ADVERTISEMENT

ಮಕ್ಕಳಿಗೆ ಇಷ್ಟ ಚಾಕೊಲೇಟ್ ಬಾಲ್ಸ್, ಕ್ಯಾರೆಟ್ ಲಡ್ಡು

​ಪ್ರಜಾವಾಣಿ ವಾರ್ತೆ
Published 9 ಮೇ 2020, 2:27 IST
Last Updated 9 ಮೇ 2020, 2:27 IST
ಮಸಾಲ ಪಾಪ‍ಡ್‌
ಮಸಾಲ ಪಾಪ‍ಡ್‌   
""
""

ಲಾಕ್‌ಡೌನ್ ಇರುವ ಕಾರಣ ಇನ್ನು ಕೆಲವು ದಿನ ಮನೆಯೊಳಗೇ ಇರುವುದು ಅನಿವಾರ್ಯವಾಗಿದೆ. ಈ ಲಾಕ್‌ಡೌನ್ ಕಾರಣದಿಂದ ಮಕ್ಕಳ ಬಾಯಿಗೆ ಬೀಗ ಬಿದ್ದಂತಾಗಿದೆ. ಮೊದಲೆಲ್ಲಾ ಬೇಕರಿಗಳಲ್ಲಿ ಬಗೆ ಬಗೆ ತಿಂಡಿಗಳನ್ನು ಕೊಂಡು ತಿನ್ನುತ್ತಿದ್ದ ಮಕ್ಕಳಿಗೆ ಮನೆಯಲ್ಲಿಯೇ ಮಾಡುವ ಸಾಂಪ್ರದಾಯಿಕ ತಿನಿಸು ಬೇಸರ ತಂದಿರಬಹುದು. ಮಕ್ಕಳ ಬೇಸರ ಕಡಿಮೆ ಮಾಡಿ, ಅವರ ಮನಸ್ಸಿಗೆ ಖುಷಿ ನೀಡಲು ಚಾಕೊಲೇಟ್‌ ಬಾಲ್ಸ್, ಕ್ಯಾರೆಟ್‌ ಲಡ್ಡಿನಂತಹ ತಿನಿಸುಗಳನ್ನು ತಯಾರಿಸಿಕೊಡಬಹುದು. ಅದನ್ನು ಸುಲಭವಾಗಿ ಮಾಡುವ ಬಗೆ ವಿವರಿಸಿದ್ದಾರೆ ವೇದಾವತಿ ಎಚ್‌.ಎಸ್‌.

---

ಮಸಾಲೆ ಪಾಪಡ್‌

ADVERTISEMENT

ಬೇಕಾಗುವ ಸಾಮಗ್ರಿಗಳು: ಈರುಳ್ಳಿ – 3 (ಸಣ್ಣಗೆ ಹೆಚ್ಚಿಕೊಂಡಿದ್ದು),ಟೊಮೆಟೊ– 3 (ಸಣ್ಣಗೆ ಹೆಚ್ಚಿಕೊಂಡಿದ್ದು), ಸೌತೆಕಾಯಿ – 1 (ಸಣ್ಣಗೆ ಹೆಚ್ಚಿಕೊಂಡಿದ್ದು), ದಾಳಿಂಬೆ – ಅರ್ಧ ಕಪ್, ಸೇವ್ – ಸ್ವಲ್ಪ, ತೆಂಗಿನಕಾಯಿತುರಿ – ಅರ್ಧ ಕಪ್, ಕೊತ್ತಂಬರಿ – ಸೊಪ್ಪು ಸ್ವಲ್ಪ, ಮಸಾಲೆ ಪಾಪಡ್ – ಎಂಟು, ಖಾರದ ಪುಡಿ– ಅರ್ಧ ಟೀ ಚಮಚ, ಚಾಟ್ ಮಸಾಲೆ – ಒಂದು ಟೀ ಚಮಚ, ಆಮ್‌ಚೂರ್ ಪೌಡರ್ – ಒಂದು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಪಾಪಡ್ ಮತ್ತು ಸೇವ್ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಒಂದು ತವಾದಲ್ಲಿ ಸಣ್ಣ ಉರಿಯಲ್ಲಿ ಪಾಪಡ್‌ ಅನ್ನು ಎರಡೂ ಬದಿಯಲ್ಲಿ ಒಂದೇ ರೀತಿಯಲ್ಲಿ ಗರಿಗರಿಯಾಗಿ ಸುಟ್ಟುಕೊಳ್ಳಿ, ಸುಟ್ಟುಕೊಂಡ ಪಾಪಡ್‌ಗೆ ಮಾಡಿಕೊಂಡಿರುವ ಮಸಾಲೆ ಪದಾರ್ಥಗಳನ್ನು ಹಾಕಿ. ಸೇವ್‌ ಅನ್ನು ಅದರ ಮೇಲೆ ಹಾಕಿ. ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ. ರುಚಿಯಾದ ಪಾಪಡ್ ಮಾಡಿ ಸವಿಯಿರಿ.

