ADVERTISEMENT

ಮಸಾಲೆಯೊಂದಿಗೆ ರಸಗುಲ್ಲದ ಆನಂದ

ರಸಾಸ್ವಾದ

ರಮೇಶ ಕೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಮಸಾಲೆಯೊಂದಿಗೆ ರಸಗುಲ್ಲದ ಆನಂದ
ಮಸಾಲೆಯೊಂದಿಗೆ ರಸಗುಲ್ಲದ ಆನಂದ   

ಸಾಲಾಗಿ ಜೋಡಿಸಿಟ್ಟ ಪುಟಾಣಿ ತಟ್ಟೆಗಳಲ್ಲಿ ರಸಗುಲ್ಲಗಳನ್ನು ಜೋಡಿಸಿಡಲಾಗಿತ್ತು. ತಟ್ಟೆಗಳ ಪಕ್ಕದಲ್ಲೇ ಇದ್ದ ಹಸಿರು ಚಟ್ನಿ ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸೇವ್‌, ಮಸಾಲೆ ಪುಡಿ ಇತ್ತು. ಬಾಣಸಿಗ ರಸಗುಲ್ಲಗಳ ಮೇಲೆ ಮಸಾಲೆಯನ್ನು ಹಾಕಿ ಸಿಂಗರಿಸುತ್ತಿದ್ದರು. ಕಾಯುತ್ತಾ ಕುಳಿತ್ತಿದ್ದ ಗ್ರಾಹಕರಿಗೆ ವೇಟರ್‌ಗಳು ರಸಗುಲ್ಲ ಚಾಟ್‌ಗಳ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸರ್ವ್‌ ಮಾಡುತ್ತಿದ್ದರು.

ಮಹದೇವಪುರ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಸಮೀಪದಲ್ಲಿ ಇತ್ತೀಚೆಗೆ ಆರಂಭವಾಗಿರುವ ಶ್ರೀ ಉಡುಪಿ ಪಾರ್ಕ್‌ ಹೋಟೆಲ್‌ನ ಬಾಣಸಿಗ, ಬಿಹಾರದ ಮುಖೇಶ್‌ ಸಿಂಗ್‌ ಅವರು ಹೊಸರುಚಿಯ ಚಾಟ್‌ಗಳನ್ನು ಗ್ರಾಹಕರಿಗಾಗಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಉಡುಪಿ ಪಾರ್ಕ್‌ ಹೋಟೆಲ್‌ನಲ್ಲಿ ಬಾಣಸಿಗರಾಗಿರುವ ಮುಖೇಶ್‌ ಕೋಲ್ಕತ್ತ ರುಚಿಯ ಚಾಟ್ಸ್‌ ಮಾಡುವುದರಲ್ಲಿ ನಿಪುಣರು. ಇವರ ಕೈರುಚಿಯ ರಸಗುಲ್ಲ ಚಾಟ್ ಅಂದ್ರೆ ಗ್ರಾಹಕರಿಗೆ ಅಚ್ಚುಮೆಚ್ಚು. ಒಂದು ಪ್ಲೇಟ್‌ ತಿಂದರೆ ಮತ್ತೊಂದು ತಿನ್ನಬೇಕೆನ್ನುವ ರುಚಿಯನ್ನು ಈ ಚಾಟ್‌ ನೀಡುತ್ತದೆ. ರಸಗುಲ್ಲವನ್ನು ಬಾಯಿಯಲ್ಲಿ ಇಟ್ಟೊಡನೇ ಸಕ್ಕರೆ ಪಾಕದೊಂದಿಗೆ ಬಾಯಿ ಸೇರುವ ಹಸಿರು ಖಾರ ಕಟ್ಟಾಮಿಟ್ಟಗಿಂತ ಅದ್ಭುತವಾಗಿರುತ್ತದೆ.

