ಕಲಬುರಗಿ ಜಿಲ್ಲೆಯ ಮೇಳಕುಂದಾ(ಕೆ) ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಲುವಾಗಿ ತಯಾರಿಸಿದ ಮಣ್ಣಿನ ಹಣತೆಗಳನ್ನು ಕುಂಬಾರರೊಬ್ಬರು ಒಣಗಿಸುತ್ತಿರುವುದು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ‘ಯಾರ್ ಬಿ, ನಮ್ಮ ನಸೀಬು ಖರಾಬದ. ಹಜಾರ್ ರೂಪಾಯಿ ಕೊಟ್ರೂ ಕೆಸರಾಗ ಕೈಯಾಡಿಸಾಕ ಯಾರೂ ಬರಲ್ಲ. ಕೂಲಿಮಾಡೋದು ಪಾಡದ. ಆದ್ರ ನಮ್ ಹಿರಿಯರು ಮಾಡ್ಕೋತಾ ಬಂದಾರಂತ ನಡಿಸಿಕೋತ ಹೊಂಟೇವು. ಹೊಟ್ಟೆ ತುಂಬಿದ್ರೇನು, ಅರ್ಧ ಆದ್ರೇನೂ ಯಾರು ಕೇಳ್ತಾರ, ನಮ್ ಕೆಲಸ ಮಾಡ್ಲೇಬೇಕಲ...’
ರಾಡಿ ನೀರಾಗ ಕೈಯಾಡಿಸುತ್ತಾ ಕುಳಿತಿದ್ದ ಕಲಬುರಗಿ ತಾಲ್ಲೂಕಿನ ಮೇಳಕುಂದಾ(ಕೆ) ಗ್ರಾಮದ ರಾಜಶ್ರೀ ಕುಂಬಾರ ಸೆರಗಂಚಲ್ಲಿ ಕಣ್ಣು ಒರೆಸಿಕೊಂಡರು. ಕೆಸರು ರೆಪ್ಪೆಗೂ ಮೆತ್ತಿಕೊಂಡಿತು.
‘ಯಾಕ್ರೀ ಅವ್ವಾ ದುಡಿಮೆ ಚೊಲೋ ಇಲ್ಲನು?’ ಎಂದು ಪ್ರಶ್ನಿಸಿದಾಗ ಮಾತಿಗಿಳಿದ ರಾಜಶ್ರೀ, ‘ಏನ್ ಮಾಡೂದ್ರಿಬಿ, ಮನೇಸ ಮಂದಿನ ದುಡಿದ್ರೂ ತಿಂಗಳಿಗೆ ₹10 ಸಾವಿರ ಹುಟ್ಟೂದಿಲ್ಲ. ಮಕ್ಕಳು, ಮೊಮ್ಮಕ್ಕಳೂ ದಿನ ಇದ ಉದ್ಯೋಗ ಮಾಡ್ತೀವಿ. ರಾಜಸ್ಥಾನ, ಗುಜರಾತ್, ಚೀನಾದಿಂದ ಬರೋ ಮಾಲ್ ಮುಂದ ನಮ್ಮನ್ನು ಯಾರೂ ಕೇಳೋದಿಲ್ಲ. ಅವರು ಫ್ಯಾಕ್ಟರ್‍ಯಾಗ ರೆಡಿ ಮಾಡ್ತಾರ. ಬಣ್ಣ, ಚಿತ್ತಾರ ಇರ್ತಾವು ಅಂತ ಹೇಳಿದಷ್ಟು ದುಡ್ಡು ಕೊಟ್ಟು ತಂಗೊಂಡ್ ಹೋಗ್ತಾರ. ನಾವು ಕೈಲೇ ಮಾಡ್ತೀವಿ, ಕೂಲಿ ಆದ್ರೂ ಸಿಗಲಿ ಅಂದ್ರೆ, ಚೌಕಾಸಿ ಮಾಡ್ತಾರ. ಹಳ್ಳಿ ಮಂದಿ ಈಟ್ ತಗೊಂಡ್ ಹೋಗ್ತಾರ. ಸಿಟಿ ಮಂದಿ ಅಂತೂ ನಮ್ ಕಡೆ ಸುಳಿಯೋದೇ ಇಲ್ಲ’ ಎಂದು ನಿಟ್ಟುಸಿರಿನ ಉತ್ತರ ಕೊಟ್ಟರು.
