ಚಿಲ್ಲರೆ ಅಂಗಡಿ ಇಟ್ಟುಕೊಂಡು ಲಾಸ್ ಆಗಿದ್ದ ವ್ಯಕ್ತಿಯೊಬ್ಬ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಬೆಳೆದ ಕಥೆ ಇದು. ನಷ್ಟದಿಂದ ಮುಚ್ಚಿಹೋಗುವಂತಿದ್ದ ಹೋಟೆಲ್ ಖರೀದಿಸಿ, ಅದನ್ನು ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆಸಿದ ದೈತ್ಯ ಸಾಧನೆ ಮಾಡಿದವ ಈತ. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉತ್ತಮ ಸಂಬಳ, ಆರೋಗ್ಯದ ಸವಲತ್ತು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಮೂಲಕ ದೇಶದ ‘ಮಾದರಿ ಉದ್ಯೋಗದಾತ’ ಎನ್ನುವ ಗೌರವಕ್ಕೆ ಪಾತ್ರನಾಗಿದ್ದವ. ಆದರೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ಆತನ ವ್ಯಕ್ತಿತ್ವದ ಜೊತೆಜೊತೆಗೆ ಬದುಕೂ ಕುಸಿಯಲು ಆರಂಭಿಸಿತು. ‘ಮಾದರಿ ಉದ್ಯೋಗದಾತ’ ತನ್ನದೇ ತನ್ನದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಹೆಂಡತಿಯನ್ನು ಎರಡನೇ ಮದುವೆಯಾಗಿ ದಕ್ಕಿಸಿಕೊಂಡ. ಮತ್ತೋರ್ವ ನೌಕರನ ಮಗಳನ್ನು ಮದುವೆಯಾಗುವ ಪ್ರಯತ್ನದಲ್ಲಿ ಕೊಲೆಗಾರನಾಗಿ ಜೈಲುಪಾಲಾದ.
ಇದನ್ನೂ ಓದಿ:ಶರವಣ ಭವನ ಮಾಲೀಕ ಪಿ.ರಾಜಗೋಪಾಲ್ ನಿಧನ
ಇಷ್ಟು ಓದುವ ಹೊತ್ತಿಗೆ ಈ ಕಥೆಯ (ಖಳ) ನಾಯಕ ಯಾರಾಗಿರಬಹುದು ಎಂಬ ಅಂದಾಜು ನಿಮಗೆ ಬಂದಿರಬಹುದು. ಇದು ಮೃದುಮೃದು ಇಡ್ಲಿ, ಗರಿಮುರಿ ದೋಸೆ, ಬಾಯಿ ಚಪ್ಪರಿಸುವಂಥ ಚಟ್ನಿ, ಮೆದುಸವಿ ವಡೆಯ ಮೂಲಕ ವಿಶ್ವದಾದ್ಯದಂತ ಗ್ರಾಹಕರನ್ನು ಸೆಳೆದಿರುವ ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪುನ್ನೈಯಾಡಿ (ಪಿ) ರಾಜಗೋಪಾಲ್ ಬದುಕಿನ ಕಥೆ. ಪಿ.ರಾಜಗೋಪಾಲ್‌ಗೆ ಈಗ 72ರ ಹರೆಯ. ಮದುವೆಯಾಗಲೆಂದು ಇಷ್ಟಪಟ್ಟ ಹುಡುಗಿ ಜೀವಜ್ಯೋತಿಯ ಪತಿ ಪ್ರಿನ್ಸ್ ಶಾಂತಕುಮಾರನನ್ನು ಕೊಲ್ಲಿಸಿ 18 ವರ್ಷಗಳೇ ಕಳೆದುಹೋಗಿವೆ. ನ್ಯಾಯಾಲಯಗಳಲ್ಲಿ ಎಳೆದಾಡುತ್ತಿದ್ದ, ಬಂಧನ–ಜಾಮೀನು ವರ್ತುಲಗಳಲ್ಲಿ ತಿರುಗುತ್ತಿದ್ದ ಪ್ರಕರಣಕ್ಕೆ ಇದೀಗ (ಮಾರ್ಚ್ 29) ತಾರ್ಕಿಕ ಅಂತ್ಯ ಸಿಕ್ಕಿದೆ. ಜೀವಾವಧಿ ಶಿಕ್ಷೆ ವಿಧಿಸಿರುವ ಸುಪ್ರೀಂಕೋರ್ಟ್ ಜುಲೈ 7ರ ಒಳಗೆ ಶರಣಾಗಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಥೇಟ್ ಸಿನಿಮಾ ಕಥೆ
ಬಡತನ, ದುಡ್ಡು, ಕೊಲೆ, ಮೂಢನಂಬಿಕೆ, ಭ್ರಷ್ಟಾಚಾರ, ಯಶಸ್ಸು, ವ್ಯಾಪಾರ ಮತ್ತು ಸೆಕ್ಸ್ ಮೇಳೈಸಿರುವಯಾವುದೇ ಮಾಸ್ ಮಸಾಲೆ ಸಿನಿಮಾಗೆ ಕಡಿಮೆ ಇಲ್ಲದಂಥ ಕಥೆ ರಾಜಗೋಪಾಲ್ ಅವರದು. ಇದನ್ನೊಂದು ಫಿಲಂ ಮಾಡಿದರೆ, ಇಂಟರ್‌ವಲ್‌ವರೆಗೆ ಹಳ್ಳಿಯಲ್ಲಿದ್ದ ಬಡ ಕುಟುಂಬದಿಂದ ಬದುಕು ಕಟ್ಟಿಕೊಳ್ಳಲೆಂದು ಮಹಾನಗರಕ್ಕೆ ಬಂದ ಹುಡುಗನೊಬ್ಬ ದಿನಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದ ಯಶೋಗಾಥೆ; ಇಂಟರ್‌ವಲ್ ನಂತರದ್ದು ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ಧುತ್ತನೆ ಪಾತಾಳಕ್ಕೆ ಬಿದ್ದ ದುರಂತ.
ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯ ಪುನ್ನೈಯಾಡಿ ಗ್ರಾಮದ ಸಣ್ಣ ಮಣ್ಣಿನ ಮನೆಯಲ್ಲಿ ಹುಟ್ಟಿದವರು ರಾಜಗೋಪಾಲ್. ಆ ಹಳ್ಳಿಗೆ ಒಂದು ಬಸ್‌ಸ್ಟಾಪ್ ಕೂಡ ಇರಲಿಲ್ಲ. 7ನೇ ತರಗತಿಯಲ್ಲಿ ಶಾಲೆಗೆ ನಮಸ್ಕಾರ ಹಾಕಿ ಹೊಟ್ಟೆಪಾಡಿಗೆಂದು ಚೆನ್ನೈ ನಗರ ಸೇರಿಕೊಂಡರು. ಟೇಬಲ್ ಒರೆಸುವ ಕೆಲಸಕ್ಕೆ ಸೇರಿದ್ದ ರೆಸ್ಟೊರೆಂಟ್‌ನ ನೆಲದ ಮೇಲೆಯೇ ಮಲಗುತ್ತಿದ್ದರು. ನಿಧಾನವಾಗಿ ಟೀ ಮಾಡುವುದು ಕಲಿತು, ಸಣ್ಣದೊಂದು ಟೀ ಅಂಗಡಿ ಶುರು ಮಾಡಿದರು. ತಂದೆ ಮತ್ತು ಸಂಬಂಧಿಯೊಬ್ಬರ ನೆರವಿನಿಂದ ಚೆನ್ನೈನ ಕೆ.ಕೆ.ನಗರದಲ್ಲಿ ಸ್ವಂತ ಅಂಗಡಿ ತೆರೆದರು. ಅಂಗಡಿಯಿದ್ದ ಎರಡು ಮಹಡಿಯ ಕಟ್ಟಡ ಖರೀದಿಸಿದ ನಂತರ ಸಾಲ ಹೆಚ್ಚಾಯಿತು. ಸ್ವಂತ ವ್ಯವಹಾರ ಕೈಗೆ ಹತ್ತಲಿಲ್ಲ. ಈ ಹಂತದಲ್ಲಿಯೇ ಅವರಿಗೆ ಹೋಟೆಲ್ ಆರಂಭಿಸುವ ಐಡಿಯಾ ಬಂದಿದ್ದು. ಈ ಕಥೆಯೂ ರೋಚಕವಾಗಿದೆ.
