ADVERTISEMENT

ಒಳನೋಟ | ಎಂಜಿನಿಯರ್‌ ಹುದ್ದೆ: ‘ಬ್ಲೂ ಟೂತ್‌’ ಸದ್ದು

ವಿ.ಎಸ್.ಸುಬ್ರಹ್ಮಣ್ಯ
Published 7 ಮೇ 2022, 19:31 IST
Last Updated 7 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್‌ (ಎಇ) ಮತ್ತು ಕಿರಿಯ ಎಂಜಿನಿಯರ್‌ (ಜೆಇ) ಹುದ್ದೆಗಳ ಭರ್ತಿಗೆ ಪರೀಕ್ಷೆಗಳನ್ನು ನಡೆಸಿದಾಗಲೆಲ್ಲ ‘ಬ್ಲೂ ಟೂತ್‌’ ಬಳಕೆಯ ಶಂಕೆ ಜೋರಾಗಿ ಸದ್ದು ಮಾಡುತ್ತದೆ. ಹೀಗೆ ‘ಬ್ಲೂ ಟೂತ್‌’ ಸಾಧನದ ನೆರವಿನಲ್ಲಿ ಸರ್ಕಾರಿ ಇಲಾಖೆಗಳನ್ನು ಸೇರಿದವರು ಈಗ ಇತರ ಇಲಾಖೆಗಳ ಪರೀಕ್ಷೆಗಳಲ್ಲೂ ಅಕ್ರಮ ಎಸಗುತ್ತಿದ್ದಾರೆ.

2017ರಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ 550 ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ ಪ್ರಕ್ರಿಯೆ ನಡೆದಿತ್ತು. ಆಗ ಕಲಬುರಗಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಲ್ಲೇ ಹೆಚ್ಚು ಮಂದಿ ಆಯ್ಕೆಯಾಗಿದ್ದರು. ‘ಬ್ಲೂ ಟೂತ್‌’ ಬಳಸಿ ಹೊರಗಿನಿಂದ ಉತ್ತರ ಪಡೆದು ಪರೀಕ್ಷಾ ಅಕ್ರಮ ನಡೆಸಿದ್ದರಿಂದಲೇ ಅದು ಸಾಧ್ಯವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಖಾಲಿಯಿದ್ದ ಸಹಾಯಕ ಎಂಜಿನಿಯರ್‌ ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲೂ ‘ಬ್ಲೂ ಟೂತ್‌’ ಬಳಸಿ ಅಕ್ರಮ ನಡೆಸಿರುವ ಶಂಕೆ ವ್ಯಕ್ತವಾಗಿತ್ತು.

ಲೋಕೋಪಯೋಗಿ ಇಲಾಖೆಯಲ್ಲಿನ 660 ಸಹಾಯಕ ಎಂಜಿನಿಯರ್‌ ಮತ್ತು 330 ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ 2021ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. ‘ಬ್ಲೂ ಟೂತ್‌’ ಸಾಧನ ಬಳಸಿ ಪರೀಕ್ಷಾ ಅಕ್ರಮ ಎಸಗಬಹುದು ಎಂಬ ದೂರು ಪರೀಕ್ಷೆಗೂ ಮುನ್ನವೇ ಕರ್ನಾಟಕ ಲೋಕಸೇವಾ ಆಯೋಗವನ್ನು ತಲುಪಿತ್ತು.

ADVERTISEMENT

ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಸೇಂಟ್‌ ಜಾನ್ಸ್‌ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಕಲಬುರಗಿ ಜಿಲ್ಲೆಯ ವೀರಣ್ಣ ಗೌಡ ಎಂಬ ಅಭ್ಯರ್ಥಿ ‘ಬ್ಲೂ ಟೂತ್‌’ ಬಳಸಿ ಹೊರಗಿನಿಂದ ಉತ್ತರ ಪಡೆಯುತ್ತಿದ್ದುದನ್ನು ಮೇಲ್ವಿಚಾರಕರು ಪತ್ತೆಹಚ್ಚಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ, ಅಭ್ಯರ್ಥಿಯನ್ನು ಬಂಧಿಸಿದ್ದರು.

