ADVERTISEMENT

ಸಸ್ಯಜನ್ಯ ತತ್ವದ ಹೋಟೆಲ್

ರಸಾಸ್ವಾದ

ಮಾನಸ ಬಿ.ಆರ್‌
Published 30 ಜನವರಿ 2014, 19:30 IST
Last Updated 30 ಜನವರಿ 2014, 19:30 IST

ಬೆಂಗಳೂರಿನ ಮಾಲ್‌ ಸಂಸ್ಕೃತಿಗೆ ಹೊಂದಿಕೊಂಡಿರುವ ಅನೇಕರು ಒಂದಲ್ಲಾ ಒಂದು ಬಾರಿ ಜಂಕ್‌ಫುಡ್‌ಗಳ ಚಾಪಲ್ಯ ಬಿಡಲಾಗದೆ ಆರೋಗ್ಯ ಕೆಡಿಸಿಕೊಂಡಿರುತ್ತಾರೆ. ಆದರೆ ಇದೇ ನಗರದಲ್ಲಿ ಶುಚಿ, ರುಚಿ ಸಾವಯವ ಹಾಗೂ ಸಸ್ಯಜನ್ಯ ಆಹಾರ ಪದಾರ್ಥಗಳು ಸಿಕ್ಕರೆ....

ಕೋರಮಂಗಲದ ಸೋನಿ ಸಿಗ್ನಲ್‌ನಲ್ಲಿ ಇತ್ತೀಚೆಗೆ ತಲೆಎತ್ತಿದ ‘ಕ್ಯಾರೆಟ್ಸ್‌’, ಬೆಂಗಳೂರಿನಲ್ಲಿ ವೀಗನಿಸಂ ತತ್ವದಿಂದ ಪ್ರಾರಂಭವಾದ ಮೊಟ್ಟ ಮೊದಲ ರೆಸ್ಟೋರೆಂಟ್‌. ಪ್ರಾಣಿ ಉತ್ಪನ್ನಗಳನ್ನು ಬಳಸದೆ ಕೇವಲ ಸಸ್ಯಜನ್ಯ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸುವುದು ಈ ರೆಸ್ಟೋರೆಂಟ್‌ನ ವೈಶಿಷ್ಟ್ಯ. ಹಸುವಿನ ಹಾಲು, ತುಪ್ಪ, ಮೊಸರು, ಮಜ್ಜಿಗೆ, ಬೆಣ್ಣೆ ಇದ್ಯಾವುದನ್ನೂ ಬಳಕೆ ಮಾಡದೆ ಕೇವಲ ಸಸ್ಯಜನ್ಯ ವಸ್ತುಗಳಿಂದ ಒಂದು ರೆಸ್ಟೋರೆಂಟ್‌ ನಡೆಸಬಹುದು ಎಂಬುದಕ್ಕೆ ‘ಕ್ಯಾರೆಟ್ಸ್‌’ ಒಂದು ಮಾದರಿ.

ಖಾರಖಾರವಾದ, ಕರಿದ ಪದಾರ್ಥಗಳು ಸೇರಿದಂತೆ ಊಟದಲ್ಲಿ ತುಂಬಾ ರುಚಿ ಹುಡುಕುವವರಿಗಿಂತ ಆರೋಗ್ಯದ ಬಗೆಗೆ ಕಾಳಜಿ ಇಟ್ಟುಕೊಂಡವರಿಗೆ ಈ ರೆಸ್ಟೋರೆಂಟ್‌ ಮನೆಯಲ್ಲಿ ಮಾಡಿದ ಅಡುಗೆಗೆ ಸರಿಸಮಾನವಾದ ಶುಚಿ–ರುಚಿ ಒದಗಿಸಬಲ್ಲದು. ಸಸ್ಯಜನ್ಯ ಪದಾರ್ಥಗಳಿಂದಲೇ ಹಾಲು ತಯಾರಿಸಿ ಮಾಡಿದ ಐಸ್‌ಕ್ರೀಮ್, ಚಾಕಲೇಟ್‌ಗಳು ರುಚಿಯಲ್ಲಿ ಉಳಿದ ರೆಸ್ಟೋರೆಂಟ್‌ ಗಳಲ್ಲಿ ಸಿಗುವುದಕ್ಕಿಂತ ಕಡಿಮೆ ಏನೂ ಇಲ್ಲ.

