ADVERTISEMENT

ಕುಕ್‌ ಬುಕ್ಸ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:30 IST
Last Updated 19 ಅಕ್ಟೋಬರ್ 2018, 19:30 IST
Cropped image of woman putting sliced vegetables on pizza top cooking in apron in the kitchen.Food PReparation
Cropped image of woman putting sliced vegetables on pizza top cooking in apron in the kitchen.Food PReparation   

ನಮ್ಮ ಅಡುಗೆ ಪುಸ್ತಕಗಳನ್ನು ಕಂಡರೆ ವಿದೇಶೀಯರ ನಾಲಗೆಗಳಲ್ಲಿ ನೀರೂರುತ್ತದೆ!‌

ಪುಸ್ತಕವನ್ನು ನೋಡಿ ಈಜು ಕಲಿಯುಲು ಸಾಧ್ಯವೆ? ಈ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ‘ಸಾಧ್ಯವಿಲ್ಲ’ ಎಂದೇ ಈ ಮಾತಿನ ಮರ್ಮ. ಈ ಹೇಳಿಕೆಗೆ ಸೇರಿಸಬಹುದಾದ ಮಾತು ಎಂದರೆ ‘ಪುಸ್ತಕ ನೋಡಿ ಅಡುಗೆಮಾಡಲು ಸಾಧ್ಯವೆ?’ ‘ಪುಸ್ತಕ ನೋಡಿ ಈಜಲು ಹೋದರೆ ಒಬ್ಬನಿಗೆ ಮಾತ್ರವೇ ಅಪಾಯ; ಆದರೆ ಪುಸ್ತಕ ನೋಡಿ ಅಡುಗೆಮಾಡಿದರೆ ಹಲವರಿಗೆ ಅಪಾಯ’ ಎಂದೂ ಉದ್ಗರಿಸಿರುವ ಸಂಭವವೂ ಉಂಟೆನ್ನಿ! ಆದರೆ ಈ ಮಾತಿಗೆ ಅಪವಾದವೆನ್ನುವಂತೆ ಇತ್ತೀಚಿನ ವರ್ಷಗಳಲ್ಲಿ ಪುಸ್ತಕವನ್ನು ನೋಡಿ ಅಡುಗೆಯನ್ನು ಕಲಿತವರಿದ್ದಾರೆ; ಆ ಅಡುಗೆಗಳನ್ನು ಚಪ್ಪರಿಸಿ ತಿಂದು ಬದುಕಿದವರೂ ಇದ್ದಾರೆ; ಮಾತ್ರವಲ್ಲ, ಅಡುಗೆಪುಸ್ತಕಗಳನ್ನು ಬರೆದವರು ಚೆನ್ನಾಗಿಯೇ ದುಡ್ಡನ್ನು ಸಂಪಾದಿಸಿ, ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ ಕೂಡ!

ಮೊದಲಿಗೆ ಅಡುಗೆಯನ್ನು ಹೆಣ್ಣುಮಕ್ಕಳು – ಒಮ್ಮೊಮ್ಮೆ ಗಂಡುಮಕ್ಕಳು – ಮನೆಯಲ್ಲಿಯೇ ತಾಯಿಯಿಂದಲೋ ಅಜ್ಜಿಯಿಂದಲೋ ಕಲಿಯುತ್ತಿದ್ದರು. ಆದರೆ ಈಗ ಕಲಿಸುವ ವಾತಾವರಣವೂ ಇಲ್ಲ, ಕಲಿಯುವ ವ್ಯವಧಾನವೂ ಇಲ್ಲ. ಕುಟುಂಬದಲ್ಲಿ ಗಂಡ–ಹೆಂಡತಿ ಜೊತೆಯಲ್ಲಿದ್ದರೆ ಅದೇ ಜಾಯಿಂಟ್‌ ಫ್ಯಾಮಿಲಿ ಎನ್ನುವಂಥ ಪರಿಸ್ಥಿತಿ. ಎಲ್ಲ ವಿದ್ಯೆಯನ್ನೂ ಅಕ್ಷರಜ್ಞಾನವೇ ಪಡೆದುಕೊಳ್ಳುವ ಉಮೇದು ಆಧುನಿಕ ಜಗತ್ತಿನದು. ಅಡುಗೆಯನ್ನೂ ಹೀಗೆ ಪುಸ್ತಕಗಳ ಮೂಲಕವೇ ಕಲಿಕೆಯುವ ರೂಢಿ ಮೊದಲಾಯಿತು. ಆಗ ಸಹಜವಾಗಿಯೇ ಪಾಕಶಾಸ್ತ್ರದ ಪುಸ್ತಕಗಳನ್ನು ಬರೆಯುವುದು, ಪ್ರಕಟಿಸುವುದು ಶುರುವಾಯಿತು. ಕಾಲಕ್ರಮೇಣ ಅದೇ ಬೃಹತ್ತಾಗಿ ಬೆಳೆದು, ಒಂದು ಉದ್ದಿಮೆಯಂತೆಯೇ ಬೆಳೆಯಿತು. ಹಲವರು ಲೇಖಕರು ಅಡುಗೆಯ ಬಗ್ಗೆ ಬರೆಯಲಾರಂಭಿಸಿದರು; ವಿವಿಧ ವಿನ್ಯಾಸದಲ್ಲಿ ಈ ಪುಸ್ತಕಗಳು ಪ್ರಕಟವಾಗತೊಡಗಿದವು. ಒಂದು ಕಾಲದಲ್ಲಿ ಪುಸ್ತಕೋದ್ಯಮದ ಪಾರುಪತ್ಯವನ್ನು ಈ ‘ಕುಕ್‌ ಬುಕ್‌’ಗಳೇ ವಹಿಸಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ADVERTISEMENT

