ADVERTISEMENT

ಒಳನೋಟ: ವಲಸೆ ಕಾರ್ಮಿಕರಿಗೆ ಸೌಲಭ್ಯ ಕನ್ನಡಿಯೊಳಗಿನ ಗಂಟು

ವಿಜಯಕುಮಾರ್ ಎಸ್.ಕೆ.
Published 20 ಫೆಬ್ರುವರಿ 2021, 19:10 IST
Last Updated 20 ಫೆಬ್ರುವರಿ 2021, 19:10 IST
ಕೂಲಿ ಕೆಲಸಕ್ಕೆ ತೆರಳಲು ಕಾದು ಕುಳಿತಿದ್ದ ಹೊರ ರಾಜ್ಯದ ಕಾರ್ಮಿಕರು (ಸಂಗ್ರಹ ಚಿತ್ರ)
ಕೂಲಿ ಕೆಲಸಕ್ಕೆ ತೆರಳಲು ಕಾದು ಕುಳಿತಿದ್ದ ಹೊರ ರಾಜ್ಯದ ಕಾರ್ಮಿಕರು (ಸಂಗ್ರಹ ಚಿತ್ರ)   

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೆಂದರೆ ಬಹುತೇಕ ವಲಸಿಗರೇ ಆಗಿದ್ದಾರೆ. ಅನಕ್ಷರಸ್ಥರು ಹಾಗೂ ಅನ್ಯಭಾಷಿಕರೇ ಹೆಚ್ಚಿರುವ ಈ ವಲಯದ ಅಸಂಘಟಿತರ ಪಾಲಿಗೆ ಸರ್ಕಾರದ ಸೌಲಭ್ಯ ಎಂದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.

ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಬಿಹಾರ, ಒಡಿಶಾ, ತ್ರಿಪುರ, ಮೇಘಾಲಯ, ಸಿಕ್ಕಿಂ ರಾಜ್ಯಗಳ ಕಾರ್ಮಿಕರು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಕೆಲಸ ಅರಸಿ ಬಂದ್ದಾರೆ. ಕಾರ್ಪೆಂಟರ್‌, ಎಲೆಕ್ಟ್ರಿಕ್, ಟೈಲ್ಸ್, ಬಾರ್ ಬೆಂಡಿಂಗ್, ಪ್ಲಂಬಿಂಗ್‌ ಕೆಲಸ ಮಾಡುವ ಬಹುತೇಕರು ಈ ವಲಸೆ ಕಾರ್ಮಿಕರೇ. ಇನ್ನು ನಿರ್ಮಾಣ ಕಾಮಗಾರಿಯಲ್ಲಿ ದುಡಿಯುವ ಕಾರ್ಮಿಕರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರೂ ಇದ್ದಾರೆ.

ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರು ಮಧ್ಯವರ್ತಿಗಳನ್ನು ಅವಲಂಬಿಸಿರುತ್ತಾರೆ. ಮಧ್ಯವರ್ತಿಗಳು ಬಿಲ್ಡರ್‌ಗಳಿಗೆ ನೇರವಾಗಿ ಕಾರ್ಮಿಕರನ್ನು ಪೂರೈಸುತ್ತಾರೆ. ಇವರು ಕಾರ್ಮಿಕ ಇಲಾಖೆಯ ಸಂಪರ್ಕಕ್ಕೇ ಬರುವುದಿಲ್ಲ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಇದೆ ಎಂಬ ಮಾಹಿತಿಯೂ ಕಾರ್ಮಿಕರಲ್ಲಿ ಇಲ್ಲ

ADVERTISEMENT

ಕನಿಷ್ಠ ಸೌಲಭ್ಯಗಳಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ದುಡಿಯುತ್ತಿದ್ದಾರೆ. ಬಹುತೇಕರು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದರೆ, ಕೆಲವರು ಸಣ್ಣ–ಸಣ್ಣ ಮನೆಗಳನ್ನು ಬಾಡಿಗೆಗೆ ಪಡೆದು ಬದುಕು ಸಾಗಿಸುತ್ತಿದ್ದಾರೆ. ಈ ಕಾರ್ಮಿಕರ‌ನ್ನು ಬಿಲ್ಡರ್‌ಗಳು, ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದಾರೆ.

