ADVERTISEMENT

ಡಾಬರ್ ಲೋಕದಲ್ಲಿ ಮನೆ ಅಡುಗೆ ಘಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಟ್ವೆಂಟಿ ಮಿನಟ್ಸ್ ಮೋರ್ ಎನ್ನುತ್ತಿದ್ದಂತೆ ಕೈಗಳು ವೇಗ ಹೆಚ್ಚಿಸಿದವು. ಒಮ್ಮೆ ಸೌಟು, ಇನ್ನೊಮ್ಮೆ ಚಾಕು, ಮತ್ತೊಮ್ಮೆ ನೀರು ಹಿಡಿಯುತ್ತಿದ್ದ ಕೈಗಳು ಕೆಲಸ ಪೂರ್ಣಗೊಳಿಸುವ ತವಕದಲ್ಲಿದ್ದವು. ಘಮಘಮಿಸುವ ಖಾದ್ಯ ತಯಾರಿಸಿ ಮುಗಿದಿದ್ದರೂ ಅವುಗಳನ್ನು ಇನ್ನೊಂದು ಬೋಗುಣಿಗೆ ಹಾಕಿ ಅಲಂಕರಿಸುವುದರಲ್ಲಿ ನೀರತವಾಗಿದ್ದ ಕೈಗಳು ಕೊನೆಯಲ್ಲಿ ಬೆವರೊರೆಸಿಕೊಂಡವು. ಏದುಸಿರು ಬಿಟ್ಟ ಮುಖಗಳು ಎಲ್ಲರೆಡೆಗೆ ಪ್ರಸನ್ನ ನಗು ಬೀರಿದವು.

ಇಂದಿರಾನಗದಲ್ಲಿರುವ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಆವರಣದಲ್ಲಿ ಡಾಬರ್ ಇಂಡಿಯಾ ಲಿಮಿಟೆಡ್ ಕಂಪೆನಿ ಆಯೋಜಿಸಿದ್ದ `ಡಾಬರ್ ಹೋಮ್ ಮೇಡ್ ಹೋಂಸ್ಟಾರ್' ಸ್ಪರ್ಧೆಯ ಚಿತ್ರಣವಿದು.

ವೃತ್ತಿಪರ ಬಾಣಸಿಗರಂತೆ ತಯಾರಾಗಿದ್ದ ಎಲ್ಲಾ ಸ್ಪರ್ಧಾಳುಗಳ ಮುಖದಲ್ಲಿ ಖುಷಿಯೋ ಖುಷಿ. `ಜಾಹೀರಾತು ನೋಡಿ ರೆಸಿಪಿ ಬರೆದು ಕಳುಹಿಸಿದೆವು. ಆಯ್ಕೆಯಾದೆವು' ಎಂಬ ಹೆಮ್ಮೆಯ ನಗು ಅವರಲ್ಲಿ.

`ಅಡುಗೆ ಮಾಡುವುದೆಂದರೆ ನನಗೆ ತುಂಬಾ ಪ್ರೀತಿ. ಪ್ರತಿ ವಾರ ಏನಾದರೊಂದು ವಿಶೇಷ ಅಡುಗೆಯನ್ನು ನಾನು ಮಾಡುತ್ತಲೇ ಇರುತ್ತೇನೆ. ಇಲ್ಲಿ ಸ್ಪರ್ಧೆ ಇರುವುದು ಗೊತ್ತಾಯಿತು. ಅರ್ಜಿ ಹಾಕಿದೆ. ಅವಕಾಶ ಸಿಕ್ಕಿತು. ತುಂಬಾ ಖುಷಿಯಾಗಿದ್ದೇನೆ. ನಮಗೆ ತಿಳಿದಿರುವ ಹೊಸ ವಿಧದ ಅಡುಗೆಯನ್ನು ಜನರಿಗೂ ಪರಿಚಯಿಸುವ ಉತ್ತಮ ಅವಕಾಶ ಇದು. ನೂಡಲ್ಸ್, ಅದರ ಜೊತೆಗೆ ತಿನ್ನಲು `ವೆಜಿಟೆಬಲ್ ಥಾಯ್ ಗ್ರೀನ್ ಕರ‌್ರಿ' ಮಾಡಿದ್ದೇನೆ. ಜೀರಾ ರೈಸ್ ಹಾಗೂ ಸೀಕ್ರೆಟ್ ಇನ್‌ಗ್ರೀಡಿಯೆಂಟ್ ವಿಭಾಗದಲ್ಲಿ ಬಾಳೆಕಾಯಿ ಕರ್ರಿ ಮಾಡಿದ್ದೇನೆ' ಎಂದು ಸಂತಸ ಹಂಚಿಕೊಂಡರು ಚೆನ್ನೈ ಮೂಲದ ಬೆಂಗಳೂರು ನಿವಾಸಿ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಆನಂದ ಕೃಷ್ಣನ್.

