ADVERTISEMENT

ಜೋಳದ ದೋಸೆ, ಅನ್ನದ ರುಚಿ ಬಲ್ಲಿರಾ...

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:00 IST
Last Updated 23 ಜನವರಿ 2019, 20:00 IST
ಜೋಳದ ದೋಸೆ
ಜೋಳದ ದೋಸೆ   

ಜೋಳವು ವಿಶ್ವದ ಅರೆ–ಒಣ ಪ್ರದೇಶದ ಬಹುತೇಕ ಜನರ ದಿನನಿತ್ಯದ ಆಹಾರ. ಕ್ರಿಮಿ–ಕೀಟ ಬಾದೆಗಳಿಗೆ ಒಳಗೊಳ್ಳದೆ ಅತ್ಯುತ್ತಮ ಪೌಷ್ಟಿಕ ಗುಣವುಳ್ಳ ಮತ್ತು ಋತುಮಾನಕ್ಕೆ ಅನುಗುಣವಾಗಿ ಬೆಳೆಯುವ ಬೆಳೆ. ಭಾರತದಲ್ಲಿ ಜೋಳವನ್ನು ಹಿಂಗಾರು ಮತ್ತು ಮುಂಗಾರು ಹಂಗಾಮುಗಳೆರಡರಲ್ಲೂ ಬೆಳೆಯಲಾಗುತ್ತದೆ. ಜೋಳದ ವೈಜ್ಞಾನಿಕ ಹೆಸರು ಸೊರಗಮ್‌ ಬೈಕೊಲರ್‌. ಹಿಂದಿಯಲ್ಲಿ ಜೊವರ್‌ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಜೋಳದಲ್ಲಿ ಸಾರಜನಕ, ಜೀವಸತ್ವ, ಶಕ್ತಿ ಮತ್ತು ಖನಿಜಾಂಶ ಹೇರಳವಾಗಿರುತ್ತದೆ. ವಿಶೇಷವಾಗಿ ಅರೆ– ಒಣ ಪ್ರದೇಶದ ಲಕ್ಷಾಂತರ ಜನರ ಆಹಾರ ಹಾಗೂ ಆರ್ಥಿಕತೆಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಕ್ಕಿ ಸೇವನೆ ಜೊತೆ ಜೋಳದ ಸೇವನೆಯು ಬಹು ಮುಖ್ಯ. ಏಕೆಂದರೆ ಇದರಲ್ಲಿ ಪೌಷ್ಠಿಕಾಂಶಗಳಾದ ಸಾರಜನಕ, ನಾರಿನಾಂಶ, ಥೈಯಾಮಿನ್‌, ಪೋಲಿಕ್‌ ಆಮ್ಲ, ಸುಣ್ಣ (ಕ್ಯಾಲ್ಸಿಯಂ), ರಂಜಕ, ಕಬ್ಬಿಣ ಮತ್ತು ಬೀಟಾ ಕ್ಯಾರೋಟಿನ್‌ ಹೇರಳವಾಗಿವೆ.

ಜೋಳದ ರೊಟ್ಟಿ ಫೇಮಸ್‌. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಬಹುತೇಕ ಜನರ ದಿನ ನಿತ್ಯದ ಆಹಾರದಲ್ಲಿ ರೊಟ್ಟಿಗೆ ಪ್ರಮುಖ ಸ್ಥಾನ. ಕಟಿ ರೊಟ್ಟಿ, ಬಿಸಿ ರೊಟ್ಟಿ ಎರಡನ್ನು ಇಲ್ಲಿನ ಜನ ಇಷ್ಟಪಟ್ಟು ಸೇವಿಸುತ್ತಾರೆ. ಅಂತೆಯೇ ಜೋಳದ ದೋಸೆ, ಜೋಳದ ಅನ್ನವನ್ನೂ ಮಾಡಬಹುದು. ಅದನ್ನು ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ADVERTISEMENT

ಜೋಳದ ದೋಸೆ

ಬೇಕಾಗುವ ಸಾಮಾಗ್ರಿಗಳು–ಜೋಳ 3 ಕಪ್‌, ಉದ್ದಿನ ಬೇಳೆ 1 ಕಪ್‌, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಲು ಬೇಕಾಗುವಷ್ಟು ತೈಲ. ನೆನೆಸಿದ ಜೋಳ ಮತ್ತು ಉದ್ದಿನ ಬೇಳೆಯನ್ನು ನುಣುಪಾಗುವವರೆಗೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ವಲ್ಪ ಸಮಯ ಇಡಬೇಕು. ಬಿಸಿಯಾದ ದೋಸೆ ಹಂಚಿಗೆ ಸ್ವಲ್ಪ ತೈಲವನ್ನು ಸವರಿ, ದೋಸೆ ಹಿಟ್ಟನ್ನು ಹಾಕಿ ದುಂಡಾಗಿ ಹರಡಬೇಕು. ಗರಿ ಗರಿ ದೋಸೆ ಆಗುವವರೆಗೂ ಹಾಗೇ ಬಿಡಬೇಕು.

ಈಗ ಬಿಸಿ ಬಿಸಿ ಗರಿಯಾದ ದೋಸೆಯನ್ನು ಚಟ್ನಿಯ ಜೊತೆ ಸೇವಿಸಬಹುದು. (ಈ ದೋಸೆಯನ್ನು ಇದೇ ತರಹ ಕಿರುಧಾನ್ಯಗಳಿಂದಲೂ ತಯಾರಿಸಬಹುದು)

ಜೋಳದ ಅನ್ನ

ಬೇಕಾಗುವ ಸಾಮಾಗ್ರಿಗಳು– ಹೊಟ್ಟುರಹಿತ ಜೋಳ 1 ಕಪ್‌. ತಯಾರಿಸುವ ವಿಧಾನ– ಹೊಟ್ಟು ರಹಿತ ಜೋಳವನ್ನು ಬಿಸಿ ನೀರಿನಲ್ಲಿ ಹಾಕಿ, ಧಾನ್ಯಗಳು ಮೃದುವಾಗುವವರೆಗೆ ಕುದಿಸಬೇಕು. ಕುಕ್ಕರ್‌ ಉಪಯೋಗಿಸಿದರೆ, 5ರಿಂದ 10 ನಿಮಿಷಗಳಲ್ಲಿ ತಯಾರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.