ADVERTISEMENT

ವಾಯುಪಡೆಗೆ ರಫೇಲ್ ಅನಿವಾರ್ಯವಾಗಿತ್ತು: ಬಾಲಾಕೋಟ್ ರೂವಾರಿ ಧನೋವಾ ನೀಡುವ 10 ಕಾರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2020, 11:39 IST
Last Updated 29 ಜುಲೈ 2020, 11:39 IST
ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ
ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ   

ಚೀನಾ ಗಡಿ ಸಂಘರ್ಷದ ನಂತರ ರಕ್ಷಣಾ ವ್ಯವಸ್ಥೆ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿರುವ ಭಾರತ ಸರ್ಕಾರಕ್ಕೆ ರಫೇಲ್ ಜೆಟ್‌ಗಳು ಅಂಬಾಲ ವಾಯುನೆಲೆಗೆ ಬಂದಿಳಿದಿದ್ದು ತುಸು ನೆಮ್ಮದಿ ತಂದಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬತ್ತಳಿಕೆಗೆ ತುಂಬಿಕೊಂಡಿರುವ ವೈರಿಪಡೆಯನ್ನುಹಳೆಯ ಯುದ್ಧ ವಿಮಾನಗಳೊಂದಿಗೆ ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಭಾರತೀಯ ವಾಯುಪಡೆಯ ಆತ್ಮವಿಶ್ವಾಸಕ್ಕೂ ರಫೇಲ್‌ ಟಾನಿಕ್‌ನಂತೆ ಒದಗಿದೆ.

'ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಏಕೆ ಅನಿವಾರ್ಯವಾಗಿತ್ತು' ಎಂಬ ಬಗ್ಗೆ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ. ಫೆಬ್ರುವರಿ 26, 2019ರ ಬಾಲಾಕೋಟ್ ದಾಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಈ ನಿವೃತ್ತ ಅಧಿಕಾರಿಯನ್ನು 'ವಾಯುರಕ್ಷಣಾ ವ್ಯವಸ್ಥೆ ನಿಪುಣ' ಎಂದು ವಿಶ್ವ ಗೌರವಿಸುತ್ತದೆ.

ಭಾರತಕ್ಕೆ ಬಂದ ರಫೇಲ್ ಯುದ್ಧವಿಮಾನಗಳು

1) ಸಮಕಾಲೀನ ಯುದ್ಧವಿಮಾನಗಳು ಅನುಸರಿಸುತ್ತಿರುವ ಅತ್ಯುನ್ನತ ತಂತ್ರಜ್ಞಾನವನ್ನು ರಫೇಲ್‌ ಯುದ್ಧವಿಮಾನಗಳು ಒಳಗೊಂಡಿವೆ.

2) ರಫೇಲ್‌ಗೆ ಅಳವಡಿಸುವ ಕಣ್ಣಿಗೆ ಕಾಣಿಸದಷ್ಟು ದೂರದ ಗುರಿಯನ್ನು ತಲುಪುವ (ಮೀಟಿಯಾರ್ ಬಿಯಾಂಡ್ ವಿಷ್ಯುವಲ್ ರೇಂಜ್) ಶಸ್ತ್ರಗಳು, ಆಗಸದಿಂದ ಚಿಮ್ಮಿ, ಭೂಮಿಯ ಗುರಿಯನ್ನು ಹೆಚ್ಚು ನಿಖರವಾಗಿ ಧ್ವಂಸ ಮಾಡುವ ಸ್ಕ್ಯಾಲ್ಪ್ (ಏರ್‌ ಟು ಗ್ರೌಂಡ್) ಶಸ್ತ್ರಗಳು ಭಾರತೀಯ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸಿವೆ.

