ADVERTISEMENT

ಹಲಸಿನ ರುಚಿಗೆ ಹತ್ತು ದಾರಿ

ನಳಪಾಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ಹಲಸಿನ ಹಣ್ಣಿನ ಖೀರು
ಹಲಸಿನ ಹಣ್ಣಿನ ಖೀರು   

ಮಳೆಗಾಲದಲ್ಲಿ ಧೋ ಎಂದು ಮಳೆ ಸುರಿಯುತ್ತಿರುವಾಗ ತುಪ್ಪ ಸವರಿದ ಹಲಸಿನ ದೋಸೆಯ ಸವಿಯನ್ನು ಹೇಳಲು ಅಸಾಧ್ಯ. ಹಲಸಿನ ಹಣ್ಣಿನ ದೋಸೆ, ಮುಳುಕ, ಪಾಯಸಗಳ ರುಚಿಯ ಸೊಬಗು ಮೆದ್ದವರಿಗಷ್ಟೆ ಗೊತ್ತು! ಹಲಸಿನ  ಜ್ಯೂಸ್‌, ಕೇಸರಿಬಾತು, ಬಿಸ್ಕತ್‌ ದೋಸೆಗಳನ್ನು ತಯಾರಿಸುವ ಕ್ರಮವನ್ನು ಇಲ್ಲಿ ವಿವರಿಸಿದ್ದಾರೆ, ಬಿ.ಎಸ್ ರಾಜಲಕ್ಷ್ಮಿ.

*
ಹಲಸಿನ ಹಣ್ಣಿನ ಖೀರು
ಬೇಕಾಗುವ ಸಾಮಗ್ರಿಗಳು:
 ಹಲಸಿನ ತೊಳೆ – ಹತ್ತು, ಅಕ್ಕಿ –ಎರಡು ಚಮಚ, ಗಸಗಸೆ – ಒಂದು ಚಮಚ ಬೆಲ್ಲದ ಪುಡಿ – ನಾಲ್ಕು ಚಮಚ, ಕಾಯಿತುರಿ –  ಎರಡು ಚಮಚ, ತುಪ್ಪ – ಎರಡು ಚಮಚ, ಗೋಡಂಬಿ ದ್ರಾಕ್ಷಿ, ಏಲಕ್ಕಿ, ಕೇಸರಿ

ತಯಾರಿಸುವ ವಿಧಾನ: ಅಕ್ಕಿ ಮತ್ತು ಗಸೆಗಸೆಯನ್ನು ಸ್ವಲ್ಪ ಕೆಂಪಗೆ ಹುರಿದುಕೊಂಡು ತೆಂಗಿನತುರಿ ಸೇರಿಸಿ ಸಣ್ಣಗೆ ರುಬ್ಬಿ. ಪಾತ್ರೆಗೆ ಹಾಕಿ ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ. ಸಣ್ಣಗೆ ಹೆಚ್ಚಿದ ಹಲಸಿನ ತೊಳೆಯನ್ನು ಅದಕ್ಕೆ ಹಾಕಿ ಎರಡು ನಿಮಿಷ ಬಾಡಿಸಿ. ಇದನ್ನು ಕುದಿಸಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ. ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿಯನ್ನು ಕರಿದು ಹಾಕಿ. ಪಾಯಸ ಸಿದ್ಧವಾದ ಮೇಲೆ ಏಲಕ್ಕಿ ಪುಡಿ ಕೇಸರಿ ಹಾಕಿದರೆ ಹಲಸಿನ ಖೀರು ಸಿದ್ಧ.

ADVERTISEMENT

*

.
ಹಲಸಿನ ಹಣ್ಣಿನ ಜ್ಯೂಸ್
ಬೇಕಾಗುವ ಸಾಮಗ್ರಿಗಳು:
ಹಲಸಿನ ತೊಳೆ – ಹತ್ತು, ಬೆಲ್ಲದ ಪುಡಿ –  ಎರಡು ಚಮಚ, ಏಲಕ್ಕಿ –  ಎರಡು               

ತಯಾರಿಸುವ ವಿಧಾನ: ಹಲಸಿನ ಹಣ್ಣಿನ ತೊಳೆಯನ್ನು ಸಣ್ಣಗೆ ಹೆಚ್ಚಿ ಬೆಲ್ಲ ಏಲಕ್ಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಮತ್ತಷ್ಟು ನೀರು ಬೆರೆಸಿ, ರುಚಿಗೆ ಬೇಕಿದ್ದರೆ ನಿಂಬೆರಸವನ್ನು ಸೇರಿಸಿ ಕುಡಿಯಬಹುದು.

*


ಹಲಸಿನ ಹಣ್ಣಿನ ದಿಢೀರ್ ಬಿಸ್ಕತ್ ದೋಸೆ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು – ಒಂದು ಬಟ್ಟಲು, ಅಕ್ಕಿಹಿಟ್ಟು – ಕಾಲು ಬಟ್ಟಲು,  ಹಲಸಿನ ತೊಳೆ –  ನಾಲ್ಕು, ಸಕ್ಕರೆ – ಒಂದು ಚಮಚ, ಏಲಕ್ಕಿ ಎರಡು

ತಯಾರಿಸುವ ವಿಧಾನ: ಹಲಸಿನ ಹಣ್ಣಿನ ತೊಳೆ, ಗೋಧಿಹಿಟ್ಟು, ಅಕ್ಕಿಹಿಟ್ಟು, ಸಕ್ಕರೆ, ಏಲಕ್ಕಿ ಬೆರೆಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ಗಟ್ಟಿಯಾಗಿ ರುಬ್ಬಿ ಅರ್ಧ ಘಂಟೆ ಇಡಿ. ನಂತರ ಕಾದಿರುವ ಕಾವಲಿಯ ಮೇಲೆ ದೋಸೆಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕಿ ಮೇಲೆ ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಮಕ್ಕಳಿಗೂ ದೊಡ್ದವರಿಗೂ ಸಮಾನವಾಗಿ ಇಷ್ಟವಾಗುವ ತಿನಿಸಿದು.

