ADVERTISEMENT

ನೂರು ಬಗೆ ಚಾಯ್!

ಪ್ರಜಾವಾಣಿ ವಿಶೇಷ
Published 4 ಫೆಬ್ರುವರಿ 2013, 19:59 IST
Last Updated 4 ಫೆಬ್ರುವರಿ 2013, 19:59 IST
ನೂರು ಬಗೆ ಚಾಯ್!
ನೂರು ಬಗೆ ಚಾಯ್!   

`ಚಹಾ, ಪ್ರಪಂಚದ ಯಾವ ನೆಲದಲ್ಲಿ ಬೆಳೆದಿದ್ದರೂ ಅದು ಒಂದೇ ಆಗಿರುತ್ತದೆ. ಆದರೆ ಅದರಲ್ಲಿ ವೈಶಿಷ್ಟ್ಯ ಬರುವುದು ಆ ಎಲೆಯನ್ನು ಯಾವ ಕಾಲದಲ್ಲಿ ಮತ್ತು ಗಿಡದ ಯಾವ ಭಾಗದಿಂದ ಕಿತ್ತಿದ್ದಾರೆ ಎಂಬ ಅಂಶದಿಂದ. ಚಹಾದ ಸ್ವಾದ ಇರುವುದು ಅದರ ಎಲೆ ಮತ್ತು ಚಿಗುರಿನಲ್ಲಿ. ವಿಪರ್ಯಾಸವೆಂದರೆ, ಬ್ರಿಟಿಷರ ಕಾಲದಿಂದಲೂ ಎಲೆಯನ್ನು ಪುಡಿ ಮಾಡುವಾಗ ಕೊನೆಯಲ್ಲಿ ಉಳಿಯುವ ದೂಳನ್ನು ನಾವು-ಭಾರತೀಯರು- ಕುಡಿಯುತ್ತಾ ಬಂದೆವು.

ಅವರು ಸ್ವಾದ ಮತ್ತು ಶಕ್ತಿಭರಿತ ಎಲೆಯಿಂದ ಚಹಾದ ತಾಜಾತನವನ್ನು ಸವಿದರು. ಇಂದಿಗೂ ಬಹುತೇಕರಿಗೆ ಚಹಾ ಎಂದರೆ ಪುಡಿಎಂದೇ ನಂಬಿಕೆಯಿದೆ. ಈ ಮನಃಸ್ಥಿತಿಯನ್ನು ಬದಲಾಯಿಸುವ ಸಣ್ಣ ಪ್ರಯತ್ನ ನಮ್ಮದು' ಎಂದರು ದೀಪಾ ಪ್ರಸನ್ನಕುಮಾರ್. ಜಯನಗರದಲ್ಲಿರುವ `ಟೇ' ಮಲ್ಟಿಕ್ಯುಸಿನ್ ರೆಸ್ಟೊ ಲಾಂಜ್ ಎಂಬ ಟೀ ಕೆಫೆ ಆರಂಭಕ್ಕೂ ಇದೀಗ `ಚಹಾ ಉತ್ಸವ'ವನ್ನು ಏರ್ಪಡಿಸಿರುವುದಕ್ಕೂ ಅವರ ಈ ಮಹತ್ವಾಕಾಂಕ್ಷೆ ಮತ್ತು ಛಲವೇ ಕಾರಣ.

ಚಹಾ ಆರೋಗ್ಯಕರ ಪೇಯ. ಆದರೆ ಕಾಫಿ ಅಥವಾ ಇತರ ಪೇಯಗಳ ಸ್ಪರ್ಧೆಯ ಮುಂದೆ ಚಹಾದ ಮೂಲ ಸ್ವರೂಪವನ್ನು ಜನರೆದುರು ಇಡುವಂತಹ ಪ್ರಯತ್ನಗಳು ಅಷ್ಟಾಗಿ ಗಮನ ಸೆಳೆಯುತ್ತಿಲ್ಲ. ಇಷ್ಟಕ್ಕೂ ಚಹಾದ ಮೂಲಸ್ವಾದವನ್ನೆ ನಾವು ಸವಿದಿಲ್ಲ. ದೂಳಿನಂತಹ ಪುಡಿಯಲ್ಲಿ ಅದು ಸಿಗುವುದಿಲ್ಲ. ಮುಖ್ಯವಾಗಿ ನಾವು ಚಹಾಗೆ ಹಾಲು ಬೆರೆಸಿ ಕುಡೀತೇವೆ ನೋಡಿ ಆ ಪರಿಕಲ್ಪನೆಯೇ ತಪ್ಪು. ಹಾಲು ಬೆರೆಸಿದರೆ ಚಹಾದಲ್ಲಿನ ಆರೋಗ್ಯಕರ, ಔಷಧೀಯ ಗುಣಗಳು ಕಳೆದುಹೋಗುತ್ತವೆ ಎಂಬುದು ದೀಪಾ ವಾದ.