ಚಾಕೊಲೇಟ್ ಬಾಲ್ಸ್

ಬೇಕಾಗುವ ಸಾಮಗ್ರಿಗಳು: ಮಾರಿ ಬಿಸ್ಕೆಟ್‌ – 24, ಸಿಹಿ ಇಲ್ಲದ ಚಾಕೊಲೇಟ್ ಪುಡಿ – 3 ಟೇಬಲ್ ಚಮಚ, ಕಂಡೆನ್ಸ್ದ್ ಹಾಲು – 200 ಮಿಲಿ ಲೀಟರ್‌, ಕೊಬ್ಬರಿಪುಡಿ – ಸ್ವಲ್ಪ. ಚಾಕೊಲೇಟ್ ಸ್ಪ್ರಿಂಕಲ್ಸ್‌.

ತಯಾರಿಸುವ ವಿಧಾನ: ಮೊದಲು ಮಾರಿ ಬಿಸ್ಕೆಟ್ ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ ಒಂದು ಬಟ್ಟಲಿನಲ್ಲಿ ಹಾಕಿಟ್ಟುಕೊಳ್ಳಿ. ಬಿಸ್ಕೆಟ್ ಪುಡಿಗೆ ಚಾಕೊಲೇಟ್ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಕಂಡೆನ್ಸ್ದ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದು ಉಂಡೆ ತಯಾರಿಸುವ ಹದಕ್ಕೆ ಬರುತ್ತದೆ. ನಿಮಗೆ ಬೇಕಾದ ಅಳತೆಯ ಉಂಡೆಗಳನ್ನು ಕಟ್ಟಿ.
ಅವುಗಳನ್ನು ಕಂಡೆನ್ಸ್ದ್ ಹಾಲಿನಲ್ಲಿ ಅದ್ದಿ. ಕೊಬ್ಬರಿ ಮತ್ತು ಚಾಕೊಲೇಟ್ ಸ್ಪ್ರಿಂಕಲ್ಸ್‌ನಲ್ಲಿ ಉರುಳಿಸಿ.ರುಚಿಕರವಾದ ಚಾಕೊಲೇಟ್ ಬಾಲ್ಸ್ ತಯಾರಿಸಿ ಸವಿಯಿರಿ.

ಕ್ಯಾರೆಟ್ ಲಡ್ಡು

ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ ತುರಿ – 1 ಕಪ್, ಒಣಕೊಬ್ಬರಿ ತುರಿ – 1/2 ಕಪ್, ಗೋಡಂಬಿ ಚಿಕ್ಕದಾಗಿ ಕತ್ತರಿಸಿದ್ದು – 2 ಟೇಬಲ್ ಚಮಚ, ಒಣದ್ರಾಕ್ಷಿ – 1 ಟೇಬಲ್ ಚಮಚ, ಏಲಕ್ಕಿ ಪುಡಿ – 1/4 ಟೀ ಚಮಚ, ಕಂಡೆನ್ಸ್ದ್ ಹಾಲು –2 ಟೇಬಲ್ ಚಮಚ, ಹಾಲಿನ ಪುಡಿ – 2 ಟೇಬಲ್ ಚಮಚ, ಅಲಂಕಾರಕ್ಕೆ ಗೋಡಂಬಿ ಅಥವಾ ಪಿಸ್ತಾ ಚೂರು ಸ್ವಲ್ಪ.

ತಯಾರಿಸುವ ವಿಧಾನ: ಕ್ಯಾರೆಟ್ ಅನ್ನು ತುರಿದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಜೊತೆಗೆ ತುರಿದ ಒಣಕೊಬ್ಬರಿ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ ಚೂರುಗಳು, ಒಣದ್ರಾಕ್ಷಿ, ಏಲಕ್ಕಿ ಪುಡಿ, ಕಂಡೆನ್ಸ್ದ್ ಹಾಲು, ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೈಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಸವರಿಕೊಂಡು ಈ ಮಿಶ್ರಣದಿಂದ ಚಿಕ್ಕ ಚಿಕ್ಕ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿ. ಕೊನೆಯಲ್ಲಿ ಗೋಡಂಬಿ ಅಥವಾ ಪಿಸ್ತಾದ ಚೂರುಗಳಿಂದ ಅಲಂಕರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.