‘ತಲೆಮಾರುಗಳಿಂದ ಮಣ್ಣನ್ನೇ ನಂಬಿ ಕುಂಬಾರಿಕೆ ವೃತ್ತಿಯಲ್ಲೇ ಬದುಕು ಕಟ್ಟಿಕೊಂಡಿದ್ದೇವೆ. ಲಾಭವಿಲ್ಲದಿದ್ದರೂ ಕುಲಕಸುಬನ್ನು ಬಿಡಲು ಮನಸೊಪ್ಪದೇ, ಜೀವನ ನಿಭಾಯಿಸುವಷ್ಟು ಆದಾಯಕ್ಕೆ ಕೊರತೆಯಿಲ್ಲ ಎಂಬ ನಂಬಿಕೆಯಿಂದ ಕುಂಬಾರಿಕೆಯನ್ನು ಮುಂದುವರಿಸಿದ್ದೇವೆ’ ಎಂದು ಕೆಲಸದಲ್ಲಿ ತಲ್ಲೀನರಾದರು ಧಾರವಾಡ ಜಿಲ್ಲೆ ಉಪ್ಪಿನಬೆಟಗೇರಿಯ ಮಲ್ಲಪ್ಪ ಕುಂಬಾರ.
ದೀಪಾವಳಿಗೆ ಪ್ರತಿ ಮನೆಯಲ್ಲೂ ದೀಪಗಳು ಝಗಮಗಿಸುತ್ತಿವೆ. ಆದರೆ, ಆ ದೀಪಗಳ ಹಣತೆ ತಯಾರಿಸೋ ಕುಂಬಾರರ ಬದುಕು ಮಾತ್ರ ಅಂಧಕಾರದಲ್ಲಿ ಮುಳುಗಿದೆ. ತಲೆತಲಾಂತರದಿಂದ ಮಣ್ಣನ್ನೇ ನಂಬಿ ಜೀವನ ಸಾಗಿಸುತ್ತಿರುವ ಬಹುತೇಕ ಕುಂಬಾರರ ಕಥೆ ಇದೇ ಆಗಿದೆ.
ರಾಜ್ಯದೆಲ್ಲೆಡೆ ವಿಭಿನ್ನ ರೀತಿಯ ಪ್ರದೇಶವಿರುವುದರಿಂದ ಕುಂಬಾರಿಕೆಗೆ ಒಂದೇ ರೀತಿಯ ಮಣ್ಣು ಸಿಗುವುದು ಸವಾಲಿನ ಕೆಲಸವಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಖಾನಾಪುರದ ಮಣ್ಣು ಜಿಗುಟಿನಿಂದ ಕೂಡಿರುವುದರಿಂದ ಕುಲಕಸುಬಿಗೆ ಯೋಗ್ಯ ಅನ್ನೋದು ಬಹುತೇಕರ ಕುಂಬಾರರ ಮಾತು. ಹೀಗಾಗಿ ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ– ಧಾರವಾಡ, ಉತ್ತರ ಕನ್ನಡದ ಬಹುತೇಕ ಕುಂಬಾರರು ಖಾನಾಪುರದ ಮಣ್ಣನ್ನು ತರಿಸುತ್ತಾರೆ. ಆದರೆ, ಗಣಿ ನಿಯಮಗಳು ಮತ್ತು ಸಾಗಣೆ ವೆಚ್ಚದಿಂದ ಅಲ್ಲಿಂದ ಮಣ್ಣು ತರಿಸೋದು ತ್ರಾಸದಾಯಕವಾದ್ದರಿಂದ ಕಲಬುರಗಿ, ಬೀದರ್‌ನವರು ಜಮೀನಿನ ಕರಿ ಮಣ್ಣು, ಕೆರೆ ಮಣ್ಣನ್ನು ಬಳಸುತ್ತಾರೆ.
