ADVERTISEMENT

ಆಳ–ಅಗಲ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಟ್ಯಾಬ್ಲೊಗಳು ಸ್ತಬ್ಧ

ಜಯಸಿಂಹ ಆರ್.
Published 18 ಜನವರಿ 2022, 19:45 IST
Last Updated 18 ಜನವರಿ 2022, 19:45 IST
2020ರ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಕರ್ನಾಟಕದ ಸ್ತಬ್ಧ ಚಿತ್ರದ ಅಂತಿಮ ತಾಲೀಮಿನ ದೃಶ್ಯ ಪಿಟಿಐ ಚಿತ್ರ
2020ರ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಕರ್ನಾಟಕದ ಸ್ತಬ್ಧ ಚಿತ್ರದ ಅಂತಿಮ ತಾಲೀಮಿನ ದೃಶ್ಯ ಪಿಟಿಐ ಚಿತ್ರ   

ದೆಹಲಿಯ ರಾಜಪಥದಲ್ಲಿ ಪ್ರತೀ ವರ್ಷದ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಮೆರುಗು ತುಂಬುವ ಸ್ತಬ್ಧಚಿತ್ರಗಳು ಈ ಬಾರಿ ವಿವಾದದ ಕೇಂದ್ರಬಿಂದು ಆಗಿವೆ. ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಪ್ರದರ್ಶಿಸಲು ಉದ್ದೇಶಿಸಿದ್ದ ಸ್ತಬ್ಧ ಚಿತ್ರಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಸ್ತಬ್ಧಚಿತ್ರಗಳ ಆಯ್ಕೆ ಹಾಗೂ ತಿರಸ್ಕಾರ ವಿಚಾರದಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪ ಇರುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಸಂಗೀತ, ಕಲೆ, ಚಿತ್ರಕಲೆ, ಶಿಲ್ಪಕಲೆ, ನೃತ್ಯ ಮೊದಲಾದ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಗಣ್ಯರನ್ನು ಒಳಗೊಂಡ ಸಮಿತಿಯು ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಕೇಂದ್ರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುವ ಈ ಸಮಿತಿಯು ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿರುತ್ತದೆ.ಮೂಲಗಳ ಪ್ರಕಾರ, 2022ರ ಗಣರಾಜ್ಯೋತ್ಸವಕ್ಕೆ 56 ಸ್ತಬ್ಧಚಿತ್ರಗಳ ಪ್ರಸ್ತಾವ ಬಂದಿತ್ತು. ಈ ಪೈಕಿ 21 ಸ್ತಬ್ಧಚಿತ್ರಗಳನ್ನು ಸಮಿತಿ ಆಯ್ಕೆ ಮಾಡಿದೆ. ಉಳಿದ ಸ್ತಬ್ಧಚಿತ್ರಗಳು ತಿರಸ್ಕೃತಗೊಂಡಿವೆ.

ಯಾವುದೇ ಕಾರಣ ಅಥವಾ ಸ್ಪಷ್ಟನೆ ನೀಡದೇ ಸ್ತಬ್ಧಚಿತ್ರ ಕೈಬಿಟ್ಟಿದ್ದಕ್ಕೆ ಆಘಾತವಾಗಿದೆ ಎಂದುಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರದ ಕ್ರಮಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ವಸ್ತುವಾಗುಳ್ಳ ಸ್ತಬ್ಧಚಿತ್ರ ತಿರಸ್ಕೃತಗೊಂಡಿರುವುದು ರಾಜ್ಯದ ಜನರಲ್ಲಿ ತೀವ್ರ ನೋವು ಉಂಟುಮಾಡಿದ್ದು, ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅವರು ಕೋರಿದ್ದಾರೆ.

