ADVERTISEMENT

ನಳಪಾಕ: ಟೊಮೆಟೊ ಸ್ಯಾಂಡ್‌ವಿಚ್‌, ಚೀಸ್ ಗಾರ್ಲಿಕ್ ಬ್ರೆಡ್‌

ವೇದಾವತಿ ಎಚ್.ಎಸ್.
Published 20 ಆಗಸ್ಟ್ 2021, 19:31 IST
Last Updated 20 ಆಗಸ್ಟ್ 2021, 19:31 IST
ಚೀಸ್ ಗಾರ್ಲಿಕ್ ಬ್ರೆಡ್‌
ಚೀಸ್ ಗಾರ್ಲಿಕ್ ಬ್ರೆಡ್‌   

ಟೊಮೆಟೊ ಸ್ಯಾಂಡ್‌ವಿಚ್‌

ಬೇಕಾಗುವ ಸಾಮಗ್ರಿಗಳು: ಟೊಮೆಟೊ – 3, ಈರುಳ್ಳಿ – 2, ಕ್ಯಾಪ್ಸಿಕಂ – ಅರ್ಧ, ಕೊತ್ತಂಬರಿಸೊಪ್ಪು – 2 ಟೇಬಲ್ ಚಮಚ, ಹಸಿಮೆಣಸಿನಕಾಯಿ –2, ಖಾರದಪುಡಿ – 1 ಟೀ ಚಮಚ, ಚಾಟ್‌ಮಸಾಲ – 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಬ್ರೆಡ್ ಸ್ಲೈಸ್, ಬೇಕಿದ್ದರೆ ಚೀಸ್ ಹಾಕಬಹುದು, ಬೇಯಿಸಲು ತುಪ್ಪ

ತಯಾರಿಸುವ ವಿಧಾನ: ಟೊಮೆಟೊ, ಈರುಳ್ಳಿ, ಕ್ಯಾಪ್ಸಿಕಂ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ಇವುಗಳನ್ನು ಚಿಕ್ಕದಾಗಿ ಕತ್ತರಿಸಿ ಬೌಲ್‌ಗೆ ಹಾಕಿಕೊಳ್ಳಿ. ಅವುಗಳ ಜೊತೆಗೆ ಖಾರದಪುಡಿ, ಚಾಟ್‌ಮಸಾಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬ್ರೆಡ್ ಸ್ಲೈಸ್ ತೆಗೆದುಕೊಳ್ಳಿ. ತಯಾರಿಸಿದ ಮಸಾಲ ಮಿಶ್ರಣವನ್ನು ಅದರ ಮೇಲೆ ಹಾಕಿ. ಚೀಸ್ ಬೇಕಿದ್ದರೆ ಸೇರಿಸಿ. ನಂತರ ಅದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟು ಹಾಕಿರುವ ಪದಾರ್ಥಗಳು ಹೊರ ಬರದಂತೆ ನಿಧಾನವಾಗಿ ಒತ್ತಿ. ತವಾಕ್ಕೆ ತುಪ್ಪವನ್ನು ಹಾಕಿ. ತಯಾರಿಸಿಕೊಂಡ ಸ್ಯಾಂಡ್‌ವಿಚ್‌ ತವಾದಲ್ಲಿಡಿ. ಬ್ರೆಡ್‌ನ ಮೇಲೆ ತುಪ್ಪವನ್ನು ಸವರಿ. 2 ರಿಂದ 3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಇನ್ನೊಂದು ಬದಿಯನ್ನು ತಿರುಗಿಸಿ 2 ರಿಂದ 3 ನಿಮಿಷ ಬೇಯಿಸಿ. ರುಚಿಕರವಾದ ಸ್ಯಾಂಡ್‌ವಿಚ್‌ ಸವಿಯಲು ಸಿದ್ಧ.

ADVERTISEMENT

ಚೀಸ್ ಗಾರ್ಲಿಕ್ ಬ್ರೆಡ್

ಬೇಕಾಗುವ ಸಾಮಗ್ರಿಗಳು: ಬೆಣ್ಣೆ – 50 ಗ್ರಾಂ, ಜಜ್ಜಿದ ಬೆಳ್ಳುಳ್ಳಿ – 2 ಟೇಬಲ್ ಚಮಚ, ಬ್ರೆಡ್ ಸ್ಲೈಸ್ – 4, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ – 2, ತುರಿದ ಚೀಸ್, ಚಿಲ್ಲಿ ಫ್ಲೇಕ್ಸ್ – ಅರ್ಧ ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಬ್ರೆಡ್ ಬೇಯಿಸಲು ಸ್ವಲ್ಪ ಬೆಣ್ಣೆ.