ಹೋಟೆಲ್ ಐಡಿಯಾ
‘ಚೆನ್ನೈನ ಕೆ.ಕೆ.ನಗರದಲ್ಲಿ ಒಂದೂ ಒಳ್ಳೇ ಹೋಟೆಲ್ ಇಲ್ಲ ಊಟ ಮಾಡಬೇಕು ಅಂದ್ರೆ ಟಿ.ನಗರ್‌ಗೆ ಹೋಗಬೇಕು’ ಎಂದು ಸೇಲ್ಸ್‌ಮನ್ ಒಬ್ಬರು 1979ರಲ್ಲಿ ರಾಜಗೋಪಾಲ್ ಬಳಿ ಅಲವತ್ತುಕೊಂಡಿದ್ದರು. ಇದಾದ ಕೆಲ ದಿನಗಳ ನಂತರ ತಿರುಪತಿಗೆ ಹೋಗಿದ್ದಾಗ ಅಲ್ಲಿ ಪ್ರಸಾದ ತಿನ್ನುವಾಗ ರಾಜಗೋಪಾಲ್‌ಗೆ ಸ್ವಂತ ಹೋಟೆಲ್ ಆರಂಭಿಸುವ ಐಡಿಯಾ ಹೊಳೆಯಿತಂತೆ. ನಷ್ಟದಲ್ಲಿದ್ದ ಚಿಲ್ಲರೆ ಅಂಗಡಿ ವ್ಯವಹಾರ ಬರ್ಖಾಸ್ತುಗೊಳಿಸಿದ ರಾಜಗೋಪಾಲ್, ನಷ್ಟದಲ್ಲಿಯೇ ನಡೆಯುತ್ತಿದ್ದ ’ಕಾಮಾಕ್ಷಿ ಭವನ್’ ಖರೀದಿಸಿದರು. ನಾಮಫಲಕವನ್ನು ‘ಶರವಣ ಭವನ್’ ಎಂದು ಬದಲಿಸಿ, ಗೆಳೆಯ ಗಣಪತಿ ಅಯ್ಯರ್ ಜೊತೆಗೂಡಿ ಗಲ್ಲಾಪೆಟ್ಟಿಗೆ ಕುಳಿತಾಗ ಕ್ಯಾಲೆಂಡರ್ 1981ರ ಡಿಸೆಂಬರ್ 14 ತೋರುತ್ತಿತ್ತು. ಮುಂದೆ ಅದೇ ರೆಸ್ಟೊರೆಂಟ್ ಭಾರತದಲ್ಲಿ 33, ವಿದೇಶಗಳಲ್ಲಿ 47 ಶಾಖೆಗಳೊಂದಿಗೆ ಅಗಾಧವಾಗಿ ಬೆಳೆಯಿತು. ಈ ಕಥೆಯನ್ನು ರಾಜಗೋಪಾಲ್ ತಮ್ಮ ಆತ್ಮಕಥೆ ‘ಐ ಸೆಟ್ ಮೈ ಹಾರ್ಟ್ ಆನ್ ವಿಕ್ಟರಿ’ ಕಥೆಯಲ್ಲಿ ಸೊಗಸಾಗಿ ಹೇಳಿಕೊಂಡಿದ್ದಾರೆ.
ಆತ್ಮಕಥೆಯ ಪ್ರಕಾರ ರಾಜಗೋಪಾಲ್ ಮತ್ತು ಅವರ ಗೆಳೆಯ ಗಣಪತಿ ಅಯ್ಯರ್ ಹೋಟೆಲ್ ಆರಂಭಿಸುವ ಮೊದಲು ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದರು. ‘ನಿಮ್ಮ ಭವಿಷ್ಯದಲ್ಲಿ ಸಮೃದ್ಧಿಯೇ ತುಂಬಿದೆ. ಅಗ್ನಿಯೊಂದಿಗಿನ ವ್ಯವಹಾರ ಮುಂದುವರಿಸಿ’ ಎಂದು ಜ್ಯೋತಿಷಿ ಭರವಸೆ ಹುಟ್ಟಿಸಿದ್ದರು. ಹೋಟೆಲ್‌ನ ಆರಂಭದ ದಿನಗಳಲ್ಲಿ ರಾಜಗೋಪಾಲ್ ಮತ್ತು ಗಣಪತಿ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಕೆಲಸ ಮಾಡುತ್ತಿದ್ದರು. ರಾಜಗೋಪಾಲ್‌ರ ಮೊದಲ ಪತ್ನಿ ವಲ್ಲಿ (ಶಿವಕುಮಾರ್ ಮತ್ತು ಶರವಣನ್ ತಾಯಿ) ಉದ್ಯಮದ ಬೆನ್ನೆಲುಬಾಗಿದ್ದರು. ಉದ್ಯಮ ಆರಂಭವಾಗಿ ಒಂದು ವರ್ಷವಾಗುವ ಹೊತ್ತಿಗೆ ₹5ರ ದರದ 23 ಆಹಾರ ಪದಾರ್ಥಗಳು ಮೆನುವಿನಲ್ಲಿದ್ದವು.
