ADVERTISEMENT

100ರ ಹೊಸ್ತಿಲಲ್ಲಿ ಎಂ.ಕೆ. ಸ್ವಾಮಿ ಬೇಕರಿ

ನಮ್ಮೂರ ಆಹಾರ

ಶ್ರೀಕಾಂತ ಕಲ್ಲಮ್ಮನವರ
Published 26 ಜನವರಿ 2019, 19:45 IST
Last Updated 26 ಜನವರಿ 2019, 19:45 IST
ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿರುವ ಎಂ.ಕೆ. ಸ್ವಾಮಿ ಬೇಕರಿಯ ಸಾಂಪ್ರದಾಯಕ ಭಟ್ಟಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಬೇಕರಿಯ ಮಾಲೀಕ ಸತ್ಯನ್‌ ಸ್ವಾಮಿ ಚಿತ್ರದಲ್ಲಿದ್ದಾರೆ
ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿರುವ ಎಂ.ಕೆ. ಸ್ವಾಮಿ ಬೇಕರಿಯ ಸಾಂಪ್ರದಾಯಕ ಭಟ್ಟಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಬೇಕರಿಯ ಮಾಲೀಕ ಸತ್ಯನ್‌ ಸ್ವಾಮಿ ಚಿತ್ರದಲ್ಲಿದ್ದಾರೆ   

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಎಂ.ಕೆ. ಸ್ವಾಮಿ ಅಂಡ್‌ ಸನ್ಸ್‌ ಬೇಕರಿ ಸ್ಥಾಪನೆಯಾಗಿ 99 ವರ್ಷಗಳು ಕಳೆದಿದ್ದು, ಶತಮಾನದ ಹೊಸ್ತಿಲಲ್ಲಿದೆ. ಹತ್ತು ಹಲವು ವಿಧದ ಬ್ರೆಡ್‌, ಬಿಸ್ಕಿಟ್‌ ಹಾಗೂ ಕೇಕ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ಸಿಗುವಷ್ಟು ವರೈಟಿಗಳು ಬೇರೆಲ್ಲೂ ಸಿಗುವುದಿಲ್ಲ.

ಹಳೆಯ ಸಂಪ್ರದಾಯದಂತೆ ಕಟ್ಟಿಗೆಯ ಭಟ್ಟಿಯಲ್ಲಿ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ಯಾವುದೇ ರೀತಿಯ ಕೆಮಿಕಲ್ಸ್‌, ಪ್ರಿಸರ್ವೆಟಿವ್ಸ್‌ ಬಳಸಲಾಗುವುದಿಲ್ಲ. ಸಾವಯವವಾಗಿ ಬೆಳೆದ ಧಾನ್ಯಗಳನ್ನು ಬಳಸಲಾಗುತ್ತದೆ. ಹೀಗಾಗಿ ಇಲ್ಲಿನ ತಿಂಡಿಗಳಿಗೆ ವಿಶಿಷ್ಟ ರುಚಿ ದಕ್ಕಿದೆ. ತಿಂಡಿಪೋತರಿಗೆ ಅಚ್ಚುಮೆಚ್ಚಿನ ತಾಣವಾಗಿದೆ.

ಪ್ಲಮ್‌ ಕೇಕ್‌, ಎಗ್‌ಲೆಸ್‌ ಕೇಕ್‌, ವೆಡ್ಡಿಂಗ್‌ ಕೇಕ್‌, ಕೊಕೊನಟ್‌ ಬಿಸ್ಕಿಟ್‌, ವೆಜ್‌ ಪಫ್‌, ಎಗ್‌ ಪಫ್‌ ಸೇರಿದಂತೆ ಹತ್ತು ಹಲವು ವಿಧಗಳು ಲಭ್ಯ ಇವೆ. ರಾಯಲ್‌ ಐಸಿಂಗ್‌, ವೆಡ್ಡಿಂಗ್‌ ಕೇಕ್‌ ಹಾಗೂ ಪ್ಲಮ್‌ ಕೇಕ್‌ ಇಲ್ಲಿನ ವೈಶಿಷ್ಟ್ಯಗಳಾಗಿವೆ.

