ADVERTISEMENT

ಬಾಯಿಗಿಟ್ಟರೆ ಕರಗುವ ಗರಂ ಗರಂ ಬಜಿ..!

ಶರಣಬಸಪ್ಪ ಎಸ್‌.ಗಡೇದ
Published 20 ಅಕ್ಟೋಬರ್ 2018, 19:47 IST
Last Updated 20 ಅಕ್ಟೋಬರ್ 2018, 19:47 IST
ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗೂಡಂಗಡಿಯಲ್ಲಿ ಬಜಿ ವ್ಯಾಪಾರ ನಡೆಸುವ ನರೇಂದ್ರ ಅಗರವಾಲ
ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗೂಡಂಗಡಿಯಲ್ಲಿ ಬಜಿ ವ್ಯಾಪಾರ ನಡೆಸುವ ನರೇಂದ್ರ ಅಗರವಾಲ   

ತಾಳಿಕೋಟೆ:ಪಟ್ಟಣದ ಬಸ್‌ ನಿಲ್ದಾಣದತ್ತ ಮುಸ್ಸಂಜೆ ತೆರಳಿದವರ ಮೂಗಿಗೆ ಬಜಿಯ ಘಮಲು ಬಡಿಯುತ್ತಿದ್ದಂತೆ; ಶೇಟ್‌ಜಿ ತಮ್ಮ ವಹಿವಾಟು ಆರಂಭಿಸಿದ್ದಾರೆ ಎಂದು ಗೂಡಂಗಡಿಯತ್ತ ಹೆಜ್ಜೆ ಹಾಕುವವರೇ ಹಲವರು.

ಪಟ್ಟಣದಲ್ಲಿ ಶೇಟ್‌ಜಿ ಗೂಡಂಗಡಿ ಬಜಿಗೆ ಪ್ರಸಿದ್ಧಿ. ನರೇಂದ್ರ ಮೂಲಚಂದ ಅಗರವಾಲ ಇದರ ಮಾಲೀಕರು. ಅಸಂಖ್ಯಾತರಿಗೆ ಇವರ ಹೆಸರೇ ಗೊತ್ತಿಲ್ಲ. ಎಲ್ಲರೂ ಶೇಟ್‌ಜಿ ಎಂದೇ ಸಂಬೋಧಿಸುತ್ತಾರೆ.

ಮೂರು ದಶಕದಿಂದ ಅಗರವಾಲರ ಬದುಕಿನ ಬಂಡಿ ಸಾಗಲು ಈ ಬಜಿ ಅಂಗಡಿ ಸಾಥ್ ನೀಡಿದೆ. ಬದುಕನ್ನು ಕಟ್ಟಿಕೊಟ್ಟಿದೆ.

ADVERTISEMENT

ಮುಸ್ಸಂಜೆ ಆರು ಗಂಟೆಗೆ ಸರಿಯಾಗಿ ಒಂದು ಕೆ.ಜಿ.ಯಷ್ಟು ಗುಂಡು ಬಜಿ ಎಣ್ಣೆಯಲ್ಲಿ ಕರಿದು, ಬಾರದಾನಿಗೆ ಬೀಳುವಷ್ಟರಲ್ಲಿ ಖಾಲಿ. ಅರ್ಧ ತಾಸಿನ ಬಳಿಕ ಇನ್ನೊಮ್ಮೆ ತಿನ್ನಬೇಕು ಎಂದರೂ ಸಿಗಲ್ಲ. ನಾಳೆಯವರೆಗೂ ಕಾಯಲೇಬೇಕು.

ಸಂಜೆ ಏಳು ಗಂಟೆಗೆ ಗೂಡಂಗಡಿಗೆ ಬರುವ ನರೇಂದ್ರ ಒಂಭತ್ತು ಗಂಟೆಯವರೆಗೂ ಮೆಣಸಿನಕಾಯಿ ಬಜಿ ಕರಿಯುತ್ತಾರೆ. ಬಾಯಲ್ಲಿಡುತ್ತಿದ್ದಂತೆ ಕರಗಬೇಕು. ಇಂತಹ ಸ್ವಾದಿಷ್ಟ ಬಜಿ ಪಟ್ಟಣದ ಯಾವ ಅಂಗಡಿಗಳಲ್ಲೂ ಸಿಕ್ಕದು ಎನ್ನುವುದು ಬಜಿಪ್ರಿಯರ ಮಾತು.

ನಾಲ್ಕು ಬಜಿಯ ಒಂದು ಪ್ಲೇಟ್‌ಗೆ ₹ 15. ಪ್ಲೇಟ್‌ ಲೆಕ್ಕದಲ್ಲೇ ಬಜಿ ಕೊಡುವುದು. ಒಂದು ಎರಡೂ ಇಲ್ಲವೇ ಇಲ್ಲ. ಬೇಕಿದ್ದರೆ ತೆಗೆದುಕೊಳ್ಳಿ ಎಂಬ ಉತ್ತರ ಗಲ್ಲದ ಮೇಲಿಂದ. ಬಜಿಯ ರುಚಿಗೆ ಮನಸೋತಿರುವ ಗ್ರಾಹಕರು ಒಂದು, ಎರಡು ಕೊಳ್ಳಲ್ಲ. ತಮಗೆಷ್ಟು ಬೇಕು ಅಷ್ಟನ್ನು ಖರೀದಿಸಿ, ಸವಿಯುತ್ತಾರೆ.

ಸಂಜೆ ಬಜಿ ವಿಶೇಷವಾದರೆ, ಬೆಳಿಗ್ಗೆ ಮತ್ತು ಸಂಜೆ ಇಡ್ಲಿ ವಡಾ, ದಾಲ್‌ ವಡಾ (ಕಡ್ಲೆಬೇಳೆ ವಡಾ), ವಡಾ ಪಾವ್, ಸಮೋಸಾ. ಕಚೋರಿ ಕೂಡ ಇಲ್ಲಿ ಸಿಕ್ಕುತ್ತವೆ. ಬೆಳಿಗ್ಗೆ ಒಂದೆರೆಡು ಗಂಟೆ, ಸಂಜೆ ಮೂರು ಗಂಟೆ ಮಾತ್ರ ದುಡಿತ. ಉಳಿದಂತೆ ಮನೆಯಲ್ಲೇ ಅಗತ್ಯ ಸಾಮಗ್ರಿ ತಯಾರಿಸಿಕೊಳ್ಳುತ್ತಾರೆ.

ಬಜಿಯ ತಯಾರಿಕೆ, ವಹಿವಾಟಿನ ಕುರಿತು ಯಾರೂ ಪ್ರಶ್ನಿಸಿದರೂ ಉತ್ತರ ನೀಡಲ್ಲ. ಹೊರಗಿನವರು ಮಾಡಿ ಕೊಡಿ ಎಂದರೂ ಆರ್ಡರ್‌ ಪಡೆಯಲ್ಲ. ನಿಗದಿತ ಸಮಯ ಮೀರಿ ಕೆಲಸ ಮಾಡಲ್ಲ. ಅಗರವಾಲರ ಬಜಿಯ ಕೈ ರುಚಿಯನ್ನು ಮಕ್ಕಳಾದ ಪವನ, ಗಣೇಶ ಸಹ ಕರಗತ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.