
ಮಂಗಳೂರು: ‘ಮಕ್ಕಳೆಲ್ಲ ಉತ್ತಮ ವೇತನ ಸಿಗುವ ಉದ್ಯೋಗದಲ್ಲಿದ್ದು ಬೇರೆ ಊರುಗಳಲ್ಲಿ ನೆಲೆಸಿದ್ದಾರೆ. ನಾನು, ಪತ್ನಿ ಜಮೀನು ನೋಡಿಕೊಂಡು ಇದ್ದೇವೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 400 ರಬ್ಬರ್ ಮರಗಳಿವೆ. ಎಲ್ಲವನ್ನೂ ನಾನೊಬ್ಬನೇ ಟ್ಯಾಪ್ ಮಾಡಲು ಸಾಧ್ಯವಾಗುತ್ತಿಲ್ಲ. ಟ್ಯಾಪರ್‌ಗಳಿಂದ (ರಬ್ಬರ್ ಹಾಲಿಳಿಸುವ ಕಾರ್ಮಿಕರು) ಕೆಲಸ ಮಾಡಿಸೋಣ ಎಂದರೆ ಲಾಭವೇನೂ ಸಿಗದು. ಈಗಿನ ಬೆಲೆ ನೋಡಿದರೆ, ರಬ್ಬರ್ ಬೆಳೆಯನ್ನು ಉಳಿಸಿಕೊಳ್ಳಬೇಕು ಎಂಬ ಆಸೆಯೇ ಉಳಿದಿಲ್ಲ’.
‘ತೋಟವನ್ನು ಲೀಸ್‌ಗೆ ನೀಡಿ, ಹಣ್ಣು ಅಥವಾ ಅಡಿಕೆ ಸಸಿ ಹಾಕಬೇಕು ಎಂದು ನಿರ್ಧರಿಸಿದ್ದೇನೆ...’ ಹೀಗೆಂದು ಒಂದೇ ಉಸಿರಿನಲ್ಲಿ ಹೇಳಿದರು ರಬ್ಬರ್ ಬೆಳೆಗಾರ, ಪಶ್ಚಿಮಘಟ್ಟದ ತಪ್ಪಲಿನ ಚಾರ್ಮಾಡಿಯ ಕೃಷ್ಣಪ್ಪ.
ಇದು ಕೇವಲ ಕೃಷ್ಣಪ್ಪ ಅವರ ನಿಲುವಲ್ಲ. ರಾಜ್ಯದ ಬಹುತೇಕ ರಬ್ಬರ್ ಬೆಳೆಗಾರರ ಸಂಕಷ್ಟವೂ ಹೌದು.
ದಶಕಗಳ ಹಿಂದೆ ಕರಾವಳಿ, ಮಲೆನಾಡು ಭಾಗದಲ್ಲಿ ಭತ್ತ, ಅಡಿಕೆ, ಗೇರುಬೀಜ (ಗೋಡಂಬಿ) ಬೆಳೆಯುವ ಪ್ರದೇಶಗಳನ್ನು ಆವರಿಸಿದ್ದ ರಬ್ಬರ್ ಬೆಳೆಯ ವ್ಯಾಪ್ತಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಇಳುವರಿಯಲ್ಲಿ ಆಗುತ್ತಿರುವ ವ್ಯತ್ಯಾಸ, ನಿರಂತರವಾಗಿ ಇಳಿಮುಖವಾಗುತ್ತಿರುವ ಧಾರಣೆ ಹಾಗೂ ಸರ್ಕಾರಗಳ ಆಮದು ಧೋರಣೆಯಿಂದ ರಬ್ಬರ್ ಬೆಳೆಯ ಒಲವು ಕಡಿಮೆಯಾಗುತ್ತಿದೆ. ಜತೆಗೆ, ಕೌಶಲ ಇರುವ ಕಾರ್ಮಿಕರ ಕೊರತೆಯೂ ಬೆಳೆಯ ವಿಸ್ತಾರ, ಬೆಳೆಗಾರರ ಆಸಕ್ತಿಯನ್ನು ಕಡಿಮೆಗೊಳಿಸುತ್ತಿದೆ.
