ADVERTISEMENT

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಗಾಣಧಾಳು ಶ್ರೀಕಂಠ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
<div class="paragraphs"><p>ಕಲಬುರಗಿ ಜಿಲ್ಲೆಯ ಜೇವರ್ಗಿ ಫುಡ್‌ಪಾರ್ಕ್‌ ಪ್ರವೇಶ ದ್ವಾರ</p></div>

ಕಲಬುರಗಿ ಜಿಲ್ಲೆಯ ಜೇವರ್ಗಿ ಫುಡ್‌ಪಾರ್ಕ್‌ ಪ್ರವೇಶ ದ್ವಾರ

   
ಕರ್ನಾಟಕದಲ್ಲಿ ‘ಆಹಾರ ಪಾರ್ಕ್‌’ಗಳ ಪರ್ವ ಆರಂಭವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಸರ್ಕಾರ ಕಡಿಮೆ ದರದಲ್ಲಿ ಭೂಮಿ ಕೊಟ್ಟು, ಅಭಿವೃದ್ಧಿಗಾಗಿ ಪ್ರೋತ್ಸಾಹ ಧನವನ್ನು ನೀಡಿದರೂ ನಿರೀಕ್ಷಿತಮಟ್ಟದಲ್ಲಿ ಆಹಾರ ಪಾರ್ಕ್‌ಗಳು ಯಶಸ್ವಿಯಾಗಿಲ್ಲ. ಉದ್ಯಮಗಳೂ ಇಲ್ಲ, ಉದ್ಯೋಗಗಳೂ ಸೃಷ್ಟಿಯಾಗಿಲ್ಲ. ಇದೊಂದು ವ್ಯರ್ಥ ಪ್ರಯತ್ನವಾಗಿದೆ..

ಬೆಂಗಳೂರು: ‘ಫುಡ್‌ಪಾರ್ಕ್‌ನವರು ಆ ಕ್ಲಿಯರೆನ್ಸ್‌ ಪತ್ರ ಕೊಟ್ಟಿದ್ದರೆ, ನನಗೆ ಸಾಲ ಸಿಕ್ಕಿಬಿಡೋದು, ಉದ್ಯಮ ಆರಂಭಿಸಿ ಎಂಟು ವರ್ಷವಾಗುತ್ತಿತ್ತು. ಅವರು ಪತ್ರ ಕೊಡಲಿಲ್ಲ, ಇವರು ಸಾಲ ಕೊಡಲಿಲ್ಲ. ಉದ್ದಿಮೆ ಆರಂಭಿಸುವ ಕನಸು ಈಡೇರಲಿಲ್ಲ’ – ಬ್ಯಾಂಕ್‌ಗಳಿಂದ ಸಾಲ ಸಿಗದೇ ಹಿರಿಯೂರಿನ ಅಕ್ಷಯ ಫುಡ್‌ಪಾರ್ಕ್‌ನಲ್ಲಿ ಉದ್ದಿಮೆ ಆರಂಭಿಸಲು ವಿಫಲರಾದ ಕಥೆಯನ್ನು ಶಿವಮೊಗ್ಗದ ರಾಘವೇಂದ್ರ ಹೀಗೆ ಬೇಸರದಿಂದಲೇ ವಿವರಿಸಿದರು.

‘ಎಂಟು ವರ್ಷಗಳ ಹಿಂದೆ ಫುಡ್‌ಪಾರ್ಕ್‌ನಲ್ಲಿ ಕಾರ್ಖಾನೆ ಆರಂಭಿಸಿ, ಸಾಲ ಸೌಲಭ್ಯವಿಲ್ಲದೇ ಸಂಕಷ್ಟದಲ್ಲೇ ಉದ್ದಿಮೆ ನಡೆಸುತ್ತಿದ್ದೇನೆ. ನಿಯಮಾನುಸಾರ ಮೂರು ವರ್ಷದ ನಂತರ ಕಾರ್ಖಾನೆಯ ನಿವೇಶನವನ್ನು ನನ್ನ ಹೆಸರಿಗೆ ‘ಶುದ್ಧ ಕ್ರಯಪತ್ರ’ ಮಾಡಿಕೊಡಬೇಕಿತ್ತು. ಹಾಗಾಗದ ಕಾರಣ, ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗದೇ ಉದ್ದಿಮೆ ನಡೆಸುವುದೇ ಕಷ್ಟವಾಗಿದೆ’ ಎಂದು ಅವಲತ್ತುಕೊಂಡರು ಜೇವರ್ಗಿ ಫುಡ್‌ಪಾರ್ಕ್‌ನಲ್ಲಿ ರವೆ ತಯಾರಿಕಾ ಘಟಕ ನಡೆಸುತ್ತಿರುವ ಬಸಯ್ಯ ಗದ್ದಗಿಮಠ ಕೋಳಕೂರ.

ADVERTISEMENT

ರಾಜ್ಯದಲ್ಲಿರುವ ನಾಲ್ಕು ಫುಡ್‌ಪಾರ್ಕ್‌ಗಳಲ್ಲಿ ಉದ್ದಿಮೆ ಆರಂಭಿಸಲು ನಿವೇಶನ ಪಡೆದಿರುವ ಹಲವು ಉದ್ಯಮ ಆಕಾಂಕ್ಷಿಗಳ ಸಾಮಾನ್ಯ ಸಮಸ್ಯೆಗಳಿವು. ಇಂಥ ಹಲವು ಸಮಸ್ಯೆಗಳಿಂದಾಗಿ ಫುಡ್‌ಪಾರ್ಕ್‌ ಪ್ರಗತಿ ‘ಆಮೆ ನಡಿಗೆ’ಯಾಗಿದೆ ಎಂದು ಉದ್ಯಮ ಕ್ಷೇತ್ರದ ತಜ್ಞರು, ಫುಡ್‌ಪಾರ್ಕ್‌ನಲ್ಲಿರುವ ಹಾಲಿ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.

