ADVERTISEMENT

ಬೆಳ್ಳಗಿರುವುದೆಲ್ಲ ಹಾಲಲ್ಲ...!

ಡಾ.ಅರುಣ್ ಇಸ್ಲೂರ್
Published 5 ಆಗಸ್ಟ್ 2011, 19:30 IST
Last Updated 5 ಆಗಸ್ಟ್ 2011, 19:30 IST

ಅಮೃತಕ್ಕೆ ಸಮವೆಂದೇ ಬಿಂಬಿಸಲಾಗಿರುವ ಹಾಲಿನ ಕುರಿತು ಯಾರಿಗೆ ತಾನೇ ಗೊತ್ತಿಲ್ಲ? ಸಸ್ತನಿಗಳು ತಮಗೆ ಹುಟ್ಟಿದ ನವಜಾತ ಶಿಶುವಿಗೆ ಹಾಲನ್ನು ನೀಡಿ ಆರೈಕೆ ಮಾಡುವ ವಿಷಯ ಎಲ್ಲರಿಗೂ ಗೊತ್ತಿದೆ. ಅಳುತ್ತಿರುವ ಮಗು ತಾಯಿಯ ಮೊಲೆಹಾಲನ್ನು ಸೇವಿಸಿದ ಕ್ಷಣಮಾತ್ರದಲ್ಲೇ ಅಳುವನ್ನು ಮರೆತೇ ಬಿಡುತ್ತದೆ.
 
ಮಕ್ಕಳು ಆರೋಗ್ಯವಾಗಿ ಬೆಳೆಯಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದೇಹಕ್ಕೆ ಅಗತ್ಯವಾದ ಹಲವಾರು ವಿಟಮಿನ್, ಪ್ರೊಟೀನು, ಖನಿಜಾಂಶಗಳನ್ನು ಹೊಂದಿರುವ ನೈಸರ್ಗಿಕ ಹಾಲನ್ನು ಅಮೃತಕ್ಕೆ ಹೋಲಿಸಿದಲ್ಲಿ ತಪ್ಪೇನಿಲ್ಲ. ಟೀ - ಕಾಫಿ ಪ್ರಿಯರಿಗಂತೂ ಮುಂಜಾನೆ ಹಾಲಿಲ್ಲದೇ ಚಹ - ಕಾಫಿ ಸೇವಿಸಲೂ ಅಸಾಧ್ಯ.

ಆದರೆ ಇತ್ತೀಚೆಗೆ ಮನುಷ್ಯನ ಅತೀಯಾಸೆಯಿಂದಾಗಿ ಕೃತಕ ಹಾಲಿನ ಉತ್ಪಾದನೆಯಾಗುತ್ತಲಿದ್ದು, ಇಂತಹ ಹಾಲಿನ ಸೇವನೆ ನಮ್ಮ ಆರೋಗ್ಯದ ಮೇಲೆ ಘೋರ ಪರಿಣಾಮವನ್ನು ಉಂಟುಮಾಡಬಲ್ಲದು. ನಮ್ಮ ಸುತ್ತಲಿನ ಮಾರುಕಟ್ಟೆಯಲ್ಲಿ ಹಲವಾರು ಬ್ರಾಂಡಿನ ಹಾಲುಗಳು ವಿವಿಧ ರಂಗಿನ ಪ್ಯಾಕೆಟ್‌ಗಳಲ್ಲಿ ದೊರೆಯುತ್ತಲಿದ್ದು, ವಿವಿಧ ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟವಾಗುತ್ತಿವೆ.

