ADVERTISEMENT

ಕ್ಷಣದಲ್ಲಿ ತಯಾರಿಸಿ ರುಚಿಕರ ಕಿಮ್ಚಿ..

ಅಮೃತ ಕಿರಣ ಬಿ.ಎಂ.
Published 9 ಅಕ್ಟೋಬರ್ 2021, 2:43 IST
Last Updated 9 ಅಕ್ಟೋಬರ್ 2021, 2:43 IST
   

ಜಪಾನ್‌ ಹಾಗೂ ಕೊರಿಯಾದಲ್ಲಿ ಆರೋಗ್ಯಕರ ಆಹಾರವಾದ ಕಿಮ್ಚಿ ಈಗ ಭಾರತದಲ್ಲೂ ಜನಪ್ರಿಯ. ಇದನ್ನು ಸರಳವಾಗಿ ನಮ್ಮಲ್ಲಿನ ಉಪ್ಪಿನಕಾಯಿ ಎನ್ನಬಹುದು. ಇದರಲ್ಲಿ ಬಳಸುವ ಸಾಮಗ್ರಿಗಳು ಹಾಗೂ ನಂತರ ನಡೆಯುವ ಬುರುಗು ಭರಿಸುವ ಪ್ರಕ್ರಿಯೆಯಿಂದಾಗಿ ಜೀರ್ಣಕ್ರಿಯೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹುಟ್ಟುಹಾಕುತ್ತದೆ. ಇದರಿಂದ ಜೀರ್ಣಾಂಗ ಸಂಬಂಧಿ ಅನಾರೋಗ್ಯವನ್ನು ತಡೆಗಟ್ಟಬಹುದು. ಜಪಾನ್‌ನಲ್ಲಂತೂ ಇದು ಸಾಂಪ್ರದಾಯಿಕ ಆಹಾರವಾಗಿದ್ದು, ನಿತ್ಯ ನೂಡಲ್ಸ್‌ನಲ್ಲಿ, ಅನ್ನದ ಜೊತೆ ಸಾಕಷ್ಟು ಸೇವಿಸುವುದು ರೂಢಿ.

ಇದನ್ನು ತಯಾರಿಸುವ ವಿಧಾನ ನೋಡೋಣ. ಸುಮಾರು ಮುಕ್ಕಾಲು ಕೆಜಿಯಷ್ಟು ಕಿಮ್ಚಿ ತಯಾರಿಕೆಗೆ ಸಾಮಗ್ರಿಗಳ ಅಳತೆ ನೀಡಲಾಗಿದೆ.

ಒಂದು ಲೀಟರ್‌ ಕುಡಿಯುವ ನೀರು, 40 ಗ್ರಾಂ ಹರಳು (ಸಮುದ್ರದ ಉಪ್ಪು) ಉಪ್ಪು, ಮುಕ್ಕಾಲು ಕೆಜಿ ಲೆಟ್ಯೂಸ್‌ ಅಥವಾ ಕ್ಯಾಬೇಜ್‌, ಕಾಲು ಕೆಜಿ ಮೂಲಂಗಿ, ಅರ್ಧ ಕೆಜಿ ಕ್ಯಾರೆಟ್‌, ಒಂದು ಬಾಳೆ ಹೂವಿನ ಕುಂಡಿಗೆ.

ADVERTISEMENT

ಪೇಸ್ಟ್‌ ತಯಾರಿಕೆಗೆ: ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, 2–3 ಬೆಳ್ಳುಳ್ಳಿ ಎಸಳು, 5 ಸೆಂ.ಮೀ. ಉದ್ದದ ಮೇಲಿನ ಸಿಪ್ಪೆ ತೆಗೆದ ಶುಂಠಿ, ಸೋಯಾ ಸಾಸ್‌ 3 ಟೀ ಚಮಚ, ಕೆಂಪು ಮೆಣಸಿನಕಾಯಿಯ ಬೀಜ 3 ಟೀ ಚಮಚ.

ಒಂದು ಲೀಟರ್‌ ಎಂ.ಎಲ್‌. ನೀರಿಗೆ ಹರಳುಪ್ಪನ್ನು ಹಾಕಿ ಕರಗಿಸಿ. ಇದನ್ನು ಕುದಿಸಿ ಆರಿಸಿ. ಕ್ಯಾಬೇಜ್‌ ಅಥವಾ ಲೆಟ್ಯೂಸ್‌ ಅನ್ನು ಬೆರಳುದ್ದದಷ್ಟು ಕತ್ತರಿಸಿಕೊಳ್ಳಿ. ಇದು ಮೇಲ್ಗಡೆ ಪದರಕ್ಕೆ ಹಾಕು. ಸ್ವಲ್ಪ ಚಿಕ್ಕದಾಗಿ ಅಂದರೆ ಒಂದು ಸೆಂ.ಮೀ. ಉದ್ದಕ್ಕೆ ಕತ್ತರಿಸಿಕೊಂಡ ಕ್ಯಾಬೇಜ್‌ ತಳಭಾಗದಲ್ಲಿ ಹಾಕಲು. ಮೂಲಂಗಿ ಮತ್ತು ಕ್ಯಾರಟ್‌ ಅನ್ನು ಉದ್ದಕ್ಕೆ, ತೆಳುವಾಗಿ ಸೀಳಿ. ತರಕಾರಿ ಸಿಪ್ಪೆ ತೆಗೆಯುವ ಪೀಲರ್‌ನಿಂದ ಇಂತಹ ತೆಳುವಾದ ಹೋಳುಗಳನ್ನು ಮಾಡಿಕೊಳ್ಳಬಹುದು.