ಸ್ಥಳೀಯ ಆಹಾರ ಧಾನ್ಯಗಳ ಮೌಲ್ಯವರ್ಧನೆ, ಆಹಾರ ಸಂಸ್ಕರಣೆ ಉದ್ಯಮಗಳ ಸ್ಥಾಪನೆ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದಕ್ಕಾಗಿ ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ಫುಡ್‌ಪಾರ್ಕ್ ಪರ್ವ ಆರಂಭವಾಯಿತು.

ಆಹಾರ ಸಂಸ್ಕರಣಾ ಉದ್ಯಮಕ್ಕೆ ಉತ್ತೇಜನ,  ಕಚ್ಚಾವಸ್ತು ಖರೀದಿ, ಮೌಲ್ಯವರ್ಧನೆ, ಮಾರುಕಟ್ಟೆ, ದರ ನಿಗದಿಯಂತಹ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಬೇಕು. ಧಾನ್ಯ ಸಂಸ್ಕರಣೆ, ಗ್ರೇಡಿಂಗ್‌ನಂತಹ ಸೌಲಭ್ಯಗಳು ಒಂದೇ ಜಾಗದಲ್ಲಿ ರೈತರಿಗೆ ಸಿಗುವಂತಾಗಬೇಕು ಎಂಬುದು‌ ಫುಡ್‌ಪಾರ್ಕ್ ಪರಿಕಲ್ಪನೆಯ ಮೂಲ ಉದ್ದೇಶ. ಇದಕ್ಕಾಗಿಯೇ ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ (ಜಂಟಿ ಉದ್ಯಮವಾಗಿ) ನಾಲ್ಕು ಫುಡ್‌ಪಾರ್ಕ್‌ಗಳು ಸ್ಥಾಪನೆಯಾದವು.

ಫುಡ್‌ಪಾರ್ಕ್‌ ಆರಂಭಕ್ಕಾಗಿ, ರಾಜ್ಯ ಸರ್ಕಾರವು ಕಂಪನಿಗಳಿಗೆ ಕೆಎಐಡಿಬಿ ಮೂಲಕ ಕಡಿಮೆ ದರದಲ್ಲಿ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ₹4 ಕೋಟಿ ಪ್ರೋತ್ಸಾಹಧನ ನೀಡಿವೆ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿರುವ ಫುಡ್‌ ಕರ್ನಾಟಕ ಲಿಮಿಟೆಡ್‌ (ಎಫ್‌ಕೆಲ್‌) ಫುಡ್‌ಪಾರ್ಕ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಇಷ್ಟೆಲ್ಲ ಸರ್ಕಾರದ ನೆರವಿದ್ದರೂ, ಯಾವ ಫುಡ್‌ಪಾರ್ಕ್‌ಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉದ್ದಿಮೆದಾರರು ಹೇಳುತ್ತಿದ್ದಾರೆ. ಎಫ್‌ಕೆಎಲ್, ಎರಡು ವರ್ಷಗಳ ಹಿಂದೆ ಫುಡ್‌ಪಾರ್ಕ್‌ಗಳ ಕುರಿತು ನಬಾರ್ಡ್‌ ಕನ್ಸಲ್ಟೆನ್ಸಿ ಸರ್ವೀಸ್‌ ಪ್ರೈ. ಲಿಮಿಟೆಡ್ (ನ್ಯಾಬ್‌ಕಾನ್ಸ್‌) ಮೂಲಕ ನಡೆಸಿದ ಇಂಪ್ಯಾಕ್ಟ್‌ ಸ್ಟಡಿ ಅಸೆಸ್‌ಮೆಂಟ್ ವರದಿಯಲ್ಲೂ ಇದೇ ಅಂಶಗಳು ಉಲ್ಲೇಖವಾಗಿವೆ. ‘ನಾಲ್ಕೂ ಪಾರ್ಕ್‌ಗಳಲ್ಲಿ ಶೇ 15ರಷ್ಟು ಉದ್ದಿಮೆಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಪಾರ್ಕ್‌ನಿಂದ ವಾರ್ಷಿಕ ₹500 ಕೋಟಿ ವಹಿವಾಟು ಮತ್ತು ಪ್ರತಿ ಪಾರ್ಕ್‌ನಲ್ಲಿ ಅಂದಾಜು 30 ಸಾವಿರ ಮಂದಿ ಉದ್ಯೋಗಿಗಳಿರಬೇಕಿತ್ತು. ಈಗ ಕೇವಲ 436 ಉದ್ಯೋಗಿಗಳಿದ್ದಾರೆ. ಒಂದು ಪಾರ್ಕ್ ಮಾತ್ರ ₹500 ಕೋಟಿ ವಹಿವಾಟು ದಾಖಲಿಸಿದೆ. ಉಳಿದ ಮೂರು ₹100 ಕೋಟಿ ಗಡಿ ದಾಟಿಲ್ಲ’ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯು ಫುಡ್‌ಪಾರ್ಕ್‌ಗಳ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಬಾಗಲಕೋಟೆ ಫುಡ್‌ ಪಾರ್ಕ್‌ ಜಾಗದಲ್ಲಿ ಕುರಿಗಳು ಮೇಯುತ್ತಿರುವುದು

ಹೀಗಿವೆ ಫುಡ್‌ಪಾರ್ಕ್‌ಗಳು:

