ADVERTISEMENT

ಬಾಳೇಕಾಯಿ ಮಂಚೂರಿ ಮಾಡೋಣ ರೀ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 23:54 IST
Last Updated 5 ಡಿಸೆಂಬರ್ 2025, 23:54 IST
ಬಾಳೇಕಾಯಿ ಮಂಚೂರಿ
ಬಾಳೇಕಾಯಿ ಮಂಚೂರಿ   

ಹಿರಿಯರು ಆರೋಗ್ಯದ ಹಿತದೃಷ್ಟಿಯಿಂದ ಕಾಲಕ್ಕೆ ಅನುಗುಣವಾಗಿ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಬಳಸುತ್ತಿದ್ದರು. ಅದರಲ್ಲೂ ಕೆಲವು ತರಕಾರಿಗಳು ಮತ್ತು ಗೆಡ್ಡೆ– ಗೆಣಸುಗಳ ಪದಾರ್ಥಗಳನ್ನು ಋತುಮಾನಕ್ಕೆ ಅನುಸಾರವಾಗಿ ತಯಾರಿಸುತ್ತಿದ್ದರು. ಸುವರ್ಣಗೆಡ್ಡೆ, ಹಲಸಿನಕಾಯಿ, ಬಾಳೆಕಾಯಿ, ಬಾಳೆಹೂವು... ಹೀಗೆ ಕೆಲವು ಪದಾರ್ಥಗಳನ್ನು ವರ್ಷದಲ್ಲಿ ಒಮ್ಮೆಯಾದರೂ ತಿನ್ನಲೇಬೇಕು ಎಂದು ಹೇಳುತ್ತಿದ್ದರು. ಅಂಥವುಗಳಲ್ಲಿ ಒಂದು ಬಹೂಪಯೋಗಿ ತಿನಿಸೆಂದರೆ ಬಾಳೆಕಾಯಿ.

ಬಾಳೆಕಾಯಿಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದು ವಿಟಮಿನ್‌ಗಳು ಮತ್ತು ಖನಿಜಗಳಿಂದ ಕೂಡಿದೆ, ಫೈಬರ್ ಅಧಿಕ ಪ್ರಮಾಣದಲ್ಲಿದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ನೆರವಾಗುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಇದು ಸಹಕಾರಿ.

ಬಾಳೆಕಾಯಿಯು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಹೃದಯದ ರಕ್ಷಣೆಗೆ ಪ್ರಯೋಜನಕಾರಿಯಾಗಿದೆ. ಜೀರ್ಣಕ್ರಿಯೆ ಸುಧಾರಣೆಗೆ ಬಾಳೆಕಾಯಿ ಉತ್ತಮ.

ADVERTISEMENT

ಬಾಳೆಕಾಯಿಯು ಮಲಬದ್ಧತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವ ನೀಡುತ್ತದೆ ಮತ್ತು ಹಸಿವು ಕೂಡ ಕಡಿಮೆಯಾಗುತ್ತದೆ. ಹೀಗಾಗಿ, ಬಾಳೆಕಾಯಿ ಸೇವನೆಯು ಬಹುಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಸಹಕಾರಿ. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದು, ಮೂಳೆಗಳು ಗಟ್ಟಿಯಾಗಲು ನೆರವಾಗುತ್ತದೆ.

ಇಂತಹ ಬಾಳೆಕಾಯಿಯಲ್ಲಿ ಸಾಮಾನ್ಯವಾಗಿ ಬಜ್ಜಿ, ಬಾಳೆಕಾಯಿ ಸಾಸಿವೆ, ಪಲ್ಯ ಹೀಗೆ ಅನೇಕ ಪದಾರ್ಥಗಳನ್ನು ತಯಾರಿಸಬಹುದು. ಅದರಲ್ಲೂ ಗೋಬಿ ಮಂಚೂರಿ ಇಷ್ಟಪಡುವ ಮಕ್ಕಳಿಗೆ ಬಾಳೆಕಾಯಿಯಲ್ಲಿ ಮಂಚೂರಿ ತಯಾರಿಸಿಕೊಟ್ಟರೆ ರುಚಿಯೊಟ್ಟಿಗೆ ಆರೋಗ್ಯಕ್ಕೂ ಒಳ್ಳೆಯದು.

ಬಾಳೇಕಾಯಿ ಮಂಚೂರಿ

ಹೀಗೆ ಮಾಡಿ

ಬಾಳೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ಹದವಾಗಿ ಬೇಯಿಸಬೇಕು. ಇಲ್ಲವಾದಲ್ಲಿ ಮಧ್ಯಮ ಉರಿಯಲ್ಲಿ ಕುಕ್ಕರ್‌ನಲ್ಲಿ ಒಂದು ಕೂಗು ಕೂಗಿಸಬಹುದು. ನಂತರ ಅದರ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಿವುಚಬೇಕು. ಅದಕ್ಕೆ ಒಂದು ದೊಡ್ಡ ಚಮಚ ಕಾರ್ನ್‌ಫ್ಲೋರ್ 2 ಚಮಚ ಅಕ್ಕಿಹಿಟ್ಟು (ಅಕ್ಕಿ ಹಿಟ್ಟು ಸ್ವಲ್ಪ ಹೆಚ್ಚಿದ್ದಲ್ಲಿ ಗರಿಗರಿಯಾಗಿ ಬರುತ್ತದೆ) ಮೆಣಸಿನಕಾಯಿ ಪುಡಿಯೊಂದಿಗೆ ಬೆರೆಸಿ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಸ್ವಲ್ವ ಟೊಮೆಟೊ ಸಾಸ್ ಸೋಯಾ ಸಾಸ್ ಪುದಿನಾ ಹಾಕಿ ಒಗ್ಗರಣೆ ರೀತಿ ಮಾಡಿ ಅದಕ್ಕೆ ಕರಿದ ಬಾಳೆಕಾಯಿಯ ತುಂಡುಗಳನ್ನು ಹಾಕಬೇಕು.

ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿದರೆ ರುಚಿರುಚಿಯಾದ ಬಾಳೆಕಾಯಿ ಮಂಚೂರಿ ರೆಡಿ. ಸರ್ವ್ ಮಾಡುವಾಗ ಮೇಲೆ ಒಂದಷ್ಟು ಹೆಚ್ಚಿದ ಈರುಳ್ಳಿ ತಾಜಾ ಕೊತ್ತಂಬರಿ ಸೊಪ್ಪು ಹಾಕಿ ಟೊಮ್ಯಾಟೊ ಸಾಸ್ ಜೊತೆ ಕೊಟ್ಟರೆ ಮಕ್ಕಳು ದೊಡ್ಡವರು ಎಲ್ಲರಿಗೂ ಪ್ರಿಯವಾದ ಖಾದ್ಯ ಆಗುವುದರಲ್ಲಿ ಸಂಶಯವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.