ADVERTISEMENT

ದಕ್ಷಿಣದ ರುಚಿಗೆ ಅಪ್‌ಸೌತ್

ಎಸ್.ರಶ್ಮಿ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST
ದಕ್ಷಿಣದ ರುಚಿಗೆ ಅಪ್‌ಸೌತ್
ದಕ್ಷಿಣದ ರುಚಿಗೆ ಅಪ್‌ಸೌತ್   

ಇಲ್ಲಿ ನೀವು ಊಟಕ್ಕೆ ಹೇಳಿದ ನಂತರ ನಿಮ್ಮ ತಟ್ಟೆ ಮೇಜಿಗೆ ತರಲು ಕೇವಲ 7 ನಿಮಿಷಗಳು ಸಾಕು. ಇದು ಗರಿಷ್ಠ ಅವಧಿಯಂತೆ.`ಅಪ್‌ಸೌತ್~ನ ವಿಶೇಷ ಈ ತ್ವರಿತಗತಿಯ ಸೇವೆ ಮಾತ್ರವಲ್ಲ. ಕಾಂಬೊಗಳು ಇದರ ವಿಶೇಷ. ಅಪ್ಪಟ ದಕ್ಷಿಣಭಾರತದ ತಿಂಡಿಗಳ ಕಾಂಬೊಗಳನ್ನು ಪರಿಚಯಿಸಿದ್ದಾರೆ.

ಇಡ್ಲಿವಡೆ, 12 ಬಗೆಯ ದೋಸೆ, ಪೂರಿ, ಪರೋಟ, ಐದು ಬಗೆಯ ಉತ್ತಪ್ಪ, ಐದು ಥರೇವಾರಿ ಅನ್ನ, ಸಿಹಿ, ಕಾಫಿ, ಹಾಲು, ಕಲ್ಲಂಗಡಿ ಜ್ಯೂಸ್ ಇವಿಷ್ಟೂ `ಅಪ್‌ಸೌತ್~ನ ವಿಶೇಷಗಳು.
ಹೋಟೆಲ್‌ಗಳಲ್ಲಿ ತಿಂಡಿ ತಿನ್ನುವುದಾದರೆ ಒಂದೆರಡು ಬಗೆಯ ತಿಂಡಿಯನ್ನು ಮಾತ್ರ ಆಸ್ವಾದಿಸಬಹುದು.

ಆದರೆ ಇಲ್ಲಿ ಹಾಗಲ್ಲ ಒಂದು ಅಪ್‌ಸೌತ್ ವಿಶೇಷ ಕಾಂಬೊಗೆ ಆದೇಶ ನೀಡಿದರೆ, ಮಿನಿ ಇಡ್ಲಿ ಮೇಲೆ ನುಗ್ಗೆಕಾಯಿ ಸಾರು, ವಡೆ ಸಾಂಬಾರು, ಹೊಟ್ಟೆಯುಬ್ಬಿಸಿಕೊಂಡ ಪುಟ್ಟ ಚಪಾತಿ ಆಕಾರದ ಒಂದು ಪೂರಿ, ಒಂದು ಮಿನಿ ಮಸಾಲೆ ದೋಸೆ... ಇವಿಷ್ಟನ್ನೂ ಸವಿಯಬಹುದು. ಜೊತೆಗೆ ರುಚಿಕಟ್ಟಾದ ಕೆಂಬಣ್ಣದ ಈರುಳ್ಳಿ ಚಟ್ನಿ.

ಶುಭ್ರ ಶ್ವೇತವರ್ಣದ ಕೊಬ್ಬರಿ ಚಟ್ನಿಗೆ ದೃಷ್ಟಿ ಬೊಟ್ಟಿನಂತಿರುವ ಸಾಸಿವೆ ಒಗ್ಗರಣೆ... ಇವೆರಡಕ್ಕೂ ನಡುವೆ ಚಂದಗಾಣಿಸುವ ಹಸಿಮೆಣಸಿನ ಚಟ್ನಿ... ಎಲ್ಲವೂ ಬಾಯಲ್ಲಿ ನೀರೂರಿಸುವ ತಿಂಡಿಗಳೇ. ಪೂರಿಗೆ ಸಾಗು ಜೊತೆಯಾದರೆ ಸಾಂಬಾರು ಸಹ ಹಾಜರು.