ತಯಾರಿಸುವ ವಿಧಾನ: ಬೆಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಕರಗಿಸಿ, ಬೆಳ್ಳುಳ್ಳಿಯನ್ನು ಸೇರಿಸಿ. 1 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಬ್ರೆಡ್ ಸ್ಲೈಸಿಗೆ ಒಂದು ಬದಿಗೆ ಬೆಣ್ಣೆಯನ್ನು ಹಾಕಿ. ತವಾದಲ್ಲಿ ಬೆಣ್ಣೆ ಹಾಕಿದ ಬದಿಯನ್ನು ಬಣ್ಣ ಬದಲಾಗುವವರೆಗೆ ಬೇಯಿಸಿ. ಎಲ್ಲವನ್ನೂ ಹಾಗೆ ತಯಾರಿಸಿಕೊಳ್ಳಿ. ಬ್ರೆಡ್ ಟೋಸ್ಟ್ ಮಾಡಿದ ಭಾಗಕ್ಕೆ ಕರಗಿಸಿಕೊಂಡ ಬೆಣ್ಣೆ ಮತ್ತು ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ. ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ತುರಿದ ಚೀಸ್, ಚಿಲ್ಲಿ ಫ್ಲೇಕ್ಸ್, ಕೊತ್ತಂಬರಿಸೊಪ್ಪು ಬ್ರೆಡ್ ಮೇಲೆ ಹಾಕಿ. ತವಾಕ್ಕೆ ಬೆಣ್ಣೆಯನ್ನು ಹಾಕಿ. ತಯಾರಿಸಿದ ಚೀಸ್ ಬ್ರೆಡ್ ಇಡಿ. ಮುಚ್ಚಳವನ್ನು ಮುಚ್ಚಿ. 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಸವಿಯಾದ ಗಾರ್ಲಿಕ್ ಚೀಸ್‌ ಬ್ರೆಡ್ ರೆಡಿ.

ಬೇಸನ್ ಮಸಾಲೆ ಬ್ರೆಡ್

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು – 1 ಕಪ್, ಖಾರದಪುಡಿ – 1 ಟೀ ಚಮಚ, ಜೀರಿಗೆಪುಡಿ – ಅರ್ಧ ಟೀ ಚಮಚ , ಚಿಲ್ಲಿ ಫ್ಲೇಕ್ಸ್ – ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ, ಅರಿಸಿನಪುಡಿ – 1/4 ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ – 1 ಟೀ ಚಮಚ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ

ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ತಯಾರಿಸಿಕೊಂಡ ಪೇಸ್ಟ್ ಅನ್ನು 2 ಟೇಬಲ್ ಚಮಚದಷ್ಟು ಒಂದು ಪ್ಲೇಟಿಗೆ ಹಾಕಿಕೊಂಡು ಹರಡಿ. 1 ಬ್ರೆಡ್ ಸ್ಲೈಸ್ ಅದರ ಮೇಲಿಡಿ. ಬ್ರೆಡ್‌ನ ಮೇಲೆ ಮತ್ತು ಸುತ್ತಲೂ ತಯಾರಿಸಿಕೊಂಡ ಪೇಸ್ಟ್ ಹರಡಿ. ತವಾವನ್ನು ಬಿಸಿ ಮಾಡಿಕೊಳ್ಳಿ. 1 ಟೀ ಚಮಚ ಬೆಣ್ಣೆಯನ್ನು ತವಾಕ್ಕೆ ಹಾಕಿ. ತಯಾರಿಸಿಕೊಂಡ ಮಸಾಲೆ ಬ್ರೆಡ್ ಅನ್ನು ತವಾದಲ್ಲಿಡಿ. ಬ್ರೆಡ್‌ನ ಮೇಲಿನ ಭಾಗಕ್ಕೆ ಬೆಣ್ಣೆಯನ್ನು ಹಾಕಿ. ಸಣ್ಣ ಉರಿಯಲ್ಲಿ ಎರಡೂ ಬದಿಯು ಕೆಂಬಣ್ಣ ಬರುವವರೆಗೆ ಬೇಯಿಸಿ. ಇದನ್ನು ಸಾಸ್‌ ಜೊತೆ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.