ಒಂದು ದೊಡ್ಡ ಪಾತ್ರೆಯಲ್ಲಿ ಕ್ಯಾಬೇಜ್‌/ ಲೆಟ್ಯೂಸ್‌ ಚೂರು, ಮೂಲಂಗಿ, ಕ್ಯಾರಟ್‌ ಅನ್ನು ಮಿಶ್ರ ಮಾಡಿ. ಇದರ ಮೇಲೆ ಹರಳುಪ್ಪು ಕರಗಿಸಿದ ನೀರನ್ನು ಹಾಕಿ. ಇದನ್ನು ಚೆನ್ನಾಗಿ ಅದುಮಿಡಿ. ಬೇಕಿದ್ದರೆ ಇದರ ಮೇಲೆ ಭಾರವಾದ ಪ್ಲೇಟ್‌ ಅನ್ನು ಒತ್ತಿ ಇಡಬಹುದು. ಈ ಮಿಶ್ರಣವನ್ನು ವಾತಾವರಣದ ಉಷ್ಣಾಂಶದಲ್ಲಿ ಎಂಟು ತಾಸುಗಳ ಕಾಲ ಇಡಿ.

ಎಂಟು ತಾಸುಗಳ ನಂತರ ಉಪ್ಪಿನ ನೀರನ್ನು ಚೆಲ್ಲಿ. ತರಕಾರಿ ಮಿಶ್ರಣಕ್ಕೆ ಬಾಳೆ ಹೂವನ್ನು ಚೂರು ಚೂರು ಮಾಡಿ ಸೇರಿಸಿ.
ಮಸಾಲೆ ಮಿಶ್ರಣ ಮಾಡಲು ಈರುಳ್ಳಿ, ಬೆಳ್ಳುಳ್ಳಿಗೆ 100 ಎಂ.ಎಲ್‌. ಉಪ್ಪು ನೀರು ಸೇರಿಸಿ ಮಿಕ್ಸಿಯಲ್ಲಿ ಅರೆಯಿರಿ. ಇದು ನಯವಾಗಿರಬೇಕು. ನಂತರ ಈ ಮಸಾಲೆಯನ್ನು ಸೋಯಾ ಸಾಸ್‌ ಜೊತೆ ಸೇರಿಸಿ ಕ್ಯಾಬೇಜ್‌ ಮತ್ತು ಇತರ ತರಕಾರಿ ಮಿಶ್ರಣಕ್ಕೆ ಸೇರಿಸಿ.

ಅಗಲ ಬಾಯಿಯ ಗಾಜಿನ ಪಾತ್ರೆ ತೆಗೆದುಕೊಂಡು ಅದರಲ್ಲಿ ಈ ಮಿಶ್ರಣ ಹಾಕಿ. ಉಳಿದ ಉಪ್ಪು ನೀರನ್ನು ಅದಕ್ಕೆ ಸೇರಿಸಿ. ತರಕಾರಿಗಳೆಲ್ಲ ಪೂರ್ತಿ ಈ ನೀರಿನೊಳಗೆ ಮುಳುಗುವಂತೆ ನೋಡಿಕೊಳ್ಳಿ. ಬೇಕಿದ್ದರೆ ಸೋಯಾ ಸಾಸ್‌ ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಒತ್ತಿಟ್ಟು, ಮುಚ್ಚಳ ಹಾಕಿ. ಇದರ ಮೇಲೆ ಉಪ್ಪಿನಕಾಯಿ ಜಾಡಿ ಮುಚ್ಚಳಕ್ಕೆ ಬಟ್ಟೆಯನ್ನು ಕಟ್ಟುವಂತೆ ಸಣ್ಣ ಕಾಟನ್‌ ವಸ್ತ್ರ ಅಥವಾ ಮಸ್ಲಿನ್‌ ಬಟ್ಟೆಯನ್ನು ಕಟ್ಟಿಡಿ. ಒಂದು ವಾರದಿಂದ ನಾಲ್ಕು ವಾರಗಳ ಕಾಲ ವಾತಾವರಣದ ಉಷ್ಣಾಂಶದಲ್ಲೇ ಇಡಿ. ಒಳ್ಳೆಯ ಚೈನೀಸ್‌ ನೂಡಲ್ಸ್‌ಗೆ ಸೇರಿಸುವ ಮಸಾಲೆಯ ಪರಿಮಳ, ರುಚಿ ಬರುತ್ತದಲ್ಲ, ಆ ರೀತಿ ರುಚಿ ಬಂದರೆ ಕಿಮ್ಚಿ ಸಿದ್ಧವಾದಂತೆ.

ಇದನ್ನು ಫ್ರಿಜ್‌ನಲ್ಲಿ ಎರಡು ತಿಂಗಳ ಕಾಲ ಇಟ್ಟು ಸವಿಯಬಹುದು. ಉಪ್ಪಿನಕಾಯಿಯ ತರಹ ಅಥವಾ ನೂಡಲ್ಸ್‌ಗೆ, ಫ್ರೈಡ್‌ ರೈಸ್‌ಗೆ ಮಿಶ್ರ ಮಾಡಿಕೊಂಡು ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.