ADVERTISEMENT

ಒಳನೋಟ: ಭೂಪರಿವರ್ತನೆಗೆ 3 ದಿನವಲ್ಲ, ತಿಂಗಳು ಬೇಕು

ಬಾಲಕೃಷ್ಣ ಪಿ.ಎಚ್‌
Published 4 ಜೂನ್ 2022, 19:30 IST
Last Updated 4 ಜೂನ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಮೂರೇ ದಿನಗಳಲ್ಲಿ ಭೂ ಪರಿವರ್ತನೆಯಾಗುತ್ತಿದೆ ಎಂಬುದು ಕಂದಾಯ ಸಚಿವರ ಭಾಷಣಕ್ಕೆ ಸೀಮಿತವಾಗಿದೆ. ಎಲ್ಲ ದಾಖಲೆಗಳು ಸರಿ ಇದ್ದರೂ ಭೂಪರಿವರ್ತನೆಗೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತಿದೆ.

‘ನಾನು ಪೋಡಿ ಮಾಡಲು ತಾಲ್ಲೂಕು ಕಚೇರಿಗೆ ಹೋಗಿದ್ದೆ. ಆನ್‌ಲೈನ್‌ ಮೂಲಕ ಮಾಡಿದರೆ ಬೇಗ ಆಗುತ್ತದೆ. ತಾಲ್ಲೂಕು ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಅಲ್ಲಿ ತಿಳಿಸಿದರು. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ 20 ದಿನ ದಾಟಿತು. ಕೆಲಸ ಇನ್ನೂ ಆಗಿಲ್ಲ. ಮತ್ತೆ ತಾಲ್ಲೂಕು ಕಚೇರಿಗೆ ಹೋಗಬೇಕು. ಕಂದಾಯ ಇಲಾಖೆಯಲ್ಲಿ ಯಾವುದೂ ಬೇಗ ಆಗುತ್ತಿಲ್ಲ’ ಎಂದು ದಾವಣಗೆರೆಯ ಶೌಕತ್‌ ಅಲಿ ಬೇಸರ ವ್ಯಕ್ತಪಡಿಸಿದರು.

‘ನೇರವಾಗಿ ಹೋದರೆ ಯಾವುದೇ ಕೆಲಸವಾಗುವುದಿಲ್ಲ. ಬ್ರೋಕರ್‌ಗಳ ಮೂಲಕ ಲಂಚ ತಲುಪಿಸಿದರೂ ಕೆಲಸ ಆಗಲು ಒಂದೆರಡು ತಿಂಗಳು ತಗಲುತ್ತದೆ. ಯಾರ ಮೂಲಕ ಹೋದರೂ 3 ದಿನಗಳಲ್ಲಿ ಕೆಲಸ ಆಗುವ ವ್ಯವಸ್ಥೆ ಇನ್ನೂ ಬಂದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ವಿವರಿಸಿದರು.

ADVERTISEMENT

‘ಕಂದಾಯ ಸಚಿವ ಆರ್‌.ಅಶೋಕ್ ಅವರ ಗ್ರಾಮ ವಾಸ್ತವ್ಯದ ಬಳಿಕ, ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಎರಡು ಭೂ ಪರಿವರ್ತನೆಗಳನ್ನು ಮಾಡಲಾಗಿದೆ’ ಎಂದು ತಹಶೀಲ್ದಾರ್ ಕಚೇರಿಯ ಕಂದಾಯ ವಿಭಾಗದ ಸಿಬ್ಬಂದಿ ರವಿ ಮಾಹಿತಿ ನೀಡಿದರು.

‘ಮೂರೇ ದಿನಗಳಲ್ಲಿ ಭೂಪರಿವರ್ತನೆ ಮಾಡಿಕೊಡುವ ಸಾಫ್ಟ್‌ವೇರ್‌ ಅನ್ನು ನಮಗೆ ಸರ್ಕಾರ ನೀಡಿಲ್ಲ. ಅರ್ಜಿಗಳು ಬಂದಾಗ ಇಟ್ಟುಕೊಳ್ಳುವುದಿಲ್ಲ. ಹಿಂದಿನ ಪದ್ಧತಿಯಲ್ಲೇ ವಿಲೇವಾರಿ ಮಾಡುತ್ತಿದ್ದೇವೆ. ಅದಕ್ಕೆ ಕನಿಷ್ಠ ಒಂದು ತಿಂಗಳು ಸಮಯ ಹಿಡಿಯುತ್ತದೆ’ ಎಂದು ತಿಳಿಸಿದರು.