ತೀರಾ ಸುಸ್ತಾಗಿ ಶರೀರದಲ್ಲಿ ಏನೇನೂ ಶಕ್ತಿಯಿಲ್ಲ ಅಂತನ್ನೋ ಸ್ಥಿತಿ ತಲುಪಿದಾಗ ಒಣಶುಂಠಿ, ಒಣ ಅರಸಿನ, ನೀಲಗಿರಿ ತೈಲ ಮತ್ತಿತರ ಅಂಶಗಳನ್ನೊಳಗೊಂಡ `ಹರ್ಬಲ್ ಬ್ಲಡ್ ಕ್ಲೆನ್ಸರ್' ಚಹಾ ಕುಡಿದರೆ ಹತ್ತು ನಿಮಿಷದೊಳಗೆ ಹೊಸ ಚೈತನ್ಯ ಬರುತ್ತದಂತೆ. ಇದರಲ್ಲಿ ಚಹಾದ ಎಲೆ ಇಲ್ಲ! ಆದರೆ ಅದರ ಸುವಾಸನೆಯಿದೆ.

ಚೀನೀ ಚಹಾ
`ಚೀನೀಯರ ಚಹಾ ಮೋಹವನ್ನು ಹೊರಗಿಟ್ಟು ಚಹಾದ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಚೀನಾದ ರಾಜವಂಶದವರ ಸೌಂದರ್ಯ, ಬಣ್ಣದ ರಹಸ್ಯ ಅಡಗಿದ್ದುದೇ ಚಹಾದಲ್ಲಿ. ಈ ಅಂಶ ಬಯಲಾದದ್ದು ರಾಣಿ ಎಲಿಜಬೆತ್ ಚೀನಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ. ಅಲ್ಲಿಯವರೆಗೂ ಚೀನಾದ ರಾಜವಂಶಕ್ಕಷ್ಟೇ ಸೀಮಿತವಾಗಿದ್ದ ರಾಯಲ್ ಟೀ ಚೀನಾದಾಚೆ ದಾಟಿತು' ಎಂದು ತಮ್ಮ ಅಧ್ಯಯನದ ಅಂಶವೊಂದನ್ನು ಹೊರಗೆಡವಿದರು ದೀಪಾ.
ಮುಖ್ಯವಾಗಿ ಮೂರು ಬಗೆಯ ರಾಯಲ್ ಟೀಗಳು ಅಲ್ಲಿ ಹೆಸರುವಾಸಿ.

ಟೀಕ್ವಾನಿಯನ್, ಜಾಸ್ಮಿನ್ ಪರ್ಲ್, ಜೇಡ್ ರಿಂಗ್ಸ್. ಜೀವನಪ್ರೀತಿಗೆ ಚೀನೀಯರದ್ದು ಎತ್ತಿದ ಕೈ. ಚಹಾದ ಎಳೆಚಿಗುರನ್ನು ನಾಜೂಕಾಗಿ ವೃತ್ತಾಕಾರದಲ್ಲಿ ಕೈಯಲ್ಲೇ ರೋಲ್ ಮಾಡುತ್ತಾರೆ. ಕುದಿದ ನೀರಿನ ಲೋಟಕ್ಕೆ ಒಂದು ಗ್ರಾಂ (ಒಂದು ಚಮಚ) ಚಹಾ ಹಾಕಿ ಮೂರು ನಿಮಿಷದೊಳಗೆ ಈ ರೋಲ್‌ಗಳು ಎಲೆಯಾಕಾರಕ್ಕೆ ಅರಳುತ್ತವೆ! ಜಾಸ್ಮಿನ್ ಪರ್ಲ್ ಚಹಾವಾಗಿ ಮಾರ್ಪಡುವ ಪ್ರಕ್ರಿಯೆ ದೃಶ್ಯಕಾವ್ಯದಂತಿರುತ್ತದೆ. ಮಲ್ಲಿಗೆ ಮೊಗ್ಗನ್ನು ಚಹಾ ಕುಡಿಯೆಲೆಯೊಳಗೆ ಸೇರಿಸಿ ರೋಲ್ ಮಾಡಿದ `ಜಾಸ್ಮಿನ್ ಪರ್ಲ್', ಎಲೆಯ ಮಧ್ಯದಲ್ಲಿ ಮಲ್ಲಿಗೆ ಬಿರಿದು ಲೋಟವನ್ನು ಅಲಂಕರಿಸುತ್ತದೆ!

ಅಂದಹಾಗೆ, ಚಹಾದ ಸ್ವಾದ ಮತ್ತು ವೈವಿಧ್ಯದ ಬಗ್ಗೆ ಒಂದು ಅಭಿಯಾನವನ್ನೇ ಕೈಗೊಳ್ಳುವ ಉದ್ದೇಶದಿಂದ `ಟೇ'ಯಲ್ಲಿ ಫೆಬ್ರುವರಿ ಅಂತ್ಯದವರೆಗೂ ಚಹಾ ಉತ್ಸವ ನಡೆಯಲಿದೆ. ಜಯನಗರ ನಾಲ್ಕನೇ ಬ್ಲಾಕ್‌ಗೆ ಕಾಸ್ಮೋಪಾಲಿಟನ್ ಕ್ಲಬ್ ಮೂಲಕ ಹೋಗುವಾಗ ರಿಬಾಕ್ ಮಳಿಗೆಯ ಪಕ್ಕದಲ್ಲೇ `ಟೇ' ಇದೆ.
ಸಂಪರ್ಕಕ್ಕೆ: 4170 7478/88615 86550  www.teytea.com.