ರಬ್ಬರ್ ಹಾಲು ಸಂಗ್ರಹಿಸುವ ಪ್ರಕ್ರಿಯೆ
ದೇಶದ ರಬ್ಬರ್ ಉತ್ಪಾದನೆಯಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಉತ್ಪಾದನೆಗಿಂತ ಅಪಾರ ಪ್ರಮಾಣದಲ್ಲಿರುವ ಆಂತರಿಕ ಬೇಡಿಕೆಯನ್ನು ಸರಿದೂಗಿಸಲು ವಿಯೆಟ್ನಾಂ, ಇಂಡೊನೇಷ್ಯಾ, ಐವರಿ ಕೋಸ್ಟ್, ಥಾಯ್ಲೆಂಡ್ ಮತ್ತು ಚೀನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ 1961ರಲ್ಲಿ ಆರಂಭಗೊಂಡ ರಬ್ಬರ್ ಕೃಷಿ, ಈಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲೂ ರಬ್ಬರ್ ಬೆಳೆ ಇದೆ. ರಾಜ್ಯದ ಅಂಕಿಅಂಶವನ್ನು ತೆಗೆದುಕೊಂಡರೆ 2019- 20ರಲ್ಲಿ ಸುಮಾರು 51,450 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದ್ದ ಈ ಬೆಳೆ, 2023-24ರಲ್ಲಿ 50,800 ಹೆಕ್ಟೇರ್‌ಗೆ ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಈ ವಿಸ್ತೀರ್ಣ ಅತಿ ವೇಗದಲ್ಲಿ ಕಡಿಮೆ ಆಗುತ್ತಿದ್ದು, ರಬ್ಬರ್ ತೆರವುಗೊಳಿಸಿ ಅಡಿಕೆ, ವಿವಿಧ ರೀತಿಯ ಹಣ್ಣುಗಳ ಕೃಷಿ ಹೆಚ್ಚಾಗುತ್ತಿದೆ. ಇಳುವರಿ ನೀಡುವ ಮರಗಳನ್ನು ಕಡಿದು ಅಲ್ಲಿ ಬೇರೆ ಕೃಷಿ ಅಥವಾ ಪರ್ಯಾಯ ಬೆಳೆಗಳನ್ನೂ ಬೆಳೆಸಲಾಗುತ್ತಿದೆ. ಈ ಬಗ್ಗೆ ಬೆಳೆಗಾರರನ್ನು ಕೇಳಿದರೆ ಅವರ ಉತ್ತರ ಇಷ್ಟೆ: ‘ಬೆಲೆ ಇಲ್ಲ; ಕೆಲಸಕ್ಕೆ ಜನರೂ ಸಿಗುತ್ತಿಲ್ಲ’.
ಮರದಲ್ಲಿ ಸಂಗ್ರಹವಾಗಿರುವ ರಬ್ಬರ್ ಹಾಲು
ನೈಸರ್ಗಿಕ ರಬ್ಬರ್‌ನ ಬೆಲೆ 2011ರಲ್ಲಿ ಕೆ.ಜಿಗೆ ₹242 ಇತ್ತು. ಆಗ ಬೆಳೆಯ ವಿಸ್ತರಣೆಯೂ ಭಾರಿ ಪ್ರಮಾಣದಲ್ಲಿ ನಡೆಯಿತು. 2023ರಲ್ಲಿ ಕೆ.ಜಿಗೆ ₹140ರ ವರೆಗೆ ಕುಸಿಯಿತು. ಪ್ರತಿ ಕೆ.ಜಿ. ನೈಸರ್ಗಿಕ ರಬ್ಬರ್‌ಗೆ ಕೃಷಿ ವೆಚ್ಚ ₹258.55 ಆಗುತ್ತದೆ. ಆದರೀಗ ಮಾರುಕಟ್ಟೆಯಲ್ಲಿ ಸರಾಸರಿ ಬೆಲೆ ಪ್ರತಿ ಕೆ.ಜಿಗೆ ₹195 ಆಸುಪಾಸಿನಲ್ಲಿದೆ. ರಬ್ಬರ್ ಬೆಳೆಯ ಅಸ್ತಿತ್ವದ ಪ್ರಶ್ನೆ ಬಂದಾಗ ರೈತರು ಬೊಟ್ಟು ಮಾಡಿ ತೋರಿಸುವುದು ಕೃಷಿ ವೆಚ್ಚದಲ್ಲಿ ಹೆಚ್ಚಳ, ಕಾರ್ಮಿಕರ ಕೊರತೆ, ಬೆಲೆ ಕುಸಿತ, ಆಮದು ಮತ್ತು ಕೃಷಿಗೆ ಬೆಂಬಲದ ಕೊರತೆಯ ಕಡೆಗೆ ಎಂಬುದನ್ನು ಕೃಷಿ ಆರ್ಥಿಕ ತಜ್ಞ ಪ್ರೊ.ವಿಘ್ನೇಶ್ವರ ವರ್ಮುಡಿ ಅವರು ಕೈಗೊಂಡ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.
ಕರ್ನಾಟಕದಲ್ಲಿ ರಬ್ಬರ್ ಉತ್ಪಾದನಾ ವೆಚ್ಚ ನಿರ್ಧರಿಸಲು ಬೆಳೆ ಇರುವ ಜಿಲ್ಲೆಗಳ 200 ಬೆಳೆಗಾರರನ್ನು ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘದ ಮೂಲಕ ಸಂಪರ್ಕಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಉತ್ಪಾದನಾ ವೆಚ್ಚ ಅಂದಾಜು ಮಾಡಲಾಗಿದೆ. ಸಮೀಕ್ಷೆ ಆಧಾರದಲ್ಲಿ ಲೆಕ್ಕಾಚಾರ ಮಾಡಿದಾಗ ಪ್ರತಿ ಕೆ.ಜಿ ರಬ್ಬರ್ ಉತ್ಪಾದನಾ ವೆಚ್ಚ ₹258.55 ಆಗಿದೆ. ಸಾಮಾನ್ಯವಾಗಿ ಬೆಳೆಗಾರನಿಗೆ ಶೇ 25ರಷ್ಟು ಲಾಭಗಳಿಸುವ ಅರ್ಹತೆ ಇರುವ ಕಾರಣ ಉತ್ಪಾದನಾ ವೆಚ್ಚಕ್ಕೆ ಅದನ್ನು ಸೇರಿಸಿದಾಗ ಈ ಮೊತ್ತ ಕೆಜಿಗೆ ₹323.19 ಆಗುತ್ತದೆ. ಅಂದರೆ, ರಬ್ಬರ್‌ನ ಕನಿಷ್ಠ ಬೆಲೆ ₹323.19 ಇರಲೇಬೇಕು ಎನ್ನುತ್ತಾರೆ ಪ್ರೊ. ವಿಘ್ನೇಶ್ವರ ವರ್ಮುಡಿ.