ಬಾಗಲಕೋಟೆಯ ನವನಗರದಲ್ಲಿ 2005 ರಲ್ಲಿ ‘ಗ್ರೀನ್‌ ಫುಡ್ ಪಾರ್ಕ್‌’ ಆರಂಭವಾಯಿತು. ಇದಕ್ಕಾಗಿ ಉದ್ಯಮಿ ಆದಿಕೇಶವಲು ಅವರ ಸಂಸ್ಥೆಗೆ ಕೆಐಎಡಿಬಿ 100 ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿತು. ಆರಂಭದಲ್ಲಿ 6 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಫುಡ್‌ಪಾರ್ಕ್ ಸರಿಯಾಗಿ ಅಭಿವೃದ್ಧಿ ಹೊಂದಿಲ್ಲ ಎಂಬ ಕಾರಣಕ್ಕಾಗಿ 100 ಎಕರೆ ಪೈಕಿ 53 ಎಕರೆ ಜಮೀನನ್ನು ಸರ್ಕಾರ ವಾಪಸ್ ಪಡೆದು, ಅದನ್ನು 2022ರಲ್ಲಿ ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್‌ನವರಿಗೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಆ ಸಂಸ್ಥೆಯಿಂದಲೂ ನಿರೀಕ್ಷಿತ ಪ್ರಗತಿಯಾಗಿಲ್ಲ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟಕ್ಕೆ 10 ಎಕರೆ ಜಮೀನನ್ನು ನೀಡಲಾಗಿದೆ. ಕೃಷಿ ಇಲಾಖೆಯ ಪ್ರಕಾರ, ಅಲ್ಲಿ 19 ಘಟಕಗಳಿಗೆ ಜಾಗ ನೀಡಲಾಗಿದೆ. ಅದರಲ್ಲಿ ಎಂಟು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಪಾರ್ಕ್‌ನಲ್ಲಿ ರಸ್ತೆಗಳು ಹಾಳಾಗಿವೆ. ಬೀದಿ ದೀಪಗಳು ಎಂದೋ ನಂದಿ ಹೋಗಿವೆ. ಕೈಗಾರಿಕೆಗಳಿದ್ದ ಜಾಗದಲ್ಲಿ ಜಾಲಿ ಗಿಡಗಳು ಬೆಳೆದಿವೆ. ಮೇಕೆ–ಕುರಿ ಮೇಯಿಸುವವ ತಾಣವಾಗಿದೆ. ಇಲ್ಲಿ ಸ್ಮಶಾನ ಮೌನ ನಿಧಾನವಾಗಿ ಆವರಿಸುತ್ತಿದೆ.

ಹೊಸ ಉದ್ದಿಮೆಗಳಿಲ್ಲ:

ಇದೇ ಅವಧಿಯಲ್ಲಿ (2006) ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ 105 ಎಕರೆಯಲ್ಲಿ ಜೇವರ್ಗಿ ಫುಡ್‌ಪಾರ್ಕ್ ಆರಂಭಕ್ಕೆ ಜಮೀನು ಮಂಜೂರಾಯಿತು. ಇಲ್ಲಿ 117 ಉದ್ಯಮಿಗಳಿಗೆ ನಿವೇಶಗಳನ್ನು ಉಪಗುತ್ತಿಗೆ ನೀಡಲಾಗಿದೆ. 96 ನಿವೇಶನಗಳು ನೋಂದಣಿಯಾಗಿವೆ. ಇದರಲ್ಲಿ ಕೇವಲ ಆರು ಉದ್ದಿಮೆಗಳಷ್ಟೇ ಆರಂಭವಾಗಿವೆ, ಎರಡು ನಿರ್ಮಾಣ ಹಂತದಲ್ಲಿವೆ. ಉಗ್ರಾಣ, ವೇ ಬ್ರಿಡ್ಜ್, ಕೋಲ್ಡ್ ಸ್ಟೋರೇಜ್ ಇದೆ. ಡಾಂಬರ್ ರಸ್ತೆ, ಚರಂಡಿ, ಬೀದಿ ದೀಪ ಬಿಟ್ಟು ಬೇರೆ ಮೂಲಸೌಕರ್ಯಗಳಿಲ್ಲ. ಉದ್ಯಮ ಆರಂಭಿಸಲು ನಿವೇಶನ ಪಡೆದ ಕೆಲವರು ಇಲ್ಲಿ ಗೋದಾಮುಗಳನ್ನು ನಿರ್ಮಿಸಿಕೊಂಡಿದ್ದಾರೆ. ಗುತ್ತಿಗೆ ಅವಧಿಯನ್ನು ಮೂರ್ನಾಲ್ಕು ಬಾರಿ ವಿಸ್ತರಿಸಿದರೂ ಹೊಸ ಉದ್ದಿಮೆಗಳು ಆರಂಭವಾಗಿಲ್ಲ.

ಸೌಲಭ್ಯಗಳಿವೆ, ರೈತರಿಗೆ ಮಾಹಿತಿ ಇಲ್ಲ:

2007-08ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ 86 ಎಕರೆ 7 ಗುಂಟೆ ಜಾಗದಲ್ಲಿ ಇನೋವಾ ಅಗ್ರಿ ಬಯೋಪಾರ್ಕ್‌(ಫುಡ್‌ ಪಾರ್ಕ್‌) ಆರಂಭವಾಯಿತು.

