ADVERTISEMENT

ಆಹಾ! ಎಂಥಾ ಚಟ್ನಿ

ನಳಪಾಕ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಎಳ್ಳು ಚಟ್ನಿ
ಎಳ್ಳು ಚಟ್ನಿ   

ಭಾರತೀಯರು ಆಹಾರಪ್ರಿಯರು. ಶಿಸ್ತುಬದ್ಧವಾಗಿ ಊಟ ಸವಿಯುವುದನ್ನು ರೂಢಿಸಿಕೊಂಡವರಿಗೆ ಅನ್ನದೊಂದಿಗೆ ಬಗೆಬಗೆ ವ್ಯಂಜನಗಳಿದ್ದಷ್ಟು ಅವರು ಸೇವಿಸುವ ಆಹಾರದ ಪ್ರಮಾಣ ಹಿಗ್ಗುತ್ತಾ ಹೋಗುತ್ತದೆ. ತಿನ್ನುವ ದಾಹ ಹೆಚ್ಚಿಸುವ ವ್ಯಂಜನಗಳಲ್ಲಿ ಚಟ್ನಿಗಳದ್ದು ಅಗ್ರಸ್ಥಾನ.

ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳು ಅಥವಾ ಇವೆಲ್ಲವುಗಳ ಸಂಯೋಜನೆಯಿಂದ ಚಟ್ನಿಯನ್ನು ತಯಾರಿಸಲು ಸಾಧ್ಯವಿದೆ. ಚಟ್ನಿಯಲ್ಲಿ ನಿತ್ಯವೂ ಹೊಸಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹಾಗಾಗಿ, ಹೆಣ್ಣುಮಕ್ಕಳು ಮನೆಯಲ್ಲಿ ತಯಾರಿಸುವ ಚಟ್ನಿಗಳ ಸಂಖ್ಯೆಗೆ ಮಿತಿಯೆಂಬುದೇ ಇಲ್ಲ. ಇದರಲ್ಲಿ ನಾವು ಮುಖ್ಯವಾಗಿ ಸಿಹಿ ಮತ್ತು ಖಾರ ಎಂಬ ಎರಡು ಬಗೆಯ ಚಟ್ನಿಗಳನ್ನು ಗುರ್ತಿಸಬಹುದು. ಈ ಎರಡೂ ಬಗೆಯ ಚಟ್ನಿಗಳು ನಾನಾಬಗೆಯ ಮಸಾಲೆಗಳನ್ನು ಹೊಂದಿರುತ್ತವೆಯಾದರೂ, ಒಂದೊಂದರ ಪರಿಮಳವು ಭಿನ್ನವಾಗಿರುತ್ತವೆ. ಅದೇರೀತಿ, ಚಟ್ನಿಯ ಬಗೆಗಳು ಮತ್ತು ಅವುಗಳ ತಯಾರಿಕೆ ವಿಧಾನಗಳು ಕೂಡ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ.

ಬಾಣಸಿಗ ಉದ್ದೀಪನ್ ಚಕ್ರವರ್ತಿ ಪಾಕಶಾಸ್ತ್ರದ ಬಗ್ಗೆ ಪ್ಯಾಷನ್ ಹೊಂದಿರುವ ವ್ಯಕ್ತಿ. ಒಂದೂವರೆ ದಶಕಗಳಿಂದ ದೆಹಲಿ ಮತ್ತು ಹೈದರಾಬಾದ್‌ನ ತಾಜ್ ಹೊಟೇಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಮುಂಬೈನಲ್ಲಿ ಮಾಸ್ಟರ್ ಚೆಫ್ ಆನಂದ್ ಸೊಲೊಮನ್ ಜೊತೆ ತಂಡವನ್ನು ಮುನ್ನಡೆಸಿದ ಅಗ್ಗಳಿಕೆಯೂ ಇವರ ಬೆನ್ನಿಗಿದೆ. ಹೊಸ ಸವಿಯ ಆವಿಷ್ಕಾರ, ತಾಜಾತನದ ಹುಡುಕಾಟದೊಂದಿಗೆ ಸರಳವಾದ ಮತ್ತು ಋತುಮಾನಕ್ಕೆ ತಕ್ಕ ರುಚಿಯ ಆಹಾರ ತಯಾರಿಸುವುದರಲ್ಲಿ ಉದ್ದೀಪನ್ ಅವರದ್ದು ಎತ್ತಿದ ಕೈ.  ‘ಯಾವ ಬಗೆಯ ಆಹಾರವನ್ನಾದರೂ ಕೈಗಳಿಂದಲೇ ತಿನ್ನಬೇಕು’ ಎಂಬ ತತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಉದ್ದೀಪನ್‌, ಹೀಗೆ ಮಾಡಿದಾಗ ಪ್ರತಿ ಆಹಾರವನ್ನು ರಸಪೂರ್ಣವಾಗಿ ಸವಿಯಬಹುದು ಎನ್ನುತ್ತಾರೆ.

