ADVERTISEMENT

ಕಾಲೇಜು ಹೈಕ್ಳ `ಕಿಸ್' ಮಸಾಲ

ರಮೇಶ ಕೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಮೋಡ ಕವಿದ ವಾತಾವರಣ. ಕಾಲೇಜು ತರಗತಿ ಮುಗಿದ ಕೂಡಲೇ ಮಧ್ಯಾಹ್ನವಾದ್ದರಿಂದ ಏನಾದರೂ ಕುರುಕಲು ತಿನ್ನಬೇಕೆಂದು ಸಮೀಪದಲ್ಲೇ ಇದ್ದ ಚಾಟ್ಸ್ ಮಳಿಗೆಗೆ ವಿದ್ಯಾರ್ಥಿಗಳು ಬಂದರು. ದಿನವೂ ಪಾನಿಪೂರಿ, ಮಸಾಲೆಪೂರಿ ಆರ್ಡರ್ ಮಾಡುತ್ತಿದ್ದ ಅವರು ಏನನ್ನು ತಿನ್ನಬೇಕೆಂಬ ಗೊಂದಲದಲ್ಲಿದ್ದಾಗ, ಚಾಟ್ಸ್ ಮಳಿಗೆಯವ ಮೆನು ಹೇಳತೊಡಗಿದ. “ಹೊಸ ಮೆನುವನ್ನು ಪರಿಚಯಿಸಿದ್ದೇವೆ, ಅದರ ಹೆಸರು `ಕಿಸ್' ಮಸಾಲ” ಎಂದೊಡನೆ ಮಂದನಗು ಬೀರುತ್ತಾ ವಿದ್ಯಾರ್ಥಿಗಳು ಆರ್ಡ್‌ರ್ ಮಾಡಿದ್ದು ಅದೇ ಕಿಸ್ ಮಸಾಲ ಚಾಟ್ಸ್.

ಮಲ್ಲೇಶ್ವರದ ಎಂಇಎಸ್ ಕಾಲೇಜು ಸಮೀಪವಿರುವ ಶ್ರೀಸಾಯಿರಾಂ ಚಾಟ್ಸ್ ಮಳಿಗೆಯಲ್ಲಿ `ಕಿಸ್' ಮಸಾಲ ಸೇರಿದಂತೆ 90ಕ್ಕೂ ಹೆಚ್ಚಿನ ಬಗೆಯ ಚಾಟ್ಸ್ ಇವೆ. ವಿದ್ಯಾರ್ಥಿಗಳನ್ನು ಆಕರ್ಷಿಸಲೆಂದೇ ಎರಡು, ಮೂರು ತಿಂಗಳಿಗೊಮ್ಮೆ ಇಲ್ಲಿ ಹೊಸ ಹೊಸ ಚಾಟ್ಸ್ ಪರಿಚಯಿಸುತ್ತಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾದ ಚಾಟ್ಸ್ ಎಂದರೆ `ಕ್ರೇಜಿ', `ಹಾಂಕಾಂಗ್', `ಟಿಂಗ್‌ಟಾಂಗ್', `ಡಿಸ್ಕೋ', `ಟೈಂಪಾಸ್', `ಸಾಯಿರಾಂ ಸ್ಪೆಷಲ್' ಹಾಗೂ `ಸ್ಟೂಡೆಂಟ್ಸ್ ಸ್ಪೆಷಲ್'.