ಅಂದು ಚೆನ್ನೈನಲ್ಲಿ ಶೋಕಿಗಾಗಿ ಹೋಟೆಲ್‌ನಲ್ಲಿ ಊಟ ಮಾಡುವವರ ಸಂಖ್ಯೆ ಅಷ್ಟಾಗಿ ಇರಲಿಲ್ಲ. ‘ಹೊತ್ತಿಗಿಷ್ಟು ಸಿಕ್ಕರೆ ಸಾಕು, ಹೊಟ್ಟೆ ತುಂಬಿಸಿಕೊಳ್ಳಬೇಕು’ ಎನ್ನುವ ಅನಿವಾರ್ಯತೆಗಾಗಿ ಸಾಕಷ್ಟು ಜನರು ಹೋಟೆಲ್‌ಗಳಿಗೆ ತಡಕಾಗುತ್ತಿದ್ದ ಕಾಲ. ಪರಿಸ್ಥಿತಿ ಅರ್ಥ ಮಾಡಿಕೊಂಡ ರಾಜಗೋಪಾಲ್ ಗುಣಮಟ್ಟದಲ್ಲಿ ರಾಜಿಯಾಗದೆ ತಿಂಡಿಗಳ ಬೆಲೆ ಇಳಿಸಿಬಿಟ್ಟರು. ‘ನಮ್ಮ ಹೋಟೆಲ್‌ನಲ್ಲಿ ಯಾವುದೇ ತಿಂಡಿ ಖರೀದಿಸಿದರೂ ಕೇವಲ ₹1’ ಎಂದು ಘೋಷಿಸಿದರು.ಅಂದಿನ ದಿನಗಳಲ್ಲಿ ರಾಜಗೋಪಾಲ್‌ಗೆ ತಿಂಗಳಿಗೆ ₹10 ಸಾವಿರ ನಷ್ಟವಾಗುತ್ತಂತೆ. ಆದರೆ ಕಾಲಕ್ರಮೇಣ ಆ ನಷ್ಟದ ಬಡ್ಡಿ–ಚಕ್ರಬಡ್ಡಿಯನ್ನೂ ಮೀರಿದ ಲಾಭ ಮೇಳೈಸಿತು.
2000ನೇ ಇಸವಿಯ ಹೊತ್ತಿಗೆ ಚೆನ್ನೈನಲ್ಲಿ 10 ಮತ್ತು ಕಾಂಚಿಪುರಂನಲ್ಲಿ ಒಂದು ಶರವಣ ಭವನ ಶಾಖೆ ಆರಂಭವಾಗಿತ್ತು. ದುಬೈನಲ್ಲಿ ಮೊದಲ ವಿದೇಶಿ ಶಾಖೆ ಆರಂಭಿಸಿದರು. ಚೆನ್ನೈನಲ್ಲಿ ‘ಊಟ ತಯಾರಿದೆ’ ಫಲಕಗಳ ಮೂಲಕ ಮನೆಮಾತಾದ ಶರವಣ ಭವನದ 48ನೇ ಶಾಖೆ ಸಿಂಗಪುರದಲ್ಲಿ ಆರಂಭವಾಯಿತು. ಕಾಲಾನುಕ್ರಮದಲ್ಲಿ ಮದ್ರಾಸ್ ರೋಟರಿ ಕ್ಲಬ್‌ನ ‘ಅತ್ಯುತ್ತಮ ಉದ್ಯೋಗದಾತ–ಕಾರ್ಮಿಕ ಸ್ನೇಹಿ ಉದ್ಯಮಿ’ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳು ರಾಜಗೋಪಾಲ್‌ರನ್ನು ಅರಸಿ ಬಂದವು.
ಕಾರ್ಮಿಕ ಸ್ನೇಹಿ ಉದ್ಯಮಿ
ಶರವಣ ಭವನದ ಯಶಸ್ಸಿಗೆ ಬೆನ್ನೆಲುಬಾಗಿ ನಿಂತವರು ಹಗಲಿರುಳು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ ನಿಷ್ಠ ಕಾರ್ಮಿಕರು. ಗುಣಮಟ್ಟ ಮತ್ತು ಬೆಲೆಯ ಕಡೆಗೆ ಗಮನ ನೀಡಿದ ರಾಜಗೋಪಾಲ್ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಚೌಕಾಸಿ ಮಾಡಲಿಲ್ಲ. ಪ್ಲೇಟ್ ಮೇಲೆ ಬಾಳೆಎಲೆ ಹಾಕಿ ತಿಂಡಿ, ಊಟ ಕೊಡುವ ಪರಿಪಾಠ ಆರಂಭಿಸಿದರು. ಈ ಪ್ರಯೋಗದಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಆಯಿತು. ಒಂದೆಡೆ ಮತ್ತೊಬ್ಬರು ತಿಂದುಬಿಟ್ಟ ಪ್ಲೇಟ್‌ಗಳಲ್ಲಿ ತಿನ್ನುತ್ತಿದ್ದೇವೆ ಎನ್ನುವ ಗ್ರಾಹಕರ ಇರಿಸುಮುರಿಸು ನಿವಾರಣೆಯಾಯಿತು. ಮತ್ತೊಂದೆಡೆ ಪ್ಲೇಟ್ ತೊಳೆಯಲು ಬೇಕಿದ್ದ ನೀರು ಮತ್ತು ಕಾರ್ಮಿಕರ ಶ್ರಮ, ಸಮಯದಲ್ಲಿ ಉಳಿತಾಯವಾಯಿತು.