ADVERTISEMENT

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಹ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ವಸ್ತುವಾಗಿ ಇರಿಸಿಕೊಂಡು ಸಿದ್ಧಪಡಿಸಲಾದ ಸ್ತಬ್ಧಚಿತ್ರ ತಿರಸ್ಕರಿಸಿರುವುದು ಸರಿಯಲ್ಲ ಎಂದು ದೂರಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ತಮಿಳುನಾಡಿದ ಜನರ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ. ಕೇರಳ ರಾಜ್ಯದ ಸ್ತಬ್ಧಚಿತ್ರವನ್ನೂ ಈ ಬಾರಿ ಕೈಬಿಡಲಾಗಿದೆ. ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಬಿಂಬಿಸುವ ಉದ್ದೇಶದಿಂದ ರಾಜ್ಯ ಸಿದ್ಧಪಡಿಸಿದ್ದ ಸ್ತಬ್ಧಚಿತ್ರವು ಸಹ ಸಮಿತಿಯ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ. ಇದು ಕೇರಳ ಹಾಗೂ ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣ ಗುರು ಬದಲಾಗಿ ಆದಿ ಶಂಕರಾಚಾರ್ಯರ ಸ್ತಬ್ಧಚಿತ್ರವನ್ನು ರೂಪಿಸುವಂತೆ ಸಮಿತಿ ಸೂಚಿಸಿತ್ತು ಎನ್ನಲಾಗಿದೆ.

ಕೇಂದ್ರದ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿರುವ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ, ಇದು ನಾರಾಯಣ ಗುರು ಅವರಿಗೆ ಮಾಡಿದ ಅಪಮಾನ ಎಂದು ಉಲ್ಲೇಖಿಸಿದ್ದಾರೆ.ದಾರ್ಶನಿಕ ಗುರುಗಳ ವಿರುದ್ಧವಾಗಿ ಕೇಂದ್ರ ಸರ್ಕಾರ ಏಕೆ ನಡೆದುಕೊಂಡಿದೆ ಎಂಬುದು ಗೊತ್ತಿಲ್ಲ. ಕೇರಳದ ಬಿಜೆಪಿ ಘಟಕವು ಕೇಂದ್ರದ ನಿರ್ಧಾರವನನ್ನು ಒಪ್ಪುತ್ತದೆಯೇ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಕರ್ನಾಟಕದ ರಾಜಕೀಯ ಮುಖಂಡರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ಅವರು ಸಹ ಕೇಂದ್ರದ ಕ್ರಮವನ್ನು ಖಂಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿಲುವು: ನಿರ್ಧಾರ ಮರುಪರಿಶೀಲಿಸುವಂತೆ ಕೋರಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ಮನವಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೋವಿಡ್ ಕಾರಣದಿಂದ ಈ ಬಾರಿ ಸ್ತಬ್ಧಚಿತ್ರಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, ಈ ಹಂತದಲ್ಲಿ ನಿರ್ಧಾರ ಮರುಪರಿಶೀಲನೆಯನ್ನು ಸಚಿವಾಲಯ ಒಪ್ಪಿಲ್ಲ.

ಈ ವಿಚಾರದಲ್ಲಿ ಕೆಟ್ಟ ರಾಜಕೀಯ ಬೆರೆಸುವುದನ್ನು ನಿಲ್ಲಿಸಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ‘ನೇತಾಜಿ ವಿಷಯ ಇಟ್ಟುಕೊಂಡಿದ್ದ ಕೇಂದ್ರ ಲೋಕೋಪಯೋಗಿ ಇಲಾಖೆಯ (ಸಿಪಿಡಬ್ಲ್ಯೂಡಿ) ಸ್ತಬ್ಧಚಿತ್ರ ಆಯ್ಕೆಯಾಗಿದೆ ಎಂದು ಪಶ್ಚಿಮ ಬಂಗಾಳದ ಆರೋಪಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಜ್ಯಗಳ ನಡುವೆ ತಾರತಮ್ಯ ಮಾಡಿಲ್ಲ. 2018 ಮತ್ತು 2021ರಲ್ಲಿ ಕೇರಳ, 2016, 2017, 2019, 2020, 2021ರಲ್ಲಿ ತಮಿಳುನಾಡು ಹಾಗೂ 2016, 2017, 2019, 2021ರಲ್ಲಿ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ’ ಎಂದು ವಿವರಣೆ ನೀಡಿದ್ದಾರೆ.

