ADVERTISEMENT

ರೆಸಿಪಿ | ಬಾಯಲ್ಲಿ ನೀರೂರಿಸುವ ಬ್ರೌನಿ

ರೇಷ್ಮಾ
Published 24 ಡಿಸೆಂಬರ್ 2021, 19:45 IST
Last Updated 24 ಡಿಸೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರೌನಿ... ಇದನ್ನು ಕೇಳಿದಾಕ್ಷಣ ಒಮ್ಮೆ ತಿರುಗಿ ನೋಡುತ್ತೇವೆ. ಒಮ್ಮೆ ಬ್ರೌನಿ ರುಚಿಯನ್ನು ಸವಿದವರು ಮತ್ತೆ ಕೊಟ್ಟರೆ ಬೇಡ ಎನ್ನುವುದಿಲ್ಲ. ಮೃದುವಾಗಿರುವ ಈ ತಿನಿಸು ಬಾಯಲ್ಲಿಟ್ಟರೆ ಕರಗುವಂತಿದೆ. ಬ್ರೌನಿ ಬೇರೆ ಬೇರೆ ಪರಿಮಳದಲ್ಲೂ ಲಭ್ಯ. ಕೊಂಚ ಸಿಹಿ ಹೆಚ್ಚಿದ್ದು ಕೇಕ್‌ನಂತಿರುವ ಬ್ರೌನಿ ಕೇಕ್‌ ಪ್ರಿಯರಿಗೆ ಅಚ್ಚುಮೆಚ್ಚು. ಡಿಸೆಂಬರ್ ತಿಂಗಳು ಬಂತೆಂದರೆ ಕ್ರಿಸ್‌ಮಸ್‌ ಸಲುವಾಗಿ ಬಗೆ ಬಗೆಯ ಕೇಕ್‌ ಬ್ರೌನಿಗಳನ್ನು ತಯಾರಿಸುತ್ತಾರೆ. ಬ್ರೌನಿಯನ್ನು ತಾಜಾ ಇರುವಾಗಲೇ ತಿಂದರೆ ರುಚಿ. ಆ ಕಾರಣಕ್ಕೆ ನೀವು ಮನೆಯಲ್ಲಿ ಸುಲಭವಾಗಿ ಹಾಗೂ ಸರಳವಾಗಿ ತಯಾರಿಸಿ ತಿನ್ನಬಹುದು. ಬ್ರೌನಿ ಕೇಕ್ ಅನ್ನು ಸಕ್ಕರೆರಹಿತವಾಗಿ ತಯಾರಿಸಬಹುದು. ಇದನ್ನು ಮಧುಮೇಹಿಗಳು ಸೇವಿಸಬಹುದು. ಮಕ್ಕಳಿಗಂತೂ ಬ್ರೌನಿ ತುಂಬಾ ಇಷ್ಟವಾಗುವ ಸಿಹಿ ತಿನಿಸು.

ಬಾದಾಮಿ, ಬಾಳೆಹಣ್ಣು, ಕೋಕೊವಾ, ಮೊಟ್ಟೆ.. ಹೀಗೆ ಮನೆಯಲ್ಲೇ ಕಡಿಮೆ ಸಾಮಗ್ರಿಗಳಿಂದ ಬ್ರೌನಿ ತಯಾರಿಸಬಹುದು. ಇದನ್ನು ಪೌಷ್ಟಿಕಾಂಶಯುಕ್ತ ಸಾಮಗ್ರಿಗಳಿಂದ ತಯಾರಿಸುವ ಕಾರಣ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಕೋಕೊವಾ ಪುಡಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿದೆ. ಬಾದಾಮಿ ಬೆಣ್ಣೆಯಲ್ಲಿ ಪ್ರೊಟೀನ್‌ ಅಂಶ ಹೆಚ್ಚಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕವಿದೆ. ಹಾಗಾಗಿ ಇದನ್ನು ಆರೋಗ್ಯಕರ ಡೆಸರ್ಟ್‌ ಎಂದೂ ಕರೆಯಬಹುದು.

ಅಲ್ಮಂಡ್‌ ಬಟರ್ ಬ್ರೌನಿ

ADVERTISEMENT

ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಕಳಿತ ಬಾಳೆಹಣ್ಣು – 4, ಅಲ್ಮಂಡ್‌ ಬಟರ್‌ – 1/2 ಕಪ್‌ (ಸಕ್ಕರೆ ರಹಿತ), ಕೋಕೊವಾ ಪುಡಿ – ಅರ್ಧ ಕಪ್‌.

ತಯಾರಿಸುವ ವಿಧಾನ: ಒವೆನ್‌ ಅನ್ನು 350 ಡಿಗ್ರಿಯಲ್ಲಿ ಬಿಸಿ ಮಾಡಿಕೊಳ್ಳಿ. ಒಂದು 8*8 ಇಂಚು ಗಾತ್ರದ ಬೇಕಿಂಗ್ ಪ್ಯಾನ್‌ಗೆ ಪ್ಯಾರ್‌ಮೆಂಟ್ ಪೇಪರ್‌ ಹಚ್ಚಿ ಸಿದ್ಧ ಮಾಡಿಕೊಳ್ಳಿ. ಬ್ಲೆಂಡರ್‌ ಸಹಾಯದಿಂದ ಬಾಳೆಹಣ್ಣನ್ನು ಕಿವುಚಿಕೊಳ್ಳಿ. ಅದಕ್ಕೆ ಆಮಂಡ್‌ ಬಟರ್ ಹಾಗೂ ಕೋಕೊವಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮೊದಲೇ ತಯಾರಿಸಿ ಇಟ್ಟುಕೊಂಡು ಪ್ಯಾನ್‌ಗೆ ಸುರಿಯಿರಿ. ಇದನ್ನು ಒವೆನ್‌ನಲ್ಲಿಟ್ಟು 20 ನಿಮಿಷಗಳ ಕಾಲ ಬೇಯಸಿ. ಈಗ ನಿಮ್ಮ ಮುಂದೆ ಅಲ್ಮಂಡ್‌ ಬಟರ್ ಬ್ರೌನಿ ತಿನ್ನಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.