ADVERTISEMENT

ಗ್ರಾಹಕರ ಬೇಡಿಕೆಗೆ ತಕ್ಕಂತೆ ದೋಸೆ..!

ಕಡಿಮೆ ದರದಲ್ಲಿ ಗರಿ ಗರಿಯಾದ ಬಿಸಿ ಬಿಸಿ ದೋಸೆ; ಸ್ವಾದಿಷ್ಟ ರುಚಿಯಲ್ಲಿ ರಾಜಿಯಿಲ್ಲ

ಡಿ.ಬಿ, ನಾಗರಾಜ
Published 26 ಜನವರಿ 2019, 19:30 IST
Last Updated 26 ಜನವರಿ 2019, 19:30 IST
ಬಿಸಿ ಬಿಸಿ ದೋಸೆ ತಯಾರಿಕೆಯಲ್ಲಿ ರಘು ದೋಸೆ ಸೆಂಟರ್‌ನ ಸುರೇಶ್‌ ಶೆಟ್ಟಿಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಬಿಸಿ ಬಿಸಿ ದೋಸೆ ತಯಾರಿಕೆಯಲ್ಲಿ ರಘು ದೋಸೆ ಸೆಂಟರ್‌ನ ಸುರೇಶ್‌ ಶೆಟ್ಟಿಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ:ಎಣ್ಣೆ ಕಡಿಮೆ–ಹೆಚ್ಚು. ದಪ್ಪ–ತೆಳುವಿನ ದೋಸೆ... ಗರಿ ಗರಿಯಾದ ಬಿಸಿ ಬಿಸಿ ದೋಸೆ. ಸ್ವಾದಿಷ್ಟ ರುಚಿ... ಗ್ರಾಹಕರ ಬೇಡಿಕೆಗೆ ತಕ್ಕಂತೆ ಬಗೆ ಬಗೆಯ ದೋಸೆ ತಯಾರಿಸಿಕೊಡುವಲ್ಲಿ ನಿಪುಣ ಸುರೇಶ್‌ ಶೆಟ್ಟಿ.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬಜಗೋಳಿ ಮೂಲದವರಾದ ಸುರೇಶ್‌ ವಿಜಯಪುರದಲ್ಲೇ ಹುಟ್ಟಿ ಬೆಳೆದವರು. ತಮ್ಮ ತಂದೆ ಕಾಲದಲ್ಲೇ ಕರಾವಳಿಯಿಂದ ಬಿಸಿಲ ನಾಡಿಗೆ ವಲಸೆ ಬಂದ ಕುಟುಂಬದ ಕುಡಿ.

ಮೂರು ದಶಕಗಳಿಂದ ವಿಜಯಪುರಿಗರಿಗೆ ರುಚಿಕಟ್ಟಾದ ದೋಸೆ ನೀಡುವ ಮೂಲಕ ಅಚ್ಚುಮೆಚ್ಚಿನವರಾಗಿದ್ದಾರೆ. ತಮ್ಮ ವಿನಯ, ನಡವಳಿಕೆ, ಗ್ರಾಹಕರನ್ನು ಮಾತನಾಡಿಸುವ ಶೈಲಿಗೆ ಬಹುತೇಕರು ಸುರೇಶರಿಗೆ ಫಿದಾ ಆಗಿದ್ದಾರೆ.

ADVERTISEMENT

ವಿಜಯಪುರದ ಮಿಲನ್‌ಬಾರ್‌ ಚೌಕ್‌ ಬಳಿಯ ಕಾರ್ನರ್‌ನಲ್ಲಿ ನಿತ್ಯ ಮುಂಜಾನೆ–ಮುಸ್ಸಂಜೆ, ರಾತ್ರಿ, ತಮ್ಮ ರಘು ದೋಸೆ ಸೆಂಟರ್‌ ಮೂಲಕ ದೋಸೆ ಪ್ರಿಯರ ಮನದಾಸೆ ಇಂಗಿಸುವ ಕೆಲಸದಲ್ಲಿ ನಿರತ. ಬೆಳಿಗ್ಗೆ 6ರಿಂದ 9.30ರವರೆಗೆ ಮಿಲನ್‌ಬಾರ್‌ ಸಮೀಪ ಸುರೇಶರ ಬಿಸಿ ಬಿಸಿ ದೋಸೆ ಲಭ್ಯ.