‘ಅರ್ಜಿ ಬಂದಾಗ ದಾಖಲೆಗಳು ಸರಿ ಇವೆಯೇ ಎಂದು ಪರಿಶೀಲಿಸಬೇಕು. ಅವೆಲ್ಲ ಸರಿ ಇದ್ದರೆ ಮೇಲಧಿಕಾರಿಗಳಿಗೆ ಕಳುಹಿಸಿ ಅನುಮತಿ ಪಡೆಯಬೇಕು. ಅವರ ಒಪ್ಪಿಗೆ ಸಿಕ್ಕಿದ ಮೇಲೆ ಪರಿವರ್ತನೆಗೆ ಕ್ರಮ ಕೈಗೊಳ್ಳಬೇಕು. ಇವುಗಳನ್ನು ಮೂರು ದಿನಗಳಲ್ಲಿ ಮಾಡಲು ಸಾಧ್ಯವಿಲ್ಲ. ಮುಂದೆ ಸುಲಭ ವಿಧಾನಗಳು ಬರಬಹುದು’ ಎಂದು ನ್ಯಾಮತಿ ತಾಲ್ಲೂಕು ಸುರೆಹೊನ್ನೆಯ ಕಂದಾಯ ನಿರೀಕ್ಷಕ ಸುಧೀರ್‌ ವಿವರಿಸಿದರು.

ಗ್ರಾಮ ವಾಸ್ತವ್ಯ ಎಲ್ಲೆಲ್ಲಿ ನಡೆಯಿತು

* ಹೊಸಳ್ಳಿ ಗ್ರಾಮ (ಬೆಂಗಳೂರು ಗ್ರಾಮಾಂತರ ಜಿಲ್ಲೆ)

* ಛಬ್ಬಿ ಗ್ರಾಮ (ಧಾರವಾಡ ಜಿಲ್ಲೆ)

* ಸುರಹೊನ್ನೆ- ನ್ಯಾಮತಿ ಗ್ರಾಮ (ದಾವಣಗೆರೆ ಜಿಲ್ಲೆ)

* ಆರೂರು- ಕೊಕ್ಕರ್ಣೆ ಗ್ರಾಮ (ಉಡುಪಿ ಜಿಲ್ಲೆ) (ಕುಣಬಿ, ಕೊರಗ ಜನಾಂಗದವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವನೆ ಮಾಡಿದ್ದರು) ಕೊರಗ ಜನಾಂಗದ ಒಬ್ಬರಿಗೆ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಪತ್ರ ನೀಡಿದರು.

* ಸುರಪುರ, ದೇವತ್ಕಲ್ ಗ್ರಾಮ (ಯಾದಗಿರಿ ಜಿಲ್ಲೆ)

* ಹೊಲನಗದ್ದೆ, ಆಚವೆ- ಹಿಲ್ಲೂರು ಗ್ರಾಮ (ಉತ್ತರಕನ್ನಡ ಜಿಲ್ಲೆ)
(ಸಿದ್ದಿ ಮತ್ತು ಗೌಳಿ ಜನಾಂಗ) ಸಿದ್ದಿ ಜನಾಂಗದ ಒಬ್ಬ ಮಹಿಳೆಗೆ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಪತ್ರ ನೀಡಿದರು.

* ವಡಗಾಂವ್ (ದೇ) ಗ್ರಾಮ (ಬೀದರ್ ಜಿಲ್ಲೆ, ಔರಾದ್ ತಾಲ್ಲೂಕು)

* ಕಂದಾಯ ಸಚಿವ ಆರ್‌.ಅಶೋಕ ಅವರು ಬೆಂಗಳೂರು ಗ್ರಾಮಾಂತರ, ಧಾರವಾಡ, ದಾವಣಗೆರೆ, ಉಡುಪಿ, ಯಾದಗಿರಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಒಟ್ಟು 8,791 ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ 8,298 ಅರ್ಜಿಗಳನ್ನು ವಿಲೇವಾರಿ ಆಗಿವೆ. ಬಾಕಿ 493 ಅರ್ಜಿಗಳನ್ನು ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದೆ.

* ದೂರವಾಣಿ ಮೂಲಕ 1576 ಜನರಿಗೆ ಪಿಂಚಣಿ ಮಂಜೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.