ಇದಿಷ್ಟೂ ಪಟ್ಟಿ ನೋಡಿದಾಗ, ಹಣೆ ಗಂಟಿಕ್ಕಿ ಮನಸಿನಲ್ಲೇ ಲೆಕ್ಕಾಚಾರ ಮಾಡುತ್ತ, ಬೆಂಗಳೂರಿನಲ್ಲಿ ಇಷ್ಟು ತಿಂಡಿಯ ವೆಚ್ಚ 200 ರೂಪಾಯಿ ದಾಟಬಹುದು ಎಂದುಕೊಂಡಿದ್ದರೆ ತಪ್ಪು.. ಇದೆಲ್ಲಕ್ಕೂ ಕೇವಲ 95 ರೂಪಾಯಿಗಳು.

ಇನ್ನೊಂದು ಕಾಂಬೊ- ಬಿಸಿಬೇಳೆಬಾತ್, ಮೊಸರನ್ನ, ಮೊಸರು ವಡೆ, ಇಡ್ಲಿ ಸಾಂಬಾರು ಉಂಡವರಿಗೆ ಹೊಟ್ಟೆಗೆ ಹಿತವೆನಿಸುವ, ಹಿತವೆನ್ನಿಸುವಷ್ಟು ಮಜ್ಜಿಗೆ. ಈ ಮಜ್ಜಿಗೆಗೆ ಎಂಥ ಮಸಾಲೆಯೂ ಇಲ್ಲ. ಹಿತವಾಗಿ ಹುರಿದು ಹುಡಿ ಮಾಡಿದ ಜೀರಿಗೆ ಪುಡಿಯ ಮಿಶ್ರಣ ಮತ್ತು ಕೊತ್ತಂಬರಿ ಸೊಪ್ಪಿನ ಅಲಂಕಾರ ಮತ್ತೆ ಮತ್ತೆ ಮಜ್ಜಿಗೆ ಲೋಟದತ್ತ ಕೈ ಚಾಚುವಂತೆ ಮಾಡುತ್ತದೆ. ಈ ಕಾಂಬೊಗಳಿಗೆ ಮಜ್ಜಿಗೆ ಅಥವಾ ಕಾಫಿ ಕುಡಿಯುವ ಆಯ್ಕೆ ಇರುತ್ತದೆ.

ಕಾಫಿ ಕುಡಿಯುವವರ ಮುಖ ಅರಳುವುದನ್ನು ನೋಡುವುದೇ ಒಂದು ಆನಂದ ಇಲ್ಲಿ. ನಸುಕಂದು ಬಣ್ಣದ ಕಾಫಿಯ ಮೇಲೆ ಅಪ್ಪಟ ಹಾಲ್ನೊರೆ. ಹಾಲ್ನೊರೆ ಒಡೆದು ಬರುವ ಕಾಫಿಯ ಗುಟುಕೊಂದು, ಕಣ್ಮುಚ್ಚಿಕೊಂಡು, ಬಾಯೊಳಗೆಲ್ಲ ಕಾಫಿಯ ಸ್ವಾದ ಪಸರಿಸಲಿ ಎಂಬಂತೆ ಆಸ್ವಾದಿಸ ಬಹುದಾದ ಅಪ್ಪಟ ದಕ್ಷಿಣ ಭಾರತೀಯ ಕಾಫಿ `ಅಪ್‌ಸೌತ್~ನ ಗುರುತಾಗಿಯೂ ಬೆಳೆಯಬಹುದಾಗಿದೆ.

