ADVERTISEMENT

‘ಸ್ವಾಮಿ ಇಡ್ಲಿ–ಚಟ್ನಿ’ ರುಚಿಗೆ ಸಾಟಿ ಬೇರಿಲ್ಲ..!

ಸಿದ್ಧೇಶ್ವರ ಸೆಲ್ಫ್‌ ಸರ್ವೀಸ್‌ಗೆ ಮೂರು ದಶಕದ ಇತಿಹಾಸ

ಮಹಾಬಲೇಶ್ವರ ಶಿ.ಗಡೇದ
Published 2 ಮಾರ್ಚ್ 2019, 13:55 IST
Last Updated 2 ಮಾರ್ಚ್ 2019, 13:55 IST
ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಾಲೇಜು ಸಮೀಪದ ಮೇಟಿ ಕಾಂಪ್ಲೆಕ್ಸ್‌ನಲ್ಲಿರುವ ಸಿದ್ಧೇಶ್ವರ ಸೆಲ್ಫ್‌ ಸರ್ವೀಸ್‌ ಹೋಟೆಲ್ಚಿತ್ರ: ವಿವೇಕ ದೋಟಿಹಾಳ
ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಾಲೇಜು ಸಮೀಪದ ಮೇಟಿ ಕಾಂಪ್ಲೆಕ್ಸ್‌ನಲ್ಲಿರುವ ಸಿದ್ಧೇಶ್ವರ ಸೆಲ್ಫ್‌ ಸರ್ವೀಸ್‌ ಹೋಟೆಲ್ಚಿತ್ರ: ವಿವೇಕ ದೋಟಿಹಾಳ   

ಮುದ್ದೇಬಿಹಾಳ:ಪಟ್ಟಣದ ಎಂ.ಜಿ.ವಿ.ಸಿ. ಕಾಲೇಜಿನ ಸಮೀಪದ ಮೇಟಿ ಕಾಂಪ್ಲೆಕ್ಸ್‌ನಲ್ಲಿರುವ ಸಿದ್ಧೇಶ್ವರ ಸೆಲ್ಫ್‌ ಸರ್ವೀಸ್‌ ಎಂಬ ಪುಟ್ಟ ಹೋಟೆಲ್‌ನಲ್ಲಿ ದೊರೆಯುವ ಇಡ್ಲಿ, ಚಟ್ನಿ ಪಟ್ಟಣದಲ್ಲೇ ಫೇಮಸ್ಸು.

ಊರಲ್ಲಿ ಹಲ ಹೋಟೆಲ್‌ಗಳಿವೆ. ಆದರೆ ‘ಸ್ವಾಮಿ ಇಡ್ಲಿ’ಯನ್ನು ಒಮ್ಮೆ ತಿಂದವರು ಮತ್ತೊಮ್ಮೆ ಬೆನ್ನತ್ತಿ ಇಲ್ಲಿಗೆ ಬರೋದು ವಿಶೇಷ.

ಮೂರು ದಶಕಗಳ ಹಿಂದೆ ಭೋಸಲೆ ಪೆಟ್ರೋಲ್ ಬಂಕ್ ಪಕ್ಕದಲ್ಲೇ, ಜೋಪಡಿ ಅಂಗಡಿ ಮೂಲಕ ಹೋಟೆಲ್‌ ಉದ್ಯಮದ ಬದುಕಿಗೆ ಕಾಲಿಟ್ಟ ಸಿದ್ರಾಮಯ್ಯ ಸಿದ್ದಯ್ಯ ಮಠ ಅವರಿಗೆ ಇದೀಗ 82 ವರ್ಷ. ಬಾಡಿಗೆ ಮಳಿಗೆಯಲ್ಲಿ ಹೋಟೆಲ್‌ ನಡೆದಿದೆ. ಕಿರಿಯ ಮಗ ಸದು ಮಠ ಜವಾಬ್ದಾರಿ ಹೊತ್ತಿದ್ದಾರೆ.