ಹೋಟೆಲ್‌ನಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೆ ಉಚಿತ ಹೇರ್‌ಕಟ್ ಸೌಲಭ್ಯ ಕಲ್ಪಿಸಿದ ನಂತರ ಸರ್ವರ್‌ಗಳು ಲಕ್ಷಣವಾಗಿ ಕಾಣಿಸುತ್ತಿದ್ದರು. ಆಹಾರ ಪದಾರ್ಥಗಳಲ್ಲಿ ಕೂದಲು ಕಾಣಿಸಿಕೊಳ್ಳುವ ದೂರು ಅತಿ ಕಡಿಮೆ ಎನ್ನುವ ಮಟ್ಟಕ್ಕೆ ಮುಟ್ಟಿತು. ಎಲ್ಲ ನೌಕರರು ಉತ್ತಮ ಬಟ್ಟೆ ಹಾಕಬೇಕು, ಡ್ಯೂಟಿ ಮೇಲಿದ್ದಾಗ ನೀಟ್ ಆಗಿರಬೇಕು, ತಡರಾತ್ರಿ ಷೋಗಳಲ್ಲಿ ಸಿನಿಮಾ ನೋಡಬಾರದು ಎನ್ನುವ ನಿಯಮಗಳು ಶರವಣ ಭವನದಲ್ಲಿತ್ತು. ಹಿಂದಿನ ರಾತ್ರಿ ನಿದ್ದೆಗೆಟ್ಟು ಸಿನಿಮಾ ನೋಡಿದವರು ಮಾರನೇ ದಿನ ಗಮನಕೊಟ್ಟು ಕೆಲಸ ಮಾಡುವುದಿಲ್ಲ ಎನ್ನುವುದು ರಾಜಗೋಪಾಲ್ ತರ್ಕ.
ನೌಕರರಿಗೆ ಉಚಿತ ವಸತಿ ಸೌಲಭ್ಯದೊಂದಿಗೆ ಆ ಕಾಲಕ್ಕೆ ಅತ್ಯುತ್ತಮ ಎನ್ನುವಂಥ ವೇತನ, ಹಳ್ಳಿಗಳಲ್ಲಿ ಕುಟುಂಬ ಬಿಟ್ಟು ಬಂದ ನೌಕರರಿಗೆ ವರ್ಷಕ್ಕೊಮ್ಮೆ ಊರಿಗೆ ಹೋಗಲು ವಿಶೇಷ ರಜೆ, ವಿಶೇಷ ಭತ್ಯೆ, ವಿವಾಹಿತ ನೌಕರರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಹಾಯ, ಯಾವುದೇ ನೌಕರ ಕಾಯಿಲೆಯಿಂದ ಬಳಲಿದರೆ– ಅವನ ಆರೈಕೆಗೆ ಸಿಬ್ಬಂದಿಯನ್ನು ಕಳಿಸಿಕೊಡುವ ವ್ಯವಸ್ಥೆ... ಹೀಗೆ ಶರವಣ ಭವನದ ನೌಕರ ಸ್ನೇಹಿ ವಾತಾವರಣವೂ ಜರನ ಗಮನ ಸೆಳೆದಿತ್ತು. ‘ನೌಕರ ಚೆನ್ನಾಗಿ ಕೆಲಸ ಮಾಡಬೇಕು ಅಂದರೆ ಅವನು ಖುಷಿಯಾಗಿರಬೇಕು, ಅವನ ಕುಟುಂಬ ನೆಮ್ಮದಿಯಾಗಿರಬೇಕು’ ಎನ್ನುವುದು ರಾಜಗೋಪಾಲ್‌ರ ವ್ಯಾವಹಾರಿಕ ತತ್ವ. ಇದೇ ಕಾರಣಕ್ಕೆ ರಾಜಗೋಪಾಲ್‌ರನ್ನು ಹೋಟೆಲ್‌ನಲ್ಲಿ ಕೆಲಸ ಮಾಡುವವರು ‘ಅಣ್ಣಾಚಿ’ (ಹಿರಿಯಣ್ಣ) ಎಂದು ಕೊಂಡಾಡುತ್ತಿದ್ದರು.