ಪರಿಹಾರೋಪಾಯ:
ಆಂತರಿಕವಾಗಿ ಉತ್ಪಾದನೆ ಹೆಚ್ಚಿಸಲು ಮತ್ತು ಬೆಳೆಗಾರರನ್ನು ರಕ್ಷಿಸಲು ರಬ್ಬರ್ ಆಮದು ಸುಂಕವನ್ನು ಹೆಚ್ಚಿಸಬೇಕು. ಬೆಳೆ ಮತ್ತು ಬೆಳೆಗಾರರ ರಕ್ಷಣೆಗೆ ಪೂರಕ ನೀತಿ ರೂಪಿಸಬೇಕು. ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು. ರಬ್ಬರ್ ಕೃಷಿ ಕ್ಷೇತ್ರದ ಅಧ್ಯಯನ ಮಾಡಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಕೇರಳ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಪ್ರೋತ್ಸಾಹಧನ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ಬೆಳೆಗಾರರನ್ನು ರಕ್ಷಿಸಬೇಕು ಎಂಬ ಬೇಡಿಕೆ ಬೆಳೆಗಾರರದ್ದು.
ರಬ್ಬರ್ ಹಾಲನ್ನು ಟ್ರೇಗಳಲ್ಲಿ ಇರಿಸಿ ಶೀಟ್ ಮಾಡುವ ಪ್ರಕ್ರಿಯೆ
ದ.ಕ. ಜಿಲ್ಲೆಯಲ್ಲಿ ಸುಮಾರು 38,000 ಹೆಕ್ಟೇರ್ ರಬ್ಬರ್ ಬೆಳೆ ಇದೆ. ಜಿಲ್ಲೆಯಲ್ಲಿ 40 ಸಾವಿರ ರಬ್ಬರ್ ಬೆಳೆಗಾರರಿದ್ದಾರೆ. ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಎಲ್ಲ ಸವಲತ್ತುಗಳನ್ನು ನಮಗೂ ನೀಡಬೇಕು ಎಂಬುದು ಅವರ ಆಗ್ರಹ.
ರಬ್ಬರ್ ಬೆಳೆ ವಿಸ್ತರಣೆಗೆ ಸಂಬಂಧಿಸಿ ಹಲವು ಕ್ರಮಗಳನ್ನು ರಬ್ಬರ್ ಮಂಡಳಿ ಕೈಗೊಂಡಿದೆ. ಸಹಕಾರ ಸಂಘಗಳ ಮೂಲಕ ರಬ್ಬರ್ ಕೃಷಿ ಬಗ್ಗೆ ಪ್ರಚುರಪಡಿಸಲಾಗುತ್ತಿದೆ. ರಬ್ಬರ್ ಟ್ಯಾಪಿಂಗ್ ಕೌಶಲ ಕಲಿಸಲು ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಬ್ಬರ್ ಬೋರ್ಡ್ ಪ್ರಾದೇಶಿಕ ಅಧಿಕಾರಿ ಮಿನಿ ನೈನನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಟ್ಯಾಪರ್‌ಗಳ ಕೊರತೆ:
ರಬ್ಬರ್ ಕೃಷಿಯಲ್ಲಿ ಹಾಲಿಳಿಸಲು (ಟ್ಯಾಪಿಂಗ್) ಕಾರ್ಮಿಕರು ಸಿಗುತ್ತಿಲ್ಲ. ಬೇರೆ ರಾಜ್ಯದಿಂದ ಬರುವ ಕಾರ್ಮಿಕರನ್ನೇ ಅವಲಂಬಿಸಬೇಕಿದೆ. ಈ ಸಮಸ್ಯೆಯಿಂದಾಗಿ ರೈತರು ತೋಟಗಳನ್ನು ಕೆಲ ವರ್ಷಗಳಿಗೆ ಗುತ್ತಿಗೆ ನೀಡುತ್ತಾರೆ. ಗುತ್ತಿಗೆ ವಹಿಸಿಕೊಂಡವರು ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ ಬಳಸುತ್ತಾರೆ. ಇದರಿಂದ ಮರಗಳ ಆಯಸ್ಸು ಕಡಿಮೆಯಾಗಿ, ಭೂಮಿಯ ಸಾರವೂ ಹಾಳಾಗುತ್ತದೆ. ಈ ಕಾರಣಕ್ಕೆ ಬೆಳೆಗಾರರು ರಬ್ಬರ್ ಮರಗಳನ್ನು ಕಡಿಯುತ್ತಿದ್ದಾರೆ.