`ಬಹಳಷ್ಟು ಆಯ್ಕೆಗಳು ಇಲ್ಲಿವೆ. ಸ್ನೇಹಿತರೊಂದಿಗೆ ಇಲ್ಲಿ ಬಂದು ಚಾಟ್ಸ್ ತಿನ್ನುತ್ತೇನೆ. ಗುಣಮಟ್ಟ ಚೆನ್ನಾಗಿದೆ, ದರದಲ್ಲೂ ಅತೀ ಎನಿಸದು. ವಿದ್ಯಾರ್ಥಿಗಳ ಪಾಲಿಗೆ ಉತ್ತಮ ಚಾಟ್ಸ್ ಸೆಂಟರ್ ಇದಾಗಿದೆ' ಎನ್ನುತ್ತಾರೆ ಸೇಂಟ್ ಜೋಸೆಫ್ಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿ ಭರತ್.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್‌ಗೆ ತಾವೇ ಯಾಕೆ ಒಂದು ಚಾಟ್ಸ್ ಸೆಂಟರ್ ಆರಂಭಿಸಬಾರದೆಂಬ ಆಲೋಚನೆ ಬಂತು. ತಕ್ಷಣ ಕಾರು ಷೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ನೇಹಿತ ನರಸಿಂಹಮೂರ್ತಿಯನ್ನು ಜೊತೆಗೆ ಸೇರಿಸಿಕೊಂಡು ಎಂಇಎಸ್ ಕಾಲೇಜು ಸಮೀಪ 2002ರಲ್ಲಿ ಶ್ರೀ ಸಾಯಿರಾಂ ಜ್ಯೂಸ್ ಅಂಡ್ ಚಾಟ್ಸ್ ಮಳಿಗೆ ಆರಂಭಿಸಿದರು. ಆರಂಭದಲ್ಲಿ ಪಾನಿಪೂರಿ, ದಹಿಪೂರಿ, ಮಸಾಲ ಪೂರಿ ಸೇರಿದಂತೆ ಏಳು ಬಗೆಯ ಚಾಟ್ಸ್ ಮಾಡುತ್ತಿದ್ದರು. ತಿಂಗಳು, ಎರಡು ತಿಂಗಳಿಗೊಮ್ಮೆ ಹೊಸ ಹೊಸ ರುಚಿಯನ್ನು ಪರಿಚಯಿಸಲಾಗುತ್ತಿದೆ. ಇದೀಗ 90 ಬಗೆಯ ಚಾಟ್ಸ್ ಆಹಾರಪ್ರಿಯರ ರುಚಿ ತಣಿಸುತ್ತಿವೆ. ಈ ಚಾಟ್ಸ್ ಸೆಂಟರ್‌ಗೆ ಮಲ್ಲೇಶ್ವರ ಅಲ್ಲದೇ ಯಶವಂತಪುರ, ಪೀಣ್ಯ, ಕೋರಮಂಗಲ, ಜಯನಗರದಿಂದ ಬರುವ ಕಾಯಂ ಗ್ರಾಹಕರು ಇದ್ದಾರೆ.

“ನಮ್ಮ ಮನೆ 18ನೇ ಕ್ರಾಸ್‌ನಲ್ಲಿದೆ. ಸಾಯಿರಾಂ ಆರಂಭವಾದಾಗಿನಿಂದ ಬರುತ್ತಿದ್ದೇವೆ. ಇಲ್ಲಿ ರುಚಿ ಅದ್ಭುತವಾಗಿರುತ್ತದೆ. ಎಷ್ಟೇ ಜನಸಂದಣಿ ಇದ್ದರೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತಾರೆ. ಒಮ್ಮೆ ನಾವು ವಿದ್ಯಾರಣ್ಯಪುರಕ್ಕೆ ಮನೆ ಬದಲಾಯಿಸಿದೆವು, ಆಗಲೂ ಗಂಡ, ಮಗಳೊಂದಿಗೆ ಇಲ್ಲಿಗೆ ಬಂದು ಚಾಟ್ಸ್ ತಿಂದಿದ್ದೇವೆ. ಎಲ್ಲಾ ಕಡೆ ಇರುವ ಮೆನು ಇಲ್ಲಿಲ್ಲ. `ಫ್ಲೋಟಿಂಗ್' ಪಾನಿಪೂರಿ ತುಂಬಾ ಇಷ್ಟ” ಎಂದು ಮಗಳೊಂದಿಗೆ ರುಚಿ ನೋಡಲು ಮುಂದಾದರು ರೂಪಾ ಕುಮಾರ್.

“ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೂ ಗ್ರಾಹಕರು ಇರುತ್ತಾರೆ. `ಕ್ರೇಜಿ ಮಸಾಲ'ಗೆ ಹೆಚ್ಚಾಗಿ ಬೇಡಿಕೆ ಇದೆ. ವಿದ್ಯಾರ್ಥಿಗಳು `ಕಿಸ್' ಮಸಾಲ ಇಷ್ಟಪಡುತ್ತಾರೆ. ಸಿಹಿಪೂರಿಗೆ ಪುದಿನಾ ಚಟ್ನಿ, ಸಿಹಿ ಚಟ್ನಿ, ಸೇವ್, ಕೊತ್ತಂಬರಿ, ಈರುಳ್ಳಿ, ಕ್ಯಾರಟ್ ಹಾಗೂ ಖಾರ ಬೂಂದಿ ಸೇರಿಸಿ ಅದರ ಮೇಲೆ ಮೊಸರು ಹಾಕಲಾಗುತ್ತದೆ, ಇದು `ಕಿಸ್' ಮಸಾಲ” ಎಂದು ಮುಗುಳ್ನಗುತ್ತಾರೆ ಲೋಕೇಶ್.