ಫುಡ್‌ಪಾರ್ಕ್‌ನಲ್ಲಿ 20 ನಿವೇಶನಗಳನ್ನು ಉಪಗುತ್ತಿಗೆ ನೀಡಲಾಗಿದೆ. 6 ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಉದ್ಯಮ ನಿರ್ಮಾಣ ಹಂತದಲ್ಲಿದೆ. ಪಾರ್ಕ್‌ನಲ್ಲಿ ವಿವಿಧ ಆಹಾರ ಸಂಸ್ಕರಣಾ ಘಟಕಗಳಿವೆ. ಹಣ್ಣು, ತರಕಾರಿಗಳ ಶ್ರೇಣೀಕರಣ (ಗ್ರೇಡಿಂಗ್‌), ವಿಂಗಡನೆ, ಸಂಸ್ಕರಣೆ, ಪ್ಯಾಕಿಂಗ್ ಘಟಕ, ಬೇಳೆ ಕಾಳುಗಳ ಸಂಸ್ಕರಣೆ, ಶೀತಲೀಕರಣ ಘಟಕಗಳು ಸೇರಿದಂತೆ ಹಲವು ಉನ್ನತ ತಂತ್ರಜ್ಞಾನದ ಸೌಲಭ್ಯಗಳಿವೆ. ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳಿವೆ. ಆದರೆ, ರೈತರು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಫುಡ್‌ಪಾರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ರವಿ ಹೇಳುತ್ತಾರೆ. ‘ಇಂಥದ್ದೊಂದು ಸೌಲಭ್ಯಗಳಿರುವ ಫುಡ್‌ಪಾರ್ಕ್‌ ಜಿಲ್ಲೆಯಲ್ಲಿದೆ’ ಎಂಬುದೇ ಗೊತ್ತಿಲ್ಲ‌ ಎಂದು ಸ್ಥಳೀಯ ರೈತರು‌ ಹೇಳುತ್ತಾರೆ. ಫುಡ್‌ಪಾರ್ಕ್‌ ಚಟುವಟಿಕೆ ಕುರಿತು ಸ್ಥಳೀಯ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲಿ ವಿಚಾರಿಸಿದರೆ,‌ ಅಲ್ಲೆಲ್ಲೂ ಸಮರ್ಪಕ ಮಾಹಿತಿ ಇಲ್ಲ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅಕ್ಷಯಫುಡ್‌ ಪಾರ್ಕ್‌ನಲ್ಲಿರುವ ಗೋದಾಮು

ಮೂಲ ಸೌಕರ್ಯದ ಕೊರತೆ:

2011ರಲ್ಲಿ‌ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಹುಚ್ಚವ್ವನಹಳ್ಳಿಯಲ್ಲಿ 106 ಎಕರೆಯಲ್ಲಿ ಆರಂಭವಾಗಿರುವ ಅಕ್ಷಯ ಫುಡ್ ಪಾರ್ಕ್‌ ಕಥೆಯೂ ಭಿನ್ನವಾಗೇನಿಲ್ಲ.‌ ಇಲ್ಲಿ 90 ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದ್ದರೂ, ಸದ್ಯ 10 ಉದ್ಯಮಗಳು ನಡೆಯುತ್ತಿವೆ. ಎಂಟು ಪ್ರಗತಿಯಲ್ಲಿವೆ. 

ಪಾರ್ಕ್‌ನಲ್ಲಿರುವ ಉದ್ದಿಮೆದಾರರಿಗೆ ಹಾಗೂ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ಫುಡ್‌ಪಾರ್ಕ್‌ನಲ್ಲಿ ಬೃಹತ್ ಶೀತಲಘಟಕ, ಸಂಸ್ಕರಣಾ ಘಟಕಗಳು, ಹಣ್ಣುಗಳ ಗ್ರೇಡಿಂಗ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಆದರೆ ಇವುಗಳನ್ನು ಬಳಸಿಕೊಳ್ಳುವಷ್ಟು ಉದ್ದಿಮೆಗಳು ಇಲ್ಲಿಲ್ಲ, ಸುತ್ತಮುತ್ತಲಿನ ರೈತರೂ ಇವುಗಳನ್ನು ಬಳಸಿಕೊಳ್ಳುವುದು ವಿರಳ.

‘ರಾಷ್ಟ್ರೀಯ ಹೆದ್ದಾರಿಯಿಂದ ಅಕ್ಷಯ ಫುಡ್‌ಪಾರ್ಕ್‌ ಸಂಪರ್ಕಿಸುವ ರಸ್ತೆ ಕಿರಿದಾಗಿದೆ. ಉದ್ದಿಮೆದಾರರು ಘಟಕ
ಗಳನ್ನು ತೆರೆಯಲು ಹಿಂದೇಟು ಹಾಕಲು ಈ ಕಾರಣವೂ ಒಂದು’ ಎಂದು ಹೇಳುವ ಅಕ್ಷಯ ಫುಡ್‌ಪಾರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ನಾರಾಯಣಸ್ವಾಮಿ, ಇದಕ್ಕಾಗಿ ಸರ್ಕಾರದ ನೆರವು ಬೇಕಿದೆ ಎನ್ನುತ್ತಾರೆ. ‘ಮೂಲಸೌಲಭ್ಯಗಳ ಕೊರತೆಯ ಕಾರಣದಿಂದ ಪಾರ್ಕ್‌ನಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಲು ರೈತರು ಬರುತ್ತಿಲ್ಲ’ ಎಂಬುದು ಸ್ಥಳೀಯ ರೈತರು, ರೈತ ಮುಖಂಡರು ಹಾಗೂ ಉದ್ಯಮಿಗಳ ಅಭಿಪ್ರಾಯವಾಗಿದೆ.

