ADVERTISEMENT

ಬಡ್ಡಿ ಕಾಟ ತಪ್ಪಿಸಿದ ‘ಬಡವರ ಬಂಧು’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:26 IST
Last Updated 16 ಫೆಬ್ರುವರಿ 2019, 20:26 IST
   

ಬೆಂಗಳೂರು: ಬಡ್ಡಿರಹಿತವಾಗಿ ಸಾಲ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಬಡವರ ಬಂಧು’ ಯೋಜನೆ, ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಧೈರ್ಯ ತುಂಬಿದೆ.

ಯಶವಂತಪುರ ಮಾರುಕಟ್ಟೆ, ಬನಶಂಕರಿ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಗಾಂಧಿನಗರ, ಮಲ್ಲೇಶ್ವರದ ವ್ಯಾಪಾರಿಗಳಿಗೆ ಬ್ಯಾಂಕ್‌ ಅಧಿಕಾರಿಗಳೇ ನೇರವಾಗಿ ₹3 ಸಾವಿರದಿಂದ ₹10 ಸಾವಿರವರೆಗೆ ಸಾಲ ಕೊಡುತ್ತಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಕಂತುಗಳ ಮೂಲಕ ಸಾಲ ಮರುಪಾವತಿಗೆ ಅವಕಾಶ ನೀಡಿದ್ದಾರೆ.

‘ಈ ಹಿಂದೆ ಮೀಟರ್ ಬಡ್ಡಿಗೆ ಸಾಲ ಪಡೆದು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದೆ. ಈಗ ಬಡ್ಡಿರಹಿತವಾಗಿ ಬ್ಯಾಂಕ್‌ನಿಂದ ₹10 ಸಾವಿರ ಸಾಲ ಪಡೆದು ನಿತ್ಯವೂ ಕಂತಿನಲ್ಲಿ ಹಣ ತುಂಬುತ್ತಿದ್ದೇನೆ. ಈಗ ಯಾವುದೇ ಫೈನಾನ್ಶಿಯರ್ ಭಯ ನನಗಿಲ್ಲ’ ಎಂದು ವ್ಯಾಪಾರಿ ಆರ್‌.ಮುನಿಲಕ್ಷ್ಮಿ ‘ಪ್ರಜಾವಾಣಿ‍’ಗೆ ತಿಳಿಸಿದರು.

ADVERTISEMENT

ವ್ಯಾಪಾರಿ ಕೃಷ್ಣಮೂರ್ತಿ, ‘ಸಾಲಕ್ಕೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದವರ ಕಾಟ ಅಷ್ಟಿಷ್ಟಲ್ಲ. ದುಡಿದಿದ್ದನ್ನೆಲ್ಲ ಅವರಿಗೆ ಕೊಟ್ಟು ಚಿಲ್ಲರೆಯಲ್ಲಿ ಜೀವನ ಮಾಡಬೇಕಿತ್ತು. ಬಡವರ ಬಂಧು ಯೋಜನೆಯಿಂದ ₹7,000 ಸಾಲ ಸಿಕ್ಕಿದೆ. ಹೋಲ್‌ಸೇಲ್‌ ದರದಲ್ಲಿ ವಸ್ತುಗಳ ಖರೀದಿಗೆ ಅಷ್ಟು ಹಣ ಸಾಕು. ಅಸಲನ್ನು ಕಂತಿನಲ್ಲಿ ಪಾವತಿಸುತ್ತಿದ್ದೇನೆ. ಲಾಭವನ್ನೆಲ್ಲ ನಾನೇ ಬಳಸಬಹುದು’ ಎಂದರು.

ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮುಖಂಡ ಸಿ.ಇ.ರಂಗಸ್ವಾಮಿ, ‘ಯೋಜನೆ ಉತ್ತಮವಾಗಿದ್ದು, ಸದ್ಯ 11 ಸಾವಿರ ಫಲಾನುಭವಿಗಳಿಗೆ ಸಾಲ ಸಿಕ್ಕಿದೆ. ಇನ್ನು 31 ಸಾವಿರ ಮಂದಿಗೆ ಸಾಲ ಸಿಗಬೇಕಿದೆ. ಸದ್ಯ ಕೆ.ಆರ್‌.ಮಾರುಕಟ್ಟೆ ವ್ಯಾಪಾರಿಗಳಿಗೆ ಸಾಲ ಸಿಗುತ್ತಿಲ್ಲ. ಆ ಮಾರುಕಟ್ಟೆಗೂ ಈ ಯೋಜನೆ ವಿಸ್ತರಿಸಬೇಕು’ ಎಂದು

‘ಬ್ಯಾಂಕ್‌ನಿಂದ ₹10 ಸಾವಿರ ಪಡೆದವರು, ಖಾಸಗಿಯವರ ಬಳಿ ಮೀಟರ್‌ ಬಡ್ಡಿಗೆ ಸಾಲ ಪಡೆಯುತ್ತಿಲ್ಲ. ಆದರೆ, ₹3 ಸಾವಿರ ಹಾಗೂ ₹5 ಸಾವಿರ ಪಡೆಯುವವರಿಗೆ ಅದು ಸಾಲುತ್ತಿಲ್ಲ. ಹೀಗಾಗಿ, ಖಾಸಗಿಯವರ ಬಳಿ ಸಾಲ ಪಡೆಯುವುದನ್ನು ಮುಂದುವರಿಸಿದ್ದಾರೆ. ಯೋಜನೆಯಡಿ ಕನಿಷ್ಠ ಸಾಲದ ಮೊತ್ತವನ್ನು ₹10 ಸಾವಿರ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗೆ ಪತ್ರ ಬರೆದರು ಮಹಿಳೆಯರು

