ADVERTISEMENT

ಉಡುಪಿ ಗ್ರ್ಯಾಂಡ್‌ನಲ್ಲಿ ನಿತ್ಯ ಹೊಸ ರುಚಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST
ಉಡುಪಿ ಗ್ರ್ಯಾಂಡ್‌ನಲ್ಲಿ ನಿತ್ಯ ಹೊಸ ರುಚಿ
ಉಡುಪಿ ಗ್ರ್ಯಾಂಡ್‌ನಲ್ಲಿ ನಿತ್ಯ ಹೊಸ ರುಚಿ   

ನಿತ್ಯವೂ ಹೊಸ ಬಗೆಯ ದೋಸೆ, ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೈಲಿಯ ವಿಶೇಷ ಖಾದ್ಯಗಳು ಮತ್ತು ಸ್ವಾದಿಷ್ಟಕರ ಕರಿಗಳ ರುಚಿಯನ್ನು ಗ್ರಾಹಕರಿಗೆ ಉಣಬಡಿಸುತ್ತಾ, ಹೊಸ ತಿನಿಸುಗಳನ್ನು ಪರಿಚಯಿಸುತ್ತಾ ಆಕರ್ಷಿಸುತ್ತಿದೆ ಉಡುಪಿ ಗ್ರ್ಯಾಂಡ್‌ ರೆಸ್ಟೋರೆಂಟ್‌. ಹಬ್ಬದ ದಿನಗಳಲ್ಲಿ ವಿಶೇಷ ಖಾದ್ಯಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ಸಿಗುವಂತಹ ಕೆಲವು ವಿಶೇಷ ಖಾದ್ಯಗಳು ಇಲ್ಲಿವೆ.

ರಾಗಿ ಮಸಾಲೆದೋಸೆ

ಹಲವು ಹೋಟೆಲ್‌ಗಳಲ್ಲಿ ರಾಗಿಯಿಂದ ಮಾಡುವ ಮುದ್ದೆ, ರಾಗಿರೊಟ್ಟಿ ಅಥವಾ ರಾಗಿ ದೋಸೆಯಷ್ಟೇ ಸಿಗುತ್ತದೆ. ಆದರೆ ಈ ಹೋಟೆಲ್‌ನಲ್ಲಿ ವಿಶೇಷವಾಗಿ ರಾಗಿಯಿಂದ ಮಸಾಲೆ ದೋಸೆ ಮಾಡುತ್ತಾರೆ. ಇಲ್ಲಿ ಮಾತ್ರ ಸಿಗುವಂತಹ ಈ ರಾಗಿ ಮಸಾಲೆ ದೋಸೆ ರುಚಿ ವಿಶೇಷ ಎನಿಸದಿರದು. ಈರುಳ್ಳಿ, ಕ್ಯಾರೆಟ್‌, ಬೀಟ್‌ರೂಟ್ ತುರಿಯನ್ನು ಬೆರೆಸಿ, ದೋಸೆ ಮೇಲೆ ಮಸಾಲೆ ಬಳಿದು, ನಡುವೆ ಆಲುಗಡ್ಡೆ ಪಲ್ಯ ಇಟ್ಟು ಕೊಡುತ್ತಾರೆ. ದೋಸೆ ಮೇಲೆ ಒಂದಿಷ್ಟು ಬೆಣ್ಣೆ ಹಾಕುವುದರಿಂದ ರುಚಿ ಮತ್ತಷ್ಟು ಹೆಚ್ಚುತ್ತದೆ. ಇದನ್ನು ಸಾಂಬರ್, ಚಟ್ನಿ ಅಥವಾ ಸಾಗುವಿನೊಂದಿಗೆ ಸವಿಯಬಹುದು. ಇದೇ ರೀತಿ, ಈರುಳ್ಳಿ ದೋಸೆ, ರವೆ ದೋಸೆ, ಸೌತೆಕಾಯಿ ದೋಸೆ, ಮೈಸೂರು ಮಸಾಲೆ, ಚೀಸ್ ಮಸಾಲೆ, ಪೇಪರ್ ಪ್ಲೈನ್ ದೋಸೆ... ಹೀಗೆ ನಿತ್ಯ ಹೊಸ ಬಗೆಯ ದೋಸೆಗಳನ್ನು ತಯಾರಿಸುತ್ತಾರೆ.