ಇಲ್ಲಿ ಪ್ರಾಣಿಯ ಹಾಲಿನ ಬದಲಿಗೆ ಬಾದಾಮಿ, ತೆಂಗಿನಕಾಯಿ, ಸೋಯಾ ಹಾಲುಗಳನ್ನು ಬಳಸಲಾಗುತ್ತದೆ. ಎಣ್ಣೆಯಲ್ಲಿ ಯಾವುದನ್ನೂ ಕರಿಯುವುದಿಲ್ಲ. ಅತಿ ಕಡಿಮೆ ಎಣ್ಣೆ ಬಳಸುವುದು ಇಲ್ಲಿಯ ರೂಢಿ. ಹಾಲು ಹಾಗೂ ಇನ್ನಿತರ ವಸ್ತುಗಳಿಂದ ಅಲರ್ಜಿಯಾಗುವವರು ಇಲ್ಲಿಗೆ ಹುಡುಕಿ­ಕೊಂಡು ಬಂದು ತಿನಿಸುಗಳನ್ನು ಸವಿಯುತ್ತಾರೆ.

ಕನ್ನಡಿಗರಿಂದಲೇ ಪ್ರಾರಂಭವಾದ ಈ ರೆಸ್ಟೋರೆಂಟ್‌ನಲ್ಲಿ ಓದಲು ವಿವಿಧ ನಿಯತಕಾಲಿಕೆಗಳು ದೊರೆಯುತ್ತವೆ. ಸಸ್ಯಜನ್ಯ ಪದಾರ್ಥಗಳು ಹಾಗೂ ಸಾವಯವ ವಸ್ತುಗಳ ಬಳಕೆಯ ಬಗ್ಗೆ ಇಲ್ಲಿಗೆ ಬರುವ ಗ್ರಾಹಕರಿಗೆ ತಿಳಿವಳಿಕೆಯನ್ನೂ ನೀಡಲಾಗುತ್ತದೆ. ರೆಸ್ಟೋರೆಂಟ್‌ ಒಳಗೆ ಕಾಲಿಟ್ಟರೆ, ಇಲ್ಲಿ ಬರೀ ಊಟ ಉಪಚಾರ ಹಾಗೂ ವ್ಯಾಪಾರಕ್ಕೆ ಆದ್ಯತೆ ನೀಡಿಲ್ಲ ಎಂಬುದು ಗೊತ್ತಾಗುತ್ತದೆ. ಇಲ್ಲಿನ ರ್‍ಯಾಕ್‌ಗಳಲ್ಲಿ ಜೋಡಿಸಿಟ್ಟಿರುವ ‘ವೀಗನಿಸಂ’ ಪುಸ್ತಕಗಳು, ಸಾವಯವ ವಸ್ತುಗಳೇ ಇದಕ್ಕೆ ಸಾಕ್ಷಿ.

ಕನ್ನಡಿಗರು ಹಾಗೂ ಕಾಸರಗೋಡಿನವರಾದ ಕೃಷ್ಣಶಾಸ್ತ್ರಿ ಕೋರಮಂಗಲದಲ್ಲಿ ಈ ರೆಸ್ಟೋರೆಂಟ್‌ ತೆರೆದಿದ್ದಾರೆ. ಅಲ್ಲಿಯ ಉತ್ತರ ಭಾರತದವರ ಶೈಲಿಗೆ ಅನುಗುಣವಾಗಿ ಪಿಜ್ಜಾ, ಬರ್ಗರ್‌ನಂತಹ ಆಹಾರಗಳಿಗೆ ಆದ್ಯತೆ ನೀಡಿದ್ದಾರೆ. ದಕ್ಷಿಣ ಭಾರತದ ರೊಟ್ಟಿ ಊಟ ಸಿಗುತ್ತದಾದರೂ ಕೋರಮಂಗಲದಲ್ಲಿ ಈ ಊಟಕ್ಕೆ ಹೆಚ್ಚು ಬೇಡಿಕೆ ಇಲ್ಲ ಎಂಬುದು ಅವರಿಗೆ ತಿಳಿದಂತಿದೆ.