ಶಾಲೆಗೆ ಸಮಯಕ್ಕೆ ಸರಿಯಾಗಿ ಉಪಾಹಾರದೊಂದಿಗೆ ಮಕ್ಕಳನ್ನು ಕಳುಹಿಸುವಾಗ ಸ್ವಲ್ಪ ಆಚೀಚೆಯಾಗುತ್ತಿದ್ದಂತೆ, ಪೋಷಕರು ದಾಂಗುಡಿಯಿಡುವುದು ರಘು ದೋಸೆ ಸೆಂಟರ್‌ಗೆ. ಕಚೇರಿಗೆ ತೆರಳುವವರು ಸಹ ಮನೆಯಲ್ಲಿ ಉಪಾಹಾರ ಸಮಯಕ್ಕೆ ಸರಿಯಾಗಿ ಸಿದ್ದವಾಗದಿದ್ದರೆ ನೇರವಾಗಿ ಬರುವುದು ಈ ದೋಸೆ ಸೆಂಟರ್‌ಗೆ.

ಇನ್ನೂ ಕೋಚಿಂಗ್‌ ಕ್ಲಾಸ್‌ನ ವಿದ್ಯಾರ್ಥಿಗಳ ಬೆಳಗಿನ ಉಪಾಹಾರ ಇಲ್ಲಿಯೇ. ಉಳಿದಂತೆ ಕಾಯಂ ಗಿರಾಕಿಗಳು ಬೆಳಗಿನ ಉಪಾಹಾರಕ್ಕೆ ರಘು ದೋಸಾ ಸೆಂಟರ್‌ಗೆ ಹಾಜರು.

ಮುಂಜಾನೆಯಿಂದ ಮುಸ್ಸಂಜೆವರೆಗೂ ದುಡಿದು ದಣಿದವರ ಬಾಯಿ ರುಚಿ ತಣಿಸುವ ಜತೆಯಲ್ಲೇ, ಹೊಟ್ಟೆ ತುಂಬಿಸಲಿಕ್ಕಾಗಿಯೇ ಸರಾಫ್‌ ಬಜಾರ್‌ನ ಸಿಕಂದರ್ ಮಸೀದಿ ಬಳಿ, ಸಂಜೆ 5ರಿಂದ ರಾತ್ರಿ 9ರವರೆಗೂ ಸುರೇಶ್‌ ತನ್ನ ಸಹೋದರ ರಘು ಜತೆ ದೋಸೆ ತಯಾರಿಕೆಯಲ್ಲಿ ತಲ್ಲೀನರಾಗಿರುತ್ತಾರೆ. ನಂತರ ಮತ್ತೆ ಮಿಲನ್‌ಬಾರ್‌ ಚೌಕ್‌ನಲ್ಲಿ ನೆರೆದು, ಹೊತ್ತು ಮುಳುಗಿದ ಬಳಿಕವೂ ಕೆಲಸ ನಿರ್ವಹಿಸುವವರು, ತಡರಾತ್ರಿಯವರೆಗೂ ವ್ಯಾಪಾರ ನಿರ್ವಹಿಸುವ ವ್ಯಾಪಾರಿಗಳಿಗಾಗಿ ಗರಿ ಗರಿಯಾದ ಬಿಸಿ ಬಿಸಿ ದೋಸೆ ತಯಾರಿಸಿಕೊಡುವುದು ಇವರ ವಿಶೇಷ.

ವಿಜಯಪುರದ ಬಹುತೇಕ ರಾಜಕಾರಣಿಗಳು, ಮಹಾನಗರ ಪಾಲಿಕೆ ಸದಸ್ಯರು, ಈ ಹಿಂದಿನ ನಗರಸಭೆಯ ಮಾಜಿ ಸದಸ್ಯರು ರಘು ದೋಸೆ ಸೆಂಟರ್‌ನ ಗಿರಾಕಿಗಳು. ಹಲವರು ತಮ್ಮ ಮನೆಗಳಿಗೆ ಪಾರ್ಸೆಲ್‌ ತರಿಸಿಕೊಳ್ಳುತ್ತಾರೆ.