ADVERTISEMENT

ಪನೀರ್ ಕಬಾಬ್‌

ಮಾಂಸಾಹಾರಿ ಕಬಾಬ್‌ ಇಷ್ಟಪಡದವರು ಇಲ್ಲಿ ಸಿಗುವ ಪನೀರ್‌ ಕಬಾಬ್‌ನ ರುಚಿಯನ್ನು ಸವಿಯಬಹುದು. ಪನೀರ್‌ ಅನ್ನು ದುಂಡಾಗಿ ಚೂರು ಮಾಡಿ, ತಯಾರಿಸಿ ಇಟ್ಟುಕೊಂಡಿರುವ ಕಬಾಬ್ ಮಸಾಲೆಯೊಂದಿಗೆ ಬೆರೆಸಿ, ಬೊಂಡಾ ತಯಾರಿಸುವ ಹಾಗೆ ಎಣ್ಣೆಯಲ್ಲಿ ಕರೆದು ಚಟ್ನಿಯೊಂದಿಗೆ ಸವಿಯಲು ನೀಡಲಾಗುತ್ತದೆ. ಮಸಾಲೆಯೊಂದಿಗೆ ಹದವಾಗಿ ಬೆಂದ ಪನೀರ್‌ ಚೂರುಗಳು ವಿಶೇಷ ರುಚಿ ನೀಡುತ್ತವೆ. ಅಲಂಕಾರಕ್ಕಾಗಿ ಹೃದಾಯಾಕಾರದಲ್ಲಿ, ಸೌತೆಕಾಯಿ ಮತ್ತು ಕ್ಯಾರೆಟ್‌ ಚೂರುಗಳನ್ನು ಕತ್ತರಿಸಿ ಜೋಡಿಸಲಾಗುತ್ತದೆ. ನಡುವೆ ಈರುಳ್ಳಿ, ತರಕಾರಿ ಎಸಳುಗಳನ್ನು ಹಾಕುವುದರಿಂದ ಆಕರ್ಷಕವಾಗಿ ಕಾಣಿಸುತ್ತದೆ. ಹೀಗೆಯೇ, ಚೈನೀಸ್ ಡ್ರೈ ವಿಭಾಗದಲ್ಲಿ ಮಶ್ರೂಮ್ 65, ಬೇಬಿಕಾರ್ನ್ ಚಿಲ್ಲಿ, ಪನೀರ್ 65, ಬೇಬಿಕಾರ್ನ್ ಪೆಪ್ಪರ್ ಡ್ರೈ, ಪೊಟಾಟೊ ಚಿಲ್ಲಿ, ಮಶ್ರೂಮ್ ಚಿಲ್ಲಿ, ಉಡುಪಿ ಗ್ರ್ಯಾಂಡ್ ಸ್ಪೆಷಲ್ ಮಂಚೂರಿಯನ್‌ನಂತಹ ಹಲವು ವಿಶೇಷ ಖಾದ್ಯಗಳು ದೊರೆಯುತ್ತವೆ.

ಮಶ್ರೂಮ್‌ ತವಾ ಮಸಾಲ

ಇಲ್ಲಿನ ಕಡಾಯ್ ಕೋಫ್ತಾ ವಿಭಾಗದಲ್ಲಿ ಸಿಗುವ ಮಶ್ರೂಮ್ ತವಾ ಮಸಾಲ ವಿಶೇಷವಾಗಿರುತ್ತದೆ. ಅಣಬೆಗಳನ್ನು ಚೂರು ಮಾಡಿ ಇದಕ್ಕಾಗಿಯೇ ಸಿದ್ಧಪಡಿಸಿ ಇಟ್ಟುಕೊಂಡಿರುವ ಮಸಾಲೆಯೊಂದಿಗೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಮೇಲೆ ಪನೀರ್ ಚೂರುಗಳನ್ನು ಉದುರಿಸಲಾಗುತ್ತದೆ. ಅಲಂಕಾರಕ್ಕಾಗಿ ಸೌತೆಕಾಯಿ, ಕ್ಯಾರೆಟ್‌ ಚೂರುಗಳನ್ನು ವಿಶೇಷವಾಗಿ ಕತ್ತರಿಸಿ ಮೇಲೆ ಜೋಡಿಸಲಾಗುತ್ತದೆ. ನಡುವೆ ಪನೀರ್, ಕೊತ್ತಂಬರಿ ಸೊಪ್ಪು ಉದುರಿಸುವುದರಿಂದ ಆಕರ್ಷಕವಾಗಿ ಕಾಣಿಸುತ್ತದೆ. ಇದನ್ನು ರೋಟಿ, ಪುಲ್ಕ ಅಥವಾ ಮೆಂತ್ಯೆ ರೋಟಿಯೊಂದಿಗೆ ಸವಿಯಬಹುದು. ಇನ್ನು ಗೋಡಂಬಿ ಬಳಸಿ ತಯಾರಿಸುವ ಕಡಾಯ್ ಗೋಬಿ ಮಟರ್, ಪನೀರ್ ಕೋಫ್ತಾ, ಮಲಾಯ್ ಕೋಫ್ತಾ, ಪನೀರ್ ತವಾ ಮಸಾಲ ಖಾದ್ಯಗಳ ರುಚಿ ವಿಶೇಷವಾಗಿರುತ್ತದೆ.

