ADVERTISEMENT

ನಾನ್‌ವೆಜ್ ರೆಸಿಪಿ | ಮೀನು, ಸಿಗಡಿ ಉಪ್ಪಿನಕಾಯಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:45 IST
Last Updated 7 ಫೆಬ್ರುವರಿ 2020, 19:45 IST
ಸಿಗಡಿ ಉಪ್ಪಿನಕಾಯಿ
ಸಿಗಡಿ ಉಪ್ಪಿನಕಾಯಿ   

ಊಟದೊಂದಿಗೆ ಉಪ್ಪಿನಕಾಯಿ ಇದ್ದರಷ್ಟೇ ಊಟ ಪರಿಪೂರ್ಣ. ಮಾವಿನಕಾಯಿ, ನಿಂಬೆಕಾಯಿ, ಕಂಚಿಕಾಯಿ ಉಪ್ಪಿನಕಾಯಿಯಂತೆ ಮೀನು, ಚಿಕನ್, ಸಿಗಡಿಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು. ವರ್ಷಗಟ್ಟಲೆ ಇಡಲಾಗದಿದ್ದರೂ ಮೂರರಿಂದ ಆರು ತಿಂಗಳು ಇಡಲು ಯಾವುದೇ ತೊಂದರೆ ಇಲ್ಲ. ಅಂತಹ ಕೆಲವು ಉಪ್ಪಿನಕಾಯಿಗಳ ರೆಸಿಪಿ ಇಲ್ಲಿದೆ.

ಮೀನಿನ ಉಪ್ಪಿನಕಾಯಿ

ಕೇರಳದಲ್ಲಿ ಮೀನಿನ ಉಪ್ಪಿನಕಾಯಿ ಜನಪ್ರಿಯ. ಮಾವಿನಕಾಯಿ, ನಿಂಬೆಕಾಯಿ ಉಪ್ಪಿನಕಾಯಿಯಂತೆ ಕೇರಳದ ಮಾಂಸಾಹಾರಿಗಳು ಮೀನು ಉಪ್ಪಿನಕಾಯಿ ತಯಾರಿಸಿ ತಿನ್ನುತ್ತಾರೆ. ಇದನ್ನು ಮೂರು ತಿಂಗಳ ಕಾಲ ಫ್ರಿಜ್ ಇಲ್ಲದೇ ಇಡಬಹುದು.

ADVERTISEMENT

ಬೇಕಾಗುವ ಸಾಮಗ್ರಿಗಳು: ಮುಳ್ಳಿಲ್ಲದ ಮೀನು – 1 ಕೆ.ಜಿ. , ಶುಂಠಿ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು) – 50 ಗ್ರಾಂ, ಸಿಪ್ಪೆ ತೆಗೆದ ಬೆಳ್ಳುಳ್ಳಿ – 50 ಗ್ರಾಂ, ಕೆಂಪು ಮೆಣಸಿನ ಹುಡಿ – 100ಗ್ರಾಂ, ಬಿಳಿ ವಿನಿಗರ್ – ಅರ್ಧ ಮಿಲಿ ಲೀಟರ್, ಸಕ್ಕರೆ – 100 ಗ್ರಾಂ, ಉಪ್ಪು – 1 ಟೇಬಲ್ ಚಮಚ, ಹುರಿದ ಮೆಂತ್ಯೆಪುಡಿ – 1 ಟೀ ಚಮಚ, ತೆಂಗಿನೆಣ್ಣೆ – ಅರ್ಧ ಲೀಟರ್, ಸಾಸಿವೆ ಎಣ್ಣೆ – ಅರ್ಧ ಲೀಟರ್, ಕರಿಬೇವು – 20 ಎಲೆ (ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಿದ್ದು)

ತಯಾರಿಸುವ ವಿಧಾನ: ಮೊದಲು ಮೀನನ್ನು ಚೆನ್ನಾಗಿ ತೊಳೆದು, ಒಂದು ಇಂಚು ಗಾತ್ರಕ್ಕೆ ಕತ್ತರಿಸಿಟ್ಟುಕೊಳ್ಳಿ. ನಂತರ 25 ಗ್ರಾಂ ಕೆಂಪು ಮೆಣಸಿನ ಪುಡಿ ಹಾಗೂ 1 ಟೀ ಚಮಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಾಜಿನ ಪಾತ್ರೆಯಲ್ಲಿ ನೆನೆಸಿಡಿ.