‘ರಾಜರ ಕಾಲದಾಗ ಕುಂಬಾರ ಕುಂಟೆ ಅಂತ ಜಮೀನು ಕೊಡ್ತಿದ್ರು. ಅದರಾಗಿನ ಮಣ್ಣು ತಂದು ಕಸುಬು ಮಾಡ್ತಿದ್ರು. ಆದ್ರೀಗ ಸರ್ಕಾರ ಜಮೀನು ಕೊಡೋದಿರಲಿ, ನಾವು ಅದೀವಿ ಅಂತಾನೇ ತಿಳಿದಿಲ್ಲ’ ಎಂದು ಮೇಳಕುಂದಾ(ಕೆ) ಗ್ರಾಮದ ರಾಜಣ್ಣ ಕುಂಬಾರ ಬೇಸರ ವ್ಯಕ್ತಪಡಿಸುತ್ತಾರೆ.
‘ಅವಿಭಕ್ತ ಕುಟುಂಬಗಳಿದ್ದಾಗ ಕುಂಬಾರಿಕೆ ವೃತ್ತಿ ನಡೆಸುವುದು ಸುಲಭವಾಗಿತ್ತು. ವಿಭಕ್ತ ಕುಟುಂಬಗಳೇ ಹೆಚ್ಚಿರುವ ಕಾರಣ ಇಂದು ಕುಂಬಾರಿಕೆ ವೃತ್ತಿ ಕೈಬಿಡುವುದು ಅನಿವಾರ್ಯವಾಗುತ್ತಿದೆ’ ಎಂಬುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಾಸುದೇವ ಗುನಗಾ ಅವರ ಹತಾಶ ನುಡಿ.
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ: ಒಂದು ಮಡಿಕೆ ತಯಾರಿಸಲು ಕನಿಷ್ಠ ಹತ್ತು ದಿನ ಬೇಕು. ಎರಡು ಕೊಡ ನೀರು ಹಿಡಿಯುವ ಮಡಿಕೆ ಮಾಡಲು 4 ಕೆಜಿ ಮಣ್ಣು ಬೇಕು. ಇದು ಒಬ್ಬರೇ ಮಾಡುವ ಕೆಲಸವಲ್ಲ. ಇಡೀ ಕುಟುಂಬದವರು ಕೈಗೂಡಿಸಿದಾಗ ಮಡಿಕೆ ತಯಾರಾಗುತ್ತದೆ. ಮೊದಲು ಮಣ್ಣನ್ನು ಜರಡಿ ಹಿಡಿಯಬೇಕು. ಬಳಿಕ ರಾಡಿ ಮಾಡಿ ಸೋಸಿ ಹರಳು, ಕಸ ಕಡ್ಡಿ ಬೇರ್ಪಡಿಸಬೇಕು. ಅದು ಕೆಸರಾದ ನಂತರ ಬೂದಿ ಕಲೆಸಿ ಮಡಿಕೆ ಮಾಡಬೇಕು. ನೆರಳಲ್ಲೇ 8 ದಿನ ಒಣಗಿಸಿ 9ನೇ ದಿನ ಬಿಸಿಲಲ್ಲಿ ಒಣಗಿಸಬೇಕು. ಬಳಿಕ ಭಟ್ಟಿಯಲ್ಲಿ ಹದವಾಗಿ ಸುಡಬೇಕು. ಆಗ ಮಡಿಕೆ ಬಳಕೆಗೆ ಯೋಗ್ಯವಾಗುತ್ತದೆ. ಇಷ್ಟೆಲ್ಲ ಪರಿಶ್ರಮದಿಂದ ತಯಾರಿಸುವ ಇದರ ಬೆಲೆ ಮಾತ್ರ ₹100ರಿಂದ ₹150 ಇದ್ದರೆ ಹೆಚ್ಚು!