ಸಹಕಾರ ಸಂಘಗಳಲ್ಲೂ ಖರೀದಿ:
ರಾಜ್ಯದಲ್ಲಿ 84 ರಬ್ಬರ್ ಉತ್ಪಾದಕರ ಸಂಘಗಳು, 3 ಒಕ್ಕೂಟ ಸಂಸ್ಕರಣಾ ಕೇಂದ್ರಗಳು, 142 ನೋಂದಾಯಿತ ವ್ಯಾಪಾರಿಗಳು, 142 ಪರವಾನಗಿ ಪಡೆದ ರಬ್ಬರ್ ಉತ್ಪನ್ನಗಳ ಉತ್ಪಾದಕರು ಮತ್ತು ಐವರು ರಬ್ಬರ್ ಸಂಸ್ಕರಣಕಾರರು ಇದ್ದಾರೆ.
ಶೀಟ್ ಮಾಡುವ ಪ್ರಕ್ರಿಯೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖರೀದಿ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಉತ್ಪಾದಕರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕ್ಯಾಂಪ್ಕೊ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. 1985ರಲ್ಲಿ ಆರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿರುವ ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘವು ರಾಜ್ಯದಲ್ಲಿ ಉತ್ಪಾದನೆ ಆಗುವ ರಬ್ಬರ್‌ನ ಶೇ 40ರಷ್ಟನ್ನು ಖರೀದಿಸುತ್ತದೆ. ಈ ಸಂಘ ನಾಲ್ಕು ಜಿಲ್ಲೆಗಳಲ್ಲಿ 33 ಶಾಖೆಗಳನ್ನೂ ಹೊಂದಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ.
ಈಗ ರಬ್ಬರ್‌ನ ಧಾರಣೆಯೇ ಕುಸಿಯುತ್ತಿದ್ದು, ಇದರಿಂದಾಗಿ ರಬ್ಬರ್ ಕೃಷಿಕರ ಆಸಕ್ತಿ ಕುಂದುತ್ತಿದೆ. ಪರಿಣಾಮವಾಗಿ ರಬ್ಬರ್ ಟ್ಯಾಪಿಂಗ್ ಮಾಡದೆ ರಬ್ಬರ್ ಸೊಸೈಟಿಗಳಲ್ಲಿ ಸಂಗ್ರಹವಾಗುವ ರಬ್ಬರಿನ ಪ್ರಮಾಣ ಕಡಿಮೆ ಆಗುತ್ತಿದೆ. ರಬ್ಬರ್ ಮರಗಳನ್ನು ಬೆಳೆಗಾರರು ಕಡಿಯುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳು ನಷ್ಟಕ್ಕೆ ಒಳಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಗ ಸೊಸೈಟಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಜೀವನೋಪಾಯವಾಗಿದ್ದು, ಇಲ್ಲಿನ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕಾದ ಅನಿವಾರ್ಯತೆ ಇದೆ.
ನಮ್ಮಲ್ಲಿ ರಬ್ಬರ್ ಆಧಾರಿತ ಉದ್ದಿಮೆಗಳು ಬೆಳೆಯುತ್ತಿವೆ. ಸರ್ಕಾರಗಳು ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಬೆಳೆಗಾರರನ್ನು ಮತ್ತು ಅವಲಂಬಿತ ಸಂಸ್ಥೆಗಳನ್ನು ರಕ್ಷಿಸಬೇಕು. ಇಲ್ಲದೆ ಇದ್ದರೆ ದೇಶಕ್ಕೆ ಅಗತ್ಯವಿರುವ ರಬ್ಬರ್‌ನ ಆಮದು ಹೆಚ್ಚಾಗಿ ವಿದೇಶಿ ವಿನಿಮಯದ ಹೊರಹರಿವು ಅಧಿಕ ಆಗಬಹುದು ಎನ್ನುವುದು ಆರ್ಥಿಕ ತಜ್ಞರ ಕಳವಳ.
ನಮ್ಮ ತೋಟದಲ್ಲಿ ನಾವೇ ಕೆಲಸ ಮಾಡಿದರೆ ವೆಚ್ಚ ಸರಿದೂಗಿಸಿಕೊಂಡು ಹೋಗಬಹುದು. ಹವಾಮಾನ ವೈಪರೀತ್ಯದಿಂದಾಗಿ ರಬ್ಬರ್ ಹಾಲಿನ ಪ್ರಮಾಣ ಕಡಿಮೆ ಆಗಿದೆ. ಅಲ್ಲದೆ, ಈ ಬಾರಿ ಮಳೆಯಿಂದಾಗಿ ರಬ್ಬರ್ ಟ್ಯಾಪಿಂಗ್‌ನ ದಿನಗಳೂ ಕಡಿಮೆ ಆಗಿವೆ. ಈ ಕಾರಣದಿಂದ ಆದಾಯದಲ್ಲಿ ಕೊರತೆ ಆಗಬಹುದು ಎನ್ನುತ್ತಾರೆ ಯುವ ರೈತ ಸಂದೇಶ್ ರಾಜೇಶ್ ಚಾರ್ಮಾಡಿ.