‘ಕುಕರಿ ಬುಕ್‌ಗಳು ಮೊದಲಿನಷ್ಟು ಈಗ ವ್ಯಾಪಾರವಾಗುತ್ತಿಲ್ಲ’ ಎನ್ನುವುದು ‘ನಾಗಶ್ರೀ ಬುಕ್‌ ಹೌಸ್‌’ನ ವೆಂಕಟೇಶ್ ಅವರ ಮಾತು. ಇದೇ ಅಭಿಪ್ರಾಯ ‘ಬ್ಲಾಸಮ್ಸ್‌ ಬುಕ್‌ ಹೌಸ್‌’ನ ಮಾಯೇ ಗೌಡ ಅವರದ್ದು ಕೂಡ. ಈಗ ಎಲ್ಲರೂ ಯೂಟ್ಯೂಬ್‌ ನೋಡುವ ಮೂಲಕ ಅಡುಗೆಯನ್ನು ಕಲಿಯಲು ಇಷ್ಟಪಡುತ್ತಾರೆಯೇ ಹೊರತು ಪುಸ್ತಕಗಳಿಂದ ಅಲ್ಲ ಎನ್ನುವುದು ಇವರಿಬ್ಬರ ವಾದ. ಯೂಟ್ಯೂಬ್‌, ಆ್ಯಪ್‌ಗಳನ್ನು ನೋಡುತ್ತಲೇ ಅಡುಗೆಯನ್ನು ಮಾಡಬಹುದು. ಇದು ಪುಸ್ತಕಗಳನ್ನು ನೋಡಿ ಕಲಿಯುವುದಕ್ಕಿಂತ ಸುಲಭ. ಆಯ್ಕೆಯೂ ಹೆಚ್ಚು. ಆದರೆ ‘ಕುಕರಿಯ ಕಾಫಿ ಟೇಬಲ್‌ ಬುಕ್ಸ್‌ ನಮ್ಮಲ್ಲಿ ಚೆನ್ನಾಗಿ ಮಾರಾಟವಾಗುತ್ತವೆ’ ಎನ್ನುವುದು ‘ಬುಕ್‌ ವರ್ಮ್‌’ನ ಕೃಷ್ಣ ಅವರ ಸಂತಸ. ಪುಸ್ತಕಗಳನ್ನು ಚೆನ್ನಾಗಿ ಜೋಡಿಸಿಟ್ಟರೆ
ಜನರ ಕಣ್ಣನ್ನು ಸೆಳೆಯುತ್ತವೆ. ಕಾಂಟಿನೆಂಟಲ್‌, ಇಂಡಿಯನ್‌, ವೆಜ್‌, ನಾನ್‌ವೆಜ್‌ – ಎಲ್ಲ ವಿಧದ ಅಡುಗೆಯ ಪುಸ್ತಕಗಳನ್ನೂ ಜನರು ಇಷ್ಟಪಡುತ್ತಾರೆ’ ಎನ್ನುತ್ತಾರೆ ಅವರು. ’ವಿದೇಶೀ ಪ್ರವಾಸಿಗರು ಹೆಚ್ಚು ವೆಜ್‌ ರೆಸಿಪಿಗಳ ಕುಕರಿ ಬುಕ್‌ಗಳನ್ನು ನಮ್ಮಲ್ಲಿ ಕೊಳ್ಳುತ್ತಾರೆ’ ಎಂಬ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡವರು ‘ಹಿಗಿನ್ ಬಾಥಮ್ಸ್‌’ನ ವ್ಯವಸ್ಥಾಪಕರು. ‘ಈಗ ಮೊದಲಿಗಿಂತಲೂ ಕುಕರಿ ಬುಕ್ಸ್‌ನ ಹೆಚ್ಚು ಟೈಟಲ್‌ಗಳು ಪ್ರಕಟವಾಗುತ್ತವೆ. ವ್ಯಾಪಾರ ಮೊದಲಿನಷ್ಟು ಇಲ್ಲದಿದ್ದರೂ ಪೂರ್ತಿ ಕಡಿಮೆ ಆಗಿದೆ ಎನ್ನುವಂತಿಲ್ಲ. ಸೆಲೆಬ್ರಿಟಿ ಶೆಫ್‌ಗಳ ಪುಸ್ತಕಗಳಿಗೆ ಬೇಡಿಕೆ ಇದೆ. ಗಿಫ್ಟ್‌ ಕೊಡುವವರು ಕಾಫಿ ಟೇಬಲ್‌ ಪುಸ್ತಕಗಳನ್ನು ಕೊಳ್ಳುತ್ತಾರೆ. ತಮ್ಮ ಉಪಯೋಗಕ್ಕೆ ಸಾಮಾನ್ಯ ಪ್ರತಿಗಳನ್ನು ಖರೀದಿಸುತ್ತಾರೆ. ಹೆಣ್ಣುಮಕ್ಕಳೇ ಹೆಚ್ಚು ಕೊಳ್ಳುವುದು; ಎಲ್ಲ ವಯಸ್ಸಿನವರೂ ಕೊಳ್ಳುತ್ತಾರೆ’ ಎಂದೂ ಅವರು ವಿವರಿಸುತ್ತಾರೆ.

ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ; ಅವನ್ನು ವಿವರಿಸುವ ಪುಸ್ತಕಗಳೂ ಬರುತ್ತಲೇ ಇವೆ. ಪಾಕತಜ್ಞರಿಗೆ ಇಂದು ಎಲ್ಲೆಡೆ ತುಂಬ ಬೇಡಿಕೆ. ಹಲವರು ಸೆಲೆಬ್ರೆಟಿಗಳ ಪಟ್ಟವನ್ನೂ ಅಲಂಕರಿಸಿದ್ದಾರೆ. ತಮ್ಮದೇ ಚಾನೆಲ್‌ಗಳನ್ನು ನಡೆಸುವವರಿದ್ದಾರೆ. ವರ್ಕ್‌ಶಾಪ್‌ಗಳನ್ನು ನಡೆಸುತ್ತಾರೆ. ಸಾವಿರಾರು ರೂಪಾಯಿಗಳನ್ನು ಕೊಟ್ಟು ಜನರು ಅದರಲ್ಲಿ ಭಾಗವಹಿ, ತಮ್ಮ ನಾಲಗೆಯ ರುಚಿಮೊಗ್ಗುಗಳಿಗೆ ರಸಸ್ವಾದವನ್ನು ಉಣಬಡಿಸಿಕೊಳ್ಳುತ್ತಾರೆ. ತರಲಾ ದಲಾಲ್‌ ಮತ್ತು ಸಂಜೀವ್‌ ಕಪೂರ್‌ ಅವರ ಪಾಕಶಾಸ್ತ್ರ ಪ್ರಾವೀಣ್ಯಕ್ಕೆ ಪದ್ಮಪ್ರಶಸ್ತಿಯೂ ಸಂದಿದೆ. ಶೆಪ್‌ಗಳಿಗೂ ಕುಕ್‌ಗಳಿಗೂ ಕುಕರಿಬುಕ್‌ಗಳಿಗೂ ಮುಂದಿನ ದಿನಗಳಲ್ಲೂ ಸಾಕಷ್ಟು ಬೇಡಿಕೆ ಇರುತ್ತದೆ ಎನ್ನುವುದಂತೂ ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.