ADVERTISEMENT

ನಳಪಾಕ: ಸಾಬೂದಾನಿ ಸ್ಪೆಷಲ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:31 IST
Last Updated 6 ಜನವರಿ 2023, 19:31 IST
   

ಸಾಬೂದಾನಿ ಇಡ್ಲಿ
ಬೇಕಾಗುವ ಸಾಮಗ್ರಿಗಳು: ಒಂದು ಕಪ್‌ ಸಾಬೂದಾನಿ, ಒಂದು ಕಪ್‌ ಇಡ್ಲಿ ರವಾ ಅಥವಾ ಅಕ್ಕಿ ರವಾ, 2 ಕಪ್‌ ಹುಳಿ ಬಂದ ಮೊಸರು, 2 ಕಪ್‌ ನೀರು, ರುಚಿಗೆ ತಕ್ಕಷ್ಟು ಉಪ್ಪು, ಗೋಡಂಬಿ ಮತ್ತು ಇಡ್ಲಿ ಅಚ್ಚುಗಳಿಗೆ ಹಾಕಲು ಎಣ್ಣೆ.

ಮಾಡುವ ವಿಧಾನ: ಸಾಬೂದಾನಿ, ರವೆಯನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ತಾಜಾ ಹುಳಿ ಬಂದ ಮೊಸರು ಸೇರಿಸಿ ಒಂದು ರಾತ್ರಿ ಇಡಿ. ಮೊಸರು ದಪ್ಪಗಿದ್ದು, ಇಡ್ಲಿ ಹಿಟ್ಟು ದಪ್ಪಗಾದರೆ ಮಾತ್ರ ನೀರು ಸೇರಿಸಿ. ನಂತರ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೊಸರಿನಲ್ಲಿ ನೆಂದ ಸಾಬೂದಾನಿ ಚೆನ್ನಾಗಿ ಕರಗುವವರೆಗೂ ತಿರುಗಿಸಿ. ಇದಕ್ಕೆ ಉಪ್ಪು ಸೇರಿಸಿ.. ಇಡ್ಲಿ ಅಚ್ಚಿಗೆ ಎಣ್ಣೆ ಸವರಿ ಅದಕ್ಕೆ ಹಿಟ್ಟು ಹಾಕಿ ಅದರ ಮೇಲೆ ಗೋಡಂಬಿ ಸೇರಿಸಿ( ಬೇಕಿದ್ದರೆ ತುಪ್ಪದಲ್ಲಿ ಹುರಿಯಬಹುದು) 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಇಡ್ಲಿ ಸಿದ್ಧವಾಗುತ್ತದೆ.

ಸಾಬೂದಾನಿ ಖಿಚಡಿ
ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಸಾಬೂದಾನಿ, ನೀರು, ಅರ್ಧ ಕಪ್‌ ಕಡಲೆಕಾಯಿ, ಒಂದು ಟೀ ಸ್ಪೂನ್‌ ಉಪ್ಪು, ಸಕ್ಕರೆ, ಜೀರಿಗೆ, ಎರಡು ಟೇಬಲ್‌ ಸ್ಪೂನ್‌ ತುಪ್ಪ, ಐದು ಕರಿಬೇವಿನ ಎಲೆಗಳು, ಸಣ್ಣಗೆ ಹೆಚ್ಚಿದ ಶುಂಠಿ, ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ ಒಂದು, ಅರ್ಧ ನಿಂಬೆ, ಕೊತ್ತಂಬರಿ ಸೊಪ್ಪು

ADVERTISEMENT

ಮಾಡುವ ವಿಧಾನ: ಸಾಬೂದಾನಿಯನ್ನು ಚೆನ್ನಾಗಿ ತೊಳೆದು, ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅದು ಇನ್ನೂ ಗಟ್ಟಿಯಾಗಿದ್ದರೆ, ಸ್ವಲ್ಪ ನೀರು ಸಿಂಪಡಿಸಿ ಮತ್ತು 30 ನಿಮಿಷಗಳ ಕಾಲ ನೆನೆಸಿ.

ಒಂದು ಪಾತ್ರೆಯಲ್ಲಿ ಕಡಲೆಕಾಯಿಯನ್ನು ಹುರಿಯಿರಿ. ಅದನ್ನು ಮಿಕ್ಸ್‌ಗೆ ಹಾಕಿ ಜರಿ ಬರಿ ರುಬ್ಬಿಕೊಳ್ಳಿ. ಅದನ್ನು ನೆನೆಸಿದ ಸಾಬೂದಾನಿಗೆ ಸೇರಿಸಿ. ಕಡಲೆಕಾಯಿ ಪುಡಿಯನ್ನು ಸೇರಿಸುವುದರಿಂದ ಹೆಚ್ಚುವರಿ ತೇವಾಂಶ ಹೀರಿಕೊಳ್ಳುತ್ತದೆ. ಉಪ್ಪು, ಸಕ್ಕರೆ ಸೇರಿಸಿ.

ಪಾತ್ರೆಯಲ್ಲಿ ಬಿಸಿ ಮಾಡಿದ ತುಪ್ಪಕ್ಕೆ ಜೀರಿಗೆ, ಕರಿಬೇವಿನ ಎಲೆ, ಮೆಣಸಿನಕಾಯಿ ಹಾಗೂಬೇಯಿಸಿದ ಆಲೂಗಡ್ಡೆ ಹಾಕಿ. ಎಲ್ಲವೂ ಕೆಂಪಗೆ ಆಗುವವರೆಗೂ ಹುರಿಯಿರಿ. ಇದಕ್ಕೆ ಸಾಬೂದಾನಿ ಕಡಲೆಕಾಯಿ ಮಿಶ್ರಣ ಸೇರಿಸಿ. ಇದಕ್ಕೆ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.

ಸಾಬೂದಾನಿ ದೋಸೆ
ಬೇಕಾಗುವ ಸಾಮಗ್ರಿಗಳು:
ಅರ್ಧಕಪ್‌ ಸಾಬೂದಾನಿ, ಅರ್ಧಕಪ್‌ ಊದಲು ಅಕ್ಕಿ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್‌ ಮೊಸರು, ಸಣ್ಣಗೆ ಹೆಚ್ಚಿದ ಎರಡು ಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಒಂದು ಟೀ ಸ್ಪೂನ್‌ ಜೀರಿಗೆ, ಕಾಳುಮೆಣಸು, ಹುರಿದ ಕಡಲೆಕಾಯಿ, ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಸಾಬೂದಾನಿಯನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಊದಲು ಅಕ್ಕಿಯನ್ನು ಪುಡಿ ಮಾಡಿ ಬಟ್ಟಲಿಗೆ ಹಾಕಿ. ಅದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ಅದರ ಮಿಶ್ರಣವನ್ನು ಸೇರಿಸಿ. ಈ ಮಿಶ್ರಣಕ್ಕೆ ಮೊಸರು, ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕಾಳುಮೆಣಸು, ಕಡಲೆಕಾಯಿ, ಉಪ್ಪು ಸೇರಿಸಿ. ಹಿಟ್ಟಿನಲ್ಲಿ ಉಂಡೆಯಾಗದಂತೆ ನೋಡಿಕೊಳ್ಳಿ.20 ನಿಮಿಷ ಹಿಟ್ಟನ್ನು ಹಾಗೆ ಬಿಡಿ. ಬಿಸಿಯಾದ ಕಾವಲಿ ಮೇಲೆ ದೋಸೆ ಗರಿ ಗರಿಯಾಗುವವರೆಗೂ ಹುರಿಯಲು ಬಿಟ್ಟರೆ ಸಾಬೂದಾನಿ ದೋಸೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.