ಉದ್ದೀಪನ್‌ ಕೈರುಚಿಯಲ್ಲಿ ತಯಾರಾದ ಪ್ರತಿ ಅಡುಗೆಯನ್ನು ಸವಿಯುವಾಗಲೂ ನಮ್ಮೊಳಗಿನ ರುಚಿಮೊಗ್ಗುಳು ಅಚ್ಚರಿಗೊಳ್ಳುತ್ತವೆ. ಅನೇಕ ಅಂತರರಾಷ್ಟ್ರೀಯ ಹಾಗೂ ದೇಶೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಉದ್ದೀಪನ್‌ ಚಕ್ರವರ್ತಿ ತಾಜ್‌ ಸಮೂಹದ ಸೆಲೆಬ್ರೆಟಿ ಶೆಫ್‌ ಆಗಿದ್ದಾರೆ. ಇವರಿಂದ ಆತಿಥ್ಯ ಸ್ವೀಕರಿಸಿದ ಗಣ್ಯರ ಪಟ್ಟಿ ದೊಡ್ಡದಿದೆ.  ಇವರು ಈಗ ಬೆಂಗಳೂರಿನ ಯಶವಂತಪುರದಲ್ಲಿರುವ ವಿವಂತಾ ಬೈ ತಾಜ್‌ನಲ್ಲಿ ಮುಖ್ಯ ಬಾಣಸಿಗರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉದ್ದೀಪನ್ ಅವರ ಸವಿರುಚಿಗಳು ಸರಳವಾಗಿರುವುದು ಮಾತ್ರವಲ್ಲದೇ ಸವಲಾನಿಂದಲೂ ಕೂಡಿರುತ್ತವೆ ಎಂಬುದೇ ವಿಶೇಷ. ಅಂದಹಾಗೆ, ಉದ್ದೀಪನ್‌ ಇಲ್ಲಿ  ರುಚಿಕಟ್ಟಾದ ಚಟ್ನಿಗಳ ರೆಸಿಪಿಯನ್ನು ಹಂಚಿಕೊಂಡಿದ್ದಾರೆ.

ಸೇಬು–ಮಾವಿನ ಚಟ್ನಿ

ಬೇಕಾಗುವ ಪದಾರ್ಥಗಳು: ಚೆನ್ನಾಗಿ ಮಾಗಿದ ನಾಲ್ಕು ಮಾವಿನ ಹಣ್ಣು, ಒಂದು ಕೆಂಪು ಸೇಬು, 60 ಎಂ.ಎಲ್. ಆಪಲ್ ಸೈಡರ್ ವಿನೆಗರ್, 100 ಗ್ರಾಂ ಬ್ರೌನ್‌ಶುಗರ್, 30 ಗ್ರಾಂ ತಾಜಾ ಕೊತ್ತಂಬರಿ ಸೊಪ್ಪು, ಸ್ವಲ್ಪ (10 ಗ್ರಾಂ) ಮದ್ರಾಸ್ ಕರಿ ಪೌಡರ್, ಸ್ವಲ್ಪ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ (10 ಗ್ರಾಂ) ಹಾಟ್ ಪೆಪ್ಪರ್ ಸಾಸ್.

ತಯಾರಿಸುವ ವಿಧಾನ: ಮೊದಲಿಗೆ ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದ ನಂತರ ಅದರ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ತೊಳೆದ ಸೇಬು ಮತ್ತು ಶುಂಠಿಯನ್ನು ಮಾವಿನ ಹಣ್ಣಿನ ರೀತಿಯಲ್ಲೇ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಕೊತ್ತಂಬರಿ ಸೊಪ್ಪು ಬಿಟ್ಟು ಮಾವು, ಸೇಬು, ಶುಂಠಿ ಹಾಗೂ ಉಳಿದೆಲ್ಲಾ ಸಾಸ್‌ಗಳನ್ನು ಸೇರಿಸಿ ಅದನ್ನು ಮಧ್ಯಮ ಬಿಸಿಯಲ್ಲಿ ಕುದಿಸಬೇಕು. ಸಣ್ಣ ಬೆಂಕಿಯಲ್ಲಿ ಹಣ್ಣು ಮೆತ್ತಗಾಗುವವರೆಗೆ ಬಿಸಿ ಮಾಡಿ ಅದು ಜಾಮ್ನ ಹದಕ್ಕೆ  ಬಂದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ತಣ್ಣಗಾಗಲು ಬಿಡಬೇಕು. ಅಲ್ಲಿಗೆ ಸೇಬು–ಮಾವಿನ ಚಟ್ನಿ ರೆಡಿ. ಈ ಚಟ್ನಿ ಚಿಕನ್‌, ಮಟನ್‌ ಖಾದ್ಯಗಳಿಗೆ ಸೂಪರ್‌ ಕಾಂಬಿನೇಷನ್‌.
ತಯಾರಿಕೆ ಅವಧಿ: 10 ನಿಮಿಷ, ಅಡುಗೆ ಸಮಯ: 25 ನಿಮಿಷ.