***

ಪಶ್ಚಿಮ ಬಂಗಾಳ: ಸ್ವಾತಂತ್ರ್ಯ ಹೋರಾಟಗಾರ,ಪಶ್ಚಿಮ ಬಂಗಾಳದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮಶತಮಾನೋತ್ಸವ ಹಾಗೂಅವರು ಸ್ಥಾಪಿಸಿದ್ದ ಐಎನ್‌ಎ ಕೊಡುಗೆಗಳನ್ನು ಸ್ಮರಿಸುವುದಕ್ಕಾಗಿ ಸ್ತಬ್ಧಚಿತ್ರ ಸಿದ್ಧಪಡಿಸಲಾಗಿತ್ತು. ನೇತಾಜಿಯವರನ್ನು ಮುಖ್ಯವಾಗಿ ಇರಿಸಿಕೊಂಡು ರಾಜ್ಯದ ಇತರ ಗಣ್ಯರಾದ ಈಶ್ವರಚಂದ್ರ ವಿದ್ಯಾಸಾಗರ್, ರವೀಂದ್ರನಾಥ ಟ್ಯಾಗೋರ್, ಬಿರ್ಸಾ ಮುಂಡಾ ಮೊದಲಾದ ದೇಶಭಕ್ತರನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿತ್ತು ಎಂದು ಪಶ್ಚಿಮ ಬಂಗಾಳ ವಾದ ಮಂಡಿಸಿದೆ.

ತಮಿಳುನಾಡು: ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣವನ್ನು ಕಟ್ಟಿಕೊಡುವ ಸ್ತಬ್ಧಚಿತ್ರವನ್ನು ರಾಜ್ಯ ಸಿದ್ಧಪಡಿಸಿತ್ತು ಎನ್ನಲಾಗಿದೆ.

ಕೇರಳ: ಜಟಾಯು ಪಾರ್ಕ್‌ ಮತ್ತು ನಾರಾಯಣ ಗುರುಗಳ ಪ್ರತಿಮೆಯನ್ನು ಕೇರಳದ ಸ್ತಬ್ಧಚಿತ್ರ ಹೊಂದಿತ್ತು. ಮಹಿಳಾ ಸಬಲೀಕರಣದ ಸಂದೇಶವನ್ನು ತಿಳಿಸುವ ಕುಟುಂಬಶ್ರೀ ಮಾದರಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿತ್ತು. ‌ಮುಂಚೂಣಿಯಲ್ಲಿ ನಾರಾಯಣ ಗುರುವಿನ ಪ್ರತಿಮೆಯನ್ನು ಇರಿಸಲು ಉದ್ದೇಶಿಸಲಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ, ‘ವಿವಿಧ ಕ್ಷೇತ್ರಗಳ ಸಾಧನೆಗಳು’ ಎಂಬ ಥೀಮ್‌ ಅಡಿಯಲ್ಲಿ ರಚಿಸಲಾಗಿತ್ತು. ಮೊದಲ ಐದು ಸುತ್ತಿನ ಸಭೆಗಳಲ್ಲಿ ಈ ಸ್ತಬ್ಧಚಿತ್ರಕ್ಕೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿತ್ತು. ಡಿ.18ರಂದು ನಡೆದ ಕೊನೆಯ ಸುತ್ತಿನಲ್ಲಿ ಈ ಸ್ತಬ್ಧಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಸೂಚಿಸಲಾಗಿತ್ತು. ಆದರೆ, ಆಯ್ಕೆಯಾದ 12 ರಾಜ್ಯಗಳ ಸ್ತಬ್ಧಚಿತ್ರಗಳ ಪಟ್ಟಿಯಲ್ಲಿ ರಾಜ್ಯವನ್ನು ಕೈಬಿಡಲಾಗಿದೆ ಎಂದು ಕೇರಳ ಸರ್ಕಾರ ಆರೋಪಿಸಿದೆ.

***

ಆಯ್ಕೆ ಪ್ರಕ್ರಿಯೆ ಹೇಗೆ?

ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ನಡೆಯಲಿರುವ ಸ್ತಬ್ಧಚಿತ್ರಗಳ ಮೆರವಣಿಗೆಗೆ, ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆ ಹಿಂದಿನ ವರ್ಷದಿಂದಲೇ ಆರಂಭವಾಗುತ್ತದೆ. ಇದೇ 26ರಂದು ನಡೆಯಬೇಕಿರುವ ಮೆರವಣಿಗೆಗೆ ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆಗೆ 2021ರ ಸೆಪ್ಟೆಂಬರ್ 21ರಂದೇ ಚಾಲನೆ ನೀಡಲಾಗಿದೆ.

ಮೆರವಣಿಗೆಯಲ್ಲಿ ಭಾಗಿಯಾಗಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಹಲವು ಸಚಿವಾಲಯಗಳು ಲಿಖಿತ ಪ್ರಸ್ತಾವ ಸಲ್ಲಿಸುತ್ತವೆ. ಆದರೆ, ಇವುಗಳಲ್ಲಿ ಕೆಲವನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಸ್ತಬ್ಧಚಿತ್ರಗಳ ಆಯ್ಕೆಗೆ ರಕ್ಷಣಾ ಸಚಿವಾಲಯವು ತಜ್ಞರ ಆಯ್ಕೆ ಸಮಿತಿಯನ್ನು ರಚನೆ ಮಾಡುತ್ತದೆ. ಈ ಸಮಿತಿಯಲ್ಲಿ ಚಿತ್ರಕಾರರು, ಸಂಗೀತಗಾರರು, ಶಿಲ್ಪ ಕಲಾವಿದರು, ನೃತ್ಯ ಸಂಯೋಜಕರು ಮತ್ತು ಸಾಂಸ್ಕೃತಿಕ ತಜ್ಞರು ಇರುತ್ತಾರೆ. ಸರ್ಕಾರದ ಪರವಾಗಿ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ರಕ್ಷಣಾ ಸಚಿವಾಲಯದ ಅಧಿಸೂಚನೆಯಲ್ಲಿ ವಿವರಿಸಿಲ್ಲ. ಈ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಈ ಬಾರಿ ಆಯ್ಕೆ ಸಮಿತಿಯಲ್ಲಿ ಯಾರಿದ್ದಾರೆ ಎಂಬುದನ್ನೂ ಸಚಿವಾಲಯವು ಬಹಿರಂಗಪಡಿಸಿಲ್ಲ.

ಈ ಸಮಿತಿಗೆ ಬರುವ ಎಲ್ಲಾ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಲವನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಏಳು–ಎಂಟು ಹಂತದಲ್ಲಿ ನಡೆಯುತ್ತದೆ. ಆದರೆ ಇಷ್ಟೇ ಹಂತಗಳು ಇರಬೇಕು ಎಂಬ ನಿಯಮಗಳಿಲ್ಲ. ಒಂದೊಂದು ಹಂತದ ಸಭೆಯಲ್ಲಿ ಆಯಾ ಹಂತಕ್ಕೆ ಆಯ್ಕೆಯಾದ ಮಾದರಿಗಳ ಬಗ್ಗೆ ಚರ್ಚಸಿ, ಅಗತ್ಯವಿದ್ದರೆ ಬದಲಾವಣೆಗಳನ್ನು ಸೂಚಿಸಲಾಗುತ್ತದೆ. ಆ ಬದಲಾವಣೆಗಳು ಆ ವರ್ಷದ ‘ಥೀಮ್‌’ಗೆ ಪೂರಕವಾಗಿರಬೇಕು. ಥೀಮ್‌ಗೆ ಹೊಂದಿಕೆಯಾಗದ ಮಾದರಿಗಳನ್ನು ಕೈಬಿಡಲಾಗುತ್ತದೆ. ಹೀಗೆ ಕೈಬಿಟ್ಟ ಮಾದರಿಯನ್ನು ರೂಪಿಸಿದ ರಾಜ್ಯಗಳನ್ನು ಮುಂದಿನ ಸಭೆಗೆ ಕರೆಯುವುದಿಲ್ಲ.