ಕಲಬುರಗಿ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಇದೇ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗೆ ಹೊರಗಿ ನಿಂದ ಯುವಕನೊಬ್ಬ ‘ಬ್ಲೂ ಟೂತ್‌’ ಮೂಲಕ ಉತ್ತರ ರವಾನಿಸುತ್ತಿದ್ದ ದೃಶ್ಯಾವಳಿ ಇರುವ ವಿಡಿಯೊ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಎಂಜಿನಿಯರ್‌ಗಳ ನೇಮ- ಕಾತಿಯಲ್ಲಿ ಬ್ಲೂ ಟೂತ್‌ ಸಾಧನದ ನೆರವಿನಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರು ವುದಕ್ಕೆ ಸಾಕ್ಷ್ಯ ಒದಗಿಸಿತ್ತು.

‘ಅರ್ಹತೆ’ಯೇ ಅಕ್ರಮಕ್ಕೆ ರಹದಾರಿ

ಬೆಂಗಳೂರು: ಕೆಲವು ಪ್ರಮುಖ ಇಲಾಖೆಗಳಲ್ಲಿ ನೌಕರರ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಅಭ್ಯರ್ಥಿಗಳಿಗೆ ನಿಗದಿಪಡಿಸುವ ಅರ್ಹತೆಗಳೇ ಅಕ್ರಮಕ್ಕೆ ರಹದಾರಿಯಾಗುತ್ತಿವೆ. ಸಾರಿಗೆ ಇಲಾಖೆಯ ಮೋಟಾರು ವಾಹನ ಇನ್‌ಸ್ಪೆಕ್ಟರ್‌ (ಎಂವಿಐ) ನೇಮಕಾತಿ ಪ್ರಕ್ರಿಯೆ ಆರು ವರ್ಷಗಳಿಂದ ಕಗ್ಗಂಟಾಗಿ ಉಳದಿರುವುದು ಇದಕ್ಕೆ ಉದಾಹರಣೆ. 150 ಎಂವಿಐ ಹುದ್ದೆಗಳ ಭರ್ತಿಗೆ ಸಾರಿಗೆ ಇಲಾಖೆ 2016ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. 129 ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿ 2019ರ ಜುಲೈ 4ರಂದು ತಾತ್ಕಾಲಿಕ ಆಯ್ಕೆ‍ಪಟ್ಟಿ ಪ್ರಕಟಿಸಲಾಗಿತ್ತು. ಕಳೆದ ವಾರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹಿಂಪಡೆದು, ಪುನಃ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದೆ.

‘ಪ್ರತಿಷ್ಠಿತ ವರ್ಕ್‌ಶಾಪ್‌ನಲ್ಲಿ ಒಂದು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು’ ಎಂಬ ಷರತ್ತನ್ನು ಎಂವಿಐ ನೇಮಕಾತಿಯಲ್ಲಿ ಹಾಕಲಾಗಿತ್ತು. ಪೆಟ್ರೋಲ್‌ ಮೂಲಕ ಓಡುವ ಲಾರಿ ಮತ್ತು ಬಸ್‌ಗಳ ನಿರ್ವಹಣೆ, ದುರಸ್ತಿ ಮಾಡುವ ವರ್ಕ್‌ಶಾಪ್‌ಗಳನ್ನು ಈ ವರ್ಗಕ್ಕೆ ಸೇರಿಸಲಾಗಿತ್ತು. ಅಂತಹ ವರ್ಕ್‌ಶಾಪ್‌ಗಳು ಈಗ ಇಲ್ಲದಿದ್ದರೂ, 129 ಮಂದಿ ನಕಲಿ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ ಎಂಬ ದೂರು ಸಲ್ಲಿಕೆಯಾಗಿತ್ತು. ಇದೇ ವಿಚಾರದಲ್ಲಿ ಮೂರು ವರ್ಷಗಳಿಂದ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಈಗ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.