ಕೆಲಸವೂ ಕಡಿಮೆ ಆದಾಯವೂ ಅಲ್ಪ...:
ಅಡಿಕೆಗೆ ಪ್ರಸ್ತುತ ಉತ್ತಮ ಧಾರಣೆ ಇದೆ. ಕಾಫಿಗೂ ಉತ್ತಮ ಬೆಲೆ ಇದೆ. ರಬ್ಬರ್ ಕೃಷಿ ಮಾಡಿದರೆ ಹಾಲಿಳಿಸಲು ಕನಿಷ್ಠ 6ರಿಂದ 7 ವರ್ಷ ಕಾಯಬೇಕು. ರಬ್ಬರ್‌ನಲ್ಲಿ ಅಂತರ ಬೆಳೆ ಸಾಧ್ಯವಿಲ್ಲ. ಇತರ ಬೆಳೆಗೆ ಹೋಲಿಸಿದರೆ ಕೆಲಸವೂ ಕಡಿಮೆ, ಆದಾಯವೂ ಕಡಿಮೆ. ಸೂಕ್ತ ವಾತಾವರಣ ಇಲ್ಲದೆ, ಮೋಡ ಕವಿದಿದ್ದರೆ ಹಾಲು ಸಂಗ್ರಹ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ನರಸಿಂಹರಾಜಪುರದ ಬೆಳೆಗಾರ ಎಸ್.ಎನ್. ಲೋಕೇಶ್ ಗೌಡ ಕಟಗಳಲೆ.
ಕೇಂದ್ರ ಸಚಿವರಿಗೆ ಪತ್ರ:
ರಬ್ಬರ್ ಧಾರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ವಾಣಿಜ್ಯ ಬೆಳೆ ಎಂಬ ಕಾರಣ ನೀಡಿ ರಬ್ಬರನ್ನು ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಯಿಂದ ಕೇಂದ್ರ ಸರ್ಕಾರ ಹೊರಗಿಟ್ಟಿದೆ. ಮಾರುಕಟ್ಟೆಯನ್ನೇ ಅವಲಂಬಿಸಿರುವ ಬೆಳೆಗಾರರ ಆರ್ಥಿಕ ಸ್ಥಿತಿ ಸಮಸ್ಯೆಯಲ್ಲಿದೆ ಎಂದು ವಿವರಿಸಿದ್ದಾರೆ. ಈ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ರಬ್ಬರ್ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಒದಗಿಸುವ ಬೆಳೆಗಳ ಪಟ್ಟಿಗೆ ಸೇರಿಸುವ ಬೇಡಿಕೆ ಸಂಬಂಧ ಪತ್ರವನ್ನು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿದ್ಧಗೊಂಡ ಶೀಟ್‌ಗಳು
ಈಗಿನ ಮಳೆ, ಹವಾಮಾನದ ಆಧಾರದಲ್ಲಿ ರಬ್ಬರ್ ಕೃಷಿ ಅತ್ಯಂತ ಸುರಕ್ಷಿತ ಬೆಳೆಯಾಗಿದೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಹೆಚ್ಚು ಸಮಸ್ಯೆ ಆಗದು. ಇದೊಂದು ಬೆಳೆಗಾರ ಸ್ನೇಹಿತ ಕೃಷಿ. ಮಾಲೀಕರ ಗೈರಿನಲ್ಲೂ ಕಾರ್ಮಿಕರಿಂದಲೇ ನಿರ್ವಹಣೆ ಮಾಡಬಹುದು. ಹಾಲಿಳಿಸಲು ಆಗದೆ ಇದ್ದರೆ ಬಿಟ್ಟು ಬಿಡಬಹುದು. ಮರ ಬೆಳೆಯುತ್ತಲೇ ಇರುತ್ತದೆ ಎನ್ನುತ್ತಾರೆ ರಬ್ಬರ್ ಸೊಸೈಟಿಯ ಅಧಿಕಾರಿಗಳು.
ಅಡಿಕೆ, ಹಣ್ಣಿನ ಗಿಡಗಳ ನಿರ್ವಹಣೆ ಒಂದು ವರ್ಷ ಕಡಿಮೆಯಾದರೆ ಮುಂದಿನ ವರ್ಷ ಇಳುವರಿ ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ಆದರೆ, ರಬ್ಬರ್ ಬೆಳೆ ಹಾಗಲ್ಲ. ರಾಜ್ಯದಲ್ಲಿ 58 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದ ರಬ್ಬರ್‌ನಿಂದಾಗಿ ರಾಜ್ಯಕ್ಕೆ ಕಡಿಮೆಯೆಂದರೂ ₹500 ಕೋಟಿ ಆದಾಯ ಬಂದಿದೆ. ಜಿಡಿಪಿ ಬೆಳವಣಿಗೆಗೂ ಕೊಡುಗೆ ನೀಡಿದೆ. ರಬ್ಬರ್ ಅನಿವಾರ್ಯ ಬೆಳೆ. ಬೇಡಿಕೆ ಎಂದೂ ಕಡಿಮೆ ಆಗದು. ಬೇಡಿಕೆಯ ಶೇ 50ರಷ್ಟೂ ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ.