ರಾಜಧಾನಿ ಬೆಂಗಳೂರು, ಕರಾವಳಿಯ ಮಂಗಳೂರು ಭಾಗದಲ್ಲಿ ‘ಕುಲಾಲ’ ಎಂದು ಕರೆಯಲ್ಪಡುವ ಸಮುದಾಯಕ್ಕೆ ಧಾರವಾಡ, ಬಾಗಲಕೋಟೆಯಲ್ಲಿ ಚಕ್ರಸಾಲಿ ಎನ್ನುತ್ತಾರೆ. ಗುಜರಾತ್‌ನಲ್ಲಿ ಪ್ರಜಾಪತಿ, ರಾಜಸ್ಥಾನದಲ್ಲಿ ಕುಮ್ಮಾರ್, ಮಹಾರಾಷ್ಟ್ರದಲ್ಲಿ ಮರಾಠ ಕುಂಬಾರ, ಆಂಧ್ರ, ತೆಲಂಗಾಣದಲ್ಲಿ ತೆಲುಗು ಕುಂಬಾರ ಎಂದು ಹೆಸರಾಗಿರುವ ಈ ಸಮುದಾಯವನ್ನು 17 ಉಪನಾಮಗಳಿಂದ ಕರೆಯಲಾಗುತ್ತದೆ. ಸಾಕ್ಷರತೆ ಪ್ರಮಾಣ ಕೇವಲ ಶೇ 15 ರಷ್ಟಿದ್ದರೆ, ನಿರುದ್ಯೋಗ ಶೇ 30ರಷ್ಟಿದೆ. ಶೇ 10ರಷ್ಟು ಮಂದಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ನೌಕರಿ ಹಿಡಿದವರು ಕೇವಲ ಶೇ 2ರಷ್ಟು ಜನ ಮಾತ್ರ ಎನ್ನುತ್ತಾರೆ ಸಮುದಾಯದ ಮುಖಂಡರು.
ಕುಲಕಸುಬನ್ನೇ ಮುಂದುವರಿಸಲು ಈ ಸಮುದಾಯಕ್ಕೆ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಎರಡೂ ಸಮಸ್ಯೆ ಇದೆ. ಜಮೀನನ್ನೇ ಹೊಂದಿರದ ಈ ಸಮುದಾಯ ಮಣ್ಣನ್ನೂ ಕೊಂಡು ತರಬೇಕು. ಟಿಪ್ಪರ್‌ಗೆ ₹ 15 ಸಾವಿರ ಬೆಲೆ ಕೊಟ್ಟು ಖರೀದಿಸುತ್ತಾರೆ. ಮಣ್ಣನ್ನು ಜರಡಿ ಹಿಡಿದು, ಸೋಸಿ, ರಾಡಿ ಮಾಡಿ ಮಡಿಕೆ, ಕುಡಿಕೆ ತಯಾರಿಸಿ, ಸುಡಬೇಕು. ಸುಡಲು ಕಟ್ಟಿಗೆಯನ್ನೂ ಕೊಳ್ಳಲೇಬೇಕು. ಎಲ್ಲವನ್ನೂ ಕೊಂಡು ಕಸುಬು ಮಾಡುವ ಇವರ ಉತ್ಪಾದನೆಗೆ ಬೆಲೆ ಮಾತ್ರ ಪುಡಿಗಾಸು.
‘ನಮ್ಮ ಭರವಸೆ ಕುಗ್ಗಿಲ್ಲ. 95 ವರ್ಷದ ನನ್ನ ತಂದೆ ಈಗಲೂ ಕುಂಬಾರಿಕೆ ಮಾಡುತ್ತಾರೆ. ಜೀವನ ನಿಬಾಯಿಸುವುದಕ್ಕೇನೂ ಕಡಿಮೆಯಿಲ್ಲ. ಆದರೆ, ಆರ್ಥಿಕ ಪ್ರಗತಿ ಮಾತ್ರ ಶೂನ್ಯ. ಹೀಗಾಗಿ ಕುಂಬಾರಿಕೆಗೆ ಉತ್ತೇಜನ ಬೇಕಿದೆ’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲೆಯ ರಬಕವಿಯ ಪ್ರಕಾಶ ಕುಂಬಾರ.