ಚಂದ್ರಶೇಖರ್ ಶೆಟ್ಟಿ, ಪ್ರಸಾದ್ ಕಂಚನ್ ಮತ್ತು ಜಯರಾಮ್ ಶೆಟ್ಟಿ ಅವರು ಎರಡು ವರ್ಷಗಳ ಹಿಂದೆ ಈ ರೆಸ್ಟೋರೆಂಟ್ ಆರಂಭಿಸಿದರು. ‘ಗ್ರಾಹಕರಿಗೆ ಎಲ್ಲ ಬಗೆಯ ರುಚಿಗಳನ್ನೂ ಪರಿಚಯಿಸಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿಯೇ ಹಲವು ಪ್ರಯೋಗಗಳನ್ನು ಮಾಡುತ್ತಿರುತ್ತಿವೆ, ಹೊಸ ಬಗೆಯ ಖಾದ್ಯಗಳನ್ನು ಪರಿಚಯಿಸುತ್ತೇವೆ’ ಎನ್ನುತ್ತಾರೆ ಚಂದ್ರಶೇಖರ್ ಶೆಟ್ಟಿ.

‘ಆಯಾ ದಿನಕ್ಕೆ ಬೇಕಾಗುವ ತರಕಾರಿಯನ್ನು ಅಂದೇ ಖರೀದಿಸುತ್ತೇವೆ. ಗುಣಮಟ್ಟದ ದಿನಸಿಯನ್ನು ಮೂರು ದಿನಕ್ಕೊಮ್ಮೆ ತರುತ್ತೇವೆ. ರುಚಿ ಹೆಚ್ಚಿಸುವುದಕ್ಕಾಗಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಗ್ರಾಹಕರ ಆರೋಗ್ಯದ ಬಗ್ಗೆಯೂ ನಮಗೆ ಕಾಳಜಿ ಇದೆ. ಶುದ್ಧವಾದ ಎಣ್ಣೆ ಮತ್ತು ತುಪ್ಪವನ್ನು ಬಳಸುತ್ತೇವೆ’ ಎಂದು ಅವರು ಹೇಳುತ್ತಾರೆ.

ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಬಗೆ ಬಗೆಯ ಚಿತ್ರಾನ್ನಗಳು, ಉಪ್ಪಿಟ್ಟು ಹೀಗೆ ಹಲವು ವಿಧದ ತಿಂಡಿಗಳು ಇಲ್ಲಿ ಸಿಗುತ್ತವೆ. ಇಲ್ಲಿ ತಯಾರಿಸುವ ಅವಲಕ್ಕಿ ಉಪ್ಪಿಟ್ಟು ವಿಶೇಷವಾಗಿರುತ್ತದೆ. ಮಧ್ಯಾಹ್ನದ ಊಟಕ್ಕೆ ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ಥಾಲಿಗಳು ಸಿಗುತ್ತವೆ. ಪಾವ್‌ಬಾಜಿ, ಚಾಟ್‌ಗಳು, ಮಂಚೂರಿಗಳು ಹೀಗೆ ವಿವಿಧ ಚಾಟ್‌ಗಳನ್ನು ಸಂಜೆ ತಿಂಡಿ ಸಮಯಕ್ಕೆ ಸವಿಯಬಹುದು. ವಿವಿಧ ಹಣ್ಣುಗಳ ಜ್ಯೂಸ್‌, ಐಸ್‌ಕ್ರೀಂ ಕೂಡ ದೊರೆಯುತ್ತದೆ. ರಾತ್ರಿ ಊಟಕ್ಕೆ ವಿಶೇಷ ಕರಿಗಳುು, ಕಡಾಯ್ ಕೋಫ್ತಾಗಳು ಸಿಗುತ್ತವೆ.

ಸಮಯ: ಬೆಳಿಗ್ಗೆ 6:15ರಿಂದ ರಾತ್ರಿ 10:45

ವಿಶೇಷ: ನಿತ್ಯ ವಿಶೇಷ ದೋಸೆಗಳು, ಹೊಸ ಬಗೆಯ ಖಾದ್ಯಗಳು

ಸ್ಥಳ: ಬಸವನಗುಡಿಯ ನಾಗಸಂದ್ರ ವೃತ್ತದ ಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.