ಹಬ್ಬಿತು ಬಿಳಲು
ಚೆನ್ನೈ ಸೆರಗಿನಲ್ಲಿರುವ ವಡಪಳನಿಯ ಮುರುಗ ರಾಜಗೋಪಾಲ್‌ರ ಆರಾಧ್ಯದೈವ. ಈ ದೇಗುಲದ ಅಭಿವೃದ್ಧಿಗೂ ರಾಜಗೋಪಾಲ್‌ರ ಉದ್ಯಮ ವಿಸ್ತಾರಕ್ಕೂ ನಂಟಿರುವುದು ವಿಶೇಷ. ಒಂದಾನೊಂದು ಕಾಲದ ಸಣ್ಣ ದೇಗುಲ ಇಂದು ಅಗಾಧವಾಗಿ ಬೆಳೆದು ನಿಂತಿದೆ. ಅಲ್ಲಿರುವ ಜನರು ಇದು ‘ಉದ್ಯಮಿಯೊಬ್ಬರ ಕೊಡುಗೈ ದಾನದ ಫಲ’ ಎಂದು ಹೇಳುತ್ತಾರೆ. ರಾಜಗೋಪಾಲ್‌ಗೆ ಈ ಶಕ್ತಿ ತುಂಬಿದ್ದು ಪ್ರತಿದಿನ ಅವರ ಹೋಟೆಲ್‌ಗಳಲ್ಲಿ ತಿಂಡಿ ತಿನ್ನುವ, ಊಟ ಮಾಡುವ ಲಕ್ಷಾಂತರ (ಸು 1.5 ಲಕ್ಷ) ಗ್ರಾಹಕರು. ಚೆನ್ನೈನಲ್ಲಿ 19, ಕಾಂಚೀಪುರಂನಲ್ಲಿ 2, ವೆಲ್ಲೂರಿನಲ್ಲಿ ಒಂದು, ದೆಹಲಿಯಲ್ಲಿ ಮೂರು ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 48 ಹೋಟೆಲ್‌ಗಳನ್ನು ಶರವಣ ಭವನ ನಡೆಸುತ್ತಿದೆ. ಅಮೆರಿಕ, ಬ್ರಿಟನ್, ಕೆನಡಾ, ಮಲೇಷಿಯಾ, ಸಿಂಗಪುರ, ದುಬೈ ಮತ್ತು ಒಮಾನ್‌ಗಳಲ್ಲಿ ಶರವಣ ಭವನದ ಒಟ್ಟು 23 ವಿದೇಶಿ ಶಾಖೆಗಳಿವೆ. ಆದಾಯದ ಮಾಹಿತಿ ಸುಲಭಕ್ಕೆ ಸಿಗುವುದಿಲ್ಲ. ದಿನಕ್ಕೆ ಒಂದು ₹1 ಕೋಟಿ ವಹಿವಾಟುಇರಬಹುದು ಎಂದು ‘ಔಟ್‌ಲುಕ್’ ವಾರಪತ್ರಿಕೆ 2009ರಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿತ್ತು.
ಶರವಣ ಭವನದಲ್ಲಿ ಸಿಗುವ ಖಾದ್ಯಗಳ ಪಟ್ಟಿ ಸುಮಾರು 350. ಹೋಟೆಲ್‌ಗಳಲ್ಲಿ ದಿನವಿಡೀ ಜನಸಂದಣಿ ಕಡಿಮೆಯಾಗುವುದೇ ಇಲ್ಲ. ಪಾರ್ಸೆಲ್, ಹೋಂ ಡೆಲಿವರಿ ಮತ್ತು ಕ್ಯಾಟರಿಂಗ್ ಸೌಲಭ್ಯವೂ ಲಭ್ಯ. ‘ಶರವಣ ಭವನದಲ್ಲಿ ಸಿಗುವ ಇಡ್ಲಿಯ ಮೃದುತ್ವ, ದೋಸೆಯ ಗರಿಗರಿ ಸ್ವಭಾವ, ಚಟ್ನಿಯ ಮಾಧುರ್ಯಕ್ಕೆ ಹೋಲಿಕೆಯೇ ಇಲ್ಲ’ ಎಂದು ಕೊಂಡಾಡುತ್ತಾರೆ ಗ್ರಾಹಕರು. ಚೆನ್ನೈನ ಕೆ.ಕೆ.ನಗರದ ಶರವಣ ಭವನದಲ್ಲಿ ತಿನ್ನುವ ಇಡ್ಲಿಗೂ, ಕ್ಯಾಲಿಫೋರ್ನಿಯಾದ ಶರಣವ ಭವನ ಶಾಖೆಯಲ್ಲಿ ತಿನ್ನುವ ಇಡ್ಲಿಗೂ ರುಚಿಯಲ್ಲಿ ಇಷ್ಟಾದರೂ ವ್ಯತ್ಯಾಸವಿರಲು ಸಾಧ್ಯವೇ ಇಲ್ಲ ಎನ್ನುವಂತೆ ರುಚಿ ಕಾಪಾಡಲು ಗಮನ ನೀಡುವುದು ವಿಶೇಷ. ಶುರವಾದ ದಿನದಿಂದಲೂ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಆದರೆ ಬೆಲೆ ಮಾತ್ರ ಹಾಗೆಯೇ ಉಳಿದಿಲ್ಲ. ಅದರ ಈಚೆಗೆ ಗ್ರಾಹಕರು ಬೆಲೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ.
