ADVERTISEMENT

ನಾಗಸಾಕಿ ಮೇಲಿನ ದಾಳಿಗೆ 75 ವರ್ಷ: ಇಲ್ಲಿದೆ ಅಣ್ವಸ್ತ್ರ ದಾಳಿಯ ಭೀಕರತೆಯ ವಿವರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 7:48 IST
Last Updated 9 ಆಗಸ್ಟ್ 2020, 7:48 IST
ಅಣ್ವಸ್ತ್ರ ದಾಳಿಯ ನಂತರ ನಾಗಸಾಕಿ ನಗರದ ಪರಿಸ್ಥಿತಿ
ಅಣ್ವಸ್ತ್ರ ದಾಳಿಯ ನಂತರ ನಾಗಸಾಕಿ ನಗರದ ಪರಿಸ್ಥಿತಿ    

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್‌ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.

ಅಮೆರಿಕ 1945 ಆ.6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್‌ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್‌ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.

ದಾಳಿಯ ಭೀಕರತೆ ಹೇಗಿತ್ತು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ADVERTISEMENT

ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆದ ತಿಂಗಳ ಅವಧಿಯಲ್ಲಿಹಲವರು ಸುಟ್ಟಗಾಯಗಳ ನೋವು, ವಿಕಿರಣ ಸಮಸ್ಯೆ ಮತ್ತು ಅಸ್ವಸ್ಥತೆಯಿಂದ ನರಳಿ ಸತ್ತರು.

ಇವರಲ್ಲಿ ಶೇ 15ರಿಂದ 20ರಷ್ಟು ಮಂದಿ ವಿಕಿರಣ ಕಾಯಿಲೆಗಳಿಗೆ ತುತ್ತಾಗಿ ಪ್ರಾಣಬಿಟ್ಟರು. ಶೇ 20ರಿಂದ 30ರಷ್ಟು ಮಂದಿ ಸುಟ್ಟ ಗಾಯಗಳ ತೀವ್ರ ಉರಿಯನ್ನು ತಾಳಲಾರದೆ ಸಾವಿಗೀಡಾದರು. ಶೇ 50ರಿಂದ 60ರಷ್ಟು ಮಂದಿ ಅಸ್ವಸ್ಥತೆಯಿಂದ ನರಳಿ ಪ್ರಾಣಬಿಟ್ಟರು.

ಅಣು ಬಾಂಬ್ ಜನಕ ಎಂದೇ ಪ್ರಸಿದ್ಧ‌ರಾದ ಭೌತವಿಜ್ಞಾನಿ ಜೆ ರಾಬರ್ಟ್ ಓಪನ್‌ಹೀಮರ್ (J. Robert Oppenheimer) ಅವರ ನಿರ್ದೇಶನದಲ್ಲಿ ಈ ಅಣುಬಾಂಬ್‌ಗಳುತಯಾರಾಗಿದ್ದವು. ಇದಕ್ಕೆ ಅಗತ್ಯವಿದ್ದ ಎಲ್ಲಾ ವೈಜ್ಞಾನಿಕ ಸಂಶೋಧನೆಗಳಿಗೆ ಅವರೇ ಮುಖ್ಯಸ್ಥರು. ಮ್ಯಾನ್‌ಹಟ್ಟನ್‌ ಎಂಬ ಯೋಜನೆ ಅಡಿಯಲ್ಲಿ ಅಮೆರಿಕ ಮೊದಲ ಪರಮಾಣು ಬಾಂಬ್‌ಗಳನ್ನು ವಿನ್ಯಾಸಗೊಳಿಸಿತ್ತು. ಲಿಟ್ಲ್‌ಬಾಯ್ ಎಂದು ಕರೆಯಲಾದ ಈ ಅಣುಬಾಂಬ್ ಯುರೇನಿಯಂ-235ನಿಂದ ತಯಾರಾಗಿತ್ತು. 1945ರ ಜುಲೈ 16ರಂದು ನ್ಯೂ ಮೆಕ್ಸಿಕೋದ ಅಲಾಮಾಗೊರ್ಡೋ ಸಮೀಪವಿರುವ ಟ್ರಿನಿಟಿ ಸೈಟ್‌ನಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು.

ಖ್ಯಾತ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ ಅವರು ಈ ಅಣ್ವಸ್ತ್ರ ತಯಾರಿಕೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಅವರ ಸಾಪೇಕ್ಷ ಸಿದ್ಧಾಂತ ಈ ಬಾಂಬ್ ತಯಾರಿಯ ಎಲ್ಲಾ ಬೆಳವಣಿಗೆಗಳಿಗೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಿತ್ತು. 1905ರಲ್ಲಿಐನ್‌ಸ್ಟೈನ್‌ತನ್ನ ಸಾಪೇಕ್ಷ ಸಿದ್ಧಾಂತದಲ್ಲಿ ಒಂದು ಪ್ರಮುಖ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ‌ ಒಂದು ಸಣ್ಣ ಕಣದಿಂದ ಅಥವಾ ಪರಮಾಣುವಿನಿಂದ (matter) ಅಪಾರವಾದ ಶಕ್ತಿಯನ್ನು ಹೊರ ತೆಗೆಯಲು ಸಾಧ್ಯವಿದೆ ಎಂದು. ಇದನ್ನು ಐನ್‌ಸ್ಟೈನ್‌ ತನ್ನ ಖ್ಯಾತ ಸಿದ್ಧಾಂತ ಅಥವಾ ಸಮೀಕರಣವಾದ E=MC2 ವಿವರವಾಗಿ ತಿಳಿಸಿದ್ದಾರೆ.