*


ಹಲಸಿನ ಹಣ್ಣಿನ ಮಿಲ್ಕ್‌ಶೇಕ್
ಬೇಕಾಗುವ ಸಾಮಗ್ರಿಗಳು: ಹಲಸಿನ ತೊಳೆ – ಹತ್ತು, ಬೆಲ್ಲದ ಪುಡಿ – ಒಂದು ಚಮಚ, ಹಾಲು – ಒಂದು ಲೋಟ, ಏಲಕ್ಕಿ, ಬಾದಾಮಿ, ಕೇಸರಿ

ತಯಾರಿಸುವ ವಿಧಾನ: ಹಲಸಿನ ಹಣ್ಣಿನ ತೊಳೆಯನ್ನು ಸಣ್ಣಗೆ ಹೆಚ್ಚಿ, ಬಾದಾಮಿಯನ್ನು ಚೂರು ಮಾಡಿಕೊಂಡು, ಬೆಲ್ಲ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿ. ನಂತರ ಹಾಲು, ಕೇಸರಿ ಹಾಕಿ ಚೆನ್ನಾಗಿ ಬೆರೆಸಿ. ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ಮೇಲೆ ಸರ್ವ್ ಮಾಡಿ.

*


ಹಲಸಿನ ಹಣ್ಣಿನ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ – ಎರಡು ಬಟ್ಟಲು, ಹಲಸಿನ ತೊಳೆ –  ಹತ್ತು, ಬೆಲ್ಲದ ಪುಡಿ –  ಎರಡು ಚಮಚ, ಕಾಯಿತುರಿ – ಎರಡು ಚಮಚ, ಏಲಕ್ಕಿ ಎರಡು

ತಯಾರಿಸುವ ವಿಧಾನ: ಅಕ್ಕಿಯನ್ನು ರಾತ್ರಿ ನೆನಸಿಡಿ. ಮರುದಿನ ಚೆನ್ನಾಗಿ ತೊಳೆದು ಹಲಸಿನ ಹಣ್ಣಿನ ತೊಳೆ, ಬೆಲ್ಲ, ಕಾಯಿತುರಿ, ಏಲಕ್ಕಿ ಬೆರೆಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಒಂದು ಘಂಟೆ ಇಡಿ. ನಂತರ ಕಾದಿರುವ ಕಾವಲಿಯ ಮೇಲೆ ದೋಸೆಹಿಟ್ಟನ್ನು ಎರೆದು ಸಣ್ಣ ಉರಿಯಲ್ಲಿ ಬೇಯಿಸಿರಿ. ಬಿಸಿಯಿರುವಾಗಲೇ ತುಪ್ಪ ಹಾಕಿ ತಿಂದರೆ ಚೆನ್ನ.

*


ಹಲಸಿನ ಹಣ್ಣಿನ ಕೇಸರಿಬಾತು
ಬೇಕಾಗುವ ಸಾಮಗ್ರಿಗಳು:
ಹಲಸಿನ ತೊಳೆ – ಹತ್ತು, ಚಿರೋಟಿ ರವೆ – ಒಂದು ಕಪ್, ಸಕ್ಕರೆ –ಮುಕ್ಕಾಲು ಕಪ್, ತುಪ್ಪ – ಕಾಲು ಕಪ್, ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಕೇಸರಿ

ತಯಾರಿಸುವ ವಿಧಾನ: ಚಿರೋಟಿರವೆಯನ್ನು ಸ್ವಲ್ಪ ಹುರಿದುಕೊಳ್ಳಿ. ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಡಿ. ಚೆನ್ನಾಗಿ ಕುದಿ ಬಂದ ನಂತರ ಸಣ್ನಗೆ ಹೆಚ್ಚಿದ ಹಲಸಿನ ತೊಳೆಯನ್ನು ಹಾಕಿ ಎರಡು ನಿಮಿಷ ಬೇಯಿಸಿ.  ಹುರಿದ ರವೆ ತುಪ್ಪ ಹಾಕಿ ಚೆನ್ನಾಗಿ ಕೂಡಿಸಿ ಸ್ವಲ್ಪ ಸಮಯ ಬಿಡಿ. ಕೊನೆಯಲ್ಲಿ ತುಪ್ಪದಲ್ಲಿ ಕರಿದ ದ್ರಾಕ್ಷಿ,  ಗೋಡಂಬಿ ಮತ್ತು ಏಲಕ್ಕಿ, ಕೇಸರಿಯನ್ನು ಹಾಕಿ. ಸಕ್ಕರೆ ಒಲ್ಲದವರು ಬೆಲ್ಲ ಹಾಕಿಕೊಳ್ಳಬಹುದು.

*


ಬಿ.ಎಸ್ ರಾಜಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.