`ಬೆಂಗಳೂರಿನಲ್ಲಿ `ಅಪ್‌ಸೌತ್~ ಆರಂಭವಾಗಿ ಒಂದೂವರೆ ವರ್ಷವಾಯಿತು. ಮಂತ್ರಿ ಮಾಲ್ ಹಾಗೂ ಒರಾಯನ್ ಮಾಲ್‌ಗಳಲ್ಲಿಯೂ ತನ್ನ ಫುಡ್‌ಕೋರ್ಟ್ ಹೊಂದಿದೆ. ಅಲ್ಲಿ ಮುಖ್ಯ ಏನೆಂದರೆ ರುಚಿ, ಗುಣಮಟ್ಟದಲ್ಲಿ ಬದಲಾವಣೆಯಾಗುವುದಿಲ್ಲ. ಆದರೆ ಬೆಲೆ ಮಾತ್ರ ಶೇ 10-15ರಷ್ಟು ಹೆಚ್ಚು ತೆರಬೇಕಾಗುತ್ತದೆ~ ಎನ್ನುವುದು `ಅಪ್‌ಸೌತ್~ನ ಕುಮಾರ್ ವಿವರಣೆ.

`ಕನ್ನಡಿಗರು ಭೋಜನಪ್ರಿಯರು. ವೈವಿಧ್ಯಮಯ ತಿಂಡಿ, ಭಕ್ಷ್ಯ ಭೋಜನ ಅವರಿಗಿಷ್ಟ. ಆದರೆ ಯಾವುದೇ ಹೋಟೆಲ್‌ಗಳಲ್ಲಿ ಇಂಥ ಆಯ್ಕೆಗಳಿಲ್ಲ. ಒಬ್ಬ ವ್ಯಕ್ತಿ ಅಬ್ಬಬ್ಬಾ ಎಂದರೆ ಒಂದು ಮಸಾಲೆ ದೋಸೆ, ಒಂದು ಕೇಸರಿ ಬಾತ್ ಸವಿಯಬಹುದು. ಆದರೆ ಇಲ್ಲಿ ತಿಂಡಿಯ ರುಚಿ, ಗಾತ್ರ ಹಾಗೂ ಒಬ್ಬ ವ್ಯಕ್ತಿಯ ಸಾಮರ್ಥ್ಯ ಮೂರನ್ನೂ ಗಮನದಲ್ಲಿರಿಸಿಕೊಂಡು ಕಾಂಬೊಗಳನ್ನು ಸಿದ್ಧಪಡಿಸಲಾಗಿದೆ~ ಎನ್ನುತ್ತಾರೆ ಹಿರಿಯ ಬಾಣಸಿಗ ವೆಂಕಟೇಶ ಭಟ್.

ಇವರು ತಾಜ್ ಹಾಗೂ ಲೀಲಾ ಪ್ಯಾಲೆಸ್‌ನಲ್ಲಿ ಸೇವೆ ಸಲ್ಲಿಸಿದವರು. ನಂತರ ಈ ಕಾಂಬೊಗಳ ಸಾಹಸಕ್ಕೆ ಮುಂದಾಗಿದ್ದು ಯುವ ಉದ್ಯಮಿ ವಿಜಯ್ ಅಭಿಮನ್ಯು ಅವರ ಇಂಥ `ಅಪ್‌ಸೌತ್~ ಯಾನದಲ್ಲಿ ಭಾಗಿಯಾಗಲು.