ರಾಜ್ಯದಲ್ಲಿ 33 ರಬ್ಬರ್ ಖರೀದಿ ಕೇಂದ್ರಗಳಿವೆ. ರಬ್ಬರ್ ಸೊಸೈಟಿಯ ಖರೀದಿ ಕೇಂದ್ರವಲ್ಲದೆ ಖಾಸಗಿಯವರೂ ಬೆಳೆಗಾರರಿಂದ ಖರೀದಿಸುತ್ತಿದ್ದಾರೆ. ಪುತ್ತೂರು, ಗುತ್ತಿಗಾರು, ಸಂಪಾಜೆ, ಪೆರಾಜೆ ಟಿಎಪಿಸಿಎಂಸ್‌ನಲ್ಲಿ ಖರೀದಿಸಲಾಗುತ್ತಿದೆ. ಉಜಿರೆ ರಬ್ಬರ್ ಸೊಸೈಟಿಯೇ ಸುಮಾರು 17 ಸಾವಿರ ಟನ್ ಖರೀದಿಸುತ್ತಿದೆ.
1985ರ ಸಮಯದಲ್ಲಿ ಆರಂಭಗೊಂಡ ಉಜಿರೆಯಲ್ಲಿರುವ ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘವು ರಾಜ್ಯದಲ್ಲಿ ರಬ್ಬರ್‌ಗೆ ಸಂಬಂಧಿಸಿದ ಅತಿ ದೊಡ್ಡ ಸಂಸ್ಥೆಯಾಗಿದೆ. ರಬ್ಬರ್ ಬೆಳೆಗಾರರ ಹಿತ ಕಾಪಾಡಲು ಉಜಿರೆಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ಮತ್ತು ರಾಜ್ಯ ಮಟ್ಟದ ರಬ್ಬರ್ ಬೆಳೆಗಾರರ ಸಂಘಟನೆ ‘ಕೃಪಾ’ ಕಾರ್ಯನಿರ್ವಹಿಸುತ್ತಿದೆ.
ಉತ್ಪಾದನಾ ವೆಚ್ಚ, ಟ್ಯಾಪರ್‌ಗಳ ಸಂಬಳ, ಆ್ಯಸಿಡ್, ಗೊಬ್ಬರ ಧಾರಣೆ ಏರುತ್ತಲೇ ಇದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ದರಕ್ಕಿಂತ ಕಡಿಮೆ ಬೆಲೆಗೆ ನಮ್ಮ ರಬ್ಬರ್ ಮಾರಾಟವಾಗುತ್ತಿದೆ. ರಬ್ಬರ್ ಬೆಲೆ ಕುಸಿಯಲು ನಿಖರ ಕಾರಣ ಏನು ಎಂಬುದು ತಿಳಿಯುತ್ತಿಲ್ಲ. ಟೈರ್ ಉತ್ಪಾದಕರು ಈಶಾನ್ಯ ರಾಜ್ಯಗಳಲ್ಲಿ ಭರಪೂರ ಕೊಡುಗೆಗಳನ್ನು ನೀಡಿ ರಬ್ಬರ್ ಬೆಳೆಸುತ್ತಿದ್ದಾರೆ ಎಂಬ ಆರೋಪವೂ ಇದೆ ಎನ್ನುವುದು ಬೆಳೆಗಾರರ ಮಾಹಿತಿ.
ಒಣಗಲು ಹಾಕಿರುವ ಶೀಟ್‌ಗಳು
ಕಳ್ಳದಾರಿಯಲ್ಲಿ ದೇಶದ ಮಾರುಕಟ್ಟೆಗೆ ರಬ್ಬರ್ ಪ್ರವೇಶಿಸುತ್ತಿದೆ ಎಂಬ ಗುಮಾನಿ ಇದೆ. ಈ ಸಮಸ್ಯೆಯನ್ನು ಸರ್ಕಾರವೇ ನಿವಾರಿಸಬೇಕು. ಆಡಳಿತ ನಡೆಸುವವರೇ ಬೆಲೆ ಏರಿಕೆ ಮಾಡಿ ರಬ್ಬರ್ ಕೃಷಿಯನ್ನೂ ಬೆಳೆಗಾರರನ್ನೂ ಉಳಿಸಬೇಕು. ಇಲ್ಲದೆ ಇದ್ದರೆ ನಮ್ಮ ಪರಿಸ್ಥಿತಿ ಗಂಭೀರವಾಗಲಿದೆ ಎನ್ನುತ್ತಾರೆ ಸುಳ್ಯದ ಬೆಳೆಗಾರ ರವಿ.
ದೇಶದ ರಬ್ಬರ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಉತ್ಪಾದನೆ ಹೆಚ್ಚಿಸುವ ಅಗತ್ಯವಿದ್ದು, ತಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು. ಪ್ರಸ್ತುತ ಸಿಗುತ್ತಿರುವ ಬೆಲೆಯಿಂದ ಬೆಳೆ ಉಳಿಸಿಕೊಳ್ಳಲೂ ಆಗದೆ ಸಂಕಷ್ಟ ಪಡುತ್ತಿರುವ ತಮ್ಮ ನೆರವಿಗೆ ಸರ್ಕಾರಗಳು ಬರಬೇಕು ಎಂಬುದು ಬೆಳೆಗಾರರ ಕಳಕಳಿಯ ಮನವಿ.