ಹಿನ್ನಡೆಗೆ ಸಾಮಾನ್ಯ ಕಾರಣಗಳು:

'ಫುಡ್‌ಪಾರ್ಕ್'ನಲ್ಲಿ ಹೊಸ ಉದ್ದಿಮೆಗಳು ಆರಂಭವಾಗದಿರಲು ನವೋದ್ಯಮಿಗಳಿಗೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಸಿಗದಿರುವುದೇ ಕಾರಣ' ಎಂಬುದು ನಾಲ್ಕೂ ಫುಡ್‌ಪಾರ್ಕ್‌ಗಳಲ್ಲಿ ನಿವೇಶನ ಪಡೆದರೂ ಉದ್ಯಮ ಆರಂಭಿಸಲಾಗದವರ ಅಭಿಪ್ರಾಯ.

‘ಯಶಸ್ವಿಯಾಗಿ ಉದ್ದಿಮೆ ನಡೆಸಿ, ಅವಧಿ ಪೂರ್ಣಗೊಂಡರೂ ಫುಡ್‌ಪಾರ್ಕ್‌ನವರು ಉದ್ದಿಮೆದಾರರ ಹೆಸರಿಗೆ 'ಶುದ್ಧ ಕ್ರಯ' ಪತ್ರ ನೀಡಲ್ಲ. ಇದು ಕೂಡ  ಹೊಸ ಉದ್ದಿಮೆಗಳು ಆರಂಭವಾಗದಿರಲು ಕಾರಣ ಎಂಬುದು ಈಗಾಗಲೇ ಉದ್ಯಮ ನಡೆಸುತ್ತಿರುವರ ಅನಿಸಿಕೆ. ಸರ್ಕಾರ ಸಮರ್ಪಕವಾಗಿ ಅನುದಾನ ನೀಡದೇ, ಫುಡ್‌ಪಾರ್ಕ್‌ಗಳಿಗೆ ಅಗತ್ಯವಾದ ರಸ್ತೆ, ನೀರಿನಂತಹ ಮೂಲಸೌಲಭ್ಯ ಕಲ್ಪಿಸದಿರುವುದೂ, ಹೊಸ ಉದ್ದಿಮೆಗಳು ಶುರುವಾಗದಿರಲು ಕಾರಣ ಎಂಬುದು ಫುಡ್‌ಪಾರ್ಕ್ ನಡೆಸಲು ಗುತ್ತಿಗೆ ಪಡೆದಿರುವ ಕಂಪನಿಗಳ ಅನಿಸಿಕೆ.

ಸಬ್‌ ಲೀಸ್‌ ದಾಖಲೆಗಳನ್ನು ಆಧರಿಸಿ ಬ್ಯಾಂಕ್‌ನವರು ಸಾಲ ಕೊಡುವುದಿಲ್ಲ. ಸಾಲ ನೀಡಲು ಜಾಮೀನು ಭದ್ರತೆ ಕೇಳುತ್ತಾರೆ. ಉದ್ದಿಮೆದಾರರು ಕೆಐಎಡಿಬಿ ಅಥವಾ ಫುಡ್‌ಪಾಕ್‌ನವರು ಶ್ಯೂರಿಟಿ ಕೊಡಬೇಕೆಂದು ನಿರೀಕ್ಷಿಸುತ್ತಾರೆ. ‘ಸರ್ಕಾರದ ನಿಯಮದಂತೆ ಉದ್ದಿಮೆದಾರರೇ ಶ್ಯೂರಿಟಿ ಹೊಂದಿಸಿಕೊಳ್ಳಬೇಕು’ ಎಂದು ಫುಡ್‌ಪಾರ್ಕ್‌ನವರು ಪ್ರತಿಪಾದಿಸುತ್ತಾರೆ. ಇದರ ನಡುವೆ ‘ಸ್ವಂತ ಹಣ ತೊಡಗಿಸಿ ಉದ್ಯಮ ಆರಂಭಿಸುವುದು ಕಷ್ಟ’ ಎಂದು ನಿವೇಶನ ಪಡೆದವರು ಹೇಳುತ್ತಾರೆ.

ನ್ಯಾಬ್‌ಕಾನ್ಸ್‌ ವರದಿಯಲ್ಲಿ ಫುಡ್‌ಪಾರ್ಕ್‌ಗಳಲ್ಲಿ ಮೂಲಸೌಕರ್ಯಗಳ ಕೊರತೆಯಿರುವುದನ್ನು ಉಲ್ಲೇಖಿಸಿದೆ. ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಸಿಗದಿರುವ ಕಾರಣದಿಂದ ಉದ್ದಿಮೆಗಳು ಆರಂಭವಾಗಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಡಿ ಆಹಾರ ಉದ್ಯಮ  ಆರಂಭಿಸುವ ಉದ್ದಿಮೆದಾರರನ್ನು ಆಯ್ಕೆ ಮಾಡಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸುತ್ತವೆ. ಆದರೆ, ಈ ಫುಡ್‌ಪಾರ್ಕ್‌ಗಳಲ್ಲೂ ಉದ್ದಿಮೆದಾರರ ಆಯ್ಕೆಯಲ್ಲಿ ಕನಿಷ್ಠ ಅರ್ಹತೆಗಳನ್ನೂ ಪರಿಗಣಿಸಿಲ್ಲ ಎಂಬುದನ್ನೂ ನ್ಯಾಬ್‌ಕಾನ್ಸ್ ವರದಿಯಲ್ಲಿ ಪ್ರಸ್ತಾಪಿಸಿದೆ.