ನಮ್ಮ ಅಜ್ಜಿ ಹೇಳುತ್ತಿದ್ದ ಮಾತು `ಬೆಳ್ಳಗಿರುವುದೆಲ್ಲ ಹಾಲಲ್ಲ~ ಎಂಬುದು ಇಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ದೊರೆಯುವ ಕೃತಕ ಹಾಲಿನಲ್ಲಿ ಬಳಸಲ್ಪಡುವ ರಾಸಾಯನಿಕಗಳ ಕುರಿತು ಯಾರಿಗೂ ಸಂಶಯ ಬಾರದಿರುವುದರಿಂದಲೇ ಈ ದಂಧೆಯು ನಮ್ಮ ದೇಶದಾದ್ಯಂತ ಪಸರಿಸಿದೆ. ಅಷ್ಟೇ ಏಕೆ ಹಲವಾರು ಹೋಟೆಲ್, ರೈಲುಗಳಲ್ಲಿ ದೊರೆಯುವ ಟೀ, ಕಾಫಿಗಳಲ್ಲಿ ಬಳಕೆಯಾಗುವುದು ಇಂತಹ ಅಗ್ಗದ ಕೃತಕ ಹಾಲು!

 ಇಂತಹ ಕೃತಕ ಹಾಲಿನ ಕುರಿತು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿ ಇದರ ಕುರಿತಾದ ವೈಜ್ಞಾನಿಕತೆಯನ್ನು ತಿಳಿಸುವುದೇ ಈ ಲೇಖನದ ಉದ್ದೇಶವಾಗಿದೆ.ಜನಸಮಾನ್ಯರಿಗೆಲ್ಲ ತಿಳಿದಿರುವಂತೆ ಹಾಲಿನ ಕಲಬೆರಕೆಯೆಂದರೆ ನೀರನ್ನು ಬೆರೆಸುವುದು. ಇದೊಂದು ಅತೀ ಸುಲಭದ, ಎಲ್ಲರಿಗೂ ಗೊತ್ತಿರುವ ವಿಚಾರವೇ.

ಆದರೆ ಹಲವಾರು ಮಾರಾಟ ಕಂಪೆನಿಗಳು, ಹಾನಿಕಾರಕ, ಅಗ್ಗದ ರಾಸಾಯನಿಕಗಳನ್ನು ನೀರಿನೊಂದಿಗೆ ಸೇರಿಸಿ ಹಾಲಿನ ಹೆಸರಿನಲ್ಲಿ ಬಿಳಿ ಬಣ್ಣದ ದ್ರವವನ್ನು ಮಾರಾಟ ಮಾಡುತ್ತಿದ್ದಾರೆ! ಉತ್ತರ ಭಾರತದಾದ್ಯಂತ ಇಂಥಹ ಕೃತಕ ಹಾಲಿನ ಮಾರಾಟದ ವ್ಯವಸ್ಥಿತ ಜಾಲವೇ ಇದ್ದು, ನಮ್ಮ ರಾಜ್ಯದಲ್ಲೂ ಇದು ಹಬ್ಬುತ್ತಿದೆ ಎಂಬುದು ಆಘಾತಕರ.

ನೈಸರ್ಗಿಕ ಹಾಲನ್ನೇ ನಾಚಿಸುವಂತಹ ಬಿಳಿಯ ಬಣ್ಣ, ರುಚಿ, ಗಡಸುತನ ಎಲ್ಲವನ್ನೂ ಹೊಂದಿರುವ ರಾಸಾಯನಿಕಗಳನ್ನು ನೀರಿನಲ್ಲಿ ಸೇರಿಸಿ ಕೃತಕ ಹಾಲು ಸೃಷ್ಟಿಸಲಾಗುತ್ತಿದೆ.
ಉತ್ತರ ಭಾರತದಲ್ಲಿ ಹಲವಾರು ಬಾರಿ ಇಂತಹ ಕೃತಕ ಹಾಲಿನ ಕೇಂದ್ರಗಳಿಗೆ ದಾಳಿ ನಡೆಸಿದ ಪೊಲೀಸರು, ರಹಸ್ಯವನ್ನು ಹೊರಗೆಡವಿದ್ದು ಹಾಲು ಪ್ರಿಯರಿಗೆ ದೊಡ್ಡ `ಶಾಕ್~ ನೀಡಿದೆ.
 