ಇಳಿಗಾಲ
ವ್ಯಾಪಾರ ಬೆಳೆದು ಬದುಕು ಬೆಳಗುತ್ತಿದ್ದ ಹಂತದಲ್ಲಿಯೇ ದುರಂತದ ಇಳಿತವೂ ಶುರುವಾಗಿದ್ದು ಈ ರಾಜ್‌ಗೋಪಾಲ್ ಬದುಕಿನ ವೈಚಿತ್ರ್ಯ. ಅತ್ಯಾಸೆ ಮತ್ತು ಮತ್ತೊಬ್ಬರ ಹೆಂಡತಿಯ ಮೇಲೆ ಕಣ್ಣುಹಾಕುವ ಪ್ರವೃತ್ತಿ ರಾಜಗೋಪಾಲ್ ವ್ಯಕ್ತಿತ್ವಕ್ಕೆ ಅಂಟಿದ ಕಳಂಕ. ತನ್ನ ಕೈಕೆಳಗಿನ ನೌಕರನ ಪತ್ನಿಯಾಗಿದ್ದ ಕೃತ್ತಿಕಾಳನ್ನು ಎರಡನೇ ಮದುವೆ ಮಾಡಿಕೊಂಡ ರಾಜಗೋಪಾಲ್, ಮತ್ತೊಬ್ಬ ನೌಕರ ರಾಮಸ್ವಾಮಿಯ ಮಗಳು ಜೀವಜ್ಯೋತಿಯ ಮೇಲೆ ಕಣ್ಣು ಹಾಕಿದ್ದ. ‘ನಿನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರನ ಮಗಳನ್ನು ಮದುವೆಯಾದರೆ ಊಹಿಸದಷ್ಟು ಸಂಪತ್ತು ನಿನ್ನದಾಗುತ್ತೆ’ ಎಂದ ಜ್ಯೋತಿಷಿಯ ಮಾತು ಈ ದುಸ್ಸಾಹಸಕ್ಕೆ ಒಂದು ನೆಪವಾಯಿತು.
ಆಹೊತ್ತಿಗಾಗಲೇ ಜೀವಜ್ಯೋತಿ ತನ್ನ ಅಣ್ಣನಿಗೆ ಗಣಿತ ಪಾಠ ಮಾಡುತ್ತಿದ್ದ ಪ್ರಿನ್ಸ್ ಶಾಂತಕುಮಾರ್‌ನ ಪ್ರೇಯಸಿಯಾಗಿದ್ದಳು. ಈ ಶಾಂತಕುಮಾರ್ ಸಹ ರಾಜಗೋಪಾಲ್‌ನ ನೌಕರನೇ ಆಗಿದ್ದ. ತನ್ನನ್ನು ಮದುವೆಯಾಗುವಂತೆ ಜೀವಜ್ಯೋತಿಯನ್ನು ರಾಜಗೋಪಾಲ್ ಒಂದೇ ಸಮನೆ ಪೀಡಿಸಲು ಆರಂಭಿಸಿದ. ಒತ್ತಡದ ಪ್ರಸ್ತಾವಗಳನ್ನು ದಿಟ್ಟತನದಿಂದ ನಿರಾಕರಿಸಿದ ಜೀವಜ್ಯೋತಿ ತಾನು ಇಷ್ಟಪಟ್ಟಿದ್ದ ಹುಡುಗನನ್ನೇ ಮದುವೆಯಾದಳು. ರಾಜಗೋಪಾಲ್‌ರ ಆಸೆ, ಸಿಟ್ಟು ಕಡಿಮೆಯಾಗಿ ಎಲ್ಲವೂ ಒಂದು ಹಂತಕ್ಕೆ ಬಂತು ಎಂದುಕೊಳ್ಳುವ ಹೊತ್ತಿಗೆ ಜೀವಜ್ಯೋತಿಯ ತಾಯಿ ರಾಜಗೋಪಾಲ್‌ನನ್ನು ಭೇಟಿಯಾಗಿ ಸಹಾಯ ಯಾಚಿಸಿದ್ದಳು. ಟ್ರಾವೆಲ್ ಏಜೆನ್ಸಿ ಅರಂಭಿಸಲು ಮಗಳು–ಅಳಿಯ ಮಾಡುತ್ತಿರುವ ಬ್ಯಾಂಕ್ ಸಾಲಕ್ಕೆ ಜಾಮೀನು ನೀಡಬೇಕು ಎನ್ನುವುದು ಆಕೆಯ ಕೋರಿಕೆಯಾಗಿತ್ತು. ಈ ಪ್ರಸಂಗದ ನಂತರ ರಾಜಗೋಪಾಲ್ ಮನಸ್ಸಿನಲ್ಲಿ ಮತ್ತೆ ಜೀವಜ್ಯೋತಿ ನಿಂತುಬಿಟ್ಟಳು.