ADVERTISEMENT

ಹೋಟೆಲ್‌ನಲ್ಲಿ ಏನನ್ನು ತಯಾರಿಸಲ್ಲ. ಮನೆಯಲ್ಲೇ ಮಾಡುತ್ತಾರೆ. ಗ್ರಾಹಕರಿಗೆ ಸದಾ ಬಿಸಿ ಬಿಸಿ ಇಡ್ಲಿ, ವಡಾ ತಿನ್ನಿಸಬೇಕೆಂಬ ಕಾಳಜಿಯಿಂದ ಹಲ ಬಾರಿ ಮನೆಗೆ ಎಡತಾಕುತ್ತಾರೆ. ಎಂ.ಜಿ.ವಿ.ಸಿ. ಕಾಲೇಜಿನ ಹುಡುಗರು ಪಾಳಿ ಹಚ್ಚಿ ಇಲ್ಲಿಯ ಇಡ್ಲಿ ತಿನ್ನುತ್ತಾರೆ.

ವಿನಮ್ರ ಸೇವೆ, ಸ್ವಚ್ಛತೆ, ಕೈಗೆಟಕುವ ಬೆಲೆ. ಪ್ರತಿ ತಿನಿಸಿಗೂ ₨ 15. ಎರಡು ಇಡ್ಲಿ, ಎರಡು ವಡಾ, ಸೂಸಲಾ, ರೈಸ್ ಬಾತ್... ಇಲ್ಲಿಯ ವಿಶೇಷ. ಮನೆ ಮಂದಿಯೇ ಕೆಲಸಗಾರರು. ನಿತ್ಯ ರಾತ್ರಿ 6 ಕೆ.ಜಿ. ಇಡ್ಲಿ ರವಾ ನೆನೆ ಹಾಕುತ್ತಾರೆ. ಅದರೊಂದಿಗೆ ಉದ್ದಿನಬೇಳೆ, ಎರಡು ಕೆ.ಜಿ. ಉದ್ದಿನ ಬೇಳೆಯ ವಡಾ, ಒಂದು ಚೀಲ ಚುರುಮುರಿ ಸೂಸಲಾ, ಮೂರು ಕೆ.ಜಿ. ರೈಸ್ ಬಾತ್ ಮಾಡುತ್ತಾರೆ.

ಬೆಳಿಗ್ಗೆ 7ಕ್ಕೆ ಆರಂಭವಾದರೆ, ಮಧ್ಯಾಹ್ನ ಒಂದಕ್ಕೆ ಎಲ್ಲ ವ್ಯವಹಾರ ಬಂದ್. ಪಟ್ಟಣದ ಬಹುತೇಕ ಜನರು ಇಲ್ಲಿ ತಿನ್ನುವುದಕ್ಕಿಂತ ಮನೆಗೆ ಒಯ್ಯುವುದೇ ಹೆಚ್ಚು.

ಹೋಟೆಲ್‌ ದುಡಿಮೆಯಿಂದಲೇ ಪಟ್ಟಣದ ಮಾರುತಿ ನಗರದಲ್ಲಿ ಮನೆ ಕಟ್ಟಿಸಿದ್ದಾರೆ. ಸಮೀಪದಲ್ಲಿಯೇ ನಾಲ್ಕು ಎಕರೆ ಹೊಲ, ಒಂದಿಷ್ಟು ಪ್ಲಾಟ್ ಖರೀದಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿದ್ದಾರೆ.

ಹೋಟೆಲ್‌ಗೆ ಹಿರಿಯ ಸಹೋದರ ಶಿವಕುಮಾರ ಬಂದರೂ; ಸಮೀಪದಲ್ಲಿಯೇ ಗ್ಯಾರೇಜ್, ಆಟೊ ಮೊಬೈಲ್ಸ್‌ ಅಂಗಡಿ ನಡೆಸುತ್ತಾರೆ. ಬಿಡುವಿದ್ದಾಗ ಗ್ರಾಹಕರ ಸೇವೆ ಮಾಡುತ್ತಾರೆ. ಇದೇ ಮನೆಯ ಹೆಣ್ಣು ಮಕ್ಕಳಾದ ಜಯಶ್ರೀ ಹಾಗೂ ಅವರ ಮಕ್ಕಳಾದ ಮಾಂತು, ಸಂತು ಮತ್ತು ರೇಖಾ ಅವರ ಮಗ ಆನಂದ ಸಹ ಪಟ್ಟಣದ ಬೇರೆ ಕಡೆ ಇಡ್ಲಿ ಹೋಟೆಲ್‌ ಮಾಡಿಕೊಂಡೇ ಬದುಕು ಸಾಗಿಸುತ್ತಿದ್ದಾರೆ.

ಸದು ಮಠ ಸಂಪರ್ಕ ಸಂಖ್ಯೆ: 9036394061

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.