ಸರ್ಕಾರದ ‘ಸಹಕಾರ’, ನಿಗಾ ಅಗತ್ಯ:

‘ಸರ್ಕಾರದ ಉದ್ಯಮ ಸ್ನೇಹಿ ನೀತಿ –ನಿಯಮಗಳ ಕೊರತೆಯಿಂದ, ಸರ್ಕಾರ–ಖಾಸಗಿ ಜಂಟಿ ಸಹಭಾಗಿತ್ವದ ಫುಡ್‌ಪಾರ್ಕ್‌ ಉದ್ಯಮ ಸಂಪೂರ್ಣ ವಿಫಲವಾಗಿದೆ. ನಿರೀಕ್ಷಿತ ಪ್ರಗತಿ ಕಾಣದ ಫುಡ್‌ಪಾರ್ಕ್‌ಗಳ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಪ್ರಗತಿ ಕಾಣದ ಫುಡ್‌ಪಾರ್ಕ್‌ಗಳನ್ನು ಸರ್ಕಾರ ವಾಪಸ್ ಪಡೆದು, ಉದ್ಯಮ ಸ್ನೇಹಿ ನೀತಿ– ನಿಯಮಗಳನ್ನು ರೂಪಿಸುವಂತೆ ಉದ್ದಿಮೆದಾರರು ಸರ್ಕಾರವನ್ನು ಒತ್ತಾಯಿಸುತ್ತಾರೆ.

ನ್ಯಾಬ್‌ಕಾನ್ಸ್ ಕೂಡ ‘ಫುಡ್‌ಪಾರ್ಕ್‌ಗಳಲ್ಲಿ  ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ  ಆದ್ಯತೆ ನೀಡಬೇಕು. ನಿವೇಶನ ಹಂಚಿಕೆಯಾದರೂ ಉದ್ಯಮ ಆರಂಭಿಸದವರಿಗೆ ಗಡುವು ನೀಡಿ, ಆ ಗಡುವು ಮೀರಿದರೆ, ನಿವೇಶನ ವಾಪಸ್ ಪಡೆದು, ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿ ಹೊಸಬರಿಗೆ ಹಂಚಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.

