ADVERTISEMENT

ಮಣ್ಣಲ್ಲಿ ಅಭ್ಯಾಸ; ಟರ್ಫ್‌ನಲ್ಲಿ ಗೆಲ್ಲಲು ‘ಸಾಹಸ’!

ಉತ್ತರ ಕರ್ನಾಟಕದಲ್ಲಿ ಕ್ರೀಡಾ ಸೌಲಭ್ಯಗಳಿಗೆ ಹಲವು ಬೇಡಿಕೆ

ಎಂ.ಮಹೇಶ
Published 8 ಜೂನ್ 2019, 19:47 IST
Last Updated 8 ಜೂನ್ 2019, 19:47 IST
   

ಬೆಳಗಾವಿ: ಮಣ್ಣಿನ ಮೈದಾನದಲ್ಲಿ ಅಭ್ಯಾಸ ಮಾಡುವ ಇಲ್ಲಿನವರಿಗೆ ಟರ್ಫ್‌ನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪೈಪೋಟಿ ತೋರುವ ಸವಾಲು! ಸಿಗದ ವೃತ್ತಿಪರ ತರಬೇತಿ. ಕ್ರೀಡಾಂಗಣಗಳಿಲ್ಲದೇ ಕಮರುತ್ತಿರುವ ಪ್ರತಿಭೆಗಳು. ತೆವಳುತ್ತಿರುವ ಅಭಿವೃದ್ಧಿ ಕಾಮಗಾರಿಗಳು. ಕಾಗದದಲ್ಲಷ್ಟೇ ಉಳಿದಿರುವ ಯೋಜನೆಗಳು. ಪಾಳು ಬಿದ್ದಿರುವ ಈಜುಕೊಳಗಳು.ನಿಯಮಿತ ಕ್ರೀಡಾ ಚಟುವಟಿಕೆಗಳಿಗೆ ‘ಗರ’. ಸೌಲಭ್ಯ, ನಿರ್ವಹಣೆ ಕಾಣದೇ ಕಳೆಗುಂದಿರುವ ಕ್ರೀಡಾ ಹಾಸ್ಟೆಲ್‌ಗಳು.

– ಈ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿ ಈ ಭಾಗದ ಪ್ರತಿಭೆಗಳನ್ನು ವೃತ್ತಿಪರ ತರಬೇತಿ ನೀಡಬೇಕು ಎನ್ನುವುದು ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾಗಿದೆ. ಸಿಂಥೆಟಿಕ್ ಟ್ರ್ಯಾಕ್‌, ಆಸ್ಟ್ರೋಟರ್ಫ್‌, ಫುಟ್‌ಬಾಲ್‌ ಮೈದಾನ, ವೆಲೋಡ್ರೋಮ್ ನಿರ್ಮಿಸಬೇಕಾಗಿದೆ.

ಇಲ್ಲಿ ಕ್ರೀಡೆಗೆ ಆದ್ಯತೆಯನ್ನೇ ಕೊಟ್ಟಿಲ್ಲ! ಹೀಗಾಗಿ, ಬೇಡಿಕೆಗಳ ಪಟ್ಟಿ ದೊಡ್ಡದಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವ ಕೆಲಸವೇ ನಡೆದಿಲ್ಲದಿರುವುದು ಜನಪ್ರತಿನಿಧಿಗಳ ‘ದೂರದೃಷ್ಟಿಯ ಕೊರತೆ’ಗೆ ಕನ್ನಡಿ ಹಿಡಿದಂತಿದೆ.

ADVERTISEMENT

ಈಜುಕೊಳದಲ್ಲಿ ನೀರೇ ಇಲ್ಲ!