`ಮನೆಯಲ್ಲಿ ಮಾತ್ರ ಅಡುಗೆ ಮಾಡುತ್ತಿದ್ದೆ. ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ನಾನು ಮಾಡುವ ಸ್ವೀಟ್‌ಕಾರ್ನ್ ರೆಸಿಪಿಯ ಬಗ್ಗೆ ಬರೆದು ಕಳುಹಿಸಿದ್ದೆ. ಆಯ್ಕೆಯಾದೆ. ಎರಡನೇ ಸುತ್ತಿನಲ್ಲಿ ಬಾಳೆಕಾಯಿಯಿಂದ ನಮ್ಮದೇ ಕಲ್ಪನೆಯ ತಿಂಡಿಯೊಂದನ್ನು ಮಾಡಬೇಕಿತ್ತು. ಬನಾನಾ ರೈಸ್ ಟಿಕ್ಕಿ, ಅದರ ಜೊತೆಗೆ ಕ್ಯಾಪ್ಸಿಕಂ ಡಿಪ್ ಮಾಡಿದ್ದೆ. ಕುಡಿಯೋಕೆ ಜಲ್‌ಜೀರಾ ಮಾಡಿದೀನಿ. ಡಾಬರ್ ಉತ್ಪನ್ನಗಳನ್ನೇ ಬಳಸಿ ಇವುಗಳನ್ನು ಮಾಡಿದ್ದೇನೆ. ಇಂಥ ಅವಕಾಶ ಸಿಕ್ಕರೆ ನಮಗೆ ತಿಳಿದ ತಿಂಡಿ ತಿನಿಸುಗಳನ್ನು ಇನ್ನೊಬ್ಬರಿಗೆ ಪರಿಚಯಿಸಬಹುದು' ಎಂದು ಹೇಳುತ್ತಾರೆ ಪೇಂಟಿಂಗ್ ಹಾಗೂ ಎಂಬ್ರಾಯಿಡರಿ ತರಗತಿಗಳನ್ನು ನಡೆಸುವ ಮನೆಯೊಡತಿ ಸುನಂದಾ ಬಸಲಳ್ಳಿ.

`ಪತಿ ಆನ್‌ಲೈನ್‌ನಲ್ಲಿ ಸ್ಪರ್ಧೆ ಇರುವ ಬಗ್ಗೆ ನೋಡಿ, ಭಾಗವಹಿಸುವಂತೆ ತಿಳಿಸಿದರು. ಮನೆ ಬಿಟ್ಟು ಹೊರಗೆ ಬರುವುದೇ ಇಲ್ಲ. ಆದರೆ ಇವತ್ತು ಉತ್ತಮ ಅವಕಾಶ ಸಿಕ್ಕಿದೆ. ಮನೆಯಲ್ಲಿ ಹೇಗೆ ತಿಂಡಿ ಮಾಡುತ್ತೇನೋ ಹಾಗೆಯೇ ಮಾಡಿದೆ. ಇಂದಿನ ವಿಶೇಷ ಮೀನಿನ ಗ್ರೇವಿ ಹಾಗೂ ಬಾಳೆಕಾಯಿ ಫ್ರೈ' ಎಂದು ಉತ್ತರಿಸಿದರು ಪ್ರಿಯಾ.