‘ನಾನು ಬಿಇ ಪದವೀಧರ. ನಮ್ಮ ಕುಂಬಾರಿಕೆ ಉದ್ಯೋಗದಲ್ಲೂ ಆಧುನಿಕತೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಅದಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಿ ತರಬೇತಿ ನೀಡಬೇಕು. ಉತ್ಪಾದನೆ, ಮಾರಾಟಕ್ಕೆ ಜಾಗ ನೀಡಬೇಕು’ ಎಂದು ಕಲಬುರಗಿಯ ಯುವಕ ಶರಣು ಕುಂಬಾರ ಮನವಿ ಮಾಡುತ್ತಾರೆ.
ಕರೆಂಟ್ ಫ್ರೀ ಕೊಡ್ರಿ: ‘ಈ ಹಿಂದೆ ಬಂಡಿಗಾಲಿ ಇಟ್ಟು ತಿಗರಿ ಮಾಡ್ತಿದ್ರು. ಮನುಷ್ಯನೇ ಅದರಲ್ಲಿ ಕಟ್ಟಿಗೆ ಇಟ್ಟು ತಿರುಗಿಸಿ ಮಡಿಕೆ ಮಾಡುತ್ತಿದ್ದ. ಆದ್ರೀಗ ಕರೆಂಟ್ ಬಳಕೆ ಮಾಡಿ ತಿಗರಿ ತಿರುಗಿಸಲಾಗುತ್ತದೆ. ಪರಿಣಾಮ ಕರೆಂಟ್ ಬಿಲ್ ತಿಂಗಳಿಗೆ ₹2 ಸಾವಿರದಿಂದ ₹3 ಸಾವಿರ ಬರುತ್ತಿದೆ. ಕನಿಷ್ಠ ಸರ್ಕಾರ ಅದನ್ನಾದರೂ ಮನ್ನಾ ಮಾಡಿ ನಮಗೆ ನೆರವಾಗಲಿ’ ಎನ್ನುತ್ತಾರೆ ಕಲಬುರಗಿಯ ಲಕ್ಷ್ಮೀ ಕುಂಬಾರ.
‘ಸರ್ಕಾರ ಮನೆಗೊಂದು ಮಡಿಕೆ, ಊರಿಗೊಂದು ಮಳಿಗೆ ಎನ್ನುವ ಯೋಜನೆ ಜಾರಿಗೆ ತರಬೇಕು. ಕುಂಬಾರರ ಬದುಕು ಹಸನುಗೊಳಿಸಲು, ತರಬೇತಿ, ಸಹಾಯಧನ ನೀಡಬೇಕು’ ಎಂದು ಕುಂಬಾರ ಯುವಸೈನ್ಯದ ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್ ಒತ್ತಾಯಿಸುತ್ತಾರೆ.
ಕುಂಬಾರರ ಬದುಕು ಪ್ಲಾಸ್ಟಿಕ್, ಪಿಂಗಾಣಿ, ಅಲ್ಯುಮಿನಿಯಂಗಳೊಂದಿಗೆ ಸ್ಪರ್ಧೆಗಿಳಿಯಲಾಗದೇ ನಲುಗುತ್ತಿದೆ. ವ್ಯಾಪಾರಿಗಳು ಜನರ ಅಭಿರುಚಿಗೆ ತಲೆಬಾಗಿ ಸ್ಥಳೀಯ ಕುಂಬಾರರನ್ನು ಬಿಟ್ಟು, ಹೊರರಾಜ್ಯದಿಂದ ಹಣತೆಗಳನ್ನು ತರಿಸುತ್ತಿರುವುದು ಕುಂಬಾರರಿಗೆ ತಮ್ಮ ಕುಲಕಸುಬಿನ ಮೇಲಿನ ಭರವಸೆಗೆ ಪೆಟ್ಟು ಕೊಡುತ್ತಿದೆ.