ಇದೀಗ `ಅಪ್‌ಸೌತ್~ ಬೆಂಗಳೂರಿನ ರುಚಿಯನ್ನು ಪುಣೆಯಲ್ಲಿಯೂ, ಹೈದರಾಬಾದ್‌ನಲ್ಲಿಯೂ ನೀಡುತ್ತಿದೆ. ನಂತರ ಅಹಮದಾಬಾದ್‌ನಲ್ಲಿಯೂ ಆರಂಭಿಸುವ ಯೋಜನೆ ಇದೆ. ಎಲ್ಲ ಕಡೆಗೂ ಕಾಫಿ ಪುಡಿ, ಸಾಂಬಾರ್ ಮಸಾಲೆ ಮುಂತಾದವನ್ನು ಬೆಂಗಳೂರಿನಿಂದಲೇ ಕಳುಹಿಸಲಾಗುತ್ತದೆ. ಇದು ಗುಣಮಟ್ಟ ಹಾಗೂ ಅಪ್ಪಟ ರುಚಿಯನ್ನು ಉಳಿಸುವ ಪ್ರಯತ್ನ ಎನ್ನುತ್ತಾರೆ ಅವರು.

ಈ ಕಾಂಬೊಗಳ ಪ್ರಯತ್ನದ ಪರಿಕಲ್ಪನೆ ಬೆಳೆದಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದು ಅಪ್‌ಸೌತ್ ಆರಂಭಿಸಿದ ವಿಜಯ್‌ಅಭಿಮನ್ಯು. ಮೆಕ್‌ಡೊನಾಲ್ಡ್ಸ್‌ನಂಥ ರೆಸ್ಟುರಾಗಳು ಜನಪ್ರಿಯಗೊಳ್ಳುವುದು ಯಾಕೆ? ವೈವಿಧ್ಯಮಯ ಆಯ್ಕೆಗಳಿಂದಾಗಿ.
 
ಇದೇ ಪರಿಕಲ್ಪನೆ ನಮ್ಮ ದಕ್ಷಿಣ ಭಾರತೀಯ ಪಾಕ ಪದ್ಧತಿಗೆ ಹೇಳಿ ಮಾಡಿಸಿದಂತಿದೆ. ವಿಶೇಷ ಸಂದರ್ಭಗಳಲ್ಲಿ ಮನೆಯಲ್ಲಿ ತಿಂಡಿ ಮಾಡಿದಾಗಲೂ ವೈವಿಧ್ಯಮಯ ಆಯ್ಕೆ ಇರುವುದಿಲ್ಲವೇ? ಬಿಸಿಬೇಳೆಭಾತ್, ಪುಳಿಯೋಗರೆ, ಟೊಮೆಟೊ ಬಾತ್ ತಿಂಡಿಗೂ ಸೈ.. ಊಟಕ್ಕೂ ಸೈ... ಹಾಗಾಗಿ ವೈವಿಧ್ಯಮಯ ಆಯ್ಕೆ ನೀಡುವ ಹೋಟೆಲ್ ಆರಂಭಿಸಬೇಕು ಎಂದೇ `ಅಪ್‌ಸೌತ್~ ಆರಂಭಿಸಲಾಯಿತು.

ಸಾರ್ವಜನಿಕರ ಪ್ರತಿಕ್ರಿಯೆಯಂತೂ ಅದ್ಭುತವಾಗಿದೆ. ಕೆಲವರು ಅನ್ನ ಸಾಂಬಾರ್ ಸಹ ಬಯಸಿದರು. ಅದಕ್ಕಾಗಿ ಮಧ್ಯಾಹ್ನ 1ರಿಂದ 3ರ ಸಮಯವನ್ನು ನಿಗದಿಪಡಿಸಲಾಗಿದೆ. ಬೆಳಗಿನ ತಿಂಡಿಯ ಕಾಂಬೊಗಳು 8 ಗಂಟೆಯಿಂದಲೇ ಲಭ್ಯ. ಇದಲ್ಲದೆ ಪ್ರತ್ಯೇಕ ತಿಂಡಿಯನ್ನೂ ನೀಡಲಾಗುತ್ತದೆ. ಆದರೆ ಬಹುತೇಕ ಜನರು ಬಯಸುವುದು ಕಾಂಬೋವನ್ನು.

