ADVERTISEMENT

ಧಾರವಾಡ ಪೇಡಾ ಲೈವ್‌!

ಸುಬ್ರಹ್ಮಣ್ಯ ಎಚ್.ಎಂ
Published 23 ಡಿಸೆಂಬರ್ 2019, 19:45 IST
Last Updated 23 ಡಿಸೆಂಬರ್ 2019, 19:45 IST
ಗಾಂಧಿನಗರದಲ್ಲಿರುವ ಬಿಗ್ ಮಿಶ್ರಾಸ್‌ ಧಾರವಾಡ ಪೇಡಾ ಮಳಿಗೆ
ಗಾಂಧಿನಗರದಲ್ಲಿರುವ ಬಿಗ್ ಮಿಶ್ರಾಸ್‌ ಧಾರವಾಡ ಪೇಡಾ ಮಳಿಗೆ   

ತಾಜಾ ತಾಜಾ ಪೇಡಾ ಸವಿಯಬೇಕೇ? ಹಾಗಾದರೆ ಗಾಂಧಿನಗರ ಗುಬ್ಬಿವೀರಣ್ಣ ರಂಗಮಂದಿರ ಎದುರು ಇರುವ ‘ಬಿಗ್‌ ಮಿಶ್ರಾಸ್‌ ಧಾರವಾಡ ಪೇಡಾ’ ಮಳಿಗೆಗೆ ಒಮ್ಮೆ ಭೇಟಿ ಕೊಡಿ. ಪರಿಶುದ್ಧವಾದ ಪೇಡಾ ಲೈವ್‌ ಆಗಿ ಮಾಡಿಕೊಡಲಾಗುತ್ತದೆ. ಬಾಯಲ್ಲಿ ಇಟ್ಟರೆ ಕರಗುವಷ್ಟು ಮೃದು ಮತ್ತು ರುಚಿಕರ ಈ ಪೇಡಾದ ಗಮ್ಮತ್ತು.

ಕೋವಾ ಮತ್ತು ಸಕ್ಕರೆ ಇತ್ಯಾದಿಗಳ ಮಿಶ್ರಣದಿಂದ ಈ ಪೇಡಾವನ್ನು ಗ್ರಾಹಕರ ಎದುರೇ ತಯಾರಿಸಿ ಕೊಡುವುದು ಈ ಮಳಿಗೆ ವಿಶೇಷ. ಲ್ಯಾಬ್‌ನ ಪ್ರಾಮಾಣೀಕೃತ ಮತ್ತು ಸ್ವಚ್ಛವಾದ ಅಡುಗೆ ಕೋಣೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ಗ್ರಾಹಕರು ಖುದ್ದು ವೀಕ್ಷಣೆ ಮಾಡಬಹುದು. ಪೇಡಾ ಅಲ್ಲದೆ ಬಿಸಿಬಿಸಿ ಜಿಲೇಬಿ, ಗುಲಾಬ್ ಜಾಮೂನ್, ರಬಾಡಿ, ಕುಂದಾ, ಮೈಸೂರು ಪಾಕ್‌, ಸಮೋಸಾ ಕೂಡ ಗ್ರಾಹಕರ ಮುಂದೆಯೇ ತಯಾರಿಸಿ ತಾಜಾ ನೀಡಲಾಗುತ್ತದೆ.

ಪೇಡಾ ಸವಿದ ಮೇಲೆ ಖಾರ ಚೌಚೌ ತಿನ್ನಬೇಕು. ಜತೆಗೆ ಖಡಕ್‌ ಚಹಾ ಅಥವಾ ಪರಿಮಳಯುಕ್ತ ಬಿಸಿ ಬಾದಾಮಿ ಹಾಲು ಕುಡಿಯುತ್ತಾ ಪೇಡಾ ಮಾಡುವ ವಿಧಾನವನ್ನು ಲೈವ್‌ ಆಗಿ ವೀಕ್ಷಣೆ ಮಾಡಬಹುದು. ಕುಳಿತು ಒಂದಿಷ್ಟು ಸಮಯ ಹರಟೆ ಹೊಡೆದು, ವಿರಮಿಸಲು ಜಾಗವೂ ಉಂಟು. ಮೆಜೆಸ್ಟಿಕ್‌ನಂತಹ ಗೌಜು –ಗದ್ದಲದ ಪ್ರದೇಶದಲ್ಲಿ ಈ ಮಳಿಗೆ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡುತ್ತದೆ.