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿ ತಾಲ್ಲೂಕಿನ ಮೇಳಕುಂದಾ.ಕೆ ಗ್ರಾಮದಲ್ಲಿ ಕುಂಬಾರ ಕುಟುಂಬದವರು ಮನೆ ಆವರಣದಲ್ಲಿ ಮಣ್ಣಿನ ಹಣತೆ ತಯಾರಿಕೆಯಲ್ಲಿ ತೊಡಗಿರುವುದು.
ಸಿದ್ಧಗೊಂಡ ಹಣತೆಗಳನ್ನು ಸುಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಕುಂಬಾರರು
ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಕುಂಬಾರೊಬ್ಬರು ಮನೆ ಆವರಣದಲ್ಲಿ ಮಣ್ಣಿನ ಹಣತೆ ತಯಾರಿಕೆಯಲ್ಲಿ ತೊಡಗಿರುವುದು
ಹುಬ್ಬಳ್ಳಿಯ ಜನತಾ ಬಜಾರ ಮಾರುಕಟ್ಟೆಯಲ್ಲಿ ಹಣತೆ ಖರೀದಿಯಲ್ಲಿ ತೊಡಗಿರುವ ಮಹಿಳೆಯರು
ಬಾಗಲಕೋಟೆ ಜಿಲ್ಲೆಯ ರಬಕವಿ ಮಾರಾಟಕ್ಕಿಟ್ಟ ಮಣ್ಣಿನ ಹಣತೆಗಳು
ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಕುಂಬಾರರೊಬ್ಬರು ಹಣತೆ ತಯಾರಿಸಲು ಮಣ್ಣು ಹದಗೊಳಿಸುತ್ತಿರುವುದು
ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಹಣತೆಗೆ ಬಣ್ಣ ಹಾಕುತ್ತಿರುವುದು
ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಕುಂಬಾರ ಮಹಿಳೆಯೊಬ್ಬರು ಮನೆ ಆವರಣದಲ್ಲಿ ಮಣ್ಣಿನ ಹಣತೆ ಒಣಗಿಸುತ್ತಿರುವುದು
ಕಸುಬಷ್ಟೇ ಅಲ್ಲ ಕಲೆಯೂ ಹೌದು!
ರಾಜ್ಯದಲ್ಲಿ ಸುಮಾರು 20 ಲಕ್ಷ ಜನಸಂಖ್ಯೆ ಇರುವ ಕುಂಬಾರರಿಗೆ ಮಣ್ಣೇ ಬದುಕಿನ ಆಸ್ತಿ. ಮಣ್ಣಿನ ಜೊತೆಯೇ ಹುಟ್ಟಿ ಅದರ ಜೊತೆಗೆ ಆಡಿ ಬೆಳೆದು ಮಣ್ಣನ್ನು ನಂಬಿಯೇ ಹೊಟ್ಟೆ ತುಂಬಿಸಿಕೊಂಡು ಬದುಕುವ ಸಮುದಾಯ. ಕುಂಬಾರಿಕೆ ಕಸುಬಷ್ಟೇ ಅಲ್ಲ ಕಲೆಯೂ ಹೌದು. ಹೀಗಾಗಿ ಶೇ 20ರಷ್ಟು ಜನ ಇನ್ನೂ ಕುಲಕಸುಬಾದ ಕುಂಬಾರಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ದಸರಾ ಮುಗಿಯುತ್ತಿದ್ದಂತೆ ಹಣತೆಗಳನ್ನು ತಯಾರಿಸುವ ಈ ಜನ ದೀಪಾವಳಿ ಬಳಿಕ ಮತ್ತೆ ಮೇ ತಿಂಗಳವರೆಗೂ ಮಡಿಕೆ ಕುಡಿಕೆ ಗಡಿಗೆಗಳನ್ನು ತಯಾರಿಸುತ್ತಾರೆ. ಮಳೆಗಾಲದ ಭರ್ತಿ ನಾಲ್ಕು ತಿಂಗಳು ನಿರುದ್ಯೋಗಿಗಳು.
ಪೂರಕ ಮಾಹಿತಿ: ಸುಷ್ಮಾ ಸವಸುದ್ದಿ, ಗಣಪತಿ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.