ರಾಗಿಗೆ ಸಂಬಂಧಿಸಿದ ಉತ್ಪನ್ನ ತಯಾರಿಕಾ ಘಟಕ ಆರಂಭಿಸಲು ನಿವೇಶನ ಪಡೆದುಕೊಂಡೆ. ಕೆಎಸ್‌ಎಫ್‌ಸಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ. ಸಾಲ ಮಂಜೂರಾಯಿತು. ಆದರೆ, ಹಣ ಖಾತೆಗೆ ಬಂದಿರಲಿಲ್ಲ. ಮುಂದೆ ಹಣ ಬರಬಹುದೆಂದು ತಿಳಿದು, ಸುಮಾರು ₹6 ಲಕ್ಷ ಸ್ವಂತ ಹಣ ಹಾಕಿ ಕಟ್ಟಡ ನಿರ್ಮಾಣ ಆರಂಭಿಸಿದೆ. ಈ ನಡುವೆ ಕೆಎಸ್‌ಎಫ್‌ಸಿಯವರು, ಫುಡ್‌ಪಾರ್ಕ್ ಕಡೆಯಿಂದ ‘ಅಂಡರ್‌ ಟೇಕನ್‌’ ಪತ್ರ ತರುವಂತೆ ಕೇಳಿದರು. ಫುಡ್‌ಪಾರ್ಕ್‌ ನವರು ‘ಅದನ್ನು ನಾವು ಕೊಡುವುದಕ್ಕೆ ಬರುವುದಿಲ್ಲ’ ಎಂದರು. ಹೀಗಾಗಿ ಮಂಜೂರಾದ ಹಣ ಸಿಗಲಿಲ್ಲ, ಉದ್ದಿಮೆ ಆರಂಭವಾಗಲಿಲ್ಲ. ಈಗ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ ನನ್ನ ಹಾಗೆ ‘ಅತಂತ್ರ’ ಸ್ಥಿತಿಯಲ್ಲಿರುವವರು ಹಲವರಿದ್ದಾರೆ.
ರಾಘವೇಂದ್ರ, ಶಿವಮೊಗ್ಗ(ಅಕ್ಷಯ ಫುಡ್‌ಪಾರ್ಕ್‌ನಲ್ಲಿ ನಿವೇಶನ ಪಡೆದವರು)
ಉಪಗುತ್ತಿಗೆ ದಾಖಲೆ ಇಟ್ಟುಕೊಂಡು ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಆ ದಾಖಲೆಗಳ ಜೊತೆಗೆ ಹೆಚ್ಚುವರಿಯಾಗಿ ನಮ್ಮ ಆಸ್ತಿಯ ಅಡಮಾನ ಮಾಡಿದರೆ ಸಾಲ ಕೊಡುತ್ತಾರೆ. ಸಾಲ ಸಿಗದೆ ಉದ್ದಿಮೆ ಆರಂಭಿಸಲು ಸಾಧ್ಯವಾಗುತ್ತಿಲ್ಲ
ಶರಣು ರಾಂಪೂರ, ಜೇವರ್ಗಿ(ಜೇವರ್ಗಿ ಫುಡ್‌ಪಾರ್ಕ್‌ನಲ್ಲಿ ನಿವೇಶನ ಪಡೆದವರು)
ಜೇವರ್ಗಿ ಫುಡ್‌ಪಾರ್ಕ್‌ಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ನಿವೇಶನ ಸಿಕ್ಕವರಿಗೆ ಬ್ಯಾಂಕ್‌ ಸಾಲ ಸಿಗಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ.
ಮಂಜುಳಾ ಭಜಂತ್ರಿ, ಜಿಲ್ಲಾ ಅಧ್ಯಕ್ಷೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಲಬುರಗಿ
ಹೊಸ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳು ನಮ್ಮ ಫುಡ್‌ಪಾರ್ಕ್‌ನಲ್ಲಿವೆ. ಆ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಮಗೂ ನಷ್ಟ, ರೈತರಿಗೂ ನಷ್ಟ’
ಕೆ.ಎನ್‌.ರವಿ, ವ್ಯವಸ್ಥಾಪಕ ನಿರ್ದೇಶಕ, ಇನೋವಾ ಅಗ್ರಿ ಬಯೋಪಾರ್ಕ್‌, ಮಾಲೂರು
ಈಗ ಫುಡ್‌ಪಾರ್ಕ್‌ಗಳು ಒಂದು ಹಂತಕ್ಕೆ ತಲುಪಿವೆ. ಈ ಸಮಯದಲ್ಲಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡುವುದು ಸೂಕ್ತ. ಫುಡ್‌ಪಾರ್ಕ್‌ಗಳಿರುವ ಕ್ಷೇತ್ರಗಳ ಸಚಿವರು, ಶಾಸಕರು ಕೂಡ ಫುಡ್‌ಪಾರ್ಕ್‌ ಅಭಿವೃದ್ಧಿಗೆ ನೆರವಾಗುವಂತೆ ಕೇಳಿದ್ದಾರೆ. ಇವೆಲ್ಲವನ್ನೂ ಗಮನಿಸಿ, ಹೆಚ್ಚುವರಿ ನೆರವಿನ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇನೆ.
ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ
ಫುಡ್‌ಪಾರ್ಕ್‌ಗಳು ಪ್ರಗತಿಯಲ್ಲಿ ಹಿಂದುಳಿಯಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೇ ನೇರ ಕಾರಣ. ಫುಡ್‌ಪಾರ್ಕ್‌ ವಿಷಯದಲ್ಲಿ ಸರ್ಕಾರ ತನ್ನ ಕೆಲಸ ಮಾಡುತ್ತಿದೆ. ನಿವೇಶನದಾರರು ಉದ್ಯಮ ಆರಂಭಿಸಲು ಈಗಿರುವ ಕಟು ನೀತಿ ನಿಯಮಗಳನ್ನು ಸಡಿಲಗೊಳಿಸಿ, ನವೋದ್ಯಮಿಗಳ ಬೆಂಬಲಕ್ಕೆ ನಿಲ್ಲಬೇಕು.
‍ಪ್ರಕಾಶ್ ಕಮ್ಮರಡಿಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ನಿವೇಶನ ಪಡೆದು, ನಿಯಾಮನುಸಾರ ಉದ್ಯಮ ಆರಂಭಿಸದವರಿಂದ ನಿವೇಶನ ಹಿಂಪಡೆದಿಲ್ಲ. ಈ ಕುರಿತು ಕ್ರಮ ಜರುಗಿಸುವಂತೆ ಕೆಐಎಡಿಬಿಗೆ ಪತ್ರ ಬರೆದಿದ್ದೇವೆ. ಅಕ್ಷಯಫುಡ್‌ಪಾರ್ಕ್‌ನಿಂದ ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಪಡೆಯಲು ಶ್ಯೂರಿಟಿ ಕೊಡುವ ಪ್ರಸ್ತಾವನೆ ಇಲ್ಲ. ಕೆಲವು ಬ್ಯಾಂಕ್‌ಗಳು ಸಬ್‌ಲೀಸ್ ಆಧಾರದಲ್ಲಿ ಸಾಲ ಕೊಡುತ್ತಿಲ್ಲ. ಹೆಚ್ಚುವರಿ ಶೂರಿಟಿ ಕೇಳುತ್ತಿದ್ದಾರೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ.
ಎಂ.ನಾರಾಯಣಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಅಕ್ಷಯ ಫುಡ್‌ ಪಾರ್ಕ್‌, ಹಿರಿಯೂರು
ಗುತ್ತಿಗೆ – ಉಪಗುತ್ತಿಗೆಯ ‘ಫುಡ್‌ಪಾರ್ಕ್‌’

ಆಹಾರ ಪಾರ್ಕ್‌ಗಳ ಸ್ಥಾಪನೆಗಾಗಿ ಕೆಐಎಡಿಬಿ, ಕಂಪನಿಗಳಿಗೆ 10 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಿದೆ. ಆಗಾಗ್ಗೆ ಗುತ್ತಿಗೆ ನವೀಕರಿಸಿದೆ. ಜಮೀನು ಪಡೆದ ಕಂಪನಿಯವರು, ಉದ್ದಿಮೆ ಆರಂಭಿಸುವವರಿಗೆ ಉಪ ಗುತ್ತಿಗೆ (ಸಬ್‌ ಲೀಸ್‌) ಆಧಾರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನಿವೇಶನ ಪಡೆದವರು ನಿಯಮಾನು ಸಾರ ನಿಗದಿತ ಅವಧಿಯೊಳಗೆ ಉದ್ದಿಮೆ ಆರಂಭಿಸಬೇಕು. ಗಡುವು ಮೀರಿದರೆ, ನಿವೇಶನಗಳನ್ನು ಹಿಂಪಡೆದು, ಬೇರೆಯವರಿಗೆ ಹಂಚಿಕೆ ಮಾಡಬೇಕು. ಹಾಗೆಯೇ, ನಿಯಮಾನುಸಾರ ಯಶಸ್ವಿಯಾಗಿ ಉದ್ಯಮ ನಡೆಸಿದರೆ,  ನಿವೇಶವನ್ನು ಅವರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂಬ ಷರತ್ತುಗಳಿವೆ.

