ADVERTISEMENT

ಕಡಿಮೆ ಕ್ಯಾಲೊರಿಯ ಕಡುಬು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 19:30 IST
Last Updated 13 ಜುಲೈ 2020, 19:30 IST
ಕಡುಬು
ಕಡುಬು   
""

ಫಿಟ್‌ನೆಸ್‌ ಪ್ರಿಯರು ಮಾತ್ರವಲ್ಲ, ನಾಲಿಗೆಯ ರುಚಿ ಬಯಕೆ ತಣಿಸಲು ಬಯಸುವವರೂ ಮೊರೆ ಹೋಗುವ ತಿನಿಸೊಂದಿದೆ; ಅದುವೇ ಕಡುಬು. ಎಣ್ಣೆಯ ಪಸೆಯಿಲ್ಲದೇ ಹಬೆಯಲ್ಲಿ ಬೇಯುವ ಈ ರುಚಿಕರ ಖಾದ್ಯದ ತಯಾರಿಕೆಗೆ ಹೆಚ್ಚು ಸಾಮಗ್ರಿಗಳು ಬೇಡ, ಸಿದ್ಧತೆಗೆ ಸಮಯ ವ್ಯರ್ಥವಾಗದು. ಹಾಗೆಯೇ ಇದನ್ನು ಬೆಳಗಿನ ಉಪಾಹಾರಕ್ಕೆ, ಸಂಜೆಯ ತಿಂಡಿಗೆ ಮಾಡಿಕೊಳ್ಳಬಹುದು.

ಕಡುಬು ನೆನಪಾಗಲು ಕಾರಣ, ಸುರಿಯುವ ಮಳೆ, ಮೋಡ ಕಟ್ಟಿದ ವಾತಾವರಣ. ಧಾರಾಕಾರ ಸುರಿಯುವ ಮಳೆಯಲ್ಲಿ ಬಿಸಿ ಬಿಸಿ ಕಡುಬು, ಕಾಯಿಚಟ್ನಿ, ಜೋನಿ ಬೆಲ್ಲ– ತುಪ್ಪದೊಂದಿಗೆ ಸವಿಯುವ ಮಲೆನಾಡಿನವರ ಅಭ್ಯಾಸ ಈಗ ಕರ್ನಾಟಕದ ಎಲ್ಲೆಡೆ ಜನಪ್ರಿಯ. ಇದನ್ನು ಪ್ರಚಾರ ಮಾಡಿದ ಶ್ರೇಯಸ್ಸು ಬೆಂಗಳೂರು ನಗರ ಸೇರಿದಂತೆ ಇತರೆಡೆ ನಡೆಯುವ ಖಾದ್ಯ ಮೇಳಗಳ ಆಯೋಜಕರಿಗೆ ಸಲ್ಲಬೇಕು. ಅಲ್ಲಲ್ಲಿ ತಲೆ ಎತ್ತಿರುವ ಮಲೆನಾಡಿನ ಮಳಿಗೆಗಳೂ ತಮ್ಮ ಕೊಡುಗೆ ನೀಡಿವೆ.

ಅಕ್ಕಿ ರವೆ ಕಡುಬು

ADVERTISEMENT

ಕಡುಬು ಎಂದಾಗ ಮೊದಲು ನೆನಪಾಗುವುದು ಅಕ್ಕಿ ರವೆ ಅಥವಾ ಇಡ್ಲಿ ತರಿಯಿಂದ ತಯಾರಿಸುವ ಉಂಡ್ಲಿಗೆ ಅಥವಾ ಮುಟಿಗೆ. ಒಂದಳತೆಯ ಅಕ್ಕಿ ರವೆಯನ್ನು ಎರಡಳತೆಯ ಕುದಿಯುವ ನೀರಿಗೆ ಉಪ್ಪು, ತೆಂಗಿನ ತುರಿ ಸೇರಿಸಿ ಬೇಯಿಸಿ. ಅದನ್ನು ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಕಡುಬು ಸಿದ್ಧ. ಇದಕ್ಕೆ ಕಾಯಿ ಚಟ್ನಿ, ಸಾಂಬಾರು, ನಾನ್‌ವೆಜ್‌ ಪ್ರಿಯರಾದರೆ ಚಿಕನ್‌ ಅಥವಾ ಮಟನ್‌ ಸಾಂಬಾರಿನಲ್ಲಿ ಅದ್ದಿಕೊಂಡು ಸವಿಯಬಹುದು. ಕೊಡಗಿನಲ್ಲಿ ಇದಕ್ಕೆ ಒಳ್ಳೆಯ ಜೊತೆ ಪಂದಿ ಕರಿ.