ಹುಬ್ಬಳ್ಳಿಯಲ್ಲಿ ಬಹಳಷ್ಟು ಹಾಕಿ ಆಟಗಾರರಿದ್ದಾರೆ. ಆದರೆ ಹಾಕಿ ಟರ್ಫ್‌, ಫುಟ್‌ಬಾಲ್‌ ಮೈದಾನವಿಲ್ಲ. ಅಭ್ಯಾಸಕ್ಕಾಗಿ ಧಾರವಾಡಕ್ಕೇ ಹೋಗಬೇಕು. ಡಾ.ಬಿ.ಆರ್. ಅಂಬೇಡ್ಕರ್‌ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವ 10 ವರ್ಷಗಳಿಂದಲೂ ಕಾಗದದಲ್ಲೇ ಉಳಿದಿದೆ. ‘ಖೇಲೋ ಇಂಡಿಯಾ’ ಯೋಜನೆಯಡಿ ಹುಬ್ಬಳ್ಳಿಯಲ್ಲಿ 13 ಎಕರೆ ಪ್ರದೇಶದಲ್ಲಿ ಎಲ್ಲ ಕ್ರೀಡಾ ಸೌಲಭ್ಯಗಳು (ಕ್ರಿಕೆಟ್ ಬಿಟ್ಟು) ದೊರೆಯುವಂತೆ ಮಾಡಬೇಕೆನ್ನುವ ಉದ್ದೇಶವಿತ್ತು. ಆದರೆ ಒಂದು ದಶಕದ ಹಿಂದಿನ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಪಾಲಿಕೆ ಈಜುಕೊಳವಿದೆ; ನೀರೇ ಇರುವುದಿಲ್ಲ! ಉತ್ತರ ಕರ್ನಾಟಕದಲ್ಲಿಯೇ ಡೈವಿಂಗ್ ವ್ಯವಸ್ಥೆ ಇರುವ ಈ ಈಜುಕೊಳ ಇದ್ದೂ ಇಲ್ಲದಂತಾಗಿದೆ.

ಬೆಳಗಾವಿಯಲ್ಲಿ ಸರ್ಕಾರಿ ಒಳಾಂಗಣ ಅಥವಾ ಹೊರಾಂಗಣ ಕ್ರೀಡಾಂಗಣವೇ ಇಲ್ಲ. ಜಿಲ್ಲಾ ಕ್ರೀಡಾಂಗಣವಿದ್ದು, ಆ ಜಾಗ ಸರ್ಕಾರದ್ದಲ್ಲ! ಕೆಎಲ್‌ಇ ಸಂಸ್ಥೆಯ ಜಾಗ ಲೀಸ್‌ಗೆ ಪಡೆದು ಅಭಿವೃದ್ಧಿಪಡಿಸಲಾಗಿದೆ. ಲೀಸ್ ಅವಧಿ ಮೂರು ವರ್ಷಗಳಲ್ಲಿ ಮುಗಿಯಲಿದ್ದು, ನಂತರ ಖಾಲಿ ಮಾಡಬೇಕಾದೀತು. ಆದರೂ ಸ್ವಂತ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ!

ಕೆಎಸ್‌ಸಿಎ ಮೈದಾನಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಮಾಡಿಕೊಡಬೇಕು, ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಇದೆ. ಉಳಿದ ಮೈದಾನಗಳು, ಅಂಕಣಗಳು ಖಾಸಗಿಯವು. ಈ ಭಾಗದಲ್ಲಿ ಕುಸ್ತಿ ಜನಪ್ರಿಯ. ಆದರೆ, ಈ ಗ್ರಾಮೀಣ ಕ್ರೀಡೆ ಉಳಿಸಿಕೊಳ್ಳಲು ಯೋಜನೆಗಳಿಲ್ಲ. ಸುಸಜ್ಜಿತ ಅಖಾಡಗಳು ತಲೆ ಎತ್ತಿಲ್ಲ.

ಹಾವೇರಿಯಲ್ಲಿ ಒಳಾಂಗಣ ಕ್ರೀಡಾಂಗಣವಿಲ್ಲ. ಈಜುಕೊಳ ದುಃಸ್ಥಿತಿಯಲ್ಲಿದೆ. ಟೆನಿಸ್ ಅಂಕಣ ಅಧಿಕಾರಿಗಳಿಗಷ್ಟೇ ಸೀಮಿತವಾಗಿದೆ! ಹಾಕಿ ಸ್ಪೋರ್ಟ್ಸ್‌ ಹಾಸ್ಟೆಲ್‌ ಇದ್ದರೂ, ನಿರ್ವಹಣೆ ಸಮರ್ಪಕವಾಗಿಲ್ಲ.

ಗದಗದಲ್ಲಿ ಹಾಕಿ ಮೈದಾನ ನಿರ್ಮಿಸಲಾಗಿದೆ. ಆದರೆ, ಉದ್ಘಾಟನೆಯಾಗಿಲ್ಲ. ನರೇಗಲ್ ಭಾಗದಲ್ಲಿ ಕೊಕ್ಕೊ, ಕಬಡ್ಡಿಗೆ ಕ್ರೀಡಾಂಗಣ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ.

