ADVERTISEMENT

ದಾಸವಾಳ ದೋಸೆ...ಕಿತ್ತಲೆ ಹಣ್ಣಿನ ಪುಲಾವ್!

ಸುಮಾ ಬಿ.
Published 13 ಸೆಪ್ಟೆಂಬರ್ 2025, 0:30 IST
Last Updated 13 ಸೆಪ್ಟೆಂಬರ್ 2025, 0:30 IST
‘ಕರುನಾಡ ಸವಿಯೂಟ’ದಲ್ಲಿ ತಾವು ತಯಾರಿಸಿದ ಖಾದ್ಯಗಳೊಂದಿಗೆ ಕಾವ್ಯಾ ಎಸ್‌. ಬೆಲ್ಲದ್‌
‘ಕರುನಾಡ ಸವಿಯೂಟ’ದಲ್ಲಿ ತಾವು ತಯಾರಿಸಿದ ಖಾದ್ಯಗಳೊಂದಿಗೆ ಕಾವ್ಯಾ ಎಸ್‌. ಬೆಲ್ಲದ್‌   

ದಾಸವಾಳ, ಶಂಖಪುಷ್ಪ, ಪಾರಿಜಾತ ಇವೆಲ್ಲ ಔಷಧೀಯ ಗಿಡಮೂಲಿಕೆಗಳು. ಅವನ್ನು ಹಾಗೆಯೇ ಕೊಟ್ಟರೆ ಯಾರೂ ತಿನ್ನುವುದಿಲ್ಲ. ಅವನ್ನೇ ಬಳಸಿ ಖಾದ್ಯ ತಯಾರಿಸಿ ಕೊಟ್ಟರೆ ಖುಷಿಯಿಂದ ಸವಿಯುತ್ತಾರೆ. ಈ ಖಾದ್ಯಗಳು ನೋಡಲು ಸಹ ಆಕರ್ಷಕವಾಗಿರುತ್ತವೆ....

‘ಅಡುಗೆ ಮನೆ’ ಒಂದು ಪ್ರಯೋಗಶಾಲೆ. ಬಹುಶಃ ಸೈನ್ಸ್‌ ಲ್ಯಾಬ್‌ಗಿಂತಲೂ ಹೆಚ್ಚು ಪ್ರಯೋಗಗಳು ಇಲ್ಲಿ ನಡೆಯುತ್ತವೆ. ಆರೋಗ್ಯ ಪ್ರಜ್ಞೆ ಹೆಚ್ಚಾದ ಮೇಲಂತೂ ಆ ಪ್ರಯೋಗಗಳು ನೂರ್ಮಡಿಗೊಂಡಿವೆ. ಪ್ರತಿ ಪಾಕದಲ್ಲೂ ಆರೋಗ್ಯ ಅರಸುವವರೇ ಹೆಚ್ಚು. ಕೋವಿಡ್‌ ಸಮಯದಲ್ಲಿ ಶುರುವಾದ ಈ ಖಯಾಲಿ ಹಾಗೇ ಮುಂದುವರಿದಿದೆ.  ಪ್ರಯೋಗಶೀಲತೆಗೆ ಪುಷ್ಟಿ ನೀಡಿದೆ.

ಒಂದಿಲ್ಲೊಂದು ಆರೋಗ್ಯದ ಗುಟ್ಟನ್ನು ತಮ್ಮಲ್ಲೇ ಅಡಗಿಸಿಕೊಂಡು ಸೌಂದರ್ಯ, ಸುವಾಸನೆ ಹೊರಸೂಸುವ ಹೂವು,  ಎಲೆ, ಹಣ್ಣು, ಸಿಪ್ಪೆ,  ಕಾಯಿ ಎಲ್ಲವೂ ಈಗ ಅಡುಗೆಯ ಪ್ರಯೋಗಗಳಿಗೆ ತೆರೆದುಕೊಂಡಿವೆ. ದೇವರ ಫೋಟೊ ಫ್ರೇಮಿಗೋ ಹೊಸಿಲಿನ ಅಂದಕ್ಕೋ ಸೀಮಿತವಾಗಿದ್ದ, ಭಕ್ತಿಭಾವ ಸ್ಫುರಿಸು
ತ್ತಿದ್ದ ಅವು ಈಗ ಬಾಣಲೆಯಲ್ಲಿ ಬೆಂದು ಆರೋಗ್ಯ ಭಾಗ್ಯವನ್ನೂ ಕರುಣಿಸುತ್ತಿವೆ.