ನಂತರ ಪಾತ್ರೆಯೊಂದರಲ್ಲಿ ಅರ್ಧ ಲೀಟರ್ ತೆಂಗಿನೆಣ್ಣೆ ಬಿಸಿ ಮಾಡಿ ಅದರಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಹುರಿಯಿರಿ. ಮೀನಿನ ತುಂಡುಗಳು ಗರಿಗರಿ ಆಗಿರಲಿ. ಮೀನಿನ ತುಂಡುಗಳು ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಿ. ಆಮೇಲೆ ಕರಿದ ಮೀನು ಹಾಗೂ ತೆಂಗಿನೆಣ್ಣೆಯನ್ನು ತಣ್ಣಗಾಗಲು ಬಿಡಿ. ನಂತರ ಪಾತ್ರೆಯೊಂದರಲ್ಲಿ ಸಾಸಿವೆ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ಶುಂಠಿ ಹಾಗೂ ಬೆಳ್ಳುಳ್ಳಿ ತುಂಡುಗಳನ್ನು ಕಂದು ಬಣ್ಣ ಬರುವರೆಗೂ ಹುರಿಯಿರಿ. ನಂತರ ಕರಿಬೇವು, ಕೆಂಪುಮೆಣಸಿನ ಪುಡಿ, ಉಪ್ಪು ಹಾಗೂ ಮೆಂತ್ಯೆ ಪುಡಿ ಸೇರಿಸಿ ಮಿಶ್ರಣ ಮಾಡಿ ಒಂದು ಸುತ್ತು ಹುರಿದುಕೊಳ್ಳಿ. ನಂತರ ಅದಕ್ಕೆ ವಿನಿಗರ್ ಹಾಗೂ ಸಕ್ಕರೆ ಸೇರಿಸಿ ಐದು ನಿಮಿಷ ಕುದಿಸಿ, ಗ್ಯಾಸ್ ಬಂದ್ ಮಾಡಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಹುರಿದ ಮೀನು, ಶುಂಠಿ, ಬೆಳ್ಳುಳ್ಳಿ ಹಾಗೂ ಮಸಾಲೆ ಮಿಶ್ರಣವನ್ನು ಸೇರಿಸಿ ಅದಕ್ಕೆ ಸಾಸಿವೆ ಎಣ್ಣೆ ಹಾಗೂ ಕುದಿಸಿ ತಣ್ಣಗಾಗಿಸಿದ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ತೊಳೆದು ಒಣಗಿಸಿದ ಪಿಂಗಾಣಿ ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಬಾಯಿ ಕಟ್ಟಿ ಇಡಿ.

ಸಿಗಡಿ ಉಪ್ಪಿನಕಾಯಿ

ಸಿಗಡಿ ಉಪ್ಪಿನಕಾಯಿ ತಮಿಳುನಾಡು ಪ್ರಾಂತ್ಯದ ಖಾದ್ಯ. ಸಿಗಡಿ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಈ ಉಪ್ಪಿನಕಾಯಿಯನ್ನು ಫ್ರಿಜ್ ಇಲ್ಲದೇ 3 ತಿಂಗಳ ಕಾಲ ಇಡಬಹುದು.

ಬೇಕಾಗುವ ಸಾಮಗ್ರಿಗಳು: ಹುರುಪೆ ತೆಗೆದ ಸಿಗಡಿ – 1 ಕೆ. ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 50 ಗ್ರಾಂ, ಕೆಂಪು ಮೆಣಸಿನ ಪುಡಿ – 100 ಗ್ರಾಂ, ಹುರಿದ ಸಾಸಿವೆ ಪುಡಿ – 10 ಗ್ರಾಂ, ಹುರಿದ ಮೆಂತ್ಯೆಪುಡಿ – 10 ಗ್ರಾಂ, ಇಂಗು – 1 ಗ್ರಾಂ, ಹುಣಸೆಹಣ್ಣಿನ ಪೇಸ್ಟ್ – 50 ಗ್ರಾಂ, ಉಪ್ಪು – 1 ಟೇಬಲ್ ಚಮಚ, ಸಾಸಿವೆ ಎಣ್ಣೆ – 1 ಲೀಟರ್

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದು ಸ್ವಚ್ಛ ಮಾಡಿದ ಸಿಗಡಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ 1 ಟೀ ಚಮಚ ಉಪ್ಪು ಸೇರಿಸಿ 15 ನಿಮಿಷ ನೆನೆಸಿಡಿ. ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಅದರಲ್ಲಿ ಸಿಗಡಿಯನ್ನು ಗರಿಗರಿಯಾಗಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಸಿಗಡಿ ಹುರಿದ ಎಣ್ಣೆಗೆ ಹುಣಸೆಹಣ್ಣಿನ ಪೇಸ್ಟ್ ಸೇರಿಸಿ. ಉರಿಯನ್ನು ಸಣ್ಣಗೆ ಇರಿಸಿಕೊಳ್ಳಿ. ಅದಕ್ಕೆ ಕೆಂಪುಮೆಣಸಿನ ಪುಡಿ, ಉಳಿದ ಉಪ್ಪು ಸೇರಿಸಿ 2 ರಿಂದ 3 ನಿಮಿಷ ಕುದಿಸಿ. ಆಮೇಲೆ ಸಾಸಿವೆ ಪುಡಿ, ಮೆಂತ್ಯೆ ಪುಡಿ, ಇಂಗು ಸೇರಿಸಿ ಗ್ಯಾಸ್ ಆಫ್ ಮಾಡಿ. ಆ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಸಿಗಡಿ ಮಿಶ್ರಣವನ್ನು ಹುಣಸೆಹಣ್ಣಿನ ಮಿಶ್ರಣಕ್ಕೆ ಸೇರಿಸಿ ಪಿಂಗಾಣಿ ಪಾತ್ರೆಯಲ್ಲಿಡಿ.