ಇವರ ಕಲ್ಯಾಣಕ್ಕೆ ಕಾರ್ಮಿಕ ಮಂಡಳಿ ಇದೆ. ಕಟ್ಟಡಗಳ ಮಾಲೀಕರಿಂದ ಸೆಸ್‌ ರೂಪದಲ್ಲಿ ಸಂಗ್ರಹಿಸುವ ಕಾರ್ಮಿಕ ನಿಧಿಯಲ್ಲಿ ಸದ್ಯ ₹7 ಸಾವಿರ ಕೋಟಿಗೂ ಅಧಿಕ ಹಣ ಇದೆ. ಅದನ್ನು ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗಿಸುವ ಬದಲು ಸರ್ಕಾರವೇ ಅದರ ಮೇಲೆ ಕಳ್ಳಗಣ್ಣಿಟ್ಟು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಪ್ರಯತ್ನವನ್ನು ಆಗಾಗ ಮಾಡುತ್ತಲೇ ಇದೆ.

‘ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳನ್ನು ತೊರೆದು ತಮ್ಮ ಊರುಗಳತ್ತ ಹೆಜ್ಜೆ ಇಟ್ಟವರಲ್ಲಿ ಬಹುತೇಕರು ಈಗ ವಾಪಸ್ ಬಂದಿದ್ದಾರೆ. ಸಾಕಷ್ಟು ಮಂದಿ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ. ನೋಂದಣಿ ಮಾಡಿಸಲು ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ವಿಶೇಷ ಯೋಜನೆ ರೂಪಿಸಬೇಕು’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳುತ್ತಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌, ಆಹಾರದ ಪೊಟ್ಟಣ ವಿತರಣೆ, ತಲಾ ₹5 ಸಾವಿರದಂತೆ ವಿತರಣೆ ಮಾಡಿದ ಸಹಾಯಧನ, ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ಮಾಡಿದ ವೆಚ್ಚ ಸೇರಿ ₹914 ಕೋಟಿ ಖರ್ಚಾಗಿದೆ ಎಂಬುದು ಕಾರ್ಮಿಕ ಕಲ್ಯಾಣ ಮಂಡಳಿಯ ಅಂಕಿ–ಅಂಶ ಹೇಳುತ್ತಿವೆ.

‘ಆದರೆ, ₹5 ಸಾವಿರ ಎಲ್ಲಾ ಕಾರ್ಮಿಕರಿಗೂ ತಲುಪಿಲ್ಲ. ಕೆಲವರಿಗೆ ಎರಡೆರಡು ಬಾರಿ ಸಹಾಯಧನ ದೊರೆತಿದ್ದರೆ, ಇನ್ನೂ ಹಲವರಿಗೆ ಇದು ಸಿಕ್ಕೇ ಇಲ್ಲ. ₹914 ಕೋಟಿ ಖರ್ಚಿನ ಬಗ್ಗೆ ಲೆಕ್ಕಪರಿಶೋಧನೆ ಮಾಡಿಸಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದ್ದೇವೆ’ ಎಂದು ಮಹಾಂತೇಶ್ ಹೇಳಿದರು.

ವಲಸೆ ಕಾರ್ಮಿಕರು 90 ದಿನಗಳಿಗಿಂತ ಹೆಚ್ಚು ದಿನ ಯಾವುದೇ ಬಿಲ್ಡರ್ ಬಳಿ ಕೆಲಸ ಮಾಡುತ್ತಿದ್ದರೆ, ಅವರನ್ನು ನೋಂದಣಿ ಮಾಡಿಸುವುದು ಬಿಲ್ಡರ್‌ಗಳ ಜವಾಬ್ದಾರಿ. ಆದರೂ, ಎಲ್ಲಾ ಕಾರ್ಮಿಕರನ್ನು ನೋಂದಣಿ ಮಾಡಿಸಲು ಎನ್‌ಜಿಒಗಳ ಸಹಕಾರ ಪಡೆದು ವಿಶೇಷ ಕಾರ್ಯಾಚರಣೆ ಮಾಡಿಸಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಕಲ್ಯಾಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

**

28 ಲಕ್ಷ:ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನೋಂದಣಿ ಮಾಡಿಕೊಂಡಿರುವಕಾರ್ಮಿಕರ ಸಂಖ್ಯೆ

16.58 ಲಕ್ಷ:ಕೋವಿಡ್ ಸಂದರ್ಭದಲ್ಲಿ ತಲಾ ₹5 ಸಾವಿರ ಸಹಾಯ ಧನ ಪಡೆದ ಕಾರ್ಮಿಕರು

₹ 914 ಕೋಟಿ:ಲಾಕ್‌ಡೌನ್ ವೇಳೆ ಕಾರ್ಮಿಕರಿಗೆಖರ್ಚು ಮಾಡಿದ ಹಣ

₹7,000 ಕೋಟಿ:ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಸದ್ಯ ಇರುವ ಹಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.