ADVERTISEMENT

ಆಸರೆ ಮನೆ: ‘10 ವರ್ಷಗಳ ನಂತರ ಗೃಹಪ್ರವೇಶ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:31 IST
Last Updated 17 ಆಗಸ್ಟ್ 2019, 20:31 IST
ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಮಲಪ್ರಭಾ ಪ್ರವಾಹಕ್ಕೆ ಸಿಲುಕಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಈಗ ಆಸರೆ ಕಾಲೊನಿಯಲ್ಲಿ ಆಶ್ರಯ ಪಡೆದಿದ್ದು, ಜಿಲ್ಲಾಡಳಿತ ಮನೆಗಳ ಸುತ್ತಲಿನ ಮುಳ್ಳು–ಕಂಟಿಗಳನ್ನು ತೆಗೆಸಿ ಸ್ವಚ್ಛ ಮಾಡಿಕೊಟ್ಟಿದೆ
ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಮಲಪ್ರಭಾ ಪ್ರವಾಹಕ್ಕೆ ಸಿಲುಕಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಈಗ ಆಸರೆ ಕಾಲೊನಿಯಲ್ಲಿ ಆಶ್ರಯ ಪಡೆದಿದ್ದು, ಜಿಲ್ಲಾಡಳಿತ ಮನೆಗಳ ಸುತ್ತಲಿನ ಮುಳ್ಳು–ಕಂಟಿಗಳನ್ನು ತೆಗೆಸಿ ಸ್ವಚ್ಛ ಮಾಡಿಕೊಟ್ಟಿದೆ   

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಮಹಾಪೂರದ ಕಾರಣ ಜಿಲ್ಲೆಯಲ್ಲಿ ಇಷ್ಟು ದಿನ ಹಾಳುಬಿದ್ದಿದ್ದ ಆಸರೆ ಮನೆಗಳು ಮತ್ತೆ ಜೀವ ಪಡೆಯತೊಡಗಿವೆ. ಬಹುತೇಕ ಮರೆತೇ ಹೋಗಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಸಂತ್ರಸ್ತರು ವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಾದಾಮಿ ತಾಲ್ಲೂಕಿನ ನಂದಿಕೇಶ್ವರದ ಆಸರೆ ಕಾಲೊನಿಯಲ್ಲಿ 500 ಮನೆಗಳು ಹಾಳು ಬಿದ್ದಿದ್ದವು. ಈಗ ಮತ್ತೆ ಅವುಗಳನ್ನು ವಾಸಯೋಗ್ಯವಾಗಿಸಲು ಸಂತ್ರಸ್ತರೊಂದಿಗೆ ಜಿಲ್ಲಾಡಳಿತವೂ ಕೈ ಜೋಡಿಸಿದೆ. ಸುತ್ತಲೂ ಬೆಳೆದ ಜಾಲಿ ಕಂಟಿ ತೆಗೆಸಿ ತಾತ್ಕಾಲಿಕ ರಸ್ತೆ ಮಾಡಲು ಪಿಡಿಒಗೆ ಹೊಣೆ ವಹಿಸಲಾಗಿದೆ. ಬಾಗಿಲು– ಕಿಟಕಿ ಇಲ್ಲದ ಮನೆಗಳಿಗೆ ಬಟ್ಟೆಯ ಹೊದಿಕೆ ನೆರವಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಒದಗಿಸುವ ಕೆಲಸ ನಡೆದಿತ್ತು. ಓಣಿ ಹಾಗೂ ಕೇರಿಯ ಸಾಮಾಜಿಕ ಸಂರಚನೆಯೂ ಪಾಲನೆಯಾಗಿತ್ತು!

‘ಊರಿಂದ 2 ಕಿ.ಮೀ ದೂರವಿದೆ ಎಂಬ ಕಾರಣಕ್ಕೆ ಇತ್ತ ನಾವು ತಲೆ ಹಾಕಿರಲಿಲ್ಲ. ನಮ್ಮನ್ನು ಒಕ್ಕಲೆಬ್ಬಿಸಲು ಮತ್ತೆ ಮಲಪ್ರಭೆಯೇ ಬರಬೇಕಾತು ನೋಡ್ರಿ’ ಎನ್ನುತ್ತಾ ‘ಪ್ರಜಾವಾಣಿ’ಗೆ ಎದುರಾದ ದುರುಗಪ್ಪ ಮಾದರ ನಕ್ಕರು. ‘ಈ ಮನೆಗಳೂ ನಮ್ಮ ಹೆಸರಲ್ಲಿಲ್ಲ. ಯಾರಿಗೆ ಹಂಚಿಕೆಯಾಗಿವೆಯೋ ಗೊತ್ತಿಲ್ಲ. ತಹಶೀಲ್ದಾರ್ ಬಂದು ಹೇಳಿದರು. ಹೀಗಾಗಿ ಬಂದು ಸೇರಿಕೊಂಡಿದ್ದೇವೆ’ ಎಂದರು.

ಕೆಲವು ಕಡೆ ಇಷ್ಟು ದಿನ ಆಸರೆ ಮನೆ ಬಾಡಿಗೆ ಕೊಟ್ಟು ಊರಲ್ಲಿ ದೊಡ್ಡ ಮನೆಯಲ್ಲಿದ್ದವರೂ ಈಗ ವಾಪಸ್ ಬಂದು ಬಾಡಿಗೆದಾರರೊಂದಿಗೆ ವಾಸವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.