ADVERTISEMENT

`ಟೇ'ಯಲ್ಲಿ...

`ಟೇ', ಚಹಾ ಬಾರ್/ ಟೀ ಕೆಫೆ ಅಷ್ಟೇ ಅಲ್ಲ. ಇಲ್ಲಿ ಲಘು ಉಪಾಹಾರ, ಊಟವೂ ಲಭ್ಯ. ಕಚೇರಿಯಿಂದಾಚೆ ಬಿಸಿನೆಸ್ ಮೀಟಿಂಗ್ ಕೇಂದ್ರಕ್ಕೆ ಬೇಕಾದ ಸೌಕರ್ಯಗಳಿವೆ.

ಬಿಡುವಿನ ವೇಳೆಯಲ್ಲಿ ಟೀ ಲಾಂಜ್‌ನಲ್ಲಿ ಕುಳಿತು ಓದುತ್ತಾ, ಹರಟೆ ಹೊಡೆಯುತ್ತಾ ಬಗೆ ಬಗೆ ಚಹಾವನ್ನು ಆಸ್ವಾದಿಸಬಹುದು. ಊಟದ ವೇಳೆ ಬಫೆ ಸೇವಿಸಬಹುದು. ವೈನ್‌ಪ್ರಿಯರಿಗೆ ಅದೂ ಇಲ್ಲಿ ಲಭ್ಯ. ಮಿನಿ ಪೀಜಾ, ಬರ್ಗರ್, ಟೀ ಕೇಕ್, ಬಿಸ್ಕತ್ತು ಇದೆ. `ಟೇ'ಯಲ್ಲಿ ಸಿಗುವ ನೂರು ಬಗೆಯ ಚಹಾದಲ್ಲಿ ಯಾವುದು ಬೇಕೋ ಅದನ್ನು ಸವಿದು ಇಷ್ಟವಾದಲ್ಲಿ ಖರೀದಿಸಲೂ ಅವಕಾಶವಿದೆ.

25 ಗ್ರಾಂನಿಂದ ಆರಂಭಿಸಿ ಕೆಜಿ ಲೆಕ್ಕದಲ್ಲಿ ಕೊಡುತ್ತೇವೆ. ಆದರೆ ನಾವು 25 ಗ್ರಾಂ ಖರೀದಿಯನ್ನೇ ಶಿಫಾರಸು ಮಾಡುತ್ತೇವೆ. ಅದು ಇಷ್ಟವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಂಡುಕೊಳ್ಳಬಹುದು' ಎನ್ನುತ್ತಾರೆ ದೀಪಾ ಪತಿ ಪ್ರಸನ್ನಕುಮಾರ್.
ಹರ್ಬಲ್, ಆಯುರ್ವೇದಿಕ್, ಗ್ರೀನ್, ಔಷಧೀಯ ಚಹಾ ಲಭ್ಯ. ಅದರಲ್ಲೂ ಗ್ರೀನ್, ಬ್ಲಾಕ್, ಗೋಲ್ಡನ್, ವೈಟ್, ರೆಡ್ ಚಹಾ ಎಂಬ ವರ್ಣ ವೈವಿಧ್ಯ!

ಇದೇ ರೀತಿ `ಸ್ಲಿಮಿಂಗ್ ಟೀ', ಪುರುಷರ ಟೀ, ಮಹಿಳೆಯರ ಟೀ, ಬ್ಲೂಮಿಂಗ್ ಟೀ, ಫ್ರೂಟಿ ಟೀ, ಹರ್ಬಲ್ ವಿಂಟರ್ ಸ್ಪೈಸ್ ಚಾಯ್, ಆರ್ಥಡಾಕ್ಸ್ ಮಸಾಲಾ ಚಾಯ್, ಕಾಶ್ಮೀರಿ, ಮೊರೊಕ್ಕಾನ್, ಲೆಮನ್, ಬನಿಬುಶ್, ಜಿಂಜರ್, ಮಿಂಟ್, ಜಿಂಗ್‌ಸೆಂಗ್ ಒಲಾಂಗ್, ವಾತ ಹರ್ಬಲ್, ಪಿತ್ತ ಹರ್ಬಲ್, ಕಫ ಹರ್ಬಲ್ ಹೀಗೆ 58 ಬಗೆಯ ತಾಜಾ ಚಹಾಗಳು ಇಲ್ಲಿ ಲಭ್ಯವಿದ್ದರೆ ಫ್ಯೂಷನ್ ಹೆಸರಿನಲ್ಲಿ ಮಿಕ್ಸೆಡ್ ಬ್ಲೆಂಡ್ ಚಹಾಗಳ 42 ಬಗೆಯೂ ಸೇರಿ ಬರೋಬ್ಬರಿ 100 ವಿಧದ ಸ್ವಾದಗಳು `ಟೇ'ಯಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.