‘ಗಂಡನಿಗೆ ಡೈವೋರ್ಸ್ ಕೊಟ್ಟು ನನ್ನನ್ನು ಮದುವೆಯಾಗು’ ಎಂದು ಪೀಡಿಸುತ್ತಿದ್ದ. ತನ್ನ ಎಂಟು ಬಾಡಿಗೆ ಬಂಟರನ್ನು ಕಳಿಸಿ 2001ರ ಅಕ್ಟೋಬರ್‌ನಲ್ಲಿ ಕಳಿಸಿ ಜೀವಜ್ಯೋತಿಯ ಗಂಡ ಶಾಂತಕುಮಾರರನ್ನು ಅಪಹರಿಸಿ, ಕೊಲ್ಲಿಸಿದ. ಕೊಳೆತ ಸ್ಥಿತಿಯಲ್ಲಿದ್ದ ದೇಹ ಕೊಡೈಕೆನಾನ್‌ಲ್ಲಿ ಪತ್ತೆಯಾಗಿತ್ತು. ರಾಜಗೋಪಾಲ್ ಮತ್ತು ಅವನ ಕೆಲ ಬಂಟರು ನವೆಂಬರ್‌ನಲ್ಲಿ ಪೊಲೀಸರಿಗೆ ಶರಣಾದರು.ಜುಲೈ 2003ರಲ್ಲಿ ಜಾಮೀನು ಪಡೆದು ಹೊರಬಂದ ರಾಜಗೋಪಾಲ್ ನಾಗಪಟ್ಟಿಣಂ ಜಿಲ್ಲೆಯ ವೇದಾರಣ್ಯಂನಲ್ಲಿದ್ದ ಜೀವಜ್ಯೋತಿಯನ್ನು ಭೇಟಿಯಾಗಿ ‘ನನ್ನನ್ನು ಮದುವೆಯಾದರೆ ₹6 ಲಕ್ಷ ನಗದು ಮತ್ತು ಸಾಕಷ್ಟು ಚಿನ್ನಾಭರಣ ಸಿಗುತ್ತೆ’ ಎಂದು ಆಮಿಷವೊಡ್ಡಿದ. ಆಕೆ ನಿರಾಕರಿಸಿದಾಗ ಅಪಹರಿಸುವ ಬೆದರಿಕೆ ಹಾಕಿದ. ಪೊಲೀಸರು ಮತ್ತೆ ಆತನನ್ನು ಬಂಧಿಸಿದರು.ಏಪ್ರಿಲ್ 2004ರಲ್ಲಿ ಪೂನಮಲ್ಲೀ ಸೆಷನ್ಸ್ ನ್ಯಾಯಾಲಯವು ರಾಜಗೋಪಾಲ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು.
ಮತ್ತೊಮ್ಮೆ ಜಾಮೀನು ಪಡೆದುಕೊಂಡ ರಾಜಗೋಪಾಲ್ ಹೈಕೋರ್ಟ್‌ಗೆ ಮೇಲ್ಮನವಿ ಹಾಕಿದ. ವಿಚಾರಣಾ ನ್ಯಾಯಾಲಯದ ತೀರ್ಪನ್ನೇ ಹೈಕೋರ್ಟ್ ಎತ್ತಿಹಿಡಿಯಿತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಹೈಕೋರ್ಟ್ ವಿಧಿಸಿದ್ದ ದಂಡನೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯುವುದರಿಂದ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ.
ಅಂದ ಹಾಗೆ ಮತ್ತೊಂದು ಮಾತು, ಶರವಣ ಭವನದ ಎಂಟು ಅಂತರರಾಷ್ಟ್ರೀಯ ಶಾಖೆಗಳು ಶೀಘ್ರ ಆರಂಭವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.