ಬೆಂಗಳೂರು: ರಾಜಧಾನಿಯಲ್ಲಷ್ಟೆ ಅಲ್ಲದೇ ಕೊಪ್ಪಳದಲ್ಲೂ ಮೀಟರ್ ಬಡ್ಡಿ ಹಾವಳಿ ಮಿತಿಮೀರಿದೆ. ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಕೆಲವು ಪೊಲೀಸರ ನೆರಳಿನಲ್ಲೇ ದೊಡ್ಡ ದೊಡ್ಡ ಕುಳಗಳು ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಅಂಥ ಕುಳಗಳ ಕಿರುಕುಳದಿಂದ ಬೇಸತ್ತ ಕೊಪ್ಪಳದ ಕೆಲ ಮಹಿಳೆಯರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ 2018ರ ಡಿಸೆಂಬರ್‌ನಲ್ಲಿ ಪತ್ರ ಬರೆದು ಅಳಲು ತೋಡಿಕೊಂಡಿದ್ದರು.

‘ಕೆಲ ವ್ಯಕ್ತಿಗಳು, ಮೀಟರ್ ಬಡ್ಡಿ ಹಾಗೂ ಚಕ್ರ ಬಡ್ಡಿ ಮತ್ತು ತಾಸಿನ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಅವರಿಂದಾಗಿ ಅಮಾಯಕರು, ಬಡವರು ಬೀದಿ ಪಾಲಾಗುತ್ತಿದ್ದಾರೆ. ಆ ವ್ಯಕ್ತಿಗಳು ಅಕ್ರಮವಾಗಿ ಬಡ್ಡಿ ವ್ಯವಹಾರ ಅಲ್ಲದೆ, ಮಟ್ಕಾ ಮತ್ತಿತರೆ ದಂಧೆಗಳನ್ನು ನಡೆಸುತ್ತಿದ್ದಾರೆ. ಬಡವರ ರಕ್ತ ಹೀರಿ ಕೋಟಿಗಟ್ಟಲೇ ಹಣ, ಆಸ್ತಿ, ಬಂಗಾರ ಸಂಪಾದಿಸಿ ದಿಢೀರ್ ಶ್ರೀಮಂತರಾಗಿ ಮೇರೆಯುತ್ತಿದ್ದಾರೆ’ ಎಂದು ಪತ್ರದಲ್ಲಿ ದೂರಿದ್ದರು.

‘ಅಸಲಿಗಿಂತ ಬಡ್ಡಿಯೇ ಹತ್ತಾರು ಪಟ್ಟು ಆಗಿದ್ದರಿಂದ ಸಾಲ ಪಡೆದ ಹಲವು ಹಳ್ಳಿಗಳ ರೈತರು, ಮಧ್ಯಮ ವರ್ಗದವರು, ಬಡವರು ಮನೆಗಳನ್ನು ಮಾರುತ್ತಿದ್ದಾರೆ. ಕೆಲವರ ಮನೆಗಳನ್ನು ಬಡ್ಡಿಕುಳಗಳೇ ವಶಕ್ಕೆ ಪಡೆದಿದ್ದಾರೆ. ಮನೆ, ಜಮೀನು ಕಳೆದುಕೊಂಡಿರುವ ಅನೇಕ ಜನ, ಸಾವಿಗೆ ಶರಣಾಗಿರುವ ಉದಾಹರಣೆಗಳು ಇವೆ. ಇಂಥ ಬಡ್ಡಿಕುಳಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ದಂಧೆಗೆ ಸಹಕರಿಸುತ್ತಿರುವವರಿಗೂ ತಕ್ಕ ಪಾಠ ಕಲಿಸಬೇಕು’ ಎಂದು ಪತ್ರದಲ್ಲಿ ಮಹಿಳೆಯರು ಒತ್ತಾಯಿಸಿದ್ದರು.

ಮುಖ್ಯಮಂತ್ರಿ ಅವರಿಗೆ ಬರೆದಿದ್ದ ಪತ್ರವನ್ನೇ ಮಹಿಳೆಯರು, ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿಗೂ ಕಳುಹಿಸಿದ್ದರು.

ದೂರು ಇಲ್ಲವೆಂದು ಪೊಲೀಸರು ಮೌನ: ಪತ್ರದಲ್ಲಿ ಮಹಿಳೆಯರು ತಮ್ಮ ಹೆಸರುಗಳನ್ನು ನಮೂದಿಸಿರಲಿಲ್ಲ. ಹೀಗಾಗಿ, ಅದೊಂದು ಅನಾಮಧೇಯ ಪತ್ರವೆಂದು ಪರಿಗಣಿಸಿದ ಪೊಲೀಸರು, ಕಸದ ಬುಟ್ಟಿಗೆ ಎಸೆದಿದ್ದಾರೆ. ‘ಯಾರಾದರೂ ದೂರು ಕೊಟ್ಟರೆ ನೋಡೋಣ. ವಿಚಾರಣೆ ಮಾಡೋಣ’ ಎಂಬು‌ದಷ್ಟೇ ಪೊಲೀಸರ ಮಾತಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.