ADVERTISEMENT

ಒಳನೋಟ | ಕಾಯ್ದೆಯ ಬಲ ಕುಗ್ಗಿಸುತ್ತಿದೆ ನೇಮಕಾತಿಯ ಪಕ್ಷಪಾತ

ವಿ.ಎಸ್.ಸುಬ್ರಹ್ಮಣ್ಯ
Published 18 ಜೂನ್ 2022, 20:00 IST
Last Updated 18 ಜೂನ್ 2022, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ‘ನ್ಯಾಯ’ಯುತವಾಗಿ ಇತ್ಯರ್ಥಪಡಿಸಬೇಕಾದವರು ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಮತ್ತು ಮಾಹಿತಿ ಆಯುಕ್ತರು. ಆದರೆ ಇವರ ನೇಮಕಾತಿಯಲ್ಲೇ ‘ಪಕ್ಷಪಾತ’ ನಡೆಯುತ್ತಿರುವ ಆರೋಪ ದೀರ್ಘ ಕಾಲದಿಂದಲೂ ಇದೆ. ನೇಮಕಾತಿಯಲ್ಲಿನ ಲೋಪಗಳೇ ಮಾಹಿತಿ ಹಕ್ಕು ಕಾಯ್ದೆಯ ಆಶಯದಂತೆ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿವೆ.

ಈ ಕಾಯ್ದೆಯ ಸೆಕ್ಷನ್‌ 15ರ ಪ್ರಕಾರ, ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಯು ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರನ್ನು ನೇಮಕ ಮಾಡಬೇಕು. ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಯವರಿಂದ ನಾಮನಿರ್ದೇಶಿತರಾದ ಒಬ್ಬ ಸಚಿವ (ಬಹುತೇಕ ಸಂದರ್ಭದಲ್ಲಿ ಕಾನೂನು ಸಚಿವರೇ ಆಗಿರುತ್ತಾರೆ) ಈ ಸಮಿತಿಯಲ್ಲಿರುತ್ತಾರೆ.

‘ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ವ್ಯವಸ್ಥಾಪನೆ, ಪತ್ರಿಕೋದ್ಯಮ, ಸಮೂಹ ಮಾಧ್ಯಮ ಅಥವಾ ನಿರ್ವಹಣೆ ಮತ್ತು ಆಡಳಿತದಲ್ಲಿ ಆಳವಾದ ಜ್ಞಾನ ಮತ್ತು ಅನುಭವ ಹೊಂದಿರುವುದರೊಂದಿಗೆ ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನ ಗಳಿಸಿರುವಂಥ ವ್ಯಕ್ತಿಗಳನ್ನು ಮುಖ್ಯ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ಹುದ್ದೆಗೆ ನೇಮಿಸಬಹುದು’ ಎನ್ನುತ್ತದೆ ಕಾಯ್ದೆ.

ADVERTISEMENT

ಆದರೆ, ಈ ಯಾವ ಅರ್ಹತೆಯನ್ನೂ ಹೊಂದಿಲ್ಲದ ವ್ಯಕ್ತಿಗಳು ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಉದಾಹರಣೆಗಳು ರಾಜ್ಯದಲ್ಲಿವೆ. ಪ್ರಭಾವಿ ರಾಜಕಾರಣಿಗಳ ಆಪ್ತರು, ರಾಜಕೀಯ ಪಕ್ಷಗಳ ಸದಸ್ಯರೂ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದರು. ‘ಸಮಾಜ ಸೇವೆ’ಯ ಹೆಸರಿನಲ್ಲಿ ಇಂಥ ವ್ಯಕ್ತಿಗಳನ್ನು ಆಯೋಗಕ್ಕೆ ನೇಮಿಸಿ ಆಡಳಿತಾರೂಢ ಪಕ್ಷ ಹಾಗೂ ಸರ್ಕಾರದ ‘ಮರ್ಯಾದೆ’ ರಕ್ಷಿಸಿಕೊಳ್ಳುವ ಕಸರತ್ತನ್ನು ಅಧಿಕಾರದಲ್ಲಿದ್ದವರು ಆಗಾಗ ಮಾಡುತ್ತಲೇ ಇರುತ್ತಾರೆ.

2006ರಲ್ಲಿ ಆಗಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ಕೆ. ಮಿಶ್ರಾ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಆಗಲೂ ನಿಯಮಗಳನ್ನು ಮೀರಿ, ಪಕ್ಷಪಾತ ಎಸಗಿ ನೇಮಕ ಮಾಡಿದ್ದ ಆರೋಪ ಕೇಳಿಬಂದಿತ್ತು. 2016ರಲ್ಲಿ ಆಗಿನ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ತಮ್ಮ ಸಮೀಪದ ಸಂಬಂಧಿಯೊಬ್ಬರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿದ್ದ ಆರೋಪವೂ ಇತ್ತು. 2022ರಲ್ಲಿ ಅರ್ಹ ಅಭ್ಯರ್ಥಿಗಳಿದ್ದರೂ ಭ್ರಷ್ಟಾಚಾರದ ಆರೋಪದಡಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ನಿವೃತ್ತ ಅಧಿಕಾರಿಯೊಬ್ಬರನ್ನು ನೇಮಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿದೆ.

ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನೂ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ 2019ರಲ್ಲಿ ಆದೇಶಿಸಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿರ್ದೇಶನವನ್ನು ಪಾಲಿಸಿದ್ದು ತೀರಾ ಕಡಿಮೆ. ನೇಮಕಾತಿಯಲ್ಲಿನ ‘ರಹಸ್ಯ’ ನಡೆಗಳಿಗೆ ಕಡಿವಾಣ ಬಿದ್ದೇ ಇಲ್ಲ.

ಮಾಹಿತಿ ಬಚ್ಚಿಡಲು ನೂರೆಂಟು ಅಡ್ಡದಾರಿ

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯೊಳಗೆ ಬರುವ ಯಾವುದೇ ಕಚೇರಿಯು ತನ್ನ ಆಡಳಿತ, ವ್ಯವಹಾರಕ್ಕೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲೇಬೇಕು. ಆದರೆ, ಗೋಪ್ಯತೆ, ಹಣಕಾಸು ವಹಿವಾಟು, ತನಿಖೆಯಂತಹ ನೂರೆಂಟು ಕಾರಣಗಳನ್ನು ಮುಂದೊಡ್ಡಿ ಮಾಹಿತಿ ನಿರಾಕರಿಸುವುದನ್ನು ಅಧಿಕಾರಿಗಳ ವರ್ಗ ರೂಢಿ ಮಾಡಿಕೊಂಡಿದೆ.

ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿಯಂತಹ ಹೆಚ್ಚಿನ ಅನುದಾನ ವೆಚ್ಚ ಮಾಡುವ ಇಲಾಖೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಸರಿಯಾದ ಉತ್ತರವೇ ದೊರಕುವುದಿಲ್ಲ. ಹೆಚ್ಚಿನ ಅಧಿಕಾರಿಗಳು ಇಂಥಹ ಅರ್ಜಿಗಳನ್ನು ಹತ್ತಾರು ಕಚೇರಿಗಳಿಗೆ ವರ್ಗಾಯಿಸಿ ಅರ್ಜಿದಾರರನ್ನು ಅಲೆದಾಡಿಸುತ್ತಾರೆ.

ಕೆಲವು ಅಧಿಕಾರಿಗಳು, ಅರ್ಜಿಯಲ್ಲಿ ಕೋರಲಾದ ಮಾಹಿತಿಯನ್ನು ಬಹಿರಂಗಪಡಿಸಲು ಅವಕಾಶವಿಲ್ಲ ಎಂಬ ಸಿದ್ಧ ಉತ್ತರವೊಂದನ್ನು ಒದಗಿಸುತ್ತಾರೆ. ತಮ್ಮ ವಾದಕ್ಕೆ ಪೂರಕವಾಗಿ, ಸಂಬಂಧವೇ ಇಲ್ಲದ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿದಾರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ಇದಕ್ಕಾಗಿಯೇ ‘ಕಾನೂನು ಸಲಹೆಗಾರರ’ ನೆರವನ್ನೂ ಪಡೆಯುತ್ತಾರೆ ಎಂಬ ಆರೋಪವೂ ಇದೆ.

ಒಂದು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿ ತಿರಸ್ಕರಿಸಿದರೆ ಪ್ರಥಮ ಮತ್ತು ದ್ವಿತೀಯ ಹಂತದ ಮೇಲ್ಮನವಿ ಪ್ರಾಧಿಕಾರಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶಗಳಿವೆ. ಆದರೆ, ಅಲ್ಲಿಯೂ ವಿಚಾರಣೆ ನಡೆಸಿ, ತೀರ್ಮಾನ ಕೊಡುವವರು ಅದೇ ಇಲಾಖೆಯ ಹಿರಿಯ ಅಧಿಕಾರಿಗಳು. ಹೆಚ್ಚಿನ ಮೇಲ್ಮನವಿ ಪ್ರಾಧಿಕಾರಗಳು ಮೇಲ್ಮನವಿ ಸಲ್ಲಿಸುವ ಅರ್ಜಿದಾರರನ್ನು ಅಲೆದಾಡಿಸಿ ಸುಸ್ತು ಹೊಡೆಸುತ್ತವೆ.

ಕೆಲವು ಅಧಿಕಾರಿಗಳು ತಮ್ಮ ಪ್ರಭಾವವನ್ನೇ ಬಳಸಿಕೊಂಡು, ಮಾಹಿತಿ ಕೋರಿದವರ ವಿರುದ್ಧ ಸುಳ್ಳು ದೂರು ನೀಡಿ ಪೊಲೀಸರ ಮೂಲಕ ಬಂಧನ ಮಾಡಿಸಿದ ಉದಾಹರಣೆಗಳೂ ಇವೆ. ಇಂತಹ ಅನೇಕ ಮಾರ್ಗಗಳನ್ನು ಅಧಿಕಾರಿಗಳು ಕರಗತ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಮಾಹಿತಿ ಹಕ್ಕು ಹೋರಾಟಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.