ಇಂತಹ ಕೇಂದ್ರಗಳಲ್ಲಿ ಯಾವುದೇ ಪ್ರಮಾಣದಲ್ಲೂ ನೈಸರ್ಗಿಕ ಹಾಲಿನ ಬಳಕೆಯಾಗದೇ, ಕೇವಲ ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸುತ್ತಿದ್ದರು. ಇದರಲ್ಲಿ ಬಳಕೆಯಾಗುವಂತವು ಯೂರಿಯಾ ರಸಗೊಬ್ಬರ, ಅಡುಗೆ ಸೋಡಾ, ಅಮೋನಿಯಂ ಸಲ್ಫೇಟ್ ರಸಗೊಬ್ಬರ, ಸ್ಟಾರ್ಚ್ ಪುಡಿ, ಪಾರ್ಮಾಲಿನ್ ದ್ರಾವಣ, ಸಕ್ಕರೆ, ಗ್ಲುಕೋಸ್, ಹೈಡ್ರೊಜನ್ ಪರಾಕ್ಸೈಡ್, ಉಪ್ಪು, ಸೋಪಿನ ಪುಡಿ, ಅಗ್ಗದ ಅಡುಗೆ ಎಣ್ಣೆ, ಸೊಯಾಬಿನ್ ಹಿಟ್ಟು ಇತ್ಯಾದಿ!

ಇಂತಹ ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಹಾಲಿನ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ನೀವೇ ಊಹಿಸಬಹುದು. ಟ್ರೈನ್‌ನಲ್ಲಿ ಚಹಾ ಮಾರುವ ಹುಡುಗನ ಹಾಲಿನ ಬಗ್ಗೆ ನನಗೆ ಯಾವಾಗಲೂ ಸಂದೇಹ.
 
ಹಾಲಿನ ದರ ಲೀಟರ್‌ಗೆ  ರೂ14  ಇದ್ದಾಗಲೂ ಒಂದು ಚಹದ ದರ  ರೂ 5.  ಅಂತೆಯೇ ಹಾಲಿನ ದರ ರೂ. 24ಕ್ಕೆ ಏರಿದಾಗಲೂ ಚಹದ ದರ  5 ರೂಪಾಯಿಗಳೇ, ರೈಲ್ವೆ ಇಲಾಖೆ ವಿಧಿಸಿದ ಮಾನದಂಡಗಳನ್ನಂತೂ ಪಾಲಿಸಲೇ ಬೇಕು. ಹಾಗಾದರೆ ಇದು ಹೇಗೆ ಸಾಧ್ಯ? ಅಂತೆಯೇ ನಾನು ಕಳೆದ ಮೇ ತಿಂಗಳಲ್ಲಿ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುವಾಗ ಅಲ್ಪ ಪ್ರಮಾಣದಲ್ಲಿ ಬೇಕಾದ ರಾಸಾಯನಿಕಗಳನ್ನು ಇಟ್ಟುಕೊಂಡಿದ್ದೆ. ಹಾಲನ್ನು ಸುಲಭದ ಪರೀಕ್ಷೆಗೆ ಒಳಪಡಿಸಿದಾಗ ನನ್ನ ಅನುಮಾನ ನಿಜವಾಗಿತ್ತು.
 
ಆ ಹಾಲಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ರಸಗೊಬ್ಬರಗಳಾದ ಯೂರಿಯಾ ಹಾಗೂ ಅಮೋನಿಯಂ ಸಲ್ಫೇಟ್ ಅನ್ನು ಬೆರೆಸಲಾಗಿತ್ತು! ಇಂತಹದೇ ಕಲಬೆರಕೆ ಹಾಲು ಬಸ್‌ಸ್ಟಾಂಡ್, ರೈಲ್ವೆ ಸ್ಟೇಷನ್ ಮುಂತಾದ ಜನಭರಿತ ಪ್ರದೇಶಗಳಲ್ಲಿ ಬಳಕೆಯಾಗುವುದು ಅತೀ ಸಾಮಾನ್ಯ. ಚಹಾದಲ್ಲಿ ಬೆರೆಸಿದ ಸುವಾಸನೆಯುಕ್ತ ವಸ್ತುವಿನಿಂದಾಗಿ, ಇಂತಹ ಚಹ ಇನ್ನಷ್ಟು ರುಚಿಯಾಗಿರುತ್ತದೆ ಎಂಬುದು ಸತ್ಯ!