ಮಾಹಿತಿ ಪ್ರಕಾರ, ಯಾವುದೇ ಅರ್ಹತೆಗಳನ್ನು ನಿಗದಿಪಡಿಸದೇ, ‘ಮೊದಲ ಬಂದವರಿಗೆ ಆದ್ಯತೆ‘ ಯಂತೆ  ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಒಂದೆರಡು ಕಡೆ ಉದ್ದಿಮೆ ಆರಂಭಿಸದವರಿಂದ ಕೆಲ ನಿವೇಶನಗಳನ್ನು ಹಿಂಪಡೆದಿದ್ದರೂ, ಅದನ್ನು ಹೆಚ್ಚಿನ ಬೆಲೆಗೆ ಮತ್ತೆ ಉಪಗುತ್ತಿಗೆ ನೀಡಿದ್ದು, ಇದೊಂದು ರೀತಿಯ ‘ರಿಯಲ್‌ ಎಸ್ಟೇಟ್‌’ನಂತಹ ದಂಧೆಯಂತಾಗಿದೆ ಎಂಬ ಆರೋಪಗಳಿವೆ.

ಇಂಥ ಹಲವು ‘ಅವ್ಯವಸ್ಥೆ’ಗಳಿಂದ ಬೇಸತ್ತ ಕೆಲವು  ಉದ್ದಿಮೆದಾರರು ಫುಡ್‌ಪಾರ್ಕ್‌ಗಳ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದಾರೆ.

ಪುನಶ್ಚೇತನಕ್ಕೆ ‘ನ್ಯಾಬ್‌ಕಾನ್ಸ್‌’ ಸಲಹೆಗಳು

  • ನಿವೇಶನ ಪಡೆದು ಉದ್ದಿಮೆ ಆರಂಭಿಸದಿದ್ದರೆ, ಅಂಥವರಿಂದ ನಿವೇಶನಗಳನ್ನು ಹಿಂಪಡೆದು, ಹೊಸ
    ಉದ್ದಿಮೆದಾರರಿಗೆ/ರೈತ ಉತ್ಪಾದಕ ಸಂಸ್ಥೆಗಳಿಗೆ/ ಸಹಕಾರ ಸಂಘಗಳಿಗೆ ಮರು ಹಂಚಿಕೆ ಮಾಡಬಹುದು.

  • ಕೇಂದ್ರ ಮತ್ತು ರಾಜ್ಯ (ಹೊಸ ಕೈಗಾರಿಕೆ ನೀತಿ 2020–25) ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಬಗ್ಗೆ ಹೊಸ ಉದ್ದಿಮೆದಾರರಿಗೆ ಅರಿವು ಮೂಡಿಸಿ, ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬಹುದು.

  • ಫುಡ್‌ಪಾರ್ಕ್‌ಗಳನ್ನೂ ಸಹ ಇತರೆ ಕೈಗಾರಿಕೆಗಳಂತೆ ಪರಿಗಣಿಸಿ, ರಾಜ್ಯ ಸರ್ಕಾರದ ಕೈಗಾರಿಕೆಗಳು
    ಮತ್ತು ವಾಣಿಜ್ಯ ಇಲಾಖೆಯ ಕ್ರಿಟಿಕಲ್ ಇನ್‌ಫ್ರಾಸ್ಟ್ರಕ್ಚರ್‌ ಸ್ಕೀಂನಲ್ಲಿರುವ ಅನುದಾನ ಬಳಸಿಕೊಳ್ಳಲು
    ಅವಕಾಶ ನೀಡಬಹುದು.

  • ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ, ಕೇಂದ್ರ ಕೃಷಿ ಸಚಿವಾಲಯ, ಕೇಂದ್ರ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಯೋಜನೆಗಳನ್ನು ಫುಡ್‌ಪಾರ್ಕ್‌ಗಳು ಬಳಸಿಕೊಳ್ಳುವಂತೆ ಮಾಡಬಹುದು.

  • ಫುಡ್‌ಪಾರ್ಕ್‌ನಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ನಬಾರ್ಡ್‌ನಲ್ಲಿ ಆಹಾರ ಸಂಸ್ಕರಣಾ ಯೋಜನೆಗಳಿಗಿರುವ ಅನುದಾನವನ್ನು ಉಪಯೋಗಿಸಿಕೊಳ್ಳಬಹುದು. ಫುಡ್‌ಪಾರ್ಕ್‌ನಲ್ಲಿ ಉದ್ಯಮ ಆರಂಭಿಸುವ ಎಫ್‌ಪಿಒ ತರಹದ ಸಂಸ್ಥೆಗಳು, ನಬಾರ್ಡ್‌ನ ಸಹಾಯ ಪಡೆಯಬಹುದು.

ಪೂರಕ ಮಾಹಿತಿ: ಎಂ.ಎನ್‌. ಯೋಗೇಶ್, ಚಿತ್ರದುರ್ಗ; ಬಸವರಾಜ ಹವಾಲ್ದಾರ್, ಬಾಗಲಕೋಟೆ, ಇಮಾಮ್‌ಸಾಬ್‌, ಬೆಳಗಾವಿ; ಮನೋಜ್‌ಕುಮಾರ್ ಗುದ್ದಿ, ಕಲಬುರ್ಗಿ; ವಿಜಯಕುಮಾರ್ ಕಲ್ಲಾ, ಜೇವರ್ಗಿ; ಓಂಕಾರಮೂರ್ತಿ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.