ADVERTISEMENT

315 ಫಾಸ್ಟ್‌ಫುಡ್‌ ಐಟಂ:
ಸಂಪ್ರದಾಯ ಬ್ರೆಡ್‌, ಬಿಸ್ಕಿಟ್‌ ಹಾಗೂ ಕೇಕ್‌ ಜೊತೆ ಇಂದಿನ ಯುವಕರು ಹೆಚ್ಚು ಇಷ್ಟಪಡುವ ಫಾಸ್ಟ್‌ಫುಡ್‌ಗಳನ್ನೂ ಇಲ್ಲಿ ಮಾಡಲಾಗುತ್ತಿದೆ. ವೆಜ್‌, ಮಶ್ರೂಮ್‌, ಮೊಟ್ಟೆ, ಚಿಕನ್‌, ಮಟನ್‌, ಸಿಗಡಿ ಮೀನು (ಪ್ರಾನ್ಸ್‌) ಬಳಸಿ ಸುಮಾರು 315 ಫಾಸ್ಟ್‌ಫುಡ್‌ಗಳನ್ನು ತಯಾರಿಸಲಾಗುತ್ತದೆ.

ಕಾರ್ನ್‌ ಮಶ್ರೂಮ್‌, ಪನ್ನೀರ್‌ ಟಿಕ್ಕಾ, ಚೀಸ್‌ ಕಾರ್ನ್‌ ಕ್ಯಾಪ್ಸಿಕಂ, ಚಿಕನ್‌ ಸಲಾಮಿ, ಎಗ್‌ ಬರ್ಗರ್‌, ಚಿಕನ್‌ ಟಿಕ್ಕಾ, ಫ್ರ್ಯಾಂಕಿ, ಮಟನ್‌ ಖಿಮಾ ರೋಲ್‌, ಫಿಶ್‌ ರೋಲ್‌, ಶೀಕ್‌ ಕೆಬಾಬ್‌ ರೋಲ್‌ ಸೇರಿದಂತೆ ಹಲವು ವಿಧದ ಫಾಸ್ಟ್‌ಫುಡ್‌ ಲಭ್ಯ ಇವೆ.

ಇಟಲಿಯಲ್ಲಿ ತರಬೇತಿ:
ಬೇಕರಿ ಆರಂಭಿಸಿದ್ದ ಕೃಷ್ಣ ಮೋಹನ ಅವರು ಬ್ರಿಟಿಷ್‌ ಸೈನ್ಯದಲ್ಲಿ ಸೈನಿಕರಾಗಿದ್ದರು. ಮೊದಲ ವಿಶ್ವ ಯುದ್ಧದಲ್ಲಿ ಇಂಗ್ಲೆಂಡ್‌ ಪರವಾಗಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಇಟಲಿಯಲ್ಲಿ ಬೀಡುಬಿಟ್ಟಿದ್ದರು. ಯುದ್ಧ ಮುಗಿದ ನಂತರ ಅವರಿಗೆ ಬ್ರೆಡ್‌, ಬಿಸ್ಕಿಟ್‌ ತಯಾರಿಸಲು ತರಬೇತಿ ನೀಡಲಾಯಿತು. ಕೆಲದಿನಗಳ ನಂತರ ಅವರು ಬೆಳಗಾವಿಯ ಕಂಟೋನ್ಮೆಂಟ್‌ಗೆ ವಾಪಸ್ಸಾದರು. 1920ರಲ್ಲಿ ಅವರು ನಿವೃತ್ತಿಯಾದರು.

‘ತಮಗೆ ಬೆಳಿಗ್ಗೆ ಬ್ರೆಡ್‌, ಬಿಸ್ಕಿಟ್‌ ಪೂರೈಸಬೇಕೆಂದು ಬ್ರಿಟಿಷರು ಕೃಷ್ಣ ಮೋಹನ ಅವರಿಗೆ ಕಂಟೋನ್ಮೆಂಟ್‌ ಪ್ರದೇಶದಲ್ಲಿಯೇ ಬೇಕರಿ ಆರಂಭಿಸಲು ಜಾಗ ನೀಡಿದರು. ಹೀಗೆ ಬೇಕರಿ ಸ್ಥಾಪನೆಯಾಯಿತು. ಅವರ ನಂತರ ಅವರ ಮಗ ಮೋಹನ ಕುಮಾರ ಸ್ವಾಮಿ ಬೇಕರಿ ಮುಂದುವರಿಸಿದರು. ಇವರ ಮಕ್ಕಳಾದ ದಾಮೋದರ ಸ್ವಾಮಿ ಹಾಗೂ ಬಾಲಕೃಷ್ಣ ಸ್ವಾಮಿ ಇದನ್ನು ಮುಂದುವರಿಸಿದರು. ನಾಲ್ಕನೇ ತಲೆಮಾರಿನವನಾದ ನಾನು ಇಂದು ಬೇಕರಿ ನಡೆಸುತ್ತಿದ್ದೇನೆ’ ಎಂದು ಸತ್ಯನ್‌ ಸ್ವಾಮಿ ಸ್ಮರಿಸಿದರು.

ಅವರನ್ನು ಮೊಬೈಲ್‌ ಸಂಖ್ಯೆ 9620177890 ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.