ಈ ಘಟನೆಯೇ ನನಗೆ ಈ ಲೇಖನ ಬರೆಯಲು ಸ್ಫೂರ್ತಿ ನೀಡಿದ್ದು. ಹಾಗಾದರೆ ರಾಸಾಯನಿಕಗಳನ್ನು ಹೇಗೆ ಪತ್ತೆ ಹಚ್ಚಬೇಕು? ಹಾಲಿನಲ್ಲಿ ಬಳಕೆಯಾಗುವ ಕೃತಕ ರಾಸಾಯನಿಕ ಪತ್ತೆಗೆ ಕೆಲವು ಸುಲಭದ ವಿಧಾನಗಳಿಂದ ಸ್ಥಳದಲ್ಲೇ ನೀವು ಪರೀಕ್ಷಿಸಬಹುದು.

ಯೂರಿಯಾ ಬಳಕೆ ಹಾಲಿನ ಗಡಸುತನ ಪರೀಕ್ಷಿಸಲು ಲ್ಯಾಕ್ಟೋಮೀಟರ್ ಎಂಬ ಸಾಧನವಿದ್ದು, ನೀರಿನಿಂದ ಕಲಬೆರಕೆಯಾಗಿದ್ದರೆ ಸುಲಭವಾಗಿ ಗುರುತಿಸಬಹುದು. ಆದರೆ ಯೂರಿಯಾ ದ್ರಾವಣವನ್ನು ಬಳಸುವುದರಿಂದ ಹಾಲಿನ ಗಡಸುತನ ಹೆಚ್ಚಾಗಿ ಲ್ಯಾಕ್ಟೋಮೀಟರ್‌ನ ಕಣ್ಣಿಗೂ ಮಣ್ಣೆರಚುತ್ತದೆ. ಒಂದು ಟೆಸ್ಟ್ ಟ್ಯೂಬಿನಲ್ಲಿ 3-4 ಚಮಚದಷ್ಟು ಹಾಲು (ಸುಮಾರು 5 ಎಂ. ಎಂ.) ಅದಕ್ಕೆ 2-3 ಹನಿಗಳಷ್ಟು `ಎನ್-ಎನ್ ಡೈಮಿಥೈಲ್ ಬೆಂಜಾಲ್ಟಿಹೈಡ್~ನ ದ್ರಾವಣ (ಶಾಲಾ - ಕಾಲೇಜ್‌ಗಳ ಪ್ರಯೋಗಾಲಯದಲ್ಲಿರುತ್ತದೆ) ಹಾಕಿ ಅಲುಗಾಡಿಸಿದಾಗ, ದ್ರಾವಣ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಯೂರಿಯಾದಿಂದ ಕಲಬೆರಕೆಯಾಗಿದೆ ಎಂದರ್ಥ.

ಹಾಲಿನಲ್ಲಿ ರಾಸಾಯನಿಕ ಕಲಬೆರಕೆ
ಅಮೋನಿಯಂ ಸಲ್ಫೆಟ್ ಬಳಕೆ: ಈ ರಾಸಾಯನಿಕ ಗೊಬ್ಬರದ ಬಳಕೆಯಿಂದಲೂ ಹಾಲಿನ ಗಡಸುತನ ಹೆಚ್ಚಾಗುತ್ತದೆ. ಟೆಸ್ಟ್ ಟ್ಯೂಬಿನಲ್ಲಿ 5 ಮಿ.ಲೀ.ನಷ್ಟು ಬಿಸಿ ಹಾಲು ಹಾಗೂ ಅದಕ್ಕೆ ಒಂದೆರಡು ಹನಿ ನಿಂಬೆರಸ ಹಾಕುವುದರಿಂದ ಹಾಲು ಕೆಟ್ಟು ಅದರ ಘನ ಪದಾರ್ಥ ಪ್ರತ್ಯೇಕಗೊಳ್ಳುತ್ತದೆ.
 