ADVERTISEMENT

ಇಂತಹ ಪ್ರಯೋಗಗಳ ಮೂಲಕ ಕಾವ್ಯಾ ಎಸ್‌. ಬೆಲ್ಲದ್‌ , ‘ಪ್ರಜಾವಾಣಿ’ಯಿಂದ ದಾವಣಗೆರೆಯಲ್ಲಿ ಆಯೋಜಿಸಿದ್ದ ಕರುನಾಡ ಸವಿಯೂಟ 4ನೇ ಆವೃತ್ತಿಯ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ತಯಾರಿಸಿದ್ದ ಪಾರಿಜಾತ ಹೂವಿನ ಖೀರು, ಶಂಖಪುಷ್ಪದ ಘೀರೈಸ್‌, ನುಗ್ಗೆಸೊಪ್ಪಿನ ಉಂಡೆ, ಕಿತ್ತಲೆಹಣ್ಣಿನ ಪುಲಾವ್‌, ಹಸಿಮೆಣಸಿನಕಾಯಿಯಿಂದ ತಯಾರಿಸಿದ ಬರ್ಫಿ ಸೇರಿದಂತೆ 29 ಖಾದ್ಯಗಳು ಗಮನಸೆಳೆದವು, ಆರೋಗ್ಯ ವರ್ಧನೆಯ ಪಾಠ ಹೇಳಿದವು. ಖಾರದಲ್ಲೂ ಸಿಹಿ ಅರಸುವ, ಕಹಿಯಲ್ಲೂ ರುಚಿ ಹುಡುಕುವ ಕಾವ್ಯಾ ಅವರ ಪ್ರಯೋಗಶೀಲತೆಗೆ ಪಾಕಪ್ರಿಯರು, ತೀರ್ಪುಗಾರರು ಹುಬ್ಬೇರಿಸಿದರು.

ಫೇಸ್‌ಬುಕ್‌ನ ವಿವಿಧ ಗುಂಪುಗಳಲ್ಲಿ ಕಾವ್ಯಾ ಈವರೆಗೆ 2,100 ಬಗೆಯ ಖಾದ್ಯಗಳನ್ನು ಉಣಬಡಿಸಿದ್ದಾರೆ. ಅವರ ಪ್ರಯೋಗಶೀಲತೆಯು ಸಿಹಿಕಹಿ ಚಂದ್ರು ಅವರ ‘ಬೊಂಬಾಟ್‌ ಭೋಜನ’ ಅಡುಗೆಮನೆಗೂ ಕರೆದೊಯ್ದಿದೆ. ಫಾರ್ಮಸಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾವ್ಯಾ, ಹಾವೇರಿ ಜಿಲ್ಲೆಯ ಅಕ್ಕಿಆಲೂರು ಗ್ರಾಮದವರು. 

ಮಾಡಿನೋಡಿ ಪಾರಿಜಾತ ಖೀರು

ದೈವಿಕ ಭಾವ ಸ್ಫುರಿಸುವ ಪಾರಿಜಾತ ಹೂವು ಮಂಡಿನೋವು ಸೇರಿ ಇತರ ಕಾಯಿಲೆಗಳನ್ನು ಗುಣಪಡಿಸುತ್ತದೆ ಎನ್ನುವ ನಂಬಿಕೆ ಇದೆ. ಈ ಹೂವಿನಲ್ಲಿ ರುಚಿಯಾದ ಖೀರು ತಯಾರಿಸುವ ವಿಧಾನ ಹೇಳಿಕೊಟ್ಟಿದ್ದಾರೆ ಕಾವ್ಯಾ. 

ಏನೇನು ಬೇಕು?: ಒಂದು ಲೀಟರ್‌ ಗಟ್ಟಿ ಹಾಲು, ಕಾಲು ಕಪ್‌ ಸಕ್ಕರೆ, ಕಾಲು ಕಪ್‌ ಒಣಹಣ್ಣುಗಳು (ಗೋಡಂಬಿ, ಬಾದಾಮಿ, ಪಿಸ್ತಾ, ದ್ರಾಕ್ಷಿ), ಕಾಲು ಕಪ್‌ ಪಾರಿಜಾತ ಹೂವು, ಒಂದು ಚಮಚ ತುಪ್ಪ.