ADVERTISEMENT

‘ಕ್ಯಾರೆಟ್ಸ್‌’ನಲ್ಲಿ ಸಾವಯವ ತರಕಾರಿ, ಹಣ್ಣುಗಳನ್ನೇ ಬಳಕೆ ಮಾಡಲಾಗುತ್ತದೆ. ಇಲ್ಲಿ ಊಟದ ಜೊತೆ ಮೊಸರು ಮಜ್ಜಿಗೆ ಸಿಗುವುದಿಲ್ಲ ಎಂದು ಬೇಸರಿಸಬೇಕಿಲ್ಲ. ಬದಲಿಗೆ ಸೋಯಾದಿಂದ ತಯಾರಿಸಿದ ಮೊಸರು, ಮಜ್ಜಿಗೆ ದೊರೆಯುತ್ತದೆ. ಇಲ್ಲಿಯ ಸಾಂಬಾರ್‌, ಪಲ್ಯಗಳಿಗೆ ಒಗ್ಗರಣೆಯನ್ನೂ ಹಾಕದೆ ರುಚಿಕಟ್ಟಾಗಿ ಅಡುಗೆ ಮಾಡುವ ಕಲೆ ಬಾಣಸಿಗರಿಗೆ ಸಿದ್ಧಿಸಿದೆ.

ಬೆಂಗಳೂರಿನಲ್ಲಿ ಬಿಳಿ ಅನ್ನದ (ಪಾಲಿಷ್‌ ಮಾಡಿದ ಅಕ್ಕಿಯಿಂದ ಮಾಡಿದ್ದು) ಬಳಕೆ ಹೆಚ್ಚಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಇಲ್ಲಿಯ ತತ್ವ. ಹಾಗಾಗಿ ‘ಬ್ರೌನ್‌ ರೈಸ್‌’ (ಪಾಲಿಷ್‌ ಮಾಡದ ಹಾಗೂ ಕಡಿಮೆ ಪಾಲಿಷ್‌ ಮಾಡಿದ) ಅಕ್ಕಿ ಬಳಸಿ, ಇಲ್ಲಿ ಅಡುಗೆ ಮಾಡಲಾಗುತ್ತದೆ. ‘ಕ್ಯಾರೆಟ್ಸ್‌’ನಲ್ಲಿ ಬಾದಾಮಿ ಸೇರಿದಂತೆ ವಿವಿಧ ಸಸ್ಯಜನ್ಯ ಕಾಳುಗಳು ಹಾಗೂ ಕ್ಯಾರೆಟ್‌ನಿಂದ ತಯಾರಿಸಿದ ಜ್ಯೂಸ್‌ ಕೂಡ ಸಿಗುತ್ತದೆ.
---------------

ಪ್ರಾಣಿಗಳ ಆಹಾರ ಬಳಸದೆ ಕೇವಲ ಸಸ್ಯಜನ್ಯ ಆಹಾರ ಪದಾರ್ಥಗಳನ್ನು ಬಳಸುವ ವೀಗನಿಸಂ ತತ್ವ ನನ್ನನ್ನು ಆಕರ್ಷಿಸಿತು. ಇಲ್ಲಿ ಪ್ರಾಣಿಹಿಂಸೆ ಮಾಡುವುದಿಲ್ಲ. ಎಂಜಿನಿಯರ್‌ ಆಗಿದ್ದ ನಾನು ವೃತ್ತಿ ತೊರೆದು ರೆಸ್ಟೋರೆಂಟ್‌ ನಡೆಸುವ ಆಲೋಚನೆ ಮಾಡಿದೆ. ಇದರಲ್ಲಿ ಲಾಭ, ನಷ್ಟ ಎನ್ನುವುದಕ್ಕಿಂತ ಅಹಿಂಸಾ ತತ್ವಕ್ಕೆ ಮನ್ನಣೆ ಕೊಡುವುದು ನನ್ನ ಉದ್ದೇಶ.

ವೀಗನಿಸಂ ಪ್ರಾಣಿಗಳ ಹಿಂಸೆಯನ್ನು ತಡೆಯುತ್ತದೆ. ಹಸುವಿನ ಹಾಲು ಕರುವಿಗೆ ಮಾತ್ರ ದಕ್ಕಬೇಕು ಎಂಬುದು ನನ್ನ ಆಲೋಚನೆ. ಅದನ್ನು ಮನುಷ್ಯ ಕುಡಿಯುವುದು ಎಷ್ಟು ಸರಿ? ಮನುಷ್ಯನಿಗೆ ಹಸುವಿನ ಹಾಲಿಗಿಂತ ಸಸ್ಯಜನ್ಯ ಕಾಳುಗಳಲ್ಲಿ ತಯಾರಿಸುವ ಹಾಲು ಹೆಚ್ಚು ಆರೋಗ್ಯಕರ.
–ಕೃಷ್ಣಶಾಸ್ತ್ರಿ, ಕ್ಯಾರೆಟ್‌ ರೆಸ್ಟೋರೆಂಟ್‌ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.