ADVERTISEMENT

ಒಳನೋಟ: ಅಡಿಕೆ ಮೋಹ-ತಾಳೆ ಬೆಳೆ ಕ್ಷೇತ್ರದ ಕುಸಿತ

ಚಂದ್ರಹಾಸ ಹಿರೇಮಳಲಿ
Published 14 ಮೇ 2022, 21:00 IST
Last Updated 14 ಮೇ 2022, 21:00 IST
   

ಶಿವಮೊಗ್ಗ: ರಾಜ್ಯದಲ್ಲಿ 1990ರ ದಶಕದಲ್ಲಿ 25 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಇದ್ದ ತಾಳೆ ಬೆಳೆ ಕ್ಷೇತ್ರ ಇದೀಗ 10 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಅಡಿಕೆ ಧಾರಣೆಯ ನಾಗಾಲೋಟ, ತಾಳೆ ಧಾರಣೆಯ ಕುಸಿತದ ಕಾರಣ ತಾಳೆ ಜಾಗವನ್ನು ಬಹುತೇಕ ಕಡೆ ಅಡಿಕೆ ತೋಟಗಳು ಆವರಿಸಿವೆ.

ಅಡುಗೆ ಎಣ್ಣೆಗಳ ಬೆಲೆ ಏರಿಕೆಯಿಂದಾಗಿ ಮತ್ತೆ ತಾಳೆ ಬೆಳೆಯತ್ತ ರೈತರು ಒಲವು ತೋರುತ್ತಿದ್ದರೂ, ಅಡಿಕೆ ಆದಾಯದ ಮುಂದೆ ತಾಳೆಯ ಲಾಭ ರೈತರಿಗೆ ಗೌಣವಾಗಿದೆ.

ಎರಡು ದಶಕಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಸಾವಿರ ಹೆಕ್ಟೇರ್‌ ಇದ್ದ ತಾಳೆ ಬೆಳೆ ಕ್ಷೇತ್ರ ಇಂದು 403 ಹೆಕ್ಟೇರ್‌ಗಳಿಗೆ ಕುಸಿದಿದೆ. ಅಂದು 12 ಸಾವಿರ ಹೆಕ್ಟೇರ್‌ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು ಒಂದು ಲಕ್ಷ ಹೆಕ್ಟೇರ್‌ ತಲುಪಿದೆ. ರಾಜ್ಯದಲ್ಲಿ ಸರಾಸರಿ 5 ಲಕ್ಷ ಹೆಕ್ಟೇರ್‌ ಅಡಿಕೆ ಕ್ಷೇತ್ರವಿದೆ. ಭತ್ತ, ಅಡಿಕೆ ತರುವ ಆದಾಯ ತಾಳೆಯಿಂದ ಬರುವುದಿಲ್ಲ ಎನ್ನುವ ಕಾರಣಕ್ಕೆ ರಾಜ್ಯದ ಬಹುತೇಕ ರೈತರು ತಾಳೆ ಬದಲು ಅಡಿಕೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.

