಗೋದ್ರೆಜ್‌ ಏರೋಸ್ಪೇಸ್‌

ಅದಾನಿ ಡಿಫೆನ್ಸ್‌ ಅಂಡ್‌ ಏರೋಸ್ಪೇಸ್‌

ಅಶೋಕ್‌ ಲೇಲ್ಯಾಂಡ್‌

ಲಾರ್ಸನ್‌ ಅಂಡ್‌ ಟರ್ಬೊ

ಕಿರ್ಲೋಸ್ಕರ್‌ ಲಿಮಿಟೆಡ್‌

ಡೈನಾಮಿಕ್‌ ಟೆಕ್ನಾಲಜೀಸ್‌ ಲಿಮಿಟೆಡ್‌

ಮಹೀಂದ್ರ

ರಿಲಯನ್ಸ್‌ ಡಿಫೆನ್ಸ್‌ ಅಂಡ್‌ ಎಂಜಿನಿಯರಿಂಗ್‌ ಲಿಮಿಟೆಡ್‌

ಪುಂಜ್‌ ಲಾಯ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.