`ಸಿಕ್ಕಾಪಟ್ಟೆ ಅಡುಗೆ ಮಾಡುತ್ತೇನೆ. ಹುಟ್ಟುಹಬ್ಬ, ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ರುಚಿ ರುಚಿಯಾದ ಊಟ ಬಡಿಸುವ ಸ್ವಂತ ಕೇಟರಿಂಗ್ ವಿಭಾಗವೂ ಇದೆ. ಇಲ್ಲಿಯ ಅನುಭವ ತುಂಬಾ ಖುಷಿಕೊಟ್ಟಿದೆ. ಎಲ್ಲವನ್ನೂ ಚೆನ್ನಾಗಿ ಆಯೋಜಿಸಿದ್ದಾರೆ. ಸಹಾಯಕರೂ ಇದ್ದರು' ಎನ್ನುತ್ತಾರೆ ಕೇರಳ ಮೂಲದ ಸಜೀತಾ ರಿಯಾಜ್.

`ಎಲ್ಲೇ ಊಟ ಮಾಡಿದರೂ ಅಮ್ಮನ ಕೈರುಚಿ, ಮನೆಯ ಅಡುಗೆಯೇ ಹೆಚ್ಚು ರುಚಿ ಎನಿಸುತ್ತದೆ. ಪ್ರತಿ ಮನೆಯಲ್ಲೂ ವಿಶೇಷವಾದ ಅಡುಗೆಯ ರುಚಿ ಇರುತ್ತದೆ. ಆದರೆ ಊಟ ಮಾಡಿ ಬಡಿಸುವ ಹೆಣ್ಣು ಮಗಳಿಗೆ ಮೆಚ್ಚುಗೆ ಕಡಿಮೆ ಎಂದೇ ಹೇಳಬೇಕು. ಹೀಗಾಗಿ ಹೊಸ ರುಚಿಯನ್ನು ಜನರಿಗೆ ಪರಿಚಯಿಸುವುದು ಹಾಗೂ ಮನೆಯೊಳಗಿನ ಪ್ರತಿಭಾನ್ವಿತ ಬಾಣಸಿಗರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮೊದಲ ಬಾರಿಯೇ ಉತ್ತಮ ಪ್ರತಿಕ್ರಿಯೆ ಬಂದಿದ್ದು ಸಂತಸ ತಂದಿದೆ' ಎಂದು ಡಾಬರ್‌ನ ಕಾರ್ಪೋರೇಟ್ ಕಮ್ಯುನಿಕೇಶನ್ ವಿಭಾಗದ ಜಂಟಿ ವ್ಯವಸ್ಥಾಪಕ ಅಭಿಜಿತ್ ಕಶ್ಯಪ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಗೆ ಬಂದ ಅರ್ಜಿಗಳು 5000. ಬೆಂಗಳೂರು ಒಂದರಿಂದಲೇ ಬಂದ 1000 ಅರ್ಜಿಗಳಲ್ಲಿ 16 ಜನರನ್ನು ಆಯ್ದು ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ಆಶಾ ಹರಿಹರನ್ (ಪ್ರಥಮ), ಮೀರಾ ಚೆಲ್ಲಪ್ಪ (ದ್ವಿತೀಯ) ಹಾಗೂ ಸುನಂದಾ ಬಸಲಳ್ಳಿ (ತೃತೀಯ) ವಿಜೇತರಾಗಿದ್ದು, ದೆಹಲಿಯಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಗೆಲುವು ಸಾಧಿಸಿದ ಇಬ್ಬರು ಅದೃಷ್ಟಶಾಲಿಗಳಿಗೆ ನ್ಯೂಯಾರ್ಕ್ ಸುತ್ತುವ ಅವಕಾಶದ ಜೊತೆಗೆ ಸ್ಟಾರ್ ಬಾಣಸಿಗ ವಿಕಾಸ್ ಖನ್ನಾ ಅವರ ಜುನೂನ್ ರೆಸ್ಟೊರೆಂಟ್‌ನಲ್ಲಿ ಊಟ ಸವಿಯುವ ಅವಕಾಶವನ್ನೂ ನೀಡಲಿದೆ ಡಾಬರ್ ಸಂಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.