ಲಿಖಿತ ಪ್ರಸ್ತಾವದ ನಂತರ ಅದೇ ಪ್ರಸ್ತಾವವನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸಬೇಕಾಗುತ್ತದೆ. ಸಮಿತಿಯು ಸೂಚಿಸಿದ್ದ ಬದಲಾವಣೆಗಳನ್ನು ಮಾಡಿಕೊಳ್ಳದೇ ಇದ್ದರೆ, ಅಂತಹ ಪ್ರಸ್ತಾವ ಅಥವಾ ಮಾದರಿಗಳನ್ನು ತಿರಸ್ಕರಿಸಲಾಗುತ್ತದೆ. ನಂತರದ ಹಂತದಲ್ಲಿ ಪ್ರಸ್ತಾವವನ್ನು ಸ್ತಬ್ಧಚಿತ್ರದ ಯಥಾವತ್ ಕಿರು ಪ್ರತಿಕೃತಿಯ ರೀತಿಯಲ್ಲಿ ಸಲ್ಲಿಸಬೇಕಾಗುತ್ತದೆ. ಈ ಪ್ರತಿಕೃತಿ ಪ್ರಸ್ತಾವದಲ್ಲಿರುವಂತೆ ಇಲ್ಲದೇ ಇದ್ದರೆ ತಿರಸ್ಕರಿಸಲಾಗುತ್ತದೆ. ಕೊನೆಯದಾಗಿ ಪೂರ್ಣ ಸ್ತಬ್ಧಚಿತ್ರವನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯ ಆಯ್ಕೆ ಸಮಿತಿಗೆ ಇದೆ. ಈ ಹಂತದಲ್ಲಿ ಆಯ್ಕೆಯಾದ ಸ್ತಬ್ಧಚಿತ್ರವು ಮೆರವಣಿಗೆಯಲ್ಲಿ ಭಾಗಿಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಕೊನೆಯ ಕ್ಷಣದಲ್ಲಿಯೂ ಸ್ತಬ್ಧಚಿತ್ರವು ಮೆರವಣಿಗೆಯಲ್ಲಿ ಭಾಗಿಯಾಗುವುದನ್ನು ತಡೆಯಲು ಅವಕಾಶವಿದೆ.

ಪ್ರಸ್ತಾವವನ್ನು ಅಥವಾ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ್ದಕ್ಕೆ ಆಯ್ಕೆ ಸಮಿತಿಯು ಯಾವುದೇ ವಿವರಣೆ ನೀಡಬೇಕಿಲ್ಲ.

***

ಥೀಮ್‌ ನಿಯಮ ಬದಲು

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳು ಯಾವ ವಿಷಯಗಳನ್ನು ಹೊಂದಿರಬೇಕು ಎಂದು ವಿವರಿಸುವ ಒಂದು ವಿಸ್ತೃತ ಥೀಮ್‌ ಅನ್ನು ರಕ್ಷಣಾ ಸಚಿವಾಲಯವು ಈ ಹಿಂದೆ ಸೂಚಿಸುತ್ತಿತ್ತು. ಈ ಮೊದಲು ಈ ಥೀಮ್‌ಗೆ ಯಾವುದೇ ಚೌಕಟ್ಟು ಇರಲಿಲ್ಲ. ರಾಜ್ಯದ ಇತಿಹಾಸ, ಸಂಸ್ಕೃತಿ, ಸಾಧನೆ, ಪರಿಸರವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳನ್ನು ರಚಿಸಬೇಕು ಎಂದಷ್ಟೇ ಸಚಿವಾಲಯವು ಹೇಳುತ್ತಿತ್ತು. ಆದರೆ ಈ ಬಾರಿ ಥೀಮ್‌ನ ನಿಯಮಗಳನ್ನು ಬದಲಿಸಲಾಗಿದೆ. ಈ ಬಾರಿ ಸಚಿವಾಲಯವೇ ಥೀಮ್‌ ಅನ್ನು ನಿಗದಿ ಮಾಡಿದೆ.

