ADVERTISEMENT

ಸಂಕ್ರಾಂತಿಗೆ ಸಕ್ಕರೆ ಅಚ್ಚು ತಯಾರಿಸುವುದು ಹೇಗೆ? 

ಪಾಕ ವಿಧಾನ

ರುಕ್ಮಿಣಿ ಜಯರಾಮ ರಾವ್
Published 14 ಜನವರಿ 2019, 8:55 IST
Last Updated 14 ಜನವರಿ 2019, 8:55 IST
   

ಸಂಕ್ರಾಂತಿ ಬಂತೆಂದರೆ ಸಾಕು ಸಡಗರ ಶುರು. ಅದರಲ್ಲೂ ಮನೆಯಲ್ಲಿ ಹಿರಿಯ ಮಹಿಳೆಯರಿದ್ದರಂತೂ ಅವರೇ ಎಲ್ಲಾ ತಯಾರಿ ಮಾಡಬೇಕೆನ್ನುವ ಹುಮ್ಮಸ್ಸು.ಮೊದಲು ಸಕ್ಕರೆ ಅಚ್ಚು ಹಾಕುವುದರಿಂದ ನಮ್ಮ ಕೆಲಸ ಶುರು. ಅಚ್ಚಿನ ಮಣೆಗಳು ಈಗಲೂ ಎಲ್ಲಾ ಮಾರ್ಕೆಟ್‌ ಗಳಲ್ಲಿ ಸಿಗುತ್ತದೆ. ಆದರೂ ಅವು ಹಳೆಯದಾದಷ್ಟುಬಳಸಿ ಬಳಸಿ ಚೆನ್ನಾಗಿ ಪಳಗಿರುವುದರಿಂದ ಅತೀ ಸುಲಭವಾಗಿ ಅಚ್ಚುಗಳು ಮಣೆಯಿಂದ ಮುರಿಯದೇ ಬಿಡುತ್ತವೆ.