3) ಚೀನಾವನ್ನೇ ಮನಸ್ಸಿನಲ್ಲಿಟ್ಟುಕೊಂಡು ವಾಯುರಕ್ಷಣಾ ವ್ಯವಸ್ಥೆಯನ್ನು ಲೆಕ್ಕ ಹಾಕುವುದಾದರೆ, ರಫೇಲ್‌ನಷ್ಟು ಸಾಮರ್ಥ್ಯವಿರುವ ಯಾವುದೇ ಯುದ್ಧವಿಮಾನ ಚೀನಾ ಸೇನೆಯಲ್ಲಿ ಇಲ್ಲ. ಮುಂದೊಂದು ದಿನ ಘರ್ಷಣೆ ತೀವ್ರಗೊಂಡರೆ ಟಿಬೆಟ್ ಪ್ರಸ್ಥಭೂಮಿಯಲ್ಲಿರುವ ಚೀನಾದ ವಾಯು ರಕ್ಷಣಾ ವ್ಯವಸ್ಥೆಯನ್ನು ರಫೇಲ್‌ ಮೂಲಕ ಧ್ವಂಸ ಮಾಡಿದರೆ ಯುದ್ಧ ಶೀಘ್ರದಲ್ಲಿಯೇ ನಿರ್ಣಾಯಕ ಘಟ್ಟಕ್ಕೆ ಮುಟ್ಟುತ್ತದೆ.

4) ಟಿಬೆಟ್ ಪ್ರಸ್ಥಭೂಮಿಯ ಹೊಟನ್ ವಾಯುನೆಲೆಯಲ್ಲಿ 70 ಮತ್ತು ಲ್ಹಾಸಾ ವಿಮಾನ ನಿಲ್ದಾಣದ ಸಮೀಪವಿರುವ ಗೊಂಗ್ಗರ್ ವಾಯುನೆಲೆಯ ಸುರಂಗದಲ್ಲಿ 26 ಯುದ್ಧವಿಮಾನಗಳನ್ನು ಚೀನಾ ನಿಯೋಜಿಸಿದೆ. ಭಾರತದ ಯುದ್ಧ ವಿಮಾನಗಳಿಗೆ ಚೀನಾದ ವಾಯುರಕ್ಷಣಾ ವ್ಯವಸ್ಥೆ ಭೇದಿಸುವುದು ಸಾಧ್ಯವಾದರೆ ಈ ವಾಯುನೆಲೆಗಳನ್ನು ಧ್ವಂಸಗೊಳಿಸುವುದು ಸುಲಭ.

5) ಚೀನಾದ ಬಹುಚರ್ಚಿತ ಮತ್ತು ಪ್ರತಿಷ್ಠಿತ ಜೆ-20 ಯುದ್ಧವಿಮಾನಗಳಿಗಿಂತಲೂ ಭಾರತದ ರಫೇಲ್ ಮತ್ತು ಎಸ್‌ಯು-30 ಯುದ್ಧವಿಮಾನಗಳು ತಾಂತ್ರಿಕವಾಗಿ ಉನ್ನತ ಸ್ಥಾನದಲ್ಲಿವೆ.

6) ಚೀನಾದ ಯುದ್ಧ ವಿಮಾನಗಳಿಗಿಂತಲೂ ವೈರಿ ದೇಶಗಳ ವಿಮಾನಗಳನ್ನು ಗುರಿಯಾಗಿಸಿಕೊಂಡು ಭೂಮಿಯಿಂದ ಚಿಮ್ಮುವ ಅವರ ಕ್ಷಿಪಣಿ ವ್ಯವಸ್ಥೆಯೇ ಭಾರತಕ್ಕೆ ಸದ್ಯಕ್ಕಿರುವ ದೊಡ್ಡ ಸವಾಲು.

7) ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿರುವ ಸಂಬಂಧ ಎಂಥದ್ದೆಂದು ಎಲ್ಲರಿಗೂ ಗೊತ್ತು. ಚೀನಾದ ವಾಯುರಕ್ಷಣಾ ವ್ಯವಸ್ಥೆ ಅಷ್ಟೊಂದು ಉತ್ತಮವಾಗಿದೆ ಎಂದಾಗಿದ್ದರೆ ಪಾಕಿಸ್ತಾನವೇಕೆ ಚೀನಾ ನಿರ್ಮಿತ ಜೆಎಫ್‌-17 ಯುದ್ಧ ವಿಮಾನಗಳ ಮೇಲೆ ಸೆಲೆಕ್ಸ್‌ ಗೆಲಿಲಿಯೊ (ಯೂರೋಪ್ ನಿರ್ಮಿತ) ರಾಡಾರ್ ಮತ್ತು ತುರ್ಕಿ ನಿರ್ಮಿತ ಟಾರ್ಗೆಟ್ ಪಾಡ್ ಬಳಸುತ್ತಿತ್ತು?

8) ಪಾಕಿಸ್ತಾನವು ಇಂದಿಗೂ ಸ್ವೀಡನ್ ನಿರ್ಮಿತ ವಾಯುದಾಳಿ ಮುನ್ಸೂಚನೆ ವ್ಯವಸ್ಥೆಯನ್ನು ಉತ್ತರ ಗಡಿಯಲ್ಲಿ ಬಳಸುತ್ತಿದೆ. ಚೀನಾ ನಿರ್ಮಿತ ಮುನ್ಸೂಚನೆ ವ್ಯವಸ್ಥೆಯನ್ನು ದಕ್ಷಿಣಕ್ಕೆ ಸೀಮಿತಗೊಳಿಸಿದೆ. ಇದರರ್ಥವೇನು? (ವಾಯುದಾಳಿಯ ಮುನ್ಸೂಚನೆಯ ಅಂದಾಜಿನಲ್ಲೂ ಚೀನಾ ಶಕ್ತರಾಷ್ಟ್ರವಲ್ಲ).

9) ಭಾರತವು ತನ್ನದೆಂದು ಪ್ರತಿಪಾದಿಸುವ ಅಕ್ಷಯ್ ಚಿನ್ ಪ್ರದೇಶದಲ್ಲಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ನಿಯೋಜಿಸಿದೆ. ಆದರೆ ಈ ಪ್ರದೇಶದಲ್ಲಿ ಮರಗಳ ಮರೆ ಅಷ್ಟಾಗಿಲ್ಲ. ಚೀನಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತದ ಯುದ್ಧವಿಮಾನಗಳು ಭೇದಿಸಲು ಸಾಧ್ಯವಾದರೆ ಈ ಕ್ಷಿಪಣಿಗಳು ಮತ್ತು ಫಿರಂಗಿಗಳು ವಾಯುದಾಳಿಗೆ ಸುಲಭದ ಗುರಿಯಾಗಬಲ್ಲವು. ನಂತರದ ಸೈನಿಕ ಕಾರ್ಯಾಚರಣೆಯು ಸುಲಭವಾದೀತು.

10) ಭೂ ಮೇಲ್ಮೈಯನ್ನು ನಿಖರವಾಗಿ ಅಂದಾಜಿಸಬಲ್ಲ ಡಿಜಿಟಲ್ ಟೆರೇನ್ ಎಲಿವೇಶನ್ ದತ್ತಾಂಶವು ರಫೇಲ್‌ನ ಪೈಲಟ್‌ಗಳಿಗೆ ಸಿಗುತ್ತದೆ. ಹೀಗಾಗಿ ಈ ವಿಮಾನಗಳ ದಾಳಿಯ ನಿಖರತೆಯನ್ನು ಚೀನಾದ ಯುದ್ಧ ವಿಮಾನಗಳು ಸರಿಗಟ್ಟಲಾರವು.

(ಆಧಾರ: ಹಿಂದೂಸ್ತಾನ್ ಟೈಮ್ಸ್‌ ಮತ್ತು ಇತರ ಜಾಲತಾಣಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.