ADVERTISEMENT

ಏಳು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹ 1 ಲಕ್ಷದ ಗಡಿ ಮುಟ್ಟಿದ್ದ ಅಡಿಕೆ ಧಾರಣೆ ಪ್ರಸ್ತುತ ₹ 50 ಸಾವಿರ ದಾಟಿದೆ. ಒಂದು ಹೆಕ್ಟೇರ್‌ನಲ್ಲಿ ಸರಾಸರಿ 25 ಕ್ವಿಂಟಲ್‌ ಅಡಿಕೆ ಇಳುವರಿ ಬರುತ್ತದೆ. ಈಗಿರುವ ಧಾರಣೆಯಿಂದ ರೈತರು ₹ 12.50 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇದುವರೆಗೂ ತಾಳೆ ಹಣ್ಣಿನ ಧಾರಣೆ ಪ್ರತಿ ಟನ್‌ಗೆ ₹ 14 ಸಾವಿರ ದಾಟಿರಲಿಲ್ಲ. ಉಕ್ರೇನ್‌–ರಷ್ಯಾ ಯುದ್ಧ, ಇಂಡೊನೇಷ್ಯಾ ರಫ್ತು ನಿಷೇಧ, ಅಡುಗೆ ಎಣ್ಣೆ ಪೂರೈಕೆ ವ್ಯತ್ಯಯಗಳ ಪರಿಣಾಮ ಪ್ರಸ್ತುತ ಪ್ರತಿ ಟನ್‌ ತಾಳೆ ಧಾರಣೆ ₹ 21,299 ತಲುಪಿದೆ. ಧಾರಣೆ ಏರಿಕೆಯಾಗಿದ್ದರೂ, ಅಡಿಕೆಯಲ್ಲಿ ತಾಳೆಗಿಂತ ಎರಡು ಪಟ್ಟು ಆದಾಯ ದೊರಕುತ್ತಿರುವ ಕಾರಣ ರೈತರು ಅಡಿಕೆ ಬೆಳೆಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.

ತಾಳೆ ಬೆಳೆಗೆ ಉತ್ತೇಜನ ನೀಡಲು ಸರ್ಕಾರ ಉಚಿತ ಸಸಿ ವಿತರಣೆ ಕಾರ್ಯಕ್ರಮ ಜಾರಿಗೆ ತಂದಿದೆ. ಪ್ರತಿ ಸಸಿಗೆ ₹ 84 ಇದ್ದ ಸಹಾಯಧನವನ್ನು ₹ 140ಕ್ಕೆ ಹೆಚ್ಚಿಸಲಾಗಿದೆ. ನಾಲ್ಕು ವರ್ಷಗಳ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ ₹ 12 ಸಾವಿರ ನೆರವು ನೀಡಲಾಗುತ್ತಿದೆ. ನಾಲ್ಕು ವರ್ಷಗಳಿಗೆ ಮರ ಫಲ ನೀಡಲು ಆರಂಭಿಸುತ್ತದೆ. ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ತಾಳೆ ಬೆಳೆಯ ಮಹತ್ವ, ಭವಿಷ್ಯದಲ್ಲಿನ ಆರ್ಥಿಕ ಲಾಭ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ತಾಳೆ ಬೆಳೆ ಕ್ಷೇತ್ರದ ಅಭಿವೃದ್ಧಿಗಾಗಿ ಮೂರು ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಜಯಪುರ, ಬಾಗಲಕೋಟೆ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ರೈತರಿಗೆ ತಾಳೆ ಬೆಳೆ ಪ್ರಾತ್ಯಕ್ಷಿಕೆ ಕುರಿತು ತರಬೇತಿ ನೀಡಲಾಗುತ್ತಿದೆ.

‘ವರ್ಷದ ಹಿಂದೆ ತಾಳೆ ಹಣ್ಣಿನ ಬೆಲೆ ಟನ್‌ಗೆ 14 ಸಾವಿರದ ಆಸುಪಾಸು ಇತ್ತು. ಈಗ ದರ ಏರುಗತಿಯಲ್ಲಿ ಸಾಗಿದೆ. ಉಕ್ರೇನ್‌ ಯುದ್ಧ, ಇಂಡೋನೇಷ್ಯಾ ರಫ್ತು ನಿಷೇಧಿಸಿದ ನಂತರ ತಾಳೆಗೆ ಭಾರಿ ಬೇಡಿಕೆ ಬರುತ್ತಿದೆ. ತಾಳೆ ಬೆಳೆದ ರೈತರ ಬದುಕು ಹಸನಾಗಲಿದೆ’ ಎನ್ನುತ್ತಾರೆ ತಾಳೆ ಬೆಳೆ ಯೋಜನೆಯ ನೋಡಲ್‌ ಅಧಿಕಾರಿ ಜಿ.ಎಚ್‌.ಬಸವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.