ADVERTISEMENT

ಮುಖೇಶ್‌ ಕೈಯಲ್ಲಿ ತಯಾರಾಗುವ ರಾಜ್‌ ಕಚೋರಿ, ಪಾಪಡಿ ಚಾಟ್‌, ಪಾಲಕ್‌ ಚಾಟ್‌, ಬೇಬಿ ಕಚೋರಿ, ಲಚ್ಚಾ ಟೋಕರಿ ವಿಶೇಷ ಚಾಟ್‌ಗಳಾಗಿವೆ. ಚಾಟ್‌ಗಳ ಜೊತೆಗೆ ಕೋಲ್ಕತ್ತ ಸಿಹಿತಿನಿಸುಗಳನ್ನು ಮಾಡುತ್ತಾರೆ. ಕಾಜುಬರ್ಫಿ, ಕಾಜು ಪಿಸ್ತಾ ರೋಲ್‌, ಬದಾಮ್‌ ಹಲ್ವಾ, ಕಾಜು ಚಾಕೊ ರೋಲ್‌, ರಸಗುಲ್ಲ ಪ್ರಮುಖವಾಗಿವೆ.

’ಬಾಣಸಿಗ ಆಗಬೇಕು ಎಂಬ ಕನಸಿನೊಂದಿಗೆ ಬಿಹಾರದಿಂದ ಮುಂಬೈಗೆ ಹೋದೆ. ಕೆಲ ವರ್ಷ ಚಾಟ್‌ ಸೆಂಟರ್‌ಗಳಲ್ಲಿ ಕೆಲಸ ಮಾಡಿದೆ. ಮುಂಬೈನಿಂದ ಕೋಲ್ಕತ್ತಗೆ ಪಯಣ ಬೆಳೆಸಿದೆ. ಅಲ್ಲಿಯೂ ಒಂದೆರಡು ಹೋಟೆಲ್‌ಗಳಲ್ಲಿ ಕೆಲಸ ಮಾಡಿದೆ. ಚಾಟ್ಸ್‌ ಹಾಗೂ ಸಿಹಿ ತಿನಿಸುಗಳ ಮಾಡುವುದನ್ನು ಕಲಿತೆ. ಕೋಲ್ಕತ್ತದಲ್ಲಿ ಸಾಮಾನ್ಯವಾಗಿ ಚಾಟ್‌ಗಳಿಗೆ ಮೊಸರು ಬಳಸುತ್ತಾರೆ. ಸಿಹಿಯೂ ಇರುತ್ತದೆ. ಇಲ್ಲಿನವರು ಕಾರ ಕೇಳುತ್ತಾರೆ. ಗ್ರಾಹಕರ ರುಚಿಗೆ ತಕ್ಕಂತೆ ಮಾಡಿಕೊಡುತ್ತೇನೆ’ ಎಂದರು ಮುಖೇಶ್‌.

‘ನಾನು ಬನಶಂಕರಿ 2ನೇ ಹಂತದಿಂದ ಬಂದಿದ್ದೇನೆ. ಕೆಲಸದ ನಿಮಿತ್ತ ಮಹದೇವಪುರಕ್ಕೆ ಬರಬೇಕಾಯಿತು. ಉಡುಪಿ ಪಾರ್ಕ್‌ನಲ್ಲಿ ಬೆಣ್ಣೆ ಮಸಾಲೆದೋಸೆ ಹಾಗೂ ಚಾಟ್ಸ್‌ ಚೆನ್ನಾಗಿರುತ್ತದೆ. ಮೊದಲ ಬಾರಿ ಈ ಹೋಟೆಲ್‌ಗೆ ಬಂದದ್ದು. ಚಾಟ್ಸ್‌ಗಳು ವಿಭಿನ್ನ ರುಚಿ ನೀಡುತ್ತವೆ’ ಎನ್ನುತ್ತಾರೆ ಗ್ರಾಹಕ ಮನೋಜ್‌.

