ADVERTISEMENT

ಆರೋಗ್ಯಕ್ಕೂ ಖಾದ್ಯಕ್ಕೂ ಹಿತ ದೊಡ್ಡ‍‍ಪತ್ರೆ ಎಲೆ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 2:07 IST
Last Updated 21 ಮಾರ್ಚ್ 2020, 2:07 IST
ಆಂಬೊಡೆ
ಆಂಬೊಡೆ   
""
""
""

ದೊಡ್ಡಪತ್ರೆ ಎಲೆ ಎಂದಾಕ್ಷಣ ನೆನಪಾಗುವುದು ಅದರ ಔಷಧೀಯ ಗುಣಗಳು. ಮಕ್ಕಳಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ಅದರ ರಸ ನೀಡಿ ಗುಣಪಡಿಸುವುದು ವಾಡಿಕೆ. ಈ ದೊಡ್ಡ ಗುಣದ ದೊಡ್ಡಪತ್ರೆ ಎಲೆಯಲ್ಲಿ ಅನೇಕ ಬಗೆಯ ತಿನಿಸುಗಳನ್ನೂ ತಯಾರಿಸಬಹುದು. ದೇಹದ ಆರೋಗ್ಯಕ್ಕೆ ಹಿತ ಎನ್ನಿಸುವ ದೊಡ್ಡಪತ್ರೆಯಿಂದ ತಯಾರಿಸುವ ಆಂಬೊಡೆ, ಚಟ್ನಿ, ಪಕೋಡ, ಬಜ್ಜಿ, ಸಲಾಡ್‌ನಂತಹ ಖಾದ್ಯಗಳು ನಾಲಿಗೆಗೂ ಹಿತ. ಇಂತಹ ರುಚಿಕರ ತಿನಿಸುಗಳನ್ನು ಮಾಡುವ ಬಗೆ ವಿವರಿಸಿದ್ದಾರೆ ಕೆ.ವಿ. ರಾಜಲಕ್ಷ್ಮಿ.

ದೊಡ್ಡಪತ್ರೆ ಆಂಬೊಡೆ

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 1 ಕಪ್, ಹೆಸರುಬೇಳೆ – 1 ಚಮಚ, ದೊಡ್ಡಪತ್ರೆ ಎಲೆ 10ರಿಂದ 15, ಒಣಮೆಣಸಿನಕಾಯಿ 4ರಿಂದ 5, ಉಪ್ಪು –ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಬೇಳೆಗಳನ್ನು ಎರಡು ಗಂಟೆಗಳ ಕಾಲ ನೆನೆಸಿ. ಆಮೇಲೆ ನೀರು ಬಸಿದು, ಒಣಮೆಣಸಿನಕಾಯಿ, ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ದೊಡ್ಡಪತ್ರೆ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಚೆನ್ನಾಗಿ ಮಿಶ್ರಣ ಮಾಡಿ. ವಡೆಯ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಸಂಜೆ ಕಾಫಿಗೆ ಇದು ಒಳ್ಳೆಯ ಕಾಂಬಿನೇಷನ್‌.

ADVERTISEMENT

ಪಕೋಡ

ಬೇಕಾಗುವ ಸಾಮಗ್ರಿಗಳು:ಸಣ್ಣದಾಗಿ ಕತ್ತರಿಸಿದ ದೊಡ್ಡಪತ್ರೆ ಎಲೆ – ನಿಮಗೆ ಬೇಕಾದಷ್ಟು, ಈರುಳ್ಳಿ – 1 ಹೆಚ್ಚಿಕೊಂಡಿದ್ದು, ಅಕ್ಕಿಹಿಟ್ಟು – 1/2 ಕಪ್‌, ಕಡಲೆಹಿಟ್ಟು – 1 ಟೇಬಲ್ ಚಮಚ, ಖಾರದಪುಡಿ – ರುಚಿಗೆ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಹಿಟ್ಟು, ಕಡಲೆಹಿಟ್ಟು, ಖಾರದಪುಡಿ, ಉಪ್ಪು ಇವೆಲ್ಲವನ್ನೂ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ದೊಡ್ಡಪತ್ರೆ ಎಲೆ, ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಾದ ಈ ಹಿಟ್ಟನ್ನು ಚಿಕ್ಕ ಚಿಕ್ಕ ಗಾತ್ರದ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಬಿಟ್ಟು, ಮಧ್ಯಮ ಉರಿಯಲ್ಲಿ ಕರಿಯಿರಿ.

ಬಜ್ಜಿ

ಬೇಕಾಗುವ ಸಾಮಗ್ರಿಗಳು:ದೊಡ್ಡಪತ್ರೆ ಎಲೆ 5-8, ಕಡಲೆಹಿಟ್ಟು – 1 ಕಪ್‌, ಓಂಕಾಳಿನ ಪುಡಿ – 1/2 ಚಮಚ, ಖಾರದಪುಡಿ – ರುಚಿಗೆ, ಉಪ್ಪು– ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಕಡಲೆಹಿಟ್ಟಿಗೆ ಓಂಕಾಳಿನ ಪುಡಿ, ಖಾರದಪುಡಿ, ಉಪ್ಪು ಹಾಗೂ ನೀರು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಹಿಟ್ಟಿನಲ್ಲಿ ದೊಡ್ಡಪತ್ರೆ ಎಲೆಗಳನ್ನು ಒಂದೊಂದಾಗಿ ಮುಳುಗಿಸಿ, ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ. ದೊಡ್ಡಪತ್ರೆ ಎಲೆಯ ಬಜ್ಜಿಯನ್ನು ಊಟದ ಜೊತೆಗೂ ತಿನ್ನಬಹುದು.

ದೊಡ್ಡಪತ್ರೆ ಸಲಾಡ್

ಬೇಕಾಗುವ ಸಾಮಗ್ರಿಗಳು: ದೊಡ್ಡಪತ್ರೆ ಎಲೆ – 10, ಈರುಳ್ಳಿ- 1, ಟೊಮೆಟೊ - 1, ಕೊತ್ತಂಬರಿ ಸೊಪ್ಪು – ಕಾಲು ಕಪ್‌ (ಹೆಚ್ಚಿಕೊಂಡಿದ್ದು), ಹಸಿಮೆಣಸಿನಕಾಯಿ – 2, ಮೊಸರು – 1 ಕಪ್‌, ಉಪ್ಪು –ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ದೊಡ್ಡಪತ್ರೆ ಎಲೆ, ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಹಸಿರುಮೆಣಸಿನಕಾಯಿ ಇವೆಲ್ಲವನ್ನೂ ಸಣ್ಣದಾಗಿ ಹೆಚ್ಚಿಕೊಳ್ಳಿ. ಬೇರೊಂದು ಪಾತ್ರೆಯಲ್ಲಿ ಮೊಸರು, ಉಪ್ಪು ಹಾಕಿ ಕಡೆದುಕೊಳ್ಳಿ. ಇದಕ್ಕೆ ಹೆಚ್ಚಿಕೊಂಡ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.