ಬೆಣ್ಣೆ ದೋಸೆ ವಿಶೇಷ..!

ರಘು ದೋಸೆ ಸೆಂಟರ್‌ನಲ್ಲಿ ಸುರೇಶ್‌ ಶೆಟ್ಟಿ ಮುಂಜಾನೆ, ಮುಸ್ಸಂಜೆ, ರಾತ್ರಿ ಸ್ಥಳದಲ್ಲೇ ಮಾಡಿಕೊಡುವ ಬೆಣ್ಣೆ ದೋಸೆ ತುಂಬಾ ವಿಶೇಷ. ತಿನ್ನಲು ಸ್ವಾದಿಷ್ಟ. ಗರಿ ಗರಿಯಾದ ದೋಸೆ ಸವಿಯುವುದೇ ಒಂದು ಆನಂದ. ಗ್ರಾಹಕರು ಮುಗಿ ಬಿದ್ದು ದೋಸೆ ಸವಿಯುತ್ತಾರೆ.

ಒಂದು ಬೆಣ್ಣೆ ದೋಸೆಯ ಧಾರಣೆ ಹೆಚ್ಚೇನಿಲ್ಲ. ₹ 20 ಅಷ್ಟೇ. ಇದೇ ದೋಸೆಯನ್ನು ಬೇರೆಡೆ ತಿನ್ನಬೇಕು ಎಂದರೇ ಕನಿಷ್ಠ ₹ 40–₹ 50 ಬೇಕೆ ಬೇಕು. ರುಚಿಯೂ ಅಷ್ಟಕ್ಕಷ್ಟೇ. ಆದರೆ ಇಲ್ಲಿ ತಿನ್ನೋ ಬೆಣ್ಣೆ ದೋಸೆಯನ್ನು ನಾನು ಇನ್ನೇಲ್ಲೂ ತಿಂದಿಲ್ಲ ಎನ್ನುತ್ತಾರೆ ರಾಜೇಶ ತಾವಸೆ, ಆದಿತ್ಯ ತಾವರಗೇರಿ.

ಮಸಾಲ ದೋಸೆ ಒಂದಕ್ಕೆ ₹ 20. ಮಿಕ್ಸ್‌ ದೋಸೆ (ಬಾಜಿ, ಬೆಣ್ಣೆ) ಸಹ ₹ 20, ಸಾದಾ ದೋಸೆ ₹ 10. ಸೆಟ್‌ ದೋಸೆ ಮೂರು ಪೀಸಿಗೆ ₹ 30... ರಘು ದೋಸೆ ಸೆಂಟರ್‌ನಲ್ಲಿನ ದೋಸೆಗಳ ಧಾರಣೆ ಪಟ್ಟಿಯಿದು. ದೋಸೆ ಜತೆ ತಿನ್ನಲಿಕ್ಕಾಗಿ ಆಲೂಗಡ್ಡೆ ಪಲ್ಲೆ. ಪುಟಾಣಿ–ಶೇಂಗಾ ಚಟ್ನಿ ತಯಾರಿಸಲಿದ್ದು, ಇವು ಸಹ ರುಚಿಕರವಾಗಿರುತ್ತವೆ.

ವಿಜಯಪುರಿಗರಿಗೆ ಬೆಣ್ಣೆ ದೋಸೆಯ ರುಚಿ ಹತ್ತಿಸಿದವರು ಸುರೇಶ್‌ ಶೆಟ್ಟಿ. ಬಿಸಿ ಬಿಸಿ ದೋಸೆ ಮೇಲೆ ಬೆಣ್ಣೆ ಹಾಕಿ, ಅದರ ಮೇಲೆ ಶೇಂಗಾ ಹಿಂಡಿ ಹಚ್ಚಿ ಕೊಡ್ತ್ವಾರೆ. ನೆನೆಸಿಕೊಂಡಾಗಲೆಲ್ಲ ಇಲ್ಲಿಗೆ ಬಂದು ಬೆಣ್ಣೆ ದೋಸೆ ಸವಿಯುತ್ತೇವೆ ಎನ್ನುತ್ತಾರೆ ವಿಜಯ ಜೋಶಿ, ರಾಕೇಶ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.