ADVERTISEMENT

ಪುಳಿಯೋಗರೆ ಘಮ ಶಂಕರಪೋಳಿ ಸಿಹಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 15:00 IST
Last Updated 19 ನವೆಂಬರ್ 2020, 15:00 IST
ಶಂಕರಪೋಳಿ
ಶಂಕರಪೋಳಿ   
""
""

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌, ಫ್ರೀಡಂ ರಿಫೈನ್ಡ್‌ ಸನ್‌ಫ್ಲವರ್‌ ಆಯಿಲ್‌ ಸಹಯೋಗದೊಂದಿಗೆ ‘ಕರುನಾಡ ಸವಿಯೂಟ’ ವಿಶೇಷ ಅಡುಗೆ ವಿಡಿಯೊ ಸರಣಿಯ ನಾಲ್ಕನೇ ವಾರದಲ್ಲಿ ಸೆಲೆಬ್ರಿಟಿ ಶೆಫ್‌ ಸುಜಾತ, ಐಯಂಗಾರ್ ಪುಳಿಯೋಗರೆ ಹಾಗೂ ಶಂಕರಪೋಳಿ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ವಿಡಿಯೊಗಾಗಿ ಬಿಟ್ಲಿ ಲಿಂಕ್: bit.ly/PVCuisines ನೋಡಿ.

ಐಯಂಗಾರ್ ಪುಳಿಯೋಗರೆ

ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಬಳಕೆಯಲ್ಲಿರುವ ಪುಳಿಯೋಗರೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಸೂಕ್ತ. ದೇವಸ್ಥಾನಗಳಲ್ಲಿ ಪ್ರಸಾದರೂಪದಲ್ಲಿಯೂ ಪುಳಿಯೋಗರೆಯನ್ನು ನೀಡುತ್ತಾರೆ. ಹಬ್ಬ, ಹರಿದಿನಗಳಲ್ಲಿಯೂ ಪುಳಿಯೋಗರೆಗೆ ಬೇಡಿಕೆ ಹೆಚ್ಚು.

ADVERTISEMENT
ಐಯಂಗಾರ್ ಪುಳಿಯೋಗರೆ

ಬೇಕಾಗುವ ಸಾಮಗ್ರಿಗಳು: ಜೀರಿಗೆ – 1/4 ಚಮಚ‌‌, ಕೊತ್ತಂಬರಿ – 3 ಚಮಚ, ಉದ್ದಿನಬೇಳೆ – 3 ಚಮಚ, ಕಾಳುಮೆಣಸು – 1 ಚಮಚ, ‌ಎಳ್ಳು – 1 ಚಮಚ, ಬ್ಯಾಡಗಿ ಮೆಣಸಿನಕಾಯಿ – 10, ಪುಟಾಣಿ – 2 ಚಮಚ, ಒಣಕೊಬ್ಬರಿ – 1/4 ಕಪ್‌‌, ಬೆಲ್ಲ – 1ಕಪ್‌, ಹುಣಸೆರಸ – ಒಂದೂವರೆ ಕಪ್‌, ಉಪ್ಪು – ರುಚಿಗೆ

ಒಗ್ಗರಣೆಗೆ: ಸಾಸಿವೆ, ಇಂಗು, ಶೇಂಗಾ ಬೀಜ, ಕರಿಬೇವು, ಒಣಮೆಣಸು – 3

ತಯಾರಿಸುವ ವಿಧಾನ: ಮೊದಲು ಜೀರಿಗೆ, ಕೊತ್ತಂಬರಿ, ಉದ್ದಿನಬೇಳೆ, ಕಾಳುಮೆಣಸು, ಎಳ್ಳು, ಒಣಮೆಣಸು ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಗ್ಯಾಸ್ ಆರಿಸಿ ಬಿಸಿ ಇರುವ ಪ್ಯಾನ್‌ಗೆ ತೆಂಗಿನತುರಿ ಹಾಕಿ ಬಿಸಿ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರಿಗೆ ಪುಟಾಣಿ, ತೆಂಗಿನತುರಿ ಹಾಗೂ ಹುರಿದಕೊಂಡ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಪೇಸ್ಟ್ ತಯಾರಿಸಿಕೊಳ್ಳಲು: ಪ್ಯಾನ್‌ವೊಂದಕ್ಕೆ ಒಂದೂವರೆ ಕಪ್‌ ಹುಣಸೆರಸ ಹಾಕಿ ಕುದಿ ಬರಿಸಿ. ಕುದಿಯುತ್ತಿರುವ ಹುಣಸೆರಸಕ್ಕೆ ತಯಾರಿಸಿಟ್ಟುಕೊಂಡ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 1 ಕಪ್‌ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಇನ್ನೊಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಇಂಗು, ಶೇಂಗಾ ಬೀಜ, ಒಣಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಮಾಡಿ ಹುಣಸೆರಸದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ. ನಂತರ ಈ ಪೇಸ್ಟ್ ಅನ್ನು ಅನ್ನದೊಂದಿಗೆ ಮಿಶ್ರಣ ಮಾಡಿ.