‘ಇದು ನಮ್ಮ ಎಂಟನೇ ಶಾಖೆ. ಬಹಳಷ್ಟು ತಿನಿಸುಗಳು ಉಡುಪಿ ಶೈಲಿಯಲ್ಲಿರುತ್ತವೆ. ಬಿಸಿನೀರಿನಲ್ಲಿ ತರಕಾರಿಗಳನ್ನು ತೊಳೆದು ಅಡುಗೆಗೆ ಬಳಸುತ್ತೇವೆ. ಮಂಗಳೂರು ಬನ್ಸ್‌, ವೈವಿಧ್ಯಮಯ ದೋಸೆಗಳಿರುತ್ತವೆ. ಒಂದು ದಿನ ಹಳಸಿನ ದೋಸೆ ಮಾಡಿದರೆ ಮತ್ತೊಂದು ದಿನ ಪಿಜ್ಜಾ ದೋಸೆ, ಗೋಧಿ ದೋಸೆ ಇರುತ್ತದೆ. ದೋಸೆ ಮೇಲೆ ಪಿಜ್ಜಾಗೆ ಹಾಕುವಂತೆ ತರಕಾರಿಗಳನ್ನು ಉದುರಿಸುತ್ತೇವೆ ಜೊತೆಗೆ ಚೀಸ್‌ ಇರುತ್ತದೆ. ಬೇಬಿಕಾರ್ನ್‌ ಹಾಗೂ ಚಾಟ್ಸ್‌ಗಳಲ್ಲೂ ವೈವಿಧ್ಯವಿರುತ್ತದೆ’ ಎನ್ನುತ್ತಾರೆ ಹೋಟೆಲ್‌ನ ಸಿಬ್ಬಂದಿ ಸುಕೇತ್‌ ಶೆಟ್ಟಿ.

ಬೆಳಿಗ್ಗೆ 6.30ರಿಂದ 11ರವರೆಗೆ ದಕ್ಷಿಣ ಭಾರತೀಯ ತಿನಿಸುಗಳಿದ್ದರೆ, 12ರಿಂದ 4 ಹಾಗೂ ಸಂಜೆ7ರಿಂದ 11ರವರೆಗೆ ಉತ್ತರ ಭಾರತೀಯ, ಚೈನೀಸ್‌ ತಿಂಡಿಗಳು ಸಿಗುತ್ತವೆ.

ರವಾ ಇಡ್ಲಿ, ಬನ್ಸ್‌, ಕೇಸರಿಭಾತ್‌ ಹಾಗೂ ದೋಸೆ ಪಕ್ಕಾ ಉಡುಪಿ ಶೈಲಿಯಲ್ಲಿ ಮಾಡುತ್ತೇವೆ. ತಂದೂರಿ ರೋಟಿ ಜೊತಗೆ 90ಕ್ಕೂ ಹೆಚ್ಚು ಕರ್ರಿಗಳಿರುತ್ತವೆ. ದಿನಕ್ಕೊಂದು ಬಗೆಯ ಬಿರಿಯಾನಿಯೂ ಇಲ್ಲಿ ದೊರೆಯುತ್ತದೆ. ಕೋಲ್ಕತ್ತ ಶೈಲಿ ಪಾವ್‌ಭಾಜಿ, ಕ್ಲಬ್‌ ಕಚೋರಿ, ಧಹಿ ಬೇಬಿ ಕಚೋರಿ, ವಿವಿಧ ಸ್ವಾದದ ಸ್ಯಾಂಡ್‌ವಿಚ್‌ಗಳು ವಿಶೇಷ ತಿನಿಸುಗಳಾಗಿವೆ. 90 ಮಂದಿ ಕೂರಬಹುದಾದ ಟೇಬಲ್‌ ವ್ಯವಸ್ಥೆಯಿದೆ’ ಎಂದು ಮಾಹಿತಿ ನೀಡಿದರು ಸುಕೇತ್‌.

ರಸಗುಲ್ಲ ಚಾಟ್‌ ₹55, ಕ್ಲಬ್‌ ಕಚೋರಿ ₹50, ಧಹಿಪುರಿ–₹50, ರಾಜ್‌ ಕಚೋರಿ ₹50, ಪಾಪಡಿ ಚಾಟ್‌, ಪಾಲಕ್‌ ಚಾಟ್‌ ₹50

ಹೋಟೆಲ್‌:  ಶ್ರೀ ಉಡುಪಿ ಪಾರ್ಕ್‌ 
ವಿಶೇಷ: ಕೋಲ್ಕತ್ತ ಚಾಟ್ಸ್‌
ಇಬ್ಬರಿಗೆ: ₹200
ಸ್ಥಳ: ಬೆಸ್ಕಾಂ ಎದುರು, ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಸಮೀಪ, ಮಹದೇವಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.