ಈಗ ಸಕ್ಕರೆ ಅಚ್ಚು ತಯಾರಿಸುವವಿಧಾನ ತಿಳಿಯೋಣ.
ಮೊದಲು ಒಂದು ಕೆಜಿ ಸಕ್ಕರೆಯನ್ನು ಒಂದು ಮಧ್ಯಮತರದದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಒಲೆಯ ಮೇಲಿಡಬೇಕು. ಅದು ಕರಗುವವರೆಗೂ ಅಚ್ಚಿನ ಮಣೆಗಳನ್ನು ಒಂದು ದೊಡ್ಡ ನೀರು ತುಂಬಿದ ಟಬ್ ನಲ್ಲಿ ನೆನಸಿಟ್ಟಿರಬೇಕು.
ಒಲೆಯ ಮೇಲಿನ ಸಕ್ಕರೆ ಕರಗಿ ನೀರಾದ ಮೇಲೆ ಅದನ್ನು ಕೆಳಗಿಳಿಸಿ ಒಂದು ತೆಳುವಾದ ಬಿಳಿಪಂಚೆಯನ್ನು ಕಟ್ಟಿ ಇಟ್ಟಿರುವ ಪಾತ್ರೆಗೆ ಬಗ್ಗಿಸಿ ಶೋಧಿಸಬೇಕು.
ಶೋಧಿಸಿದ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟು ಅರ್ಧಲೋಟ ಹಾಲನ್ನು ಹಾಕಿ ಮರಳಿಸಬೇಕು. ಕಾರಣ ಸಕ್ಕರೆಯಲ್ಲಿರುವ ಕೊಳೆಯೆಲ್ಲಾ ಹೋಗಿ ಅಚ್ಚು ಬೆಳ್ಳಗೆ ಚೆನ್ನಾಗಿ ಆಗುತ್ತದೆ. ಮತ್ತೆ ಮರಳುತ್ತಿರುವ ಆ ಪಾಕವನ್ನು ಅದೇ ತೆಳುಬಟ್ಟೆಯ ಮೇಲೆ ಹಾಕಿ ಶೋಧಿಸಬೇಕು .
ಇಷ್ಟೆಲ್ಲಾ ತಯಾರಿಯಾದ ಸಕ್ಕರೆ ಪಾಕವನ್ನು ಬೇರೆ ಸಣ್ಣದೊಂದು ಪಾತ್ರೆ ಒಲೆಯ ಮೇಲಿಟ್ಟು ಸ್ವಲ್ಪ ಸ್ವಲ್ಪವೇ ಪಾಕ ಹಾಕಿಕೊಂಡು ಸೌಟಿನಿಂದ ಕೈಯಾಡಿಸುತ್ತಿರಬೇಕು.
ಅಷ್ಟರಲ್ಲಿ ಮರದ ಅಚ್ಚುಗಳನ್ನೆಲ್ಲಾ ಒಪ್ಪವಾಗುವಂತೆ ಜೋಡಿಸಿ ಬಿಗಿಯಾಗುವಂತೆ ರಬ್ಬರ್ ಬ್ಯಾಂಡ್ ಗಳನ್ನು ಹಾಕಿ ಭದ್ರವಾಗಿ ಸಾಲಾಗಿ ಜೋಡಿಸಿಡಬೇಕು.
ಈಕಡೆ ಪಾಕ ಕೈಯಾಡಿಸುತ್ತಿರುವಾಗ ದೋಸೆ ಹಿಟ್ಟಿನ ಹದ ಬಂದ ಕೂಡಲೇ ಇಕ್ಕಳದಿಂದ ಕೈಲಿ ಹಿಡಿದುಕೊಂಡು ಅಚ್ಚು ಮಣೆಗಳ ತೂತಿನಲ್ಲಿ ನಿಧಾನವಾಗಿ ಒಳಗಿಳಿಯುವಂತೆ ಪಾಕ ಹಾಕುತ್ತಾ ಹೋಗಬೇಕು.
ಇನ್ನೊಬ್ಬರು ಅಚ್ಚನ್ನು ಕುಟ್ಟುತ್ತಾ ಪಾಕ ಒಳಗೆ ಸಂಪೂರ್ಣವಾಗಿ ಇಳಿಯುವಂತೆ ಮಾಡಬೇಕು. ಸ್ವಲ್ಪ ವಿರಾಮ ಕೊಟ್ಡು ನಿಧಾನವಾಗಿ ಅಚ್ಚಿನ ಮಣೆಗಳನ್ನು ಬಿಡಿಸುತ್ತಾ ಹೋದರೆ ಬಿಳಿಯ ಸುಂದರ ಸಕ್ಕರೆ ಅಚ್ಚುಗಳು ರೆಡಿಯಾಗಿರುತ್ತವೆ. ಎಲ್ಲವನ್ನೂ ಅಚ್ಚಿನ ಮಣೆಯಿಂದ ಬಿಡಿಸಿ ತಟ್ಟೆಗಳಲ್ಲಿ ಜೋಡಿಸಿಟ್ಟು ಮತ್ತೆ ಅಚ್ಚಿನ ಮಣೆಗಳನ್ನು ನೀರಿನಲ್ಲಿ ಹಾಕಿ ಶುದ್ಧ ಗೊಳಿಸಿ ರೆಡಿಯಾಗಿಡಬೇಕು. ಈಕಡೆ ಮತ್ತೆ ಎರಡನೇ ಬಾರಿ ಪಾತ್ರೆಗೆ ಸಕ್ಕರೆ ಪಾಕವನ್ನು ಹಾಕಿಕೊಂಡು ಮತ್ತೆ ಸೌಟಿನಿಂದ ಕೈಯಾಡಿಸಲು ಶುರುಮಾಡಬೇಕು.
ಹೀಗೆ ನಮಗೆಷ್ಟು ಯಾವ ಪ್ರಮಾಣದಲ್ಲಿ ಎಷ್ಟು ಬೇಕೆಂದು ತಿಳಿದು ಅದಕ್ಕೆ ತಕ್ಕಷ್ಟು ಮೂಲ ಸಕ್ಕರೆಪಾಕ ತಯಾರಿಸಿಟ್ಟು ಮೇಲೆ ಹೇಳಿದಂತೆ ಸ್ವಲ್ಪ ಸ್ವಲ್ಪ ಹದವಾದ ಪಾಕದಿಂದ ಅಚ್ಚಿನ ಮಣೆಗೆ ಹಾಕುತ್ತಾ ಸಕ್ಕರೆ ಅಚ್ಚು ತಯಾರಿಸಬಹುದು.
ಮೊದ ಮೊದಲು ಪಾಕದ ಹದ ಅರಿಯದಿರಬಹುದು ಆದರೆ ಮಾಡುತ್ತಾ ಹದವಾಗಿ ಬರುವುದು. ಒಳ್ಳೆ ಬಿಳಿಯದಾದ ಅಚ್ಚುಗಳು ರೆಡಿಯಾಗುತ್ತದೆ. ಒಂದುವೇಳೆ ಅಚ್ವಿನ ಮಣೆಯಿಂದ ತೆಗೆಯುವಾಗ ಮುರಿದಿದ್ದರೆ ಅವುಗಳನ್ನು ಮತ್ತೆ ಪಾಕ ಮಾಡಿ ಬಣ್ಣಹಾಕಿ , ಕೇಸರಿ , ಹಳದಿ ಅಚ್ಚುಗಳನ್ನು ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT