ADVERTISEMENT

ಒಳನೋಟ: 12 ಗ್ರಾಮಕ್ಕೆ ‘ಬಹುಗ್ರಾಮ ಯೋಜನೆ’ ಆಸರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಮಾರ್ಚ್ 2021, 19:31 IST
Last Updated 13 ಮಾರ್ಚ್ 2021, 19:31 IST
ಹೂವಿನಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿ ಬಳಿ ನಿರ್ಮಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌
ಹೂವಿನಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿ ಬಳಿ ನಿರ್ಮಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌   

ವಿಜಯನಗರ (ಹೊಸಪೇಟೆ): ವರ್ಷದ ಎಲ್ಲ ದಿನಗಳಲ್ಲೂ ಟ್ಯಾಂಕರ್‌ ಮೂಲಕವೇ ನೀರು ಕಾಣುತ್ತಿದ್ದ ಗ್ರಾಮಗಳಲ್ಲಿ ಈಗ ನಿತ್ಯ ಜಲಧಾರೆ ಹರಿಯುತ್ತಿದೆ.

ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಟ್ಯಾಂಕರ್‌ಗಾಗಿ ಗ್ರಾಮಸ್ಥರು ಕಾದು ಕೂರುವ ದಿನಗಳು ದೂರವಾಗಿವೆ. ಟ್ಯಾಂಕರ್‌ ಹಿಂದೆ ಕೊಡ ಹಿಡಿದು ಮನೆ ಮಂದಿ ಓಡಾಡುವ ಬವಣೆ ತಪ್ಪಿದೆ. ಕುಡಿಯುವ ನೀರಿಗೆ ಇನ್ನಿಲ್ಲದಂತೆ ಪರಿತಪಿಸುತ್ತಿದ್ದ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹನ್ನೆರಡು ಗ್ರಾಮಗಳಲ್ಲಿ ಈಗ ನೀರಿನ ಸಮಸ್ಯೆ ಸಂಪೂರ್ಣ ನೀಗಿದೆ. ಕಡು ಬೇಸಿಗೆಯಲ್ಲೂ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಹೂವಿನಹಡಗಲಿ ತಾಲ್ಲೂಕಿನ ಹರವಿ, ಹರವಿ ಬಸಾಪುರ, ಬೂದನೂರು, ಸಿದ್ದಾಪುರ, ಲಿಂಗನಾಯಕನಹಳ್ಳಿ, ಲಿಂಗನಾಯಕನಹಳ್ಳಿ ತಾಂಡಾ, ಗುಂಗರಗಟ್ಟಿ, ಕುರುವತ್ತಿ ಪ್ಲಾಟ್‌, ನಡುವಿನಹಳ್ಳಿ, ಕಳಸಾಪುರ, ದಾಸನಹಳ್ಳಿ ಹಾಗೂ ಹ್ಯಾರಡ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನಿತ್ಯ ಕುಡಿವ ನೀರು ಸರಬರಾಜು ಆಗುತ್ತಿದೆ.

ADVERTISEMENT

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 2014ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹ 7.62 ಕೋಟಿ ಮೊತ್ತದ ಯೋಜನೆಯು 2017ರಲ್ಲಿ ಪೂರ್ಣಗೊಂಡಿತು. ತುಂಗಭದ್ರಾ ನದಿ ದಡದಲ್ಲಿ ಜಾಕ್‌ವೆಲ್‌ ಅಳವಡಿಸಿ, ನೀರು ಶುದ್ಧೀಕರಣ ಘಟಕದಿಂದ ನೇರವಾಗಿ ಆಯಾ ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಎದುರಾಗದಂತೆ ವಿಶೇಷ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ, ಕಾಮಗಾರಿ ಪೂರ್ಣಗೊಂಡ ಮೂರು ವರ್ಷಗಳಿಂದ ಹನ್ನೆರಡು ಗ್ರಾಮಗಳಲ್ಲಿ ಇದುವರೆಗೆ ನೀರಿನ ಸಮಸ್ಯೆ ಉದ್ಭವಿಸಿಲ್ಲ.

‘ಇತರೆ ಋತುಗಳಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಸಾಮಾನ್ಯ. ಜಾತ್ರೆ ಸೇರಿದಂತೆ ಇತರೆ ಕಾರಣಗಳಿಗಾಗಿ ಬೇಸಿಗೆಯಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮರಳಿನ ಚೀಲಗಳನ್ನಿಟ್ಟು, ನದಿಯಲ್ಲಿ ನೀರು ಸಂಗ್ರಹಿಸಿ, ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಇದರಿಂದಾಗಿ ವರ್ಷದ ಯಾವ ದಿನವೂ ನೀರಿಗೆ ತೊಂದರೆ ಆಗುತ್ತಿಲ್ಲ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ ವಿಜಯ ನಾಯ್ಕ.

‘ಹಿಂದೆ ಈ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿತ್ತು. ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಖಾಸಗಿಯವರಿಗೆ ಹಣ ಕೊಟ್ಟು, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಅದಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿತ್ತು. ಬಹುಗ್ರಾಮ ಯೋಜನೆಯಿಂದ ಅದೆಲ್ಲ ತಪ್ಪಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹ್ಯಾರಡ ಕೆರೆ ತುಂಬಿಸಲಾಗಿದೆ. ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿರುವುದರಿಂದ ಅಂತರ್ಜಲ ವೃದ್ಧಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.