ಈ ಸಮೀಕರಣ ಪರಮಾಣು ಅಸ್ತ್ರದ ಮೂಲ ತತ್ವವನ್ನು ಪ್ರತಿಬಿಂಬಿಸುತ್ತದೆ. ಆದರೆ ಐನ್‌ಸ್ಟೈನ್‌ ಅವರಿಗೆ ಯಾವುದೇ ಅಣ್ವಸ್ತ್ರ ತಯಾರಿಸುವ ಉದ್ದೇಶ
ವಿರಲಿಲ್ಲ. ಅವರು ಶಾಂತಿಪ್ರಿಯರಾಗಿದ್ದರು. ಅಲ್ಲದೇ ಜರ್ಮನಿಯ ನಾಜಿ ಸೇನಾಪಡೆ ಶಕ್ತಿಯುತವಾದ ದೊಡ್ಡ ಅಸ್ತ್ರವನ್ನು ತಯಾರಿಸಲು ಕಾರ್ಯಪ್ರವೃತ್ತವಾಗಿದೆ. ಅದು ಅಣ್ವಸ್ತ್ರ (Atom Bomb) ಆಗಿರಬಹುದು ಎಂದು ಅವರು ಅಂದಿನ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ಗೆ ಪತ್ರ ಬರೆದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು.

ಹಿರೊಶಿಮಾ ಗುರಿಯಾಗಿದ್ದೇಕೆ?

ಹಿರೋಶಿಮಾ ಜಪಾನ್‌ನಪ್ರಮುಖ ಪಟ್ಟಣಗಳಲ್ಲಿ ಒಂದಾಗಿತ್ತು. ಇಲ್ಲಿ ಜಪಾನ್‌ನ ಎರಡನೇ ಸೇನಾ ಕೇಂದ್ರ ಕಾರ್ಯಾಲಯವೂ ಇತ್ತು. ಅಲ್ಲದೇ ಶಸ್ತ್ರ ಸಂಗ್ರಹಿಸುವ ಉಗ್ರಾಣವಾಗಿ ಮತ್ತು ಸಂವಹನ ಕೇಂದ್ರವಾಗಿತ್ತು. ಹೀಗಾಗಿ ಅಮೆರಿಕ ಈ ನಗರವನ್ನೇ ಮೊದಲ ಗುರಿಯಾಗಿಟ್ಟುಕೊಂಡಿತು.

1945 ಮೇ 10-11ರಂದು ಜೆ ರಾಬರ್ಟ್ ಓಪನ್ ಹೀಮರ್ (J. Robert Oppenheimer) ನೇತೃತ್ವದ ಸಮಿತಿಯು ಕ್ಯೋಟೊ, ಹಿರೋಶಿಮಾ, ಯೋಕೋಹಾಮಾ ನಗರಗಳನ್ನು ಮತ್ತು ಕೊಕುರಾದಲ್ಲಿನ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳ
ಮೇಲೆ ದಾಳಿ ಮಾಡಲು ಸೇನೆಗೆ ಶಿಫಾರಸು ಮಾಡಿತು.

ಎರಡನೇ ವಿಶ್ವಯುದ್ಧದ ಅವಧಿಯಲ್ಲಿ ಹಿರೋಶಿಮಾ ನಗರ ಕೈಗಾರಿಕಾ ಮತ್ತು ಸೇನಾ ಚಟುವಟಿಕೆಯ ಪ್ರಮುಖ ಕೇಂದ್ರವಾಗಿತ್ತು. ದಕ್ಷಿಣ ಜಪಾನ್‌ನ ಸಂಪೂರ್ಣ ರಕ್ಷಣೆ ಹಿರೋಶಿಮಾದಲ್ಲಿದ್ದ ಸೇನಾ ಕೇಂದ್ರ ಕಾರ್ಯಾಲಯ ನೋಡಿಕೊಳ್ಳುತ್ತಿತ್ತು. ಅಲ್ಲದೆ ಸೇನೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇಲ್ಲಿಂದಲೇ ನಡೆಯುತ್ತಿದ್ದವು.

ಜಪಾನ್ ಸೇನೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು ಹಾಗೂ ತೀರ್ಮಾನಗಳನ್ನು ಈ ಕೇಂದ್ರವೇ ನಿರ್ಧರಿಸುತ್ತಿತ್ತು. ಯುದ್ಧಕ್ಕೆ ಮುನ್ನ ಈ ನಗರದಲ್ಲಿ ಸೂಮಾರು 3 ಲಕ್ಷ ಜನ ವಾಸಿಸುತ್ತಿದ್ದರು. ಅಣು ಬಾಂಬ್‌ ದಾಳಿಯ ಭೀತಿ ಜಪಾನ್ ಸರ್ಕಾರಕ್ಕೆ ಕಾಡುತ್ತಿದ್ದರಿಂದ ಯುದ್ಧಕ್ಕೂ ಮುನ್ನ ಹಲವರನ್ನು ಸ್ಥಳಾಂತರಗೊಳಿಸಲಾಗಿತ್ತು. ಈ ಜಾಣ್ಮೆಯ ನಿರ್ಧಾರದಿಂದ ಒಂದಷ್ಟು ಜೀವಗಳು ಉಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.