ಬಳಿಕ ಈ ಘನ ಪದಾರ್ಥವನ್ನು ತುಸು ಬೇರಿಯಂ ಕ್ಲೊರೈಡ್‌ನ ದ್ರಾವಣದಲ್ಲಿ ಹಾಕಿ ಕಲಕುವುದರಿಂದ, ಘನ ಪದಾರ್ಥ ಪ್ರತ್ಯೇಕಗೊಂಡು ತಳಭಾಗದಲ್ಲಿ ಸೇರಿದರೆ, ಅಂತಹ ಹಾಲಿನಲ್ಲಿ ಅಮೋನಿಯಂ ಸಲ್ಫೇಟ್ ಬಳಕೆಯಾಗಿದೆ.

ಸ್ಟಾರ್ಚ್ ಪುಡಿಯ ಬಳಕೆ: ಇದನ್ನು ಕೂಡ ಹಾಲಿನ ಗಡಸುತನ ಹೆಚ್ಚಿಸಲು ಬಳಸುತ್ತಾರೆ. ನೀರಿಗೆ `ಸ್ಟಾರ್ಚ್~ನ ಪುಡಿ ಹಾಕಿ ಕಲಕಿದಾಗ ದಪ್ಪನೆಯ ದ್ರಾವಣ ಉಂಟಾಗುವುದನ್ನು ನೀವು ಗಮನಿಸಿರಬಹುದು. 10 ಮಿ.ಲೀ. ನಷ್ಟು ಹಾಲನ್ನು ಚೆನ್ನಾಗಿ ಬಿಸಿ ಮಾಡಿದ ಬಳಿಕ, ಅದು ಉಗುರು ಬೆಚ್ಚಗಿರುವಾಗ ಒಂದೆರಡು ಹನಿ 1% ಅಯೋಡಿನ್ ದ್ರಾವಣ ಹಾಕುವುದರಿಂದ ಅದು ನೀಲಿ ಬಣ್ಣಕ್ಕೆ ತಿರುಗಿದಲ್ಲಿ ಆ ಹಾಲು ಸ್ಟಾರ್ಚ್ ಪುಡಿಯಿಂದ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

ಸಕ್ಕರೆ ಬಳಕೆ: ಜೋಳದ ರಸದ ಸಕ್ಕರೆ (ಇದು ಅಗ್ಗದಲ್ಲಿ ದೊರೆಯುತ್ತದೆ) ಅಥವಾ ಸಾಮಾನ್ಯ ಸಕ್ಕರೆ ಬಳಕೆಯಿಂದ ತೆಳ್ಳಗಿನ ಹಾಲನ್ನು ಗಡಸುತನಕ್ಕೆ ಒಯ್ಯಬಹುದಲ್ಲದೇ,  ಅದರ ರುಚಿಯೂ ಹೆಚ್ಚಾಗುತ್ತದೆ.

ಸುಮಾರು 10 ಮಿ.ಲೀ. ಹಾಲಿಗೆ 5 ಮಿ.ಲೀ. ಹೈಡ್ರೊಕ್ಲೋರಿಕ್ ಆಮ್ಲ ಹಾಗೂ ಒಂದು ಚಿಟಕಿಯಷ್ಟು ಕಿಸಾರ್‌ಸಿನಾಲ್ ಎಂಬ ರಾಸಾಯನಿಕ ಹಾಕುವುದರಿಂದ ಹಾಗೂ ಬಿಸಿ ಮಾಡಿದಲ್ಲಿ ಕೆಂಪು ಬಣ್ಣಕ್ಕೆ ತಿರುಗಿದರೆ ಆ ಹಾಲಿನಲ್ಲಿ ಸಕ್ಕರೆ ಬೆರೆಸಿದ್ದಾರೆ ಎಂದರ್ಥ.