ಬೆಳೆಗಾರರ ಬೇಡಿಕೆಗಳು
ಆರ್ಥಿಕ ಸಮಸ್ಯೆಯಿಂದ ಪಾರಾಗಿಸಲು ಹಾಗೂ ರಬ್ಬರ್ ಕೃಷಿಯನ್ನು ಉಳಿಸಲು ನೈಸರ್ಗಿಕ ರಬ್ಬರ್‌ಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕು. ಆಮದು ಸುಂಕ ಹೆಚ್ಚಿಸಿ ದೇಶೀಯ ಉತ್ಪನ್ನಕ್ಕೆ ಆದ್ಯತೆ ಒದಗಿಸಬೇಕು. ಮಾರುಕಟ್ಟೆಯಲ್ಲಿ ಉಂಟಾಗುವ ಬೆಲೆಯ ತೀವ್ರ ಏರಿಳಿತ ತಪ್ಪಿಸಲು ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು. ನೈಸರ್ಗಿಕ ರಬ್ಬರನ್ನು ಕೃಷಿ ಸರಕಾಗಿಯೇ ಪರಿಗಣಿಸಬೇಕು. ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಸಹಾಯಧನ ಒದಗಿಸಬೇಕು. ರಬ್ಬರ್ ವಾಣಿಜ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು ಅದನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು. ಆರ್‌ಎಸ್‌ಎಸ್ (ರಿಬ್ಬ್‌ಡ್ ಸ್ಮೋಕ್‌ಡ್ ಶೀಟ್) ಕೆ.ಜಿಗೆ ₹258 ನಿಗದಿಗೊಳಿಸಬೇಕು. ರಬ್ಬರ್ ಕೃಷಿಗೂ ಹವಾಮಾನ ಆಧಾರಿತ ವಿಮೆ ಸವಲತ್ತು ಒದಗಿಸಿಕೊಡಬೇಕು.
ರಬ್ಬರ್ ಫ್ಯಾಕ್ಟರಿಯಲ್ಲಿ ರಬ್ಬರ್ ಉತ್ಪನ್ನಗಳ ತಯಾರಿಕೆ
ರಬ್ಬರ್ ಮಂಡಳಿಯಿಂದ ತರಬೇತಿ
ಕೇಂದ್ರ ಸರ್ಕಾರದ ರಬ್ಬರ್ ಮಂಡಳಿ ವ್ಯಾಪ್ತಿಯಲ್ಲಿ ರಾಜ್ಯದ ಮಂಗಳೂರು ಪುತ್ತೂರು ಶಿವಮೊಗ್ಗ ಕುಂದಾಪುರದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಕಳೆದ ವರ್ಷಗಳಲ್ಲಿ ವಾರ್ಷಿಕವಾಗಿ ಸುಮಾರು 100 ಅರ್ಜಿಗಳು ಬೆಳೆ ವಿಸ್ತರಣೆ ಸಂಬಂಧ ಬರುತ್ತಿದ್ದವು. ಆದರೆ ಈ ವರ್ಷ 50 ಅರ್ಜಿಗಳೂ ಬಂದಿಲ್ಲ. ರಬ್ಬರ್ ಟ್ಯಾಪರ್‌ಗಳ ಕೊರತೆ ಹಾಗೂ ಬೆಲೆಯಲ್ಲಿ ಇಳಿಕೆಯಾಗಿರುವುದೂ ಇದಕ್ಕೆ ಕಾರಣ ಇರಬಹುದು. ರಬ್ಬರ್ ಸೊಸೈಟಿಗಳ ಸಹಯೋಗದೊಂದಿಗೆ ರಬ್ಬರ್ ಬೆಳೆ ವಿಸ್ತರಣೆ ಮಾಡುವಂತೆ ಬೆಳೆಗಾರರನ್ನು ಪ್ರೇರೇಪಿಸಲಾಗುತ್ತಿದೆ. ರಬ್ಬರ್ ಬೋರ್ಡ್ ವತಿಯಿಂದಲೂ ಪ್ರತಿವರ್ಷ ತರಬೇತಿ ನೀಡಲಾಗುತ್ತಿದೆ. ಆದರೆ ತರಬೇತಿಗೆ ಯುವ ರೈತರು ಬರುತ್ತಿಲ್ಲ. 50 ವರ್ಷ ವಯಸ್ಸಿಗಿಂತ ಹೆಚ್ಚಿನವರೇ ಬರುತ್ತಿದ್ದಾರೆ ಎನ್ನುತ್ತಾರೆ ರಬ್ಬರ್ ಮಂಡಳಿ ಅಧಿಕಾರಿಗಳು.
ಕೇರಳದಲ್ಲಿ ಸರ್ಕಾರದ ಪ್ರೋತ್ಸಾಹ ಧನ
ದೇಶದ ರಬ್ಬರ್ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿರುವ ಕೇರಳದಲ್ಲಿ ಅಲ್ಲಿನ ಸರ್ಕಾರ ರಬ್ಬರ್ ಮಾರುಕಟ್ಟೆಗೆ ಮಧ್ಯಪ್ರವೇಶ ಮಾಡಿ ಪ್ರೋತ್ಸಾಹ ಧನ ನೀಡುತ್ತಿದೆ. ಕೇರಳ ರಾಜ್ಯ ಸಚಿವ ಸಂಪುಟವು ರಬ್ಬರ್‌ಗೆ ಬೆಂಬಲ ಬೆಲೆಯನ್ನು ₹180ರಿಂದ ₹200ಕ್ಕೆ ಏರಿಕೆ ಮಾಡಿದ್ದು ಈ ಬೆಂಬಲ ಬೆಲೆ ಕಳೆದ ವರ್ಷದ ನ.1ರಿಂದಲೇ ಜಾರಿಗೆ ಬಂದಿದೆ. ರಬ್ಬರ್ ಉತ್ಪಾದನಾ ಪ್ರೋತ್ಸಾಹ ಯೋಜನೆಯ ಅನ್ವಯ ಈ ಕ್ರಮ ಕೈಗೊಂಡಿದೆ. 2024ರಲ್ಲಿ ಅಲ್ಲಿನ ಸರ್ಕಾರ ಮೂರು ವರ್ಷಗಳ ಬಳಿಕ ಬೆಂಬಲ ಬೆಲೆಯನ್ನು ₹170ರಿಂದ ₹180ಕ್ಕೆ ಏರಿಕೆ ಮಾಡಿತ್ತು. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಮಾಡಬೇಕು ಎಂಬ ಆಗ್ರಹ ಇದೆ.