ಖರ್ಜೂರ್ ಇಮ್ಲಿ ಕಿ ಚಟ್ನಿ

ಸಾಮಾಗ್ರಿಗಳು: ಕಾಲು ಕಿಲೋ ಖರ್ಜೂರ, 100 ಗ್ರಾಂ ಹುಣಸೆಹಣ್ಣು, 100 ಗ್ರಾಂ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಟೀ ಸ್ಪೂನ್ ಕೆಂಪುಮೆಣಸಿನಕಾಯಿ ಪುಡಿ, ಒಂದು ಟೀ ಸ್ಪೂನ್ ಕೊತ್ತಂಬರಿ ಪುಡಿ, ಒಂದು ಟೀ ಸ್ಪೂನ್‌ ಒಣಶುಂಠಿ ಪುಡಿ.

ಮಾಡುವ ವಿಧಾನ: ಖರ್ಜೂರ ಮತ್ತು ಹುಣಸೆಹಣ್ಣನ್ನು ಪ್ರತ್ಯೇಕವಾಗಿ ಹದವಾಗಿರುವ ಬಿಸಿನೀರಿನಲ್ಲಿ ಒಂದು ಗಂಟೆ ನೆನೆಸಿಡಬೇಕು. ಹುಣಸೆ ಮತ್ತು ಖರ್ಜೂರ ಹಣ್ಣುಗಳ ಪಲ್ಪ್ ತೆಗೆದು ಅದನ್ನು ಇತರೆ ಸಾಮಾಗ್ರಿಗಳೊಂದಿಗೆ ಸೇರಿಸಬೇಕು. ಅದು ಪೇಸ್ಟ್ ಆಗುವ ರೀತಿಯಲ್ಲಿ ಚೆನ್ನಾಗಿ ಕಲಕಬೇಕು. ನಂತರ ಸಣ್ಣ ಬೆಂಕಿಯಲ್ಲಿ ಗಟ್ಟಿ ಪೇಸ್ಟ್‌ ಆಗುವವರೆಗೆ ಬಿಸಿ ಮಾಡಿ ನಂತರ ಆರಿಸಬೇಕು. ಸಿಹಿ ಮತ್ತು ಹುಳಿಯ ಸ್ವಾದ ಹೊಂದಿರುವ ಈ ಚಟ್ನಿ ರುಚಿ ಸೊಗಸಾಗಿರುತ್ತದೆ.
ತಯಾರಿಕೆ ಅವಧಿ: 10 ನಿಮಿಷ, ಅಡುಗೆ ಸಮಯ: 30 ನಿಮಿಷ

ಎಳ್ಳು ಚಟ್ನಿ
ಬೇಕಾಗುವ ಪದಾರ್ಥಗಳು: 100 ಗ್ರಾಂ ಎಳ್ಳು, 10 ಗ್ರಾಂ ಜೀರಿಗೆ, 10 ಗ್ರಾಂ ಕೊತ್ತುಂಬರಿ ಬೀಜ, ಸ್ವಲ್ಪ ಕರಿಬೇವು, 10 ಒಣಗಿದ ಕೆಂಪು ಮೆಣಸಿನಕಾಯಿ, ಎರಡು ಕಪ್ ತುರಿದ ತೆಂಗಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ (10 ಗ್ರಾಂ) ಸಕ್ಕರೆ, 25 ಎಂ.ಎಲ್. ತೆಂಗಿನೆಣ್ಣೆ, ಚಿಟಿಕೆ ಇಂಗು. 

ADVERTISEMENT

ಮಾಡುವ ವಿಧಾನ: ಮೊದಲಿಗೆ ಎಲ್ಲ ಸಾಮಗ್ರಿಗಳನ್ನು ಸಣ್ಣ ಬೆಂಕಿ ಇರಿಸಿಕೊಂಡು ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ತೆಂಗಿನ ಎಣ್ಣೆಯನ್ನು ಸೇರಿಸಿ ತಣಿಸಬೇಕು. ಆಮೇಲೆ ಅದಕ್ಕೆ ಒಂಚೂರು ನೀರು ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ತದನಂತರ, ಎಣ್ಣೆಯನ್ನು ಕಾಯಿಸಿ ಅದಕ್ಕೆ  ಇಂಗು, ಸಕ್ಕರೆ, ಉಪ್ಪನ್ನು ಹಾಕಿ ಚೆನ್ನಾಗಿ ಕಲಕಬೇಕು. ಈ ಚಟ್ನಿ ಎಲ್ಲ ಬಗೆಯ ಊಟಕ್ಕೂ ಅತ್ಯುತ್ತಮ ಕಾಂಬಿನೇಷನ್‌.  
ತಯಾರಿಕೆ ಅವಧಿ: 20 ನಿಮಿಷ, ಅಡುಗೆ ಸಮಯ: 10 ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.