ಹೀಗೆ ಮಾಡಿ: ಮೊದಲು ಅರ್ಧ ಲೀಟರ್‌ ಹಾಲನ್ನು ಗ್ಯಾಸ್ ಮೇಲೆ ಇಟ್ಟು ಪಾರಿಜಾತ ಹೂವನ್ನು ಹಾಕಿ ಕುದಿಸಿ. ಆಗ ಅದು ಕೇಸರಿ ಬಣ್ಣ ಬಿಟ್ಟುಕೊಳ್ಳುತ್ತದೆ. ಆಗ ಗ್ಯಾಸ್ ಆಫ್ ಮಾಡಿ, ಅದನ್ನು ಸೋಸಿ ಇಡಿ. ಇನ್ನೊಂದು ಬಾಣಲೆಗೆ ಉಳಿದ ಹಾಲು ಹಾಕಿ. ಅದು ಗಟ್ಟಿಯಾಗಿ ಅರ್ಧ ಭಾಗ ಆಗುವವರೆಗೂ ಕುದಿಸಬೇಕು. ನಂತರ ಅದಕ್ಕೆ ಸಕ್ಕರೆ ಹಾಗೂ ಪಾರಿಜಾತದ ಹಾಲು ಹಾಕಿ ಕುದಿಸಬೇಕು. ಈ ಮಿಶ್ರಣ ಗಟ್ಟಿ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ.

ಇನ್ನೊಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಒಣಹಣ್ಣುಗಳನ್ನು ಕರಿದು, ಪಾರಿಜಾತದ ಹಾಲಿನ ಮಿಶ್ರಣಕ್ಕೆ ಸೇರಿಸಬೇಕು. ಈಗ ಪಾರಿಜಾತ ಹೂವಿನ ಖೀರು ಸವಿಯಲು ಸಿದ್ಧ. ಇದನ್ನು ಬಿಸಿಯಾಗಿಯೂ ಕುಡಿಯಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ಬಳಿಕವೂ ಸವಿಯಬಹುದು.

ಕಾವ್ಯಾ ಪ್ರಯೋಗದ ಖಾದ್ಯಗಳಿವು

* ದಾಸವಾಳ ಹೂವಿನಲ್ಲಿ ಚಿತ್ರಾನ್ನ, ಚಟ್ನಿ, ದೋಸೆ, ದಾಸವಾಳ ಎಲೆಯ ಇಡ್ಲಿ

* ಅವರೆಕಾಳಿನ ಐಸ್‌ಕ್ರೀಂ, ಜಿಲೇಬಿ, ಹೋಳಿಗೆ

*  ನುಗ್ಗೆಸೊಪ್ಪಿನ ಉಂಡೆ, ತಾಲಿಪಟ್ಟು, ಅಕ್ಕಿರೊಟ್ಟಿ, ನುಗ್ಗೆಕಾಯಿ ಪಕೋಡ

* ಹಸಿಮೆಣಸಿನಕಾಯಿಯ ಹಲ್ವಾ, ಬರ್ಫಿ

* ಶಂಖಪುಷ್ಪ ಹೂವಿನ ಲಸ್ಸಿ, ಘೀರೈಸ್‌, ಜಿಲೇಬಿ

*  ಕಿತ್ತಲೆಹಣ್ಣಿನ ಘೀರೈಸ್‌, ಕಿತ್ತಲೆಸಿಪ್ಪೆಯ ಗೊಜ್ಜು

* ತೊಂಡೆಕಾಯಿ ಪಕೋಡ, ಮಾವಿನಕಾಯಿ ಪಕೋಡ

* ಕಲ್ಲಂಗಡಿ ಹಣ್ಣಿನ ರೈಸ್

* ಬಾಳೆಎಲೆಯ ಸಿರಾ

* ಗುಲಾಬಿ ಹೂವಿನ ಶ್ರೀಖಂಡ...‌

ದಾಸವಾಳ ಹೂವಿನ ದೋಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.