************

ಶಂಕರಪೋಳಿ

ಮೈದಾಹಿಟ್ಟಿನಿಂದ ತಯಾರಿಸುವ ಕುರುಕಲು ತಿನಿಸು ಶಂಕರಪೋಳಿ. ಇದನ್ನು ಸಿಹಿ ಹಾಗೂ ಖಾರ ಎರಡೂ ವಿಧದಲ್ಲಿ ತಯಾರಿಸಬಹುದು. ಸಂಜೆ ಸ್ನ್ಯಾಕ್ಸ್ ಜೊತೆಗೆ ಇದು ಹೆಚ್ಚು ಹೊಂದುತ್ತದೆ. ಮಕ್ಕಳಿಗೂ ಇಷ್ಟವಾಗುವ ತಿನಿಸು.

ಖಾರದ ಶಂಕರಪೋಳಿ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 1 ಕಪ್‌, ಚಿರೋಟಿ ರವೆ – 2 ಚಮಚ, ಜೀರಿಗೆಪುಡಿ – 1 ಚಮಚ, ಖಾರದಪುಡಿ – 1 ಚಮಚ, ಸಕ್ಕರೆ – 1/4 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ‍‍ಪಾತ್ರೆಯೊಂದಕ್ಕೆ ಮೈದಾ, ಚಿರೋಟಿ ರವೆ, ಜೀರಿಗೆ ಪುಡಿ, ಖಾರದಪುಡಿ, 1/4 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲೆಸಿ. 2 ಚಮಚ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. 15 ನಿಮಿಷ ಹಾಗೇ ಬಿಡಿ.

ಸಿಹಿ ಶಂಕರಪೋಳಿ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 1 ಕಪ್‌, ಚಿರೋಟಿ ರವೆ – 1 ಚಮಚ, ಸಕ್ಕರೆ – 1/4 ಕಪ್‌, ಏಲಕ್ಕಿ ಪುಡಿ – 1/4 ಚಮಚ, ತುಪ್ಪ – 2 ಚಮಚ, ನೀರು ಹಾಗೂ ಹಾಲು – 1/4 ಕಪ್‌,
ಉಪ್ಪು – 1/4 ಚಮಚ, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಪಾತ್ರೆಯೊಂದಕ್ಕೆ ಮೈದಾಹಿಟ್ಟು, ಚಿರೋಟಿ ರವೆ, 1/4 ಕಪ್‌ ಸಕ್ಕರೆ, ಏಲಕ್ಕಿ ಪುಡಿ, ತುಪ್ಪ, ಹಾಲು ಹಾಗೂ ನೀರಿನ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದನ್ನು ದಪ್ಪಕ್ಕೆ ಚಪಾತಿ ರೀತಿ ಲಟ್ಟಿಸಿಕೊಂಡು ಶಂಕರಪೋಳಿ ಆಕಾರಕ್ಕೆ ಕತ್ತರಿಸಿಕೊಳ್ಳಿ. ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಬಿಸಿಯಾದ ಮೇಲೆ ಶಂಕರಪೋಳಿಯನ್ನು ಅದರಲ್ಲಿ ಕರಿಯಿರಿ. ಕರಿದು ತೆಗೆದ ಶಂಕರಪೋಳಿಯನ್ನು ಪಾತ್ರೆಯೊಂದರಲ್ಲಿ ಹಾಕಿ ಅದರ ಮೇಲೆ ಸಕ್ಕರೆ ಪುಡಿ ಉದುರಿಸಿ.

ಇದೇ ರೀತಿ ಖಾರದ ಶಂಕರಪೋಳಿಯನ್ನು ತಯಾರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.