ರಬ್ಬರ್ ತೋಟ
ತೋಟಗಾರಿಕಾ ಬೆಳೆಗಳ ವ್ಯಾಪ್ತಿಗೆ ರಬ್ಬರ್: ಶಿಫಾರಸು
ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಕೃಷಿ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಲು ಇರುವ ಸಾಧ್ಯತೆ ಬಗ್ಗೆ ರಬ್ಬರ್ ಬೋರ್ಡ್‌ಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ವಿಧಾನ ಸಭೆಯ ಕಲಾಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ವಾಣಿಜ್ಯ ಬೆಳೆಯಾದ ರಬ್ಬರ್‌ನ ಬೆಲೆ ವಿಷಯವು ಬಹುಪಾಲು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ರಬ್ಬರ್ ಬೆಳೆಯವ ರೈತರು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.
ಬೆಳೆಗಾರರು ನಿರಾಶರಾಗುವುದು ಬೇಡ. ರಬ್ಬರ್‌ಗೆ ಭವಿಷ್ಯ ಇದ್ದು ಭರವಸೆಯ ಬೆಳೆಯಾಗಿದೆ. ಬೆಳೆಗಾರರು ವಿಶ್ವಾಸ ಕಳೆದುಕೊಳ್ಳಬೇಕಿಲ್ಲ. ಇಳುವರಿ ನೀಡುವ ರಬ್ಬರ್ ಮರಗಳನ್ನು ಕಡಿದು ಬೇರೆ ಬೆಳೆ ಬೆಳೆಯುವುದು ಬೇಡ– ಶ್ರೀಧರ ಜಿ.ಭಿಡೆ, ಅಧ್ಯಕ್ಷ, ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ
ರಬ್ಬರ್ ಒಂದು ಕೃಷಿ ಉತ್ಪನ್ನ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದ್ದು ಅಲ್ಲಿನ ಸರ್ಕಾರವೂ ಪ್ರೋತ್ಸಾಹ ಧನ ನೀಡುತ್ತಿದೆ. ರಬ್ಬರ್ ಕಾರ್ಯಪಡೆಯೂ ಇದನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಲು ಹೇಳಿದೆ. ರಬ್ಬರ್‌ಗೆ ಬೆಂಬಲ ಬೆಲೆಯೊಂದಿಗೆ ವಿಮೆ ಒದಗಿಸಬೇಕು.– ಪ್ರೊ. ವಿಘ್ನೇಶ್ವರ ವರ್ಮುಡಿ, ಕೃಷಿ ಆರ್ಥಿಕ ತಜ್ಞ
ರಬ್ಬರ್‌ನಿಂದ ಹಲವು ಉಪಯೋಗಗಳಿವೆ. ತೋಟದಲ್ಲಿ ಜೇನು ಸಾಕಬಹುದು. ರಬ್ಬರ್ ಮರ ಸರಾಸರಿ 25 ವರ್ಷ ಇಳುವರಿ ಕೊಡುತ್ತದೆ. ಬಳಿಕ ಪೀಠೋಪಕರಣಕ್ಕೂ ಮರಗಳನ್ನು ಮಾರಾಟ ಮಾಡಬಹುದು. ಬೇರೆ ಬೆಳೆಯಲ್ಲಿ ಲಾಭ ಇದೆ ಎಂದು ಇದ್ದ ಮರವನ್ನು ಕಡಿಯಬಾರದು. ಡಯಾಸ್ ಚೆರಿಯನ್, ರಬ್ಬರ್ ಬೆಳೆಗಾರ ಕೆರ್ವಾಶೆ
ಉಜಿರೆಯಲ್ಲಿ ನಡೆದ ಸಮಾವೇಶದಲ್ಲಿ ಎಲ್ಲ ಬೆಳೆಗಾರರಿಗೂ ಅಭಯ ನೀಡಿದ್ದೇವೆ. ನಮ್ಮ ಮನವಿಗೆ ಸಂಸದರು ಶಾಸಕರು ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾರೂ ಭ್ರಮನಿರಸನ ಆಗುವ ಅಗತ್ಯ ಇಲ್ಲ. ತಾಳ್ಮೆ ವಹಿಸಿ ಒಂದೆರಡು ವರ್ಷ ಕಾಯಬೇಕು.ಅನಂತಭಟ್ ಎಂ., ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.