ADVERTISEMENT

ಈ ಮಳಿಗೆಯ ‘ಟೆಸ್ಟ್ ಆಫ್‌ ಕರ್ನಾಟಕ’ ಎನ್ನುವ ಸಿಹಿತಿನಿಸು ಬಾಯಲ್ಲಿ ನೀರೂರಿಸುತ್ತದೆ. ಬಲ್ಲವನೇ ಬಲ್ಲ ಇದರ ಸವಿ ಎನ್ನುವಂತೆ ಒಮ್ಮೆ ಸವಿದರೆ ರುಚಿಯ ಗಾಢ ಅನುಭವ ನೆನಪಿನ ಪುಟದಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ರುಚಿ ಮತ್ತು ಸ್ವಚ್ಛತೆ, ಗ್ರಾಹಕ ಸ್ನೇಹಿ ಆಗಿರುವ ಬಿಗ್ ಮಿಶ್ರಾ ಬ್ರಾಂಡ್ ಬೆಂಗಳೂರಿನಲ್ಲಿ 18 ಮಳಿಗೆಗಳನ್ನು ಒಳಗೊಂಡಂತೆ ದೇಶದಾದ್ಯಂತ 137ಮಳಿಗೆಗಳನ್ನು ಹೊಂದಿದೆ. 2020ರ ಅಂತ್ಯದೊಳಗೆ 40ರಿಂದ 50ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶವಿದೆ.

ಧಾರವಾಡದಲ್ಲಿ ಪೇಡಾ ಇನ್ನಿತರ ತಿನಿಸುಗಳಿಗೆ ಬೇಕಾದ ಪದಾರ್ಥಗಳನ್ನು ತಯಾರಿಸುವ ದೊಡ್ಡ ಕಾರ್ಖಾನೆಯೇ ಇದೆ. 600 ಮಂದಿ ನೌಕರರಿಗೆ ಈ ತಿನಿಸುಗಳ ಉತ್ಪಾದನೆ ಕೆಲಸ ನೀಡಿದೆ. ಮುಂಬರುವ ದಿನಗಳಲ್ಲಿ ಗೋವಾ, ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿಯಲ್ಲಿ ಲೈವ್‌ ಆಗಿ ಪೇಡಾ ತಯಾರಿಸುವ ಮಳಿಗೆಗಳನ್ನು ಸ್ಥಾಪಿಸುವ ಚಿಂತನೆ ಇದೆ ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಮಿಶ್ರಾ.

ದೇಶದ ಹಳೆ ಕಂಪನಿ
1910ರಲ್ಲಿ ಉತ್ತರಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಗೌರಿಗಂಜ್ ಮೂಲದ ಪಂಡಿತ್‌ ಅವಧ್‌ ಬಿಹಾರಿ ಮಿಶ್ರಾ ಅವರು ಪೇಡಾ ಕಂಪನಿ ಪ್ರಾರಂಭಿಸುತ್ತಾರೆ. 1933ರಲ್ಲಿ ಈ ಕುಟುಂಬ ಉತ್ತರ ಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದು ಧಾರವಾಡದಲ್ಲಿ ನೆಲೆನಿಲುತ್ತದೆ. ಇಲ್ಲಿಯೂ ಪೇಡಾ ಅಂಗಡಿ ತೆರೆದು ಸ್ಥಳೀಯರ ಮನಗೆಲ್ಲುತ್ತಾರೆ.

ಅವಧ್‌ ಬಿಹಾರಿ ಮಿಶ್ರಾ ಅವರ ಪುತ್ರ ಗಣೇಶ್‌ ಮಿಶ್ರಾ ಈ ಕಂಪನಿ ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ. ನಂತರ ಇವರ ಪುತ್ರ ಸಂಜಯ್ ಮಿಶ್ರಾ ಈ ಕುಟುಂಬದ ಮೂರನೇ ಕುಡಿ. 100ವರ್ಷದಷ್ಟು ಹಳೆಯದಾದ ಕಂಪನಿ ವಹಿವಾಟಿಗೆ ಈಗ ಹೊಸರೂಪ ಮತ್ತು ಆಲೋಚನೆ ತುಂಬಿದ್ದಾರೆ. ಪೇಡಾದೊಂದಿಗೆ ಹಲವು ಬಗೆಯ ಸಿಹಿ ತಿನಿಸುಗಳನ್ನು ಉಣ್ಣಬಡಿಸುವ ಮೂಲಕ ಹೊಸತನಕ್ಕೆ ತೆರೆದುಕೊಂಡಿದ್ದಾರೆ. ನಾಡಿನಾದ್ಯಂತ ಪ್ರಸಿದ್ಧಿ ಮತ್ತು ವ್ಯವಹಾರ ಏರುಗತಿ ಕಾಣುತ್ತಾ ಬಂದಿರುವುದು ಈ ಕಂಪನಿ ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.