ADVERTISEMENT

ಫಾರ್ಮಾಲಿನ್ ಬಳಕೆ: ಪಾರ್ಮಾಲಿನ್ ಬಳಕೆಯಿಂದ ಹಾಲನ್ನು ದೀರ್ಘಕಾಲದವರೆಗೂ ಸಂರಕ್ಷಿಸಬಹುದಾದರೂ, ಇದೊಂದು ವಿಷಕಾರಿ ರಾಸಾಯನಿಕ. ಸುಮಾರು 10 ಮಿ.ಲೀ. ನಷ್ಟು ಹಾಲನ್ನು ಟೆಸ್ಟ್‌ಟ್ಯೂಬಿನಲ್ಲಿ ತೆಗೆದುಕೊಂಡು ಅದಕ್ಕೆ 5 ಮಿ.ಲೀ. ತೀವ್ರ ಸಲ್ಪ್ಯೂರಿಕ್ ಆಮ್ಲವನ್ನು ಟೆಸ್ಟ್ ಟ್ಯೂಬಿನ ಒಳಗಿನ ಗೋಡೆಯ ಮೂಲಕ ಹಾಕಿ ಅಲುಗಾಡಿಸದೇ ಇಡುವುದರಿಂದ, ನೀಲಿ - ಊದಾ ಬಣ್ಣದ ಬಳೆ ಆಕೃತಿ ಉಂಟಾದರೆ ಅದರಲ್ಲಿ ಫಾರ್ಮಾಲಿನ್ ಬಳಕೆಯಾಗಿದೆ.

ಸಾಬೂನು - ಡಿಟರ್ಜಂಟ್‌ಗಳ ಬಳಕೆ: ಇದರ ಬಳಕೆಯಿಂದಲೂ ಹಾಲಿನ ಗಡಸುತನ ಹೆಚ್ಚಾಗುತ್ತದೆ. ಸುಮಾರು 10 ಮಿ.ಲೀ. ಹಾಲನ್ನು ಟೆಸ್ಟ್‌ಟ್ಯೂಬಿನಲ್ಲಿ ತೆಗೆದುಕೊಂಡು ಅದರಲ್ಲಿ ಅರ್ಧ ಪ್ರಮಾಣದ ನೀರನ್ನು ಹಾಕಿ ಬಳಿಕ ಒಂದೆರಡು ಹನಿ ಫೆನಾಫ್ತೆಲಿನ್ ದ್ರಾವಣ ಹಾಕಿ ಕಲಕಿದಾಗ, ಅದು ಗುಲಾಬಿ ಬಣ್ಣಕ್ಕೆ ತಿರುಗಿದಲ್ಲಿ ಆ ಹಾಲಿನಲ್ಲಿ ಸಾಬೂನು ಅಥವಾ ಪ್ರತ್ಯಾಮ್ಲವಿದೆ ಎಂಬುದರ ಸೂಚನೆ.

ಅಂತೆಯೇ ಹಾಲಿನಲ್ಲಿ ಬಳಕೆಯಾಗುವ ಇತರೇ ಹಲವಾರು ರಾಸಾಯನಿಕಗಳ ಸುಲಭ ಪತ್ತೆಗೆ ಪ್ರಯೋಗಾಲಯದಲ್ಲಿ ಗ್ಯಾಸ್ ಕ್ರೊಮೆಟೊಗ್ರಾಫಿಯಂತಹ ಅತ್ಯಾಧುನಿಕ ಉಪಕರಣಗಳಿದ್ದು, ಹಾಲಿನ ಕಲಬೆರಕೆಯನ್ನು ಪತ್ತೆಹಚ್ಚಬಹುದು.
 
ಇಂತಹ ಕಲಬೆರಕೆಯ ಪತ್ತೆಗಾಗಿಯೇ ಸರ್ಕಾರದ ಹಲವಾರು ಕಛೇರಿ - ವಿಭಾಗಗಳಿದ್ದು ಅವರು ಸದಾ ಎಚ್ಚರದಿಂದಿರುವುದು ಅಗತ್ಯ. ಅಮೃತ ಸಮಾನ ಹಾಲು ಹಾಲಾಹಲವಾಗುವುದನ್ನು ತಡೆಗಟ್ಟಿ ಜನರ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಕರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.