ADVERTISEMENT

ಮಲ್ಲಿಗೆ ನಾಡಿನಲ್ಲಿ ಮಲ್ಲಿಗೆ ಇಡ್ಲಿ

ಹೂವಿನಹಡಗಲಿಯ ಮಣಿಕಂಠ ಹೋಟೆಲ್‌ ಸ್ವಾದಿಷ್ಟ ಉಪಾಹಾರ ತಯಾರಿಕೆ

ಕೆ.ಸೋಮಶೇಖರ
Published 2 ಫೆಬ್ರುವರಿ 2019, 19:30 IST
Last Updated 2 ಫೆಬ್ರುವರಿ 2019, 19:30 IST
ಮಣಿಕಂಠ ಹೋಟೆಲ್‌ನಲ್ಲಿ ತಯಾರಾದ ಸ್ವಾದಿಷ್ಟ ಇಡ್ಲಿ, ವಡಾ
ಮಣಿಕಂಠ ಹೋಟೆಲ್‌ನಲ್ಲಿ ತಯಾರಾದ ಸ್ವಾದಿಷ್ಟ ಇಡ್ಲಿ, ವಡಾ   

ಹೂವಿನಹಡಗಲಿ: ಶುಚಿ ರುಚಿಯಾದ, ಸ್ವಾದಿಷ್ಟ ಉಪಾಹಾರಕ್ಕೆ ಪಟ್ಟಣದ ಹಂಪಸಾಗರ ರಸ್ತೆಯಲ್ಲಿರುವ ಮಣಿಕಂಠ ಹೋಟೆಲ್‌ ಪ್ರಸಿದ್ಧವಾಗಿದೆ. ಬೆಳಿಗ್ಗೆ ಇಲ್ಲಿ ತಯಾರಿಸುವ ಮಲ್ಲಿಗೆಯಂಥ ಇಡ್ಲಿ, ವಿಶೇಷ ರುಚಿಯ ಉದ್ದಿನ ವಡಾ ಸವಿಯಲು ಗ್ರಾಹಕರು ‘ಕ್ಯೂ’ ನಿಲ್ಲುತ್ತಾರೆ.

ಇಡ್ಲಿ, ವಡಾಕ್ಕಾಗಿಯೇ ಇಲ್ಲಿ ವಿಶೇಷ ರುಚಿಯ ಸಾಂಬಾರು, ಚಟ್ನಿ ತಯಾರಿಸುತ್ತಾರೆ. ಎಲ್ಲ ವಿಧದ ತಿಂಡಿಗಳೂ ಸ್ವಾದಿಷ್ಟವಾಗಿರುತ್ತವೆ. ಸ್ವಸಹಾಯ ಪದ್ಧತಿಯ ಈ ಹೋಟೆಲ್‌ನಲ್ಲಿ ಒಮ್ಮೆ ಉಪಾಹಾರ ಸವಿದವರು ಕಾಯಂ ಗ್ರಾಹಕರಾಗಿ ಬಿಡುತ್ತಾರೆ. ಇದಕ್ಕೆಲ್ಲಾ ಕಾರಣ ಮಣಿಕಂಠ ಮಲ್ಲಿಕಾರ್ಜುನ, ವೀರೇಶ್ ಅವರ ಕೈಚಳಕ.

ಬೆಳಿಗ್ಗೆ ಇಡ್ಲಿ, ವಡಾ, ಕೇಸರಿಬಾತ್ ಉಪ್ಪಿಟ್ಟು, ಪಲಾವ್‌, ಚಿತ್ರಾನ್ನ, ಮಿರ್ಚಿ, ಮಧ್ಯಾಹ್ನ ಬಿಸಿಬೇಳೆ ಭಾತ್‌, ಪುಳಿಯೊಗರೆ, ಚಿತ್ರಾನ್ನ, ಮೊಸರನ್ನ, ಸಂಜೆ ಅವಲಕ್ಕಿ ಶೇವ್‌, ಮಂಡಕ್ಕಿ ಒಗ್ಗರಣೆ, ಮಿರ್ಚಿ... ಹೀಗೆ ತರಹೇವಾರಿ ಉಪಾಹಾರ ಇಲ್ಲಿ ಸಿಗುತ್ತದೆ.