ಚಿಕನ್ ಉಪ್ಪಿನಕಾಯಿ

ಆಂಧ್ರಪ್ರದೇಶದ ವಿಶೇಷ ಖಾದ್ಯವಾಗಿರುವ ಚಿಕನ್ ಉಪ್ಪಿನಕಾಯಿಗೆ ತೆಲುಗಿನಲ್ಲಿ ಕೋಡಿ ಚಟ್ನಿ ಎಂದೂ ಕರೆಯುತ್ತಾರೆ. ಇದನ್ನು ಫ್ರಿಜ್‌ನಲ್ಲಿಟ್ಟು ಆರು ತಿಂಗಳ ಕಾಲ ಕಾಪಿಡಬಹುದು.

ಬೇಕಾಗುವ ಸಾಮಗ್ರಿಗಳು: ಮೂಳೆರಹಿತ ಚಿಕನ್‌ ತುಂಡು – 1 ಕೆ.ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್(ನೀರು ಸೇರಿಸದೆ ಪೇಸ್ಟ್ ತಯಾರಿಸಿಕೊಂಡಿದ್ದು) – ತಲಾ 25ಗ್ರಾಂ, ಶೇಂಗಾ ಎಣ್ಣೆ – 1ಲೀಟರ್, ಖಾರದಪುಡಿ – 100 ಗ್ರಾಂ, ಉಪ್ಪು – 1 ಟೇಬಲ್ ಚಮಚ, ಹುರಿದು ಪುಡಿ ಮಾಡಿದ ಮೆಂತ್ಯೆ – 1ಟೀ ಚಮಚ, ನಿಂಬೆಹಣ್ಣು – 10, ಬೆಳ್ಳುಳ್ಳಿ ಜಜ್ಜಿದ್ದು – 30

ತಯಾರಿಸುವ ವಿಧಾನ: ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ನೀರಿಲ್ಲದಂತೆ ಬಾಡಿಸಿಕೊಂಡು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿಕೊಳ್ಳಿ. ನಂತರ ಚಿಕನ್ ಹಾಗೂ ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಅನ್ನು ಮಿಶ್ರಣ ಮಾಡಿ ಗಾಜು ಅಥವಾ ಪಿಂಗಾಣಿ ಪಾತ್ರೆಗೆ ಹಾಕಿ. ‌ಅದಕ್ಕೆ ಒಂದು ಟೀ ಚಮಚ ಉಪ್ಪು ಸೇರಿಸಿ ಅರ್ಧ ಗಂಟೆ ಹಾಗೇ ಇಡಿ. ಆಮೇಲೆ ಶೇಂಗಾ ಎಣ್ಣೆಯಲ್ಲಿ ಚಿಕನ್‌ ತುಂಡುಗಳನ್ನು ಚೆನ್ನಾಗಿ ಹುರಿದುಕೊಳ್ಳಿ. ಚಿಕನ್ ತುಂಡುಗಳು ಗರಿಗರಿ ಆಗಿರಲಿ. ಅದನ್ನು ಪಾತ್ರೆಯೊಂದರಲ್ಲಿ ಇಟ್ಟು ತಣ್ಣಗಾಗಲು ಬಿಡಿ.

ನಂತರ ಇನ್ನೊಂದು ಪಿಂಗಾಣಿ ಪಾತ್ರೆ ತೆಗೆದುಕೊಂಡು ಮೆಂತ್ಯೆ ಪುಡಿ ಹಾಗೂ 10 ನಿಂಬೆಹಣ್ಣಿನ ರಸ ಸೇರಿಸಿ. (ಉಪ್ಪಿನಕಾಯಿ ಮಾಡುವ 3 ಗಂಟೆ ಮೊದಲು ನಿಂಬೆರಸವನ್ನು ಮಾಡಿಟ್ಟುಕೊಳ್ಳಿ). ಅದನ್ನು ಸೂರ್ಯನ ಬಿಸಿಲಿಗೆ ತೆರೆದಿಡಿ. ನೈಸರ್ಗಿಕವಾಗಿ ಇದು ಬಿಸಿಯಾಗಲಿ. ಗ್ಯಾಸ್ ಮೇಲೆ ಬಿಸಿ ಮಾಡಬೇಡಿ.

ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಕೆಂಪುಮೆಣಸಿನ ಪುಡಿ ಹಾಗೂ ಉಳಿದ ಉಪ್ಪು ಸೇರಿಸಿ. ನಂತರ ಹುರಿದ ಚಿಕನ್‌ ತುಂಡುಗಳನ್ನು ಅದಕ್ಕೆ ಸೇರಿಸಿ. ಹುರಿದ ಎಣ್ಣೆಯನ್ನು ತಣ್ಣಗಾಗಿಸಿ ಉಪ್ಪಿನಕಾಯಿಗೆ ಮಿಕ್ಸ್ ಮಾಡಿ. ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ತಣ್ಣಗಿನ ಜಾಗದಲ್ಲಿ ಇರಿಸಿ. ಪಾತ್ರೆಯ ಬಾಯಿಯನ್ನು ನೀಟಾಗಿ ಮುಚ್ಚಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.