ADVERTISEMENT

ಒಳನೋಟ | ಪ್ರಾಧ್ಯಾಪಕರ ನೇಮಕಾತಿ ಅಕ್ರಮ: ಕುಲಸಚಿವರಿಂದಲೇ ಪ್ರಶ್ನೆ ಸೋರಿಕೆ

ಸಂತೋಷ ಜಿಗಳಿಕೊಪ್ಪ
Published 7 ಮೇ 2022, 19:31 IST
Last Updated 7 ಮೇ 2022, 19:31 IST
ಎಚ್‌. ನಾಗರಾಜ್
ಎಚ್‌. ನಾಗರಾಜ್   

ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ‍ಪರೀಕ್ಷೆಯಲ್ಲೂ ಈ ಬಾರಿ ಅಕ್ರಮ ನಡೆದಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ‘ಕುಲಸಚಿವ’ರೇ ಇದರಲ್ಲಿ ಭಾಗಿಯಾಗಿದ್ದ ಸಂಗತಿ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ.

ಮಾರ್ಚ್‌ 14ರಂದು ನಡೆಸಿದ್ದ ಪರೀಕ್ಷೆಗೆ, ಹಲವು ದಿನಗಳ ಮುನ್ನವೇ ಭೂಗೋಳಶಾಸ್ತ್ರ ವಿಷಯದ 18 ಪ್ರಶ್ನೆಗಳ ಫೋಟೊಗಳು ಹಲವರ ಮೊಬೈಲ್‌ನ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದವು. ಅದೇ ಫೋಟೊ ಆಧರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ದೂರು ನೀಡಿದ್ದ ಅಭ್ಯರ್ಥಿಯೊಬ್ಬರು, ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದರು. ಆಂತರಿಕ ತನಿಖೆ ನಡೆಸಿದ್ದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ವರದಿ ಸಮೇತ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ಬೆನ್ನುಬಿದ್ದಿದ್ದ ಪೊಲೀಸರು, ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಆರೋಪದಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ (ಮೌಲ್ಯಮಾಪನ) ಪ್ರೊ. ಎಚ್‌. ನಾಗರಾಜ್ ಹಾಗೂ ಅವರ ಪಿಎಚ್‌ಡಿ ವಿದ್ಯಾರ್ಥಿ ಆರ್. ಸೌಮ್ಯಾ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇಬ್ಬರೂ ಆರೋ‍ಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ.

ADVERTISEMENT

ಸರ್ಕಾರಿ ಹುದ್ದೆ ಪಡೆಯಲು ತಂತ್ರ: ಮೈಸೂರಿನ ಕಾಲೇಜೊಂದರಲ್ಲಿ ಭೂಗೋಳ ವಿಜ್ಞಾನ ವಿಷಯದ ಅತಿಥಿ ಉಪನ್ಯಾಸಕರಾಗಿದ್ದ ಆರ್. ಸೌಮ್ಯಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಹೇಗಾದರೂ ಮಾಡಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಅಕ್ರಮದ ಹಾದಿ ತುಳಿದು ಇದೀಗ ಜೈಲು ಸೇರಿದ್ದಾರೆ.

ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ವಿಭಾಗದ ಪ್ರಾಧ್ಯಾಪಕರೂ ಆಗಿದ್ದ ಕುಲಸಚಿವ ಪ್ರೊ. ಎಚ್. ನಾಗರಾಜ್ ಮಾರ್ಗದರ್ಶನದಲ್ಲಿ ಪಿ.ಎಚ್‌ಡಿ ಮಾಡುತ್ತಿದ್ದ ಸೌಮ್ಯಾ, ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದರು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಅಗತ್ಯವಿರುವ ಭೂಗೋಳ ವಿಜ್ಞಾನ ವಿಷಯದ ಪ್ರಶ್ನೆಗಳನ್ನು ಸಿದ್ಧಪಡಿಸುವಂತೆ ಕೆಇಎ ಅಧಿಕಾರಿಗಳು, ನಾಗರಾಜ್‌ ಅವರಿಗೆ ತಿಳಿಸಿದ್ದರೆಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸೌಮ್ಯಾ ಸಹಾಯ ಪಡೆದು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದ ನಾಗರಾಜ್, ಕೆಇಎಗೆ ಕಳುಹಿಸಿದ್ದರು. ಅದೇ ಪ್ರಶ್ನೆಗಳ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಸೌಮ್ಯಾ, ಸ್ನೇಹಿತೆ ಹಾಗೂ ಇತರರಿಗೆ ಕಳುಹಿಸಿದ್ದರು. 20ಕ್ಕೂ ಹೆಚ್ಚು ಪ್ರಶ್ನೆಗಳ ಪೈಕಿ, 12 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು. ಸೌಮ್ಯಾ ಅವರಿಗೆ ಅನುಕೂಲ ಮಾಡಿಕೊಡಲು ನಾಗರಾಜ್‌ ಅವರೇ ಪ್ರಶ್ನೆಗಳನ್ನು ನೀಡಿದ್ದ ಮಾಹಿತಿಯೂ ತನಿಖೆಯಿಂದ ಹೊರಬಿದ್ದಿದೆ.

ಹಣದ ಬಗ್ಗೆ ಮುಂದುವರಿದ ತನಿಖೆ: ಪ್ರಶ್ನೆಗಳನ್ನು ಹಣಕ್ಕಾಗಿ ಸೋರಿಕೆ ಮಾಡಿರುವ ಬಗ್ಗೆ ಪೊಲೀಸರಿಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಪ್ರಾಧ್ಯಾಪಕರು ಹಾಗೂ ಅಭ್ಯರ್ಥಿಗಳನ್ನು ವಿಚಾರಣೆ ಮಾಡಿರುವುದಾಗಿ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ಹೇಳಿದರು.

ನಾಗರಾಜ್ ಅವರ ಸಹೋದರಿ ಪುತ್ರಿ ಹಾಗೂ ಆಕೆಯ ಸ್ನೇಹಿತೆ ಹೆಸರು ಕೂಡ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆದರೆ, ಅದಕ್ಕೆ ಸಂಬಂಧಪಟ್ಟ ಪುರಾವೆಗಳು ಸಿಕ್ಕಿಲ್ಲ. ಹೀಗಾಗಿ, ಇವರನ್ನೂ ಪೊಲೀಸರು ವಿಚಾರಣೆ ಮಾಡಿ ವಾಪಸು ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.