ADVERTISEMENT

30 ವರ್ಷಗಳ ಹಿಂದೆ ಕೋಡಿಹಳ್ಳಿ ನಿಂಗಪ್ಪನವರು ಹಳೆ ಗ್ರಾಮೀಣ ಬ್ಯಾಂಕ್‌ ಹತ್ತಿರದ ಮುಖ್ಯರಸ್ತೆ ಬದಿಯಲ್ಲಿ ಮಿರ್ಚಿ, ಬಜಿ ತಯಾರಿಸುತ್ತಿದ್ದರು. ವಿಶೇಷ ಕೈರುಚಿಯಿಂದಾಗಿ ಅವರು ‘ಬಜ್ಜಿ ನಿಂಗಪ್ಪ’ ಎಂದೇ ಪ್ರಸಿದ್ದಿಯಾಗಿದ್ದರು. ಬೀದಿಬದಿಯ ವ್ಯಾಪಾರದಿಂದಲೇ ಮೇಲಕ್ಕೆ ಬಂದ ನಿಂಗಪ್ಪನವರು 25 ವರ್ಷಗಳ ಹಿಂದೆ ಹಂಪಸಾಗರ ರಸ್ತೆಯಲ್ಲಿ ‘ಮಣಿಕಂಠ ಹೋಟೆಲ್‌’ ತೆರೆದು, ಮುನ್ನಡೆಸಿಕೊಂಡು ಹೋಗಲು ಮಕ್ಕಳನ್ನು ಅಣಿಗೊಳಿಸಿದ್ದರು.

ಅವರ ಮಕ್ಕಳಾದ ಮಲ್ಲಿಕಾರ್ಜುನ, ವೀರೇಶ್ ಅವರು ತಂದೆಯ ಕೈ ರುಚಿಯನ್ನೇ ಗ್ರಾಹಕರಿಗೆ ಉಣ ಬಡಿಸುತ್ತಿದ್ದಾರೆ. ದಶಕದಿಂದಲೂ ರುಚಿ, ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದ್ದಾರೆ. ಮಲ್ಲಿಕಾರ್ಜುನ ಮತ್ತು ವೀರೇಶ್ ಉಪಾಹಾರ ತಯಾರಿಕೆಯಲ್ಲಿ ತೊಡಗಿದರೆ, ಮಲ್ಲಿಕಾರ್ಜುನರ ಪತ್ನಿ ಮಾನಸ, ಸ್ವಸಹಾಯ ಪದ್ಧತಿಯಲ್ಲಿ ಗ್ರಾಹಕರಿಗೆ ತಿಂಡಿ ಬಡಿಸಿಕೊಡುತ್ತಾರೆ. ಇನ್ನೊಬ್ಬ ಸಹೋದರ, ರಂಗ ಕಲಾವಿದ ಜಯಣ್ಣ ಮೇಲುಸ್ತುವಾರಿ ವಹಿಸುತ್ತಾರೆ.

ಪ್ರತಿದಿನ 15 ಕೆ.ಜಿ. ರವೆ ಇಡ್ಲಿ, 6 ಕೆ.ಜಿ. ಉದ್ದಿನ ವಡಾ, 20 ಕೆ.ಜಿ. ಅಕ್ಕಿಯ ಉಪಾಹಾರ, 5–6 ಕೆ.ಜಿ. ಕಡಲೆ ಹಿಟ್ಟಿನ ಮಿರ್ಚಿ ತಯಾರಿಸುತ್ತಾರೆ. ಪ್ರತಿದಿನ ಸರಾಸರಿ ₹10 ಸಾವಿರ ವಹಿವಾಟು ನಡೆಸುತ್ತಾರೆ. ಮನೆಮಂದಿಯಲ್ಲಾ ಶುಚಿ ರುಚಿಯಾದ ಉಪಾಹಾರ ತಯಾರಿಸಿ ಗ್ರಾಹಕರನ್ನು ಸಂತುಷ್ಟಗೊಳಿಸುತ್ತಾರೆ.

ಹೋಟೆಲ್‌ ಉದ್ಯಮದಲ್ಲಿ ಸಿಗುವ ಲಾಭದ ಒಂದಿಷ್ಟು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿರಿಸುತ್ತಾರೆ. ಪಟ್ಟಣದಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಅನ್ನ ಸಂತರ್ಪಣೆಗೆ ದವಸ, ಧಾನ್ಯಗಳನ್ನು ಕೊಡುಗೆಯಾಗಿ ನೀಡಿ ಸಾರ್ಥಕತೆ ಮೆರೆಯುತ್ತಾರೆ.

‘ನಮ್ಮ ತಂದೆ ಹೇಳಿಕೊಟ್ಟಿರುವಂತೆ ರುಚಿ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ. ಮಾರುಕಟ್ಟೆಯಲ್ಲಿ ಕಲಬೆರಕೆ ಪದಾರ್ಥಗಳು ಹೆಚ್ಚಾಗಿರುವುದರಿಂದ ಉತ್ತಮ ದರ್ಜೆಯ ದಿನಸಿಗಳನ್ನು ನಾವೇ ಖರೀದಿಸಿ ತಂದು ಸಿದ್ಧಪಡಿಸಿಕೊಳ್ಳುತ್ತೇವೆ. ಲಾಭ, ನಷ್ಟಕ್ಕಿಂತ ಗ್ರಾಹಕರನ್ನು ತೃಪ್ತಿಪಡಿಸುವುದು ಮುಖ್ಯ ಎನ್ನುತ್ತಾರೆ’ ಮಲ್ಲಿಕಾರ್ಜುನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.