ಈ ವರ್ಷದ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಮೆರವಣಿಗೆಗೆ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ‘ಥೀಮ್‌’ ಆಗಿ ಆಯ್ಕೆ ಮಾಡಲಾಗಿದೆ. ‘ಭಾರತ@75, ಸ್ವಾತಂತ್ರ್ಯ ಹೋರಾಟ–ಸ್ವಾತಂತ್ರ್ಯದ ಪರಿಕಲ್ಪನೆ @75, ಸಾಧನೆಗಳು @75, ಕ್ರಮಗಳು @75, ಪರಿಹಾರ @75’ ಎಂದಷ್ಟೇ ಸ್ತಬ್ಧಚಿತ್ರದ ಥೀಮ್‌ ಅನ್ನು ಒಂದು ಸಾಲಿನಲ್ಲಿ ವಿವರಿಸಲಾಗಿದೆ.

ಈ ಹಿಂದಿನ ವರ್ಷಗಳ ಅಧಿಸೂಚನೆಯಲ್ಲಿ ಥೀಮ್‌ ಅನ್ನು ಸಂಕ್ಷಿಪ್ತವಾಗಿ ವಿವರಿಸಲಾಗುತ್ತಿತ್ತು. ಈ ವರ್ಷದ ಅಧಿಸೂಚನೆಯಲ್ಲಿ ಕೇವಲ ಒಂದೊಂದು ಪದಗಳಲ್ಲಿ ಥೀಮ್‌ ಅನ್ನು ಹೆಸರಿಸಲಾಗಿದೆ.

‘ಸ್ತಬ್ಧಚಿತ್ರಗಳಲ್ಲಿ ಏಕತಾನತೆ ಇರಬಾರದು ಎಂದು ವಿವಿಧ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ’ ಎಂದು ಸಚಿವಾಲಯವು ಅಧಿಸೂಚನೆಯಲ್ಲಿ ಹೇಳಿದೆ. ಆದರೆ ಈ ಹಿಂದೆ ಇರದಿದ್ದ ನಿಬಂಧನೆಗಳನ್ನು ಹೇರಿದೆ. ಜತೆಗೆ ಥೀಮ್‌ನ ವ್ಯಾಪ್ತಿಯನ್ನೂ ಕುಗ್ಗಿಸಿದೆ.

***

ತಾಂತ್ರಿಕ ನಿಬಂಧನೆಗಳು

lಸ್ತಬ್ಧಚಿತ್ರಗಳನ್ನು ಹೊರುವ ವಾಹನ ಟ್ರ್ಯಾಕ್ಟರ್ ಮತ್ತು ಒಂದು ಟ್ರೇಲರ್ ಮಾತ್ರವಾಗಿರಬೇಕು. ಅದೇ ಅಳತೆಯ ಬೇರೆ ವಾಹನಗಳನ್ನು ಬಳಸಿದರೂ, ಒಂದು ಸ್ತಬ್ಧಚಿತ್ರದಲ್ಲಿ ಬಳಕೆಯಾಗುವ ವಾಹನಗಳ ಸಂಖ್ಯೆ ಎರಡನ್ನು ಮೀರಬಾರದು

lಸ್ತಬ್ಧಚಿತ್ರಗಳಲ್ಲಿ ಪ್ರದರ್ಶನ ನೀಡುವ ಕಲಾವಿದರ ಸಂಖ್ಯೆ 10 ಅನ್ನು ಮೀರಬಾರದು

lಟ್ರೇಲರ್ ಮತ್ತು ಟ್ರ್ಯಾಕ್ಟರ್‌ನ ಉದ್ದ 24.8 ಅಡಿ ಮೀರಬಾರದು. ಅಗಲ 8 ಅಡಿ ಮೀರಬಾರದು. ಎತ್ತರ 4.2 ಅಡಿ ಮೀರಬಾರದು. ಈ ವಾಹನವು 10 ಟನ್‌ ಭಾರ ಹೊರುವ ಸಾಮರ್ಥ್ಯ ಹೊಂದಿರಬೇಕು

45 ಅಡಿ ಸ್ತಬ್ಧಚಿತ್ರದ ಗರಿಷ್ಠ ಉದ್ದ

14 ಅಡಿ ಸ್ತಬ್ಧಚಿತ್ರದ ಗರಿಷ್ಠ ಅಗಲ

16 ಅಡಿ ಸ್ತಬ್ಧಚಿತ್ರದ ಗರಿಷ್ಠ ಎತ್ತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.