ನಿರ್ಮಾಣವಾಗಲಿಲ್ಲ ವೆಲೋಡ್ರೋಮ್: ಬಾಗಲಕೋಟೆ, ವಿಜಯಪುರ ಭಾಗದಲ್ಲಿ ಸೈಕ್ಲಿಂಗ್ ಪ್ರತಿಭೆಗಳು ಬಹಳಷ್ಟಿವೆ. ಸ್ಪರ್ಧೆಗಳು ಕೂಡ ಆಯೋಜನೆಯಾಗುತ್ತವೆ. ಆದರೆ, ವಿಜಯಪುರದಲ್ಲಿ ವೆಲೋಡ್ರೋಮ್ ನಿರ್ಮಿಸಬೇಕು ಎನ್ನುವ ಸೈಕ್ಲಿಸ್ಟ್‌ಗಳ ದಶಕಗಳ ಕನಸು ಇನ್ನೂ ನನಸಾಗಿಲ್ಲ. ಹೀಗಾಗಿ, ರಸ್ತೆಯಲ್ಲಿ ಅಭ್ಯಾಸ ಮಾಡಬೇಕಾದ ದುಃಸ್ಥಿತಿ ಇದೆ. ಬಾಗಲಕೋಟೆಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ಪಾಳುಬಿದ್ದಿದೆ. ಕಳಪೆ ಕಾಮಗಾರಿಯಿಂದಾಗಿ ಅದು ಪ್ರಯೋಜನಕ್ಕೆ ಬಾರದಂತಾಗಿದೆ. ದುರಸ್ತಿ ಸಾಲುವುದಿಲ್ಲ; ಹೊಸದಾಗಿಯೇ ಕಟ್ಟಬೇಕು ಎನ್ನುವ ಮಾತುಗಳಿವೆ. ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಇಲ್ಲೂ ವೆಲೋಡ್ರೋಮ್ ನಿರ್ಮಿಸಬೇಕೆಂಬ ಬೇಡಿಕೆ ಇದೆ.

ಉದ್ಘಾಟನೆಯಾದರೂ ಸಿದ್ಧವಾಗಿಲ್ಲ!: ರಾಯಚೂರಿನಲ್ಲಿ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಯಾಗಿದೆ! ಶಾಲಾ– ಕಾಲೇಜುಗಳ ವಾರ್ಷಿಕ ಕ್ರೀಡಾಕೂಟಗಳು ಹೊರತುಪಡಿಸಿದರೆ ಇತರ ಸ್ಪರ್ಧೆಗಳು ನಡೆಯುತ್ತಿಲ್ಲ. ಸರ್ಕಾರಿ ಕ್ರೀಡಾಕೂಟಗಳಿಗೆ ಜಿಲ್ಲಾ ಪೊಲೀಸ್ ಮೈದಾನವೇ ಆಸರೆ. ದಾನಿಯೊಬ್ಬರು ಉಚಿತವಾಗಿ ಜಾಗ ನೀಡಿದ್ದಾರಾದರೂ ಕ್ರಿಕೆಟ್‌ ಮೈದಾನ ನಿರ್ಮಾಣ ಶುರುವಾಗಿಲ್ಲ! ಈಜುಕೊಳ ಪಾಳು ಬಿದ್ದಿದೆ.

ಈ ಭಾಗದಲ್ಲಿನ ಕ್ರೀಡಾ ಸಂಸ್ಥೆಗಳು (ಒಲಿಂಪಿಕ್ಸ್‌ ಅಸೋಸಿಯೇಷನ್) ಹೆಸರಿಗಷ್ಟೇ ಸೀಮಿತವಾಗಿವೆ. ‌‘ಉತ್ತರ’ದಲ್ಲಿ ಬಹಳಷ್ಟು ಕ್ರೀಡಾ ಪ್ರತಿಭೆಗಳಿವೆ. ಅವರಿಗೆ ವೃತ್ತಿಪರ ತರಬೇತಿ ಸಿಗುತ್ತಿಲ್ಲ. ಕೆಲವರು ಕೊರತೆಗಳ ನಡುವೆಯೂ ಅದ್ಭುತ ಸಾಧನೆ ತೋರಿ ಮಿಂಚುತ್ತಿದ್ದಾರೆ. ವ್ಯವಸ್ಥಿತವಾಗಿ ಸಜ್ಜುಗೊಳಿಸಿದರೆ ಇಲ್ಲಿನವರಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಬಹುದು ಎನ್ನುವ ಅಭಿಪ‍್ರಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.