ADVERTISEMENT

ಒಳನೋಟ: ಕನ್ನಡ ಚಿತ್ರರಂಗ ಸಾಮಾನ್ಯ ಸ್ಥಿತಿಗೆ ಬರಲು ಬೇಕು ಇನ್ನೂ ವರುಷ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 19:31 IST
Last Updated 13 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೈಸೂರಿನಂಥ ದೊಡ್ಡ ನಗರದಲ್ಲೇ ಕಳೆದೊಂದು ವರ್ಷದಲ್ಲಿ ಮೂರು ಖ್ಯಾತ ಚಿತ್ರಮಂದಿರಗಳು ಶಾಶ್ವತವಾಗಿ ಬೀಗ ಹಾಕಿವೆ. ಇನ್ನು ತಾಲ್ಲೂಕು ಮಟ್ಟದಲ್ಲಿರುವ ಏಕಪರದೆಯ ಚಿತ್ರಮಂದಿರಗಳ ಹಾಗೂ ಅದರ ಮಾಲೀಕರ ಸ್ಥಿತಿ ಕೇಳಬೇಕೇ? ಕೋವಿಡ್‌ನಿಂದ ಆಗಿರುವ ಸಮಸ್ಯೆಗಳ ಸುಳಿಯಿಂದ ಚಿತ್ರಮಂದಿರಗಳು ಹೊರಬಂದು ಮತ್ತೆ ಉಸಿರಾಡಲು ಕನಿಷ್ಠ ವರುಷ ಬೇಕು. ಹೀಗಿದೆ ರಾಜ್ಯದ ಪರಿಸ್ಥಿತಿ.

ಕಳೆದೊಂದು ತಿಂಗಳಲ್ಲಿ ಬಿಡುಗಡೆಯಾದ ಬಿಗ್‌ಬಜೆಟ್‌ ಚಿತ್ರಗಳು ಮೊದಲ ವಾರ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಆದಾಯವನ್ನೇ ಚಿತ್ರಮಂದಿರದ ಮಾಲೀಕರಿಗೆ ತಂದಿದ್ದರೂ, 2–3ನೇ ವಾರದಿಂದ ಪ್ರೇಕ್ಷಕರ ಸಂಖ್ಯೆಯಲ್ಲಾದ ಇಳಿಕೆ ನೋಡಿ ಅವರು ಕಂಗಾಲಾಗಿದ್ದಾರೆ.

ವೀರೇಶ್‌ ಚಿತ್ರಮಂದಿರದ ಮಾಲೀಕರೂ ಆದ ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್‌, ಕೋವಿಡ್‌ ಕಾರಣದಿಂದ ಚಿತ್ರಪ್ರದರ್ಶನಗಳ ಸಮಯದಲ್ಲಾದ ಬದಲಾವಣೆಯೂ ನಷ್ಟಕ್ಕೆ ಕಾರಣವಾಗಿತ್ತು ಎನ್ನುತ್ತಾರೆ.

ADVERTISEMENT

ರಾತ್ರಿ ಕರ್ಫ್ಯೂ ಆದೇಶ ಹಿಂಪಡೆದಿದ್ದು, ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.

‘ಆದಾಯ ಗಳಿಕೆಯಲ್ಲಿ ನಿರಂತರತೆ ಇಲ್ಲ. ಚಿತ್ರಮಂದಿರಗಳು ಮುಚ್ಚುತ್ತಿರುವುದಕ್ಕೆ ಹೊಸ ತಂತ್ರಜ್ಞಾನವೂ ಕಾರಣ. ಇವುಗಳನ್ನು ಕೆಡವಿ ಹೊಸದು ಕಟ್ಟಿದರೆ ಕಟ್ಟಡ ನಿರ್ವಹಣೆ ಸಾಲುವಷ್ಟು ಆದಾಯ ಬರುತ್ತದೆಯೇ ಗೊತ್ತಿಲ್ಲ’ ಎನ್ನುತ್ತಾರೆ.

‘ಒಂದೇ ಸಿನಿಮಾ, ಏಕಕಾಲದಲ್ಲೇ 300–350 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದಲೂ ಚಿತ್ರಮಂದಿರಗಳಿಗೆ ಹೊಡೆತ ಬೀಳುತ್ತಿದೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಅಧ್ಯಕ್ಷ ಆರ್.ಆರ್‌. ಓದುಗೌಡರ್‌.

ಇನ್ನೂ ತೆರೆಯದ 75 ಚಿತ್ರಮಂದಿರಗಳು!

ವಾಣಿಜ್ಯ ತೆರಿಗೆಯ ಹೊರೆ, ಜಿಎಸ್‌ಟಿಯ ಮನರಂಜನಾ ತೆರಿಗೆ, ವಿದ್ಯುತ್‌ ಬಿಲ್‌, ಕೆಲಸಗಾರರಿಗೆ ವೇತನ, ಶೇಕಡಾವಾರು ಕಲೆಕ್ಷನ್‌ ಹಂಚಿಕೆ ಎಲ್ಲವೂ ಚಿತ್ರಮಂದಿರದ ಉಸಿರುಗಟ್ಟಿಸಿದೆ ಎನ್ನುತ್ತಾರೆ ಕೆ.ವಿ. ಚಂದ್ರಶೇಖರ್‌.

‘ಮೈಸೂರಿನಲ್ಲಿ ಕಳೆದೊಂದು ವರ್ಷದಿಂದ ಮೂರು ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಹಲವು ದಶಕಗಳಿಂದ ಚಿತ್ರರಸಿಕರನ್ನು ರಂಜಿಸಿದ್ದ ‘ಸರಸ್ವತಿ’ ಹಾಗೂ ‘ಲಕ್ಷ್ಮಿ’ ಚಿತ್ರಮಂದಿರಗಳು ಇತ್ತೀಚೆಗಷ್ಟೇ ಮುಚ್ಚಿದ್ದವು. ಕಳೆದ ಜೂನ್‌ನಲ್ಲಿ ‘ಶಾಂತಲಾ’ ಚಿತ್ರಮಂದಿರ ಮುಚ್ಚಿತ್ತು. ರಾಜ್ಯದಲ್ಲಿ 630 ಏಕಪರದೆಯ ಚಿತ್ರಮಂದಿರಗಳಿದ್ದು, ಕೋವಿಡ್‌ ಎರಡನೇ ಲಾಕ್‌ಡೌನ್‌ ಸಡಿಲಿಕೆಯಾಗಿ ತಿಂಗಳುಗಳೇ ಕಳೆದರೂ ನಷ್ಟದ ಭಯದಿಂದ 70–75 ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ’ ಎನ್ನುತ್ತಾರೆ ಅವರು.

‘ವಾಸ್ತವ ಬೇರೆಯೇ ಇದೆ’

‘ವಿತರಕರು–ಚಿತ್ರಮಂದಿರಗಳ ಮಾಲೀಕರ ನಡುವೆ ಒಪ್ಪಂದಗಳೂ ವಾರ–ವಾರ ಬದಲಾಗುತ್ತಿವೆ. ಪ್ಯಾನ್‌ ಇಂಡಿಯಾ ಇಮೇಜ್‌ನಲ್ಲಿ ಹೀರೊಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಏನು ಮಾಡುವುದು? ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತದೆ’ ಎನ್ನುತ್ತಾರೆ ಗೋವರ್ಧನ ಚಿತ್ರಮಂದಿರದ ಮಾಲೀಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.