`ಅಪ್‌ಸೌತ್~ ಸದ್ಯಕ್ಕೆ ತನ್ನೆಲ್ಲ ಶಾಖೆಗಳಲ್ಲಿಯೂ ಮೂರು ಕಿ.ಮೀ. ವ್ಯಾಪ್ತಿಯಲ್ಲಿರುವವರಿಗೆ ಹೋಮ್ ಡೆಲಿವರಿ ಸೇವೆ ಆರಂಭಿಸಿದೆ~ ಎನ್ನುತ್ತಾರೆ ಕುಮಾರ್. `ಅಪ್‌ಸೌತ್~ನ ಕಾಸಿ ಹಲ್ವಾ ಬಾಯಲ್ಲಿ ನೀರೂರಿಸುವಂತಿದೆ. ಮಹಾಪ್ರಾಣ ಎಂದು ಕರೆಯಿಸಿಕೊಳ್ಳುವ ಕುಂಬಳದ ಈ ಸಿಹಿ ನೋಡಲು ಕ್ಯಾರೆಟ್‌ಹಲ್ವಾದಂತೆಯೇ ಕಾಣುತ್ತದೆ. ಆದರೆ ಬಾಯಿಗಿಟ್ಟರೆ ಮಾತ್ರ ಸಿಹಿರಸದ ಸಿಂಚನ. ಕೇಸರಿಬಾತ್ ಮನೆಯ ರುಚಿಯನ್ನು ನೆನಪಿಸುತ್ತದೆ. ಬದಾಮ್ ಹಲ್ವಾ ಇನ್ನೊಮ್ಮೆ ಬಾಯಿ ಚಪ್ಪರಿಸುವಂತಿದೆ.

ಇದಲ್ಲದೆ ಸಾರ್ವಜನಿಕರನ್ನು ಸೆಳೆಯಲು ವಿಶೇಷ ರಿಯಾಯಿತಿಯೂ ಇಲ್ಲಿದೆ. ಮೆನುವಿನ ಮೊದಲ ಲೀಫ್‌ಲೆಟ್‌ನೊಂದಿಗೆ ನಾಲ್ಕು ರಿಯಾಯಿತಿ ಕಾರ್ಡುಗಳು ದೊರೆಯುತ್ತವೆ. ಎರಡು ಕಾಂಬೊಗಳನ್ನು ಪಡೆದರೆ ಮೂರನೆಯದು ಉಚಿತ. ನಾಲ್ಕು ಮಸಾಲೆ ದೋಸೆಗಳನ್ನು ಕೊಂಡರೆ ಐದನೆಯದು ಉಚಿತ. ನಿಮ್ಮ ವಿದ್ಯಾರ್ಥಿ ಅಥವಾ ಉದ್ಯೋಗದ ಗುರುತಿನ ಕಾರ್ಡ್ ತೋರಿಸಿ, ಬಿಲ್‌ನ ಮೊತ್ತದ ಮೇಲೆ ಶೇ 10ರಷ್ಟು ರಿಯಾಯಿತಿ! ಇದು ಆ.31ರವರೆಗೆ ಮಾತ್ರ. 500 ರೂಪಾಯಿಗೆ ಮೇಲ್ಪಟ್ಟು ಬಿಲ್ ಆದರೆ ಶೇ. 15ರಷ್ಟು ರಿಯಾಯಿತಿ.

`ಅಪ್‌ಸೌತ್~, ಬಿಲಿಯನ್‌ಸ್ಮೈಲ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ನ್ ಕ್ವಿಕ್ ಸರ್ವಿಸ್ ರೆಸ್ಟುರಾ ಆಗಿದೆ. ರಾಗಿ ಗುಡ್ಡ ದೇವಸ್ಥಾನದ ಕಮಾನಿನ ಎದುರು, ಜಯನಗರ 9ನೇ ಬ್ಲಾಕ್, ಬೆಂಗಳೂರು ದಕ್ಷಿಣ. ಮಾಹಿತಿಗೆ: 2244 3434.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.