`ಸುತ್ತಮುತ್ತ ಕಾಲೇಜುಗಳು ಇರುವುದರಿಂದ ಬೆಲೆ ಹೆಚ್ಚಿಸಿಲ್ಲ, ದಿನಾಲೂ ಒಂದೇ ರುಚಿ ನೋಡುವ ವಿದ್ಯಾರ್ಥಿಗಳಿಗೆ ಹೊಸದಾಗಿ ರುಚಿಯನ್ನು ಉಣಬಡಿಸಬೇಕೆಂಬ ಉದ್ದೇಶದಿಂದ ಎರಡು ತಿಂಗಳಿಗೊಮ್ಮೆ ನಾವೇ ಹೊಸ ಹೊಸ ಚಾಟ್ಸ್ ಪರಿಚಯಿಸುತ್ತೇವೆ. ಎಲ್ಲಿಯೂ ಕಲಿತು ಬಂದಿದ್ದಲ್ಲ, ಇದುವರೆಗೂ ನಾವು ಪರಿಚಯಿಸಿದ ಹೊಸ ರುಚಿಯ ಚಾಟ್ಸ್ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಗ್ರಾಹಕರಿಗೂ ಇಷ್ಟವಾಗಿವೆ' ಎಂದು ಮಾತು ಮುಗಿಸಿದರು ನರಸಿಂಹಮೂರ್ತಿ. 

ಸ್ಥಳ: ನಂ 35/1, 16ನೇ ಕ್ರಾಸ್, 8ನೇ ಮುಖ್ಯರಸ್ತೆ, ಮಲ್ಲೇಶ್ವರ. ಮಾಹಿತಿಗೆ: 98802 38374.
 

ಕ್ರೇಜಿ ಮಸಾಲ ಮಾಡುವುದು ಹೀಗೆ...
ಮೆಕ್ಕೆಜೋಳದಿಂದ ಮಾಡಿದ ಉದ್ದದ ಪ್ರೈಮ್ಸಗೆ (ಸಿಹಿ ಹಾಗೂ ಉಪ್ಪು ಸ್ವಾದದ ಬೋಟಿ ಮಾದರಿಯಲ್ಲಿರುತ್ತವೆ) ಪುದೀನಾ ಚಟ್ನಿ ಹಾಕಿ ಮಿಶ್ರಣ ಮಾಡಲಾಗುತ್ತದೆ. ನಂತರ ಈರುಳ್ಳಿ, ಕ್ಯಾರಟ್, ಸೌತೇಕಾಯಿ ತುಣುಕುಗಳನ್ನು ಹಾಕಲಾಗುತ್ತದೆ. ಹದವಾಗಿ ಬೆರೆತ ಪ್ರೈಮ್ಸಗೆ ಮೊಸರು, ಸೇವ್ ಹಾಗೂ ಕೊತ್ತಂಬರಿ ಹಾಕಿದರೆ ಸಿದ್ಧವಾಗುವುದೇ ಕ್ರೇಜಿ ಮಸಾಲ.

ಪುನೀತ್‌ಗೆ ಸ್ವೀಟ್ ಮಸಾಲ ಇಷ್ಟ
`ಇಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲದೇ ನಟ, ನಟಿಯರೂ ಬರುತ್ತಾರೆ. ಪುನೀತ್ ರಾಜಕುಮಾರ್ ಸ್ವೀಟ್ ಮಸಾಲ, ಚಿಪ್ಸ್ ಮಸಾಲ ಹೆಚ್ಚು ಇಷ್ಟಪಡುತ್ತಾರೆ. ಸುಧಾರಾಣಿಗೆ ಮಸಾಲ ಪೂರಿ ಇಷ್ಟ. ಹಾಗೆಯೇ ಜಗ್ಗೇಶ್‌ಗೆ ಕ್ರೇಜಿ ಮಸಾಲ ಇಷ್ಟವಾಗುತ್ತದೆ. ಉಪೇಂದ್ರ ಅವರು ದಹಿಪೂರಿ ಇಷ್ಟಪಡುತ್ತಾರೆ'  ಎನ್ನುತ್ತಾರೆ ನರಸಿಂಹಮೂರ್ತಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.