ಕೆಲವು ಕಡೆ ಸಾದಾ ಕಡುಬಿನ ಬದಲು ಖಾರಾ ಕಡುಬು ಜನಪ್ರಿಯ. ಒಣ ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಇಂಗು, ಓಂಕಾಳು, ತೆಂಗಿನ ತುರಿ ರುಬ್ಬಿ ನೀರು ಸೇರಿಸಿ ಕುದಿಸಿ ಇಡ್ಲಿ ರವೆ ಹಾಕಿ ಬೇಯಿಸುವ ರೂಢಿ ಇದೆ. ಸಿಹಿ ಬೇಕಿದ್ದರೆ ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರಾಯಿತು.

ಬಟ್ಟಲ ಕಡುಬು

ಇದೇ ರೀತಿ ಮಲೆನಾಡಿನ ಕೆಲವು ಭಾಗದಲ್ಲಿ ಮಾಡುವ ಬಟ್ಟಲ (ಪ್ಲೇಟ್‌) ಕಡುಬು ಕೂಡ ಅತ್ಯಂತ ರುಚಿಕರ. ನೆನಸಿದ ಅಕ್ಕಿ ರುಬ್ಬಿಕೊಂಡು ಸಿಹಿ ಬೇಕಿದ್ದರೆ ಬೆಲ್ಲ, ಖಾರ ಬೇಕಿದ್ದರೆ ಮೆಣಸಿನ ಪುಡಿ, ಇಂಗು, ಓಂಕಾಳು ಪುಡಿ, ಉಪ್ಪು ಸೇರಿಸಿ. ಇದರ ಹಿಟ್ಟು ದೋಸೆ ಹಿಟ್ಟಿಗಿಂತ ತೆಳ್ಳಗಿರಬೇಕು. ಇದನ್ನು ಎಣ್ಣೆ ಸವರಿದ ಪ್ಲೇಟ್‌ಗೆ ಹಾಕಿ ಹರಡಿ. ಪ್ಲೇಟ್‌ ಸರಿಯಾಗಿ ಕೂರುವ ಪಾತ್ರೆಯಲ್ಲಿ ನೀರನ್ನು ಕುದಿಯಲು ಇಡಿ. ಇದರ ಮೇಲೆ ಹಿಟ್ಟು ಹಾಕಿದ ಪ್ಲೇಟ್‌ ಇಟ್ಟು ಮುಚ್ಚಳ ಮುಚ್ಚಿ. ಒಂದೇ ನಿಮಿಷಕ್ಕೆ ತೆಳ್ಳನೆಯ ರುಚಿಕರ ಬಟ್ಟಲು ಕಡುಬು ನಿಮ್ಮ ಪ್ಲೇಟ್‌ನಲ್ಲಿರುತ್ತದೆ.

ಮೆಂತ್ಯೆ ಕಡುಬು

ಹಾಗೆಯೇ ಉತ್ತರ ಕರ್ನಾಟಕದ ಮೆಂತ್ಯೆ ಕಡುಬು ಕೂಡ ಸಾಂಪ್ರದಾಯಿಕ ತಿನಿಸು. ಅಡುಗೆ ಬ್ಲಾಗ್‌ಗಳಿಂದಾಗಿ ಈಗ ಎಲ್ಲೆಡೆ ಜನಪ್ರಿಯವಾಗಿದೆ. ಗೋಧಿ ಹಿಟ್ಟಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಇದನ್ನು ಸಣ್ಣ ಸಣ್ಣ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿ. ಮೆಂತ್ಯೆ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಣ್ಣೆ, ಜೀರಿಗೆ, ಹಸಿ ಮೆಣಸಿನಕಾಯಿ ಒಗ್ಗರಣೆ ಮಾಡಿಕೊಂಡು ಮೆಂತ್ಯೆ ಸೊಪ್ಪನ್ನು ಸೇರಿಸಿ. ಇದಕ್ಕೆ ಬೆಂದ ಉಂಡೆಗಳನ್ನು ಹಾಕಿ. ಮೇಲಿಂದ ಶೇಂಗಾ ಪುಡಿ ಹಾಕಿ ಕೈಯಾಡಿಸಿದರೆ ಮೆಂತ್ಯೆ ಕಡುಬು ಸಿದ್ಧ. ಈ ಕಡುಬಿಗೆ ಗೋಧಿ ಬದಲು ಜೋಳದ ಹಿಟ್ಟನ್ನು ಬಳಸಬಹುದು. ಹಬೆಯ ಬದಲು ಕುದಿಯುವ ನೀರಿನಲ್ಲೂ ಉಂಡೆಗಳನ್ನು ಬೇಯಿಸಬಹುದು.

ಈ ಕಡುಬಿನಲ್ಲಿ ಕ್ಯಾಲರಿ ಕಡಿಮೆ. ಎಣ್ಣೆ ಬೇಕಿರುವುದು ಒಗ್ಗರಣೆಗೆ ಮಾತ್ರ. ಮೆಂತ್ಯೆ ಸೊಪ್ಪಂತೂ ಆರೋಗ್ಯಕ್ಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.