ADVERTISEMENT

ಬಾಯಲ್ಲಿ ನೀರೂರಿಸುವ ಮೋತಿಚೂರ್‌ ಲಡ್ದು, ಬಾದಾಮ್ ಪುರಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 19:31 IST
Last Updated 4 ನವೆಂಬರ್ 2021, 19:31 IST
ಪನೀರ್ ಬಿರಿಯಾನಿ
ಪನೀರ್ ಬಿರಿಯಾನಿ   

ಮೋತಿಚೂರ್‌ ಲಡ್ದು

ಬೇಕಾಗುವ ಸಾಮಗ್ರಿಗಳು:ಕಡಲೆಹಿಟ್ಟು - 3 ಕಪ್‌,ಸಕ್ಕರೆ - 2 ಕಪ್‌,ಕೇಸರಿ - 6 ದಳ,ಅಡುಗೆ ಸೋಡಾ - ಕಾಲು ಚಮಚ,ಹಾಲು- 1 ಕಪ್,ಫ‌ುಡ್‌ ಕಲರ್‌ - 1 ಚಮಚ,ಏಲಕ್ಕಿ - 2 ಚಮಚ

ತಯಾರಿಸುವ ವಿಧಾನ: ಒಂದು ಕಪ್‌ ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲೆಸಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ ಕರಿಯಿರಿ. ಸಕ್ಕರೆ ಪಾಕ ತಯಾರಿಸಿಕೊಂಡು ಅದಕ್ಕೆ ಮೊದಲೇ ತಯಾರಿಸಿಕೊಂಡ ಬೂಂದಿ ಕಾಳುಗಳನ್ನು ಸೇರಿಸಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಬೇಕು. ಈ ನಿಮ್ಮ ಮುಂದೆ ಸಿಹಿಯಾದಮೋತಿಚೂರ್‌ ಲಡ್ಡು ಸವಿಯಲು ಸಿದ್ಧ.

ADVERTISEMENT

ಬಾದಾಮ್‌ ಪುರಿ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು-1 ಕಪ್‌, ರವೆ- 1/2 ಕಪ್‌, ಅಕ್ಕಿಹಿಟ್ಟು-2 ಚಮಚ, ತುಪ್ಪ- 1/2 ಕಪ್‌, ಸಕ್ಕರೆ - 1 ಕಪ್‌, ಏಲಕ್ಕಿ ಪುಡಿ- ಅರ್ಧ ಚಮಚ, ಕೇಸರಿ ಬಣ್ಣ - ಕಾಲು ಚಮಚ, ಜಾಯಿಕಾಯಿ ಪುಡಿ - ಕಾಲು ಚಮಚ.

ತಯಾರಿಸುವ ವಿಧಾನ: ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲೆಸಿ. ಇದನ್ನು ಅರ್ಧ ಗಂಟೆ ನೆನೆಸಿಡಿ. ಬಾಣಲೆಗೆ ಅರ್ಧ ಕಪ್‌ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಸೇರಿಸಿ ಕಲೆಸಿ ಒಲೆಯಿಂದ ಕೆಳಗಿಳಿಸಿ. ಕಲೆಸಿಟ್ಟ ಹಿಟ್ಟಿನ ಮಿಶ್ರಣದಿಂದ ತೆಳುವಾದ ಪೂರಿ ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ ಅಂಚುಗಳನ್ನು ಸಮನಾಗಿ ಒತ್ತಿ. ಅದನ್ನು ಎಣ್ಣೆಯಲ್ಲಿ ಕರಿಯಿರಿ. ಈ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ. ನಂತರ ತಿನ್ನಲು ಕೊಡಿ.

ಪನೀರ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಪನೀರ್ – ಅರ್ಧ ಕೆ.ಜಿ., ಬಾಸುಮತಿ ಅಕ್ಕಿ – 2 ಕಪ್, ತುಪ್ಪ - 5 ಚಮಚ,ಜೀರಿಗೆ – 1 ಚಮಚ, ಎಣ್ಣೆ – 2 ಚಮಚ,ಈರುಳ್ಳಿ – 3 (ಹೆಚ್ಚಿಕೊಂಡಿದ್ದು), ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಚಮಚ,ಚಕ್ಕೆ - 1 ತುಂಡು, ಏಲಕ್ಕಿ – 2,ಲವಂಗ – 4,ಪಲಾವ್ ಎಲೆ – 1, ಹಸಿಮೆಣಸು – 5,ಕ್ಯಾರೆಟ್ – ಸ್ವಲ್ಪ, ಕೊತ್ತಂಬರಿ ಸೊಪ್ಪು – 2 ಚಮಚ,ಪುದಿನ ಸೊಪ್ಪು – 3 ಚಮಚ,ನೀರು – 4 ಕಪ್ ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿಡಿ. ನಂತರ ಪ್ಯಾನ್‌ಗೆ ತುಪ್ಪ, ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಪನೀರ್ ತುಂಡು ಮಾಡಿ ಹಾಕಿ ಕೆಂಪಗಾಗುವಂತೆ ಹುರಿಯಿರಿ. ಅದನ್ನು ಪಾತ್ರೆಯೊಂದರಲ್ಲಿ ತೆಗೆದು ಇರಿಸಿಕೊಳ್ಳಿ. ಅದೇ ಪ್ಯಾನ್‌ಗೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ‌ಇದಕ್ಕೆ ಕತ್ತರಿಸಿದ ಹಸಿಮೆಣಸು, ಕ್ಯಾರೆಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಅಗತ್ಯವಿರುವಷ್ಟು ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಬಳಿಕ ಅಕ್ಕಿ ಸೇರಿಸಿ, ಚೆನ್ನಾಗಿ ಬೇಯಿಸಿ. ಅದಕ್